ಮಧು-ಕೈಟಭರು ಮತ್ತು ಭಯೋತ್ಪಾದಕರು

ರಾತ್ರಿ ಒಂಭತ್ತು ಗಂಟೆಯ ಸಮಯ.ನಮ್ಮೂರಿನಲ್ಲಿ ಕಟೀಲು ಮೇಳದವರ ‘ದೇವಿಮಹಾತ್ಮೆ’ ಯಕ್ಷಗಾನವಿದ್ದುದ್ದರಿಂದ ಪೂರ್ವರಂಗದ ಚಂಡೆಯ ಧ್ವನಿ ಕೇಳಿಸುತ್ತಿತ್ತು.ನಾನು ಊಟ ಮುಗಿಸಿ ಬಂದವನು ಟಿವಿ ಆನ್ ಮಾಡಿದೆ.ನ್ಯೂಸ್ ಚಾನೆಲ್ ಒಂದರಲ್ಲಿ “ಲಂಡನ್’ನಲ್ಲಿ ಸರಣಿ ಆತ್ಮಾಹುತಿ ಬಾಂಬ್ ದಾಳಿಯಿಂದಾಗಿ ನೂರಕ್ಕೂ ಹೆಚ್ಚು ಜನರ ದುರ್ಮರಣ.ಘಟನೆಯ ಹೊಣೆ ಹೊತ್ತುಕೊಂಡ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ” ಅಂತ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು.
“ಇವರದ್ದು ದಿನಾ ಇದೇ ಆಯಿತು.ಅಮಾಯಕ ಜನರನ್ನು ಕೊಂದು ಅದೇನು ಸಾಧಿಸುತ್ತಾರೋ.ನಡಿ,ನಾವು ಸ್ವಲ್ಪ ಹೊತ್ತು ಆಟಕ್ಕೆ ಹೋಗಿ ಬರೋಣ.ಮಧು ಕೈಟಭರ ವಧೆಯಾದ ನಂತರ ಎದ್ದು ಬರೋಣ” ಅಂತ ಟಿವಿಯತ್ತ ನೋಡುತ್ತ ಅಣ್ಣ ಹೇಳಿದ.ನಾನು ಅಣ್ಣ ಆಟಕ್ಕೆ ಹೊರಟೆವು.

ಪೂರ್ವರಂಗ ಮುಗಿದು ಅಂಬುರುಹದಳನೇತ್ರೆ…. ಎಂದು ಭಾಗವತರು ಹಾಡಿದ ನಂತರ ಪ್ರಸಂಗ ಆರಂಭವಾಯಿತು.ಆದಿಮಾಯೆ ಪ್ರತ್ಯಕ್ಷಳಾಗಿ ತಾನು ಸೃಷ್ಠಿಸಿದ ತ್ರಿಮೂರ್ತಿಗಳಿಗೆ ಅವರವರ ಕೆಲಸಗಳನ್ನು ವಿವರಿಸಿ,ಕಷ್ಟ ಬಂದಾಗ ತನ್ನನ್ನು ಪ್ರಾರ್ಥಿಸುವಂತೆ ಹೇಳಿ ಅಂತರ್ಧಾನಳಾದಳು.
ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠ ಎಂಬ ಚರ್ಚೆ ಶುರುವಾಯಿತು.ಸ್ವಲ್ಪ ಸಮಯದ ವಾಗ್ವಾದದ ಬಳಿಕ “ಶ್ರೀಹರಿ ನೀನೇ ಶ್ರೇಷ್ಠ.ನಾನು ನಿನ್ನೊಳಗೇ ಐಕ್ಯವಾಗಿರುತ್ತೇನೆ” ಎಂದು ಹೇಳಿ ಮಹೇಶ್ವರ ವಿಷ್ಣುವಿನೊಳಗೆ ಸೇರಿಕೊಂಡ.ಬ್ರಹ್ಮ ಮತ್ತು ಹರಿಯ ಮಧ್ಯೆ ಶ್ರೇಷ್ಠತ್ವದ ಕುರಿತಾದ ಚರ್ಚೆ ಮತ್ತೆ ಮುಂದುವರೆಯಿತು.ಕೊನೆಗೆ ಪರಸ್ಪರರೂ ಇಬ್ಬರ ಒಳಗನ್ನೂ ಹೊಕ್ಕು ತಮ್ಮೊಳಗೇನಿದೆ ಎಂದು ನೋಡಿ ಯಾರು ಶ್ರೇಷ್ಠರು ಎಂದು ತೀರ್ಮಾನಿಸುವ ನಿರ್ಧಾರಕ್ಕೆ ಬರಲಾಯಿತು.ಮೊದಲು ವಿಷ್ಣು ಬ್ರಹ್ಮನೊಳಗೆ ಹೋದ.ಬ್ರಹ್ಮನೊಳಗೆ ಧನಕನಕಗಳು,ರತ್ನಗಳ ಜೊತೆಗೆ ಜೀವರಾಶಿಗಳೂ ಇದ್ದವು.ಆದರೆ ಯಾವ ಜೀವಿಗೂ ಪ್ರಾಣವಿರಲಿಲ್ಲ.ಅಧೋದ್ವಾರದ ಮೂಲಕ ಬ್ರಹ್ಮನೊಳಗಿಂದ ವಿಷ್ಣು ಹೊರಬಂದದ್ದಕ್ಕಾಗಿ ಅಧೋಕ್ಷಜನಾದ.ನಂತರ ಬ್ರಹ್ಮನಿಗೆ ಹಿರಣ್ಯಗರ್ಭ ಎಂಬ ನಾಮಧೇಯವನ್ನೂ ಕೊಟ್ಟ.ಶ್ರೀಹರಿಯ ಒಳಹೊಕ್ಕ ಬ್ರಹ್ಮನಿಗೆ ಆತನೊಳಗೆ ಬ್ರಹ್ಮಾಂಡವೇ ಕಂಡಿತು.ಎಲ್ಲ ಜೀವರಾಶಿಗಳಿಗೂ ಜೀವವಿತ್ತು.ವಿರಾಟ್ ವಿಶ್ವರೂಪವನ್ನು ಕಂಡ ಬ್ರಹ್ಮ, ತ್ರಿಮೂರ್ತಿಗಳಲ್ಲಿ ಶ್ರೀಹರಿಯೇ ಶ್ರೇಷ್ಠ ಎಂಬ ತೀರ್ಮಾನಕ್ಕೆ ಬಂದ.

ಸ್ವಲ್ಪ ಸಮಯದ ನಂತರ ಭಾರೀ ಆರ್ಭಟದೊಂದಿಗೆ ಮಧು-ಕೈಟಭರ ಪ್ರವೇಶವಾಯಿತು.ಬಂದವರೇ ಹಸಿವಿನಿಂದ ಬೊಬ್ಬೆ ಹಾಕಿ ಎದುರಿಗೆ ಕಂಡ ಬ್ರಹ್ಮನನ್ನು ತಿನ್ನಲು ಅಟ್ಟಿಸಿಕೊಂಡು ಹೋದರು.ಬ್ರಹ್ಮ ಆದಿಮಾಯೆಯನ್ನು ರಕ್ಷಣೆಗಾಗಿ ಪ್ರಾರ್ಥಿಸಿ ಆಕೆಯ ಆದೇಶದಂತೆ ಶ್ರೀಹರಿಯ ನಾಭಿಯೊಳಗೆ ಹೊಕ್ಕು ಭದ್ರವಾಗಿ ಕುಳಿತುಕೊಂಡ.ತಾವು ಅಟ್ಟಿಸಿಕೊಂಡು ಬಂದ ಬ್ರಹ್ಮ ಎಲ್ಲಿ ಹೋದ ಎಂದು ಮಧು-ಕೈಟಭರು ಶ್ರೀಹರಿಯಲ್ಲಿ ಹೇಳಿದರು.ವಿಷ್ಣು ತನಗೇನೂ ಗೊತ್ತೇ ಇಲ್ಲವೆಂದ.ಸರಿ ಹಾಗಾದರೆ ನಿನ್ನನ್ನೇ ತಿನ್ನುತ್ತೇವೆ ಅಂತ ಶ್ರೀಹರಿಯೊಂದಿಗೆ ರಾಕ್ಷಸರು ಕಾದಾಟಕ್ಕಿಳಿದರು.ಸುಮಾರು ಹೊತ್ತು ಯುದ್ಧವಾಯಿತು.

ಐದು ಸಾವಿರ ವರ್ಷಗಳು ಕಳೆದರೂ ವಿಷ್ಣುವಿಗೆ ಮಧು-ಕೈಟಭರನ್ನು ಗೆಲ್ಲಲಾಗಲಿಲ್ಲ. “ಸೆಣಸಿ ಪಂಚಸಹಸ್ರಕಾಲದಿ,ದನುಜರಲಿ ಜಯ ಸೇರದಿರುತಿರೆ,ನಳಿನನಾಭನು ಸ್ಮರಿಸೆ ಭಕ್ತಿಯೊಳಾದಿಮಾಯೆಯನು..” ಎಂದು ಭಾಗವತರು ಭಾಮಿನಿ ಹಾಡಿದರು.ರಾಕ್ಷಸರನ್ನು ಶಕ್ತಿಯಿಂದ ಗೆಲ್ಲಲು ಸಾಧ್ಯವಿಲ್ಲ.ಯುಕ್ತಿಯಿಂದ ಸೋಲಿಸು ಅವರನ್ನು ಎಂದು ಆದಿಮಾಯೆ ಹರಿಗೆ ಸೂಚನೆಯನ್ನಿತ್ತಳು.

“ನಿಮಗೆ ನಾನೇನಾದರೂ ಕೊಡಲು ಬಯಸಿದ್ದೇನೆ.ನಿಮಗೇನು ಬೇಕೋ ಕೇಳಿ” ಎಂದು ಹರಿ ರಾಕ್ಷಸರಿಗೆ ಹೇಳಿದ.
“ಇಷ್ಟು ಕಾಲ ಹೋರಾಡಿದರೂ ನಮ್ಮನ್ನು ಸೋಲಿಸಲಾಗಲಿಲ್ಲ ನಿನ್ನ ಕೈಯಲ್ಲಿ.ನೀನು ನಮಗೇ ಕೊಡುವಷ್ಟು ದೊಡ್ದವನೋ? ನೀನೇನೂ ಕೊಡುವುದು ಬೇಡ.ನಾವೇ ನಿನಗೆ ಏನಾದರೂ ಕೊಡಬಯಸಿದ್ದೇವೆ.ನಿನಗೇನು ಬೇಕೋ ಕೇಳು” ಎಂದರು ಮಧು-ಕೈಟಭರು.
ವಿಷ್ಣುವಿಗೂ ಇದೇ ಬೇಕಾಗಿತ್ತು. “ನಾನು ಕೇಳಿದ್ದನ್ನು ನೀವು ಕೊಡುವುದೇ ಹೌದಾದರೆ ನನಗೆ ನಿಮ್ಮಿಬ್ಬರ ಪ್ರಾಣ ಬೇಕು.ಕೊಟ್ಟು ಬಿಡಿ” ಎಂದ.

ಆಡಿದ ಮಾತಿಗೆ ತಪ್ಪುವಷ್ಟು ದುರ್ಬುದ್ಧಿ ಆಗಿನ ಕಾಲದ ರಾಕ್ಷಸರಿಗೂ ಇರಲಿಲ್ಲವಾದ್ದರಿಂದ ಮಧು-ಕೈಟಭರು ಚಿಂತಾಕ್ರಾಂತರಾಗಿ ತಮ್ಮ ಗೊಣು ಕೊಡುವುದೆಂದು ನಿರ್ಧರಿಸಿದರು.ಬಲದಿಂದ ಗೆಲ್ಲಲಾಗದೇ ಕೊನೆಗೆ ಬರೀ ಬುದ್ಧಿಶಕ್ತಿಯಿಂದಲೇ ತಮ್ಮನ್ನು ಸೋಲಿಸಿದಾತನನ್ನು ಅರಿಯದೇ ಮೋಸಹೋದೆವು.ಆಗಲೇ ಯೋಚಿಸಿ ಯುದ್ಧ ನಿಲ್ಲಿಸಿದ್ದರೆ ಜೀವ ಉಳಿಯುತಿತ್ತು.ಇನ್ನು ಚಿಂತಿಸಿ ಪ್ರಯೋಜನವಿಲ್ಲ.ಈಗಲಾದರೂ ಅವನಲ್ಲಿ ಶರಣಾಗಿ ಅವನನ್ನು ಅರಿಯಬೇಕೆಂದು ನಿರ್ಧರಿಸಿದರು ಅಸುರರು.

ಶ್ರೀಹರಿ ಕೈಯಲ್ಲಿ ಸುದರ್ಶನ ಹಿಡಿದು ವಿರಾಟ್ ವಿಶ್ವರೂಪಧಾರಿಯಾದ.
“ಕ್ಷೀರಾರ್ಣವಶಯನ ನಾರಾಯಣ,ನೀರಜದಳನಯನ.ಘೋರದುರಿತ ಸಂಹಾರಣ ದೀನೋದ್ಧಾರಿ ರಮಾರಮಣ ನಾರಾಯಣ…” ಎನ್ನುವ ಭಾಗವತರ ಲಯಬದ್ಧವಾದ ಹಾಡಿಗೆ ಭಕ್ತಿಪರವಶರಾಗಿ ಕೈಮುಗಿದು ಮಧು-ಕೈಟಭರು ಹರಿಯ ಪಾದದ ಬಳಿ ಕುಳಿತು ಮೋಕ್ಷವನ್ನು ಯಾಚಿಸಿದರು.
“ದುರುಳರಾದ ನೀವೀರ್ವರು ನನ್ನನ್ನು ಭಜಿಸಿ ಬೇಡುತ್ತಿದ್ದೀರಿ.ಕೊನೆಯ ಕಾಲದಲ್ಲಿ ನಾನು ಯಾರೆಂದು ಅರಿತ ನಿಮ್ಮಿಬ್ಬರಿಗೂ ಮೋಕ್ಷ ಕರುಣಿಸುತ್ತೇನೆ.ನಾಭಿಯ ಮೂಲಕವಾಗಿ ನನ್ನೊಳಗೇ ಸೇರಿಕೊಳ್ಳಿ ನೀವು” ಎಂದು ನುಡಿದ ಕೇಶವ.

ಮಧು-ಕೈಟಭರ ಕಥೆ ಮುಗಿದಿತ್ತು.ಮಾಲಿನಿಯ ಪಾತ್ರಧಾರಿ ರಂಗದ ಮೇಲೆ ಬಂದ ಕೂಡಲೇ ನಾನು ಅಣ್ಣ ಎದ್ದು ಹೊರಟೆವು.
ಮಧ್ಯರಾತ್ರಿ ಹನ್ನೆರಡುವರೆಗೆ ಮನೆಗೆ ಬಂದ ಮೇಲೆ ಅಣ್ಣ ಟಿವಿ ಆನ್ ಮಾಡಿದ.ಮತ್ತೆ ನ್ಯೂಸ್ ಚಾನೆಲ್’ನಲ್ಲಿ ಕೆಳಗೆ Flash News ಬರುತ್ತಿತ್ತು. “ಪ್ಯಾರಿಸ್’ನಲ್ಲಿಯೂ ಬಾಂಬ್ ಸ್ಫೋಟ.ಐವತ್ತಕ್ಕೂ ಹೆಚ್ಚು ಜನರ ಸಾವು.”

“ಯಕ್ಷಗಾನದಲ್ಲಿ ಈಗಷ್ಟೇ ಮಧು-ಕೈಟಭರ ವಧೆಯಾಯಿತು.ಶಕ್ತಿಯಿಂದ ಅವರನ್ನು ಗೆಲ್ಲಲಾಗದಿದ್ದಕ್ಕೆ ವಿಷ್ಣು ತನ್ನ ಬುದ್ಧಿ ಉಪಯೋಗಿಸಿ ಕೊಂದ.ಮುಂದೆ ಮಹಿಷಾಸುರ ಬರುತ್ತಾನೆ,ಅವನನ್ನೂ ಜಗನ್ಮಾತೆ ಒಂಬತ್ತು ದಿನಗಳ ಕಾಲ ಯುದ್ಧ ಮಾಡಿ ಕೊಲ್ಲುತ್ತಾಳೆ.ಬೆಳಗ್ಗಿನ ಜಾವ ಐದು ಗಂಟೆಗೆ ರಕ್ತಬೀಜಾಸುರನ ಪಾತ್ರ ಬರುತ್ತದೆ.ಅವನ ಒಂದೊಂದು ಹನಿ ರಕ್ತದಿಂದ ಹುಟ್ಟಿಕೊಳ್ಳುವ ಕೋಟ್ಯಾನುಕೋಟಿ ರಾಕ್ಷಸರನ್ನೂ ರಕ್ತೇಶ್ವರಿಯ ಅವತಾರವನ್ನು ತಾಳಿ ಶಾಂಭವಿ ವಧಿಸುತ್ತಾಳೆ.ತಪ್ಪಿಸಿಕೊಂಡು ಹೋಗುವ ಅರುಣಾಸುರನೂ ಮುಂದೊಂದು ದಿನ ಭ್ರಾಮರಿಯಿಂದ ಹತನಾಗುತ್ತಾನೆ.ಆದರೆ ಈ ಭಯೋತ್ಪಾದಕರೆಂಬ ಮಧು-ಕೈಟಭರಿಗೆ,ಮಹಿಷಾಸುರ,ರಕ್ತಬೀಜಾಸುರರಿಗೆ ಸಾವೇ ಇಲ್ಲ.ಒಂದು ಕಡೆ ಒಂದು ರೂಪದಲ್ಲಿ ನಾಶವಾದರೆ ಮತ್ತೊಂದು ಕಡೆ ಇನ್ನೊಂದು ರೂಪದಲ್ಲಿ ಕಾಣಿಸಿಕೊಂಡು ಹಿಂಸೆ ಮಾಡಿ ಅಮಾಯಕರನ್ನು ಕೊಲ್ಲುತ್ತಾರೆ.ಮಧು-ಕೈಟಭರನ್ನು ಹರಿ ಯುಕ್ತಿಯಿಂದ ಗೆದ್ದು ಸಾಯಿಸಿದ.ಈ ಟೆರರಿಸ್ಟ್’ಗಳನ್ನು ಶಕ್ತಿಯಿಂದಲೂ ಕೊಲ್ಲಲಾಗದು.ಯುಕ್ತಿಯಿಂದಲೂ ಗೆಲ್ಲಲಾಗದು.ಸಾಕ್ಷಾತ್ ಶ್ರೀಹರಿ ಅಥವಾ ಜಗನ್ಮಾತೆಯೇ ಅವತಾರವೆತ್ತಿ ಬಂದರೂ ಈಗ ಈ ಭಯೋತ್ಪಾದಕರನ್ನು ಸಂಪೂರ್ಣವಾಗಿ ನಾಶ ಮಾಡಲಾಗುವುದಿಲ್ಲ.ಜಗತ್ತಿನಲ್ಲಿ ಇನ್ನು ಎಲ್ಲೆಲ್ಲಿಯೂ ಹಿಂಸೆಯೇ ಕಾಣುತ್ತದೆ.ಶಾಂತಿ,ಸಹನೆ,ಸಂತೋಷ ಎನ್ನುವ ಪದಗಳೇ ಇರುವುದಿಲ್ಲ.ಈ ಭೂಮಿ ದಾರುಣ ಅಂತ್ಯ ಕಾಣಲಿದೆ.ಈ ಭಯೋತ್ಪಾದಕರಿಗಿಂತ ಆ ಮಧು-ಕೈಟಭರೇ ಎಷ್ಟೋ ವಾಸಿ.ಕ್ರೌರ್ಯ ಮೆರೆಯುತ್ತಿರುವ ಉಗ್ರಗಾಮಿಗಳನ್ನು ನಿಯಂತ್ರಿಸಲು ಯಾರಿಂದಲೂ ಆಗುವುದಿಲ್ಲ”. ಅಣ್ಣ ಒಂದೇ ಸಮನೆ ಮಾತನಾಡಿ ರಿಮೋಟ್ ಎಸೆದು ದಡದಡನೇ ಹೋಗಿ ಫ್ರಿಜ್’ನ ಬಾಗಿಲು ತೆರೆದು ತಣ್ಣೀರನ್ನು ಗಟಗಟನೇ ಕುಡಿದು ತನ್ನ ರೂಮಿಗೆ ಹೋಗಿ ಮುಸುಕು ಹಾಕಿಕೊಂಡು ಮಲಗಿಬಿಟ್ಟ.

ನಾನೂ ಫ್ರಿಜ್’ನಿಂದ ನೀರಿನ ಬಾಟಲಿ ತೆಗೆದು ಒಂದಷ್ಟು ಕೋಲ್ಡ್ ವಾಟರ್ ಕುಡಿದು ಹಾಸಿಗೆಯಲ್ಲಿ ಅಡ್ಡಾದೆ.ಬೆಳಗ್ಗಿನ ಜಾವ ಐದುವರೆಯ ಹೊತ್ತಿಗೆ “ನೋಡಿದನು ಕಲಿ ರಕ್ತಬೀಜನು,ಗಾಢಗರ್ವದಿ ಕುಳಿತ ಶಿವೆಯನು..” ಎಂದು ಮೇಳದ ಪ್ರಧಾನ ಭಾಗವತರು ಮತ್ತೊಂದು ಭಾಮಿನಿ ಹಾಡುವಗಲೂ ನನಗೆ ನಿದ್ದೆ ಕಣ್ಣಿಗೆ ಹತ್ತಿರಲಿಲ್ಲ.ಅಣ್ಣ ಹೇಳಿದ ಮಾತುಗಳೇ ಕಿವಿಗೆ ಮತ್ತೆ ಮತ್ತೆ ಅಪ್ಪಳಿಸುತ್ತಿದ್ದವು..

ಚಿತ್ರಕೃಪೆ: ಕಟೀಲು ಸಿತ್ಲ ರಂಗನಾಥ ರಾವ್ ಮತ್ತು ಕೆ.ಆರ್.ಕೆ.ಭಟ್ ಚಿತ್ರಮೂಲ

Advertisements
Posted in ಅರ್ಥವಿಲ್ಲದ ಕನಸಿನ ಮಾತುಗಳು | Leave a comment

ಆಂಜನೇಯನ ಮಹಿಮೆ ಸಾರುವ ‘ಸಿಂಧೂರತೇಜ’

ತೆಂಕುತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಹನುಮಗಿರಿಯ `ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ’ಯೂ ಒಂದು.ಶ್ರೀ ರಾಮಚಂದ್ರಾಪುರ ಮಠದ ಹೊಸನಗರ ಮೇಳವು 2015ರ ನಂತರ ಎಡನೀರು ಮೇಳವಾಗಿ ಬದಲಾಯಿತು.ನಂತರ 2017ರಿಂದ ಅದೇ ಮೇಳ ಹನುಮಗಿರಿ ಮೇಳವಾಗಿದೆ.ಅವತ್ತು ಹೊಸನಗರ ಮೇಳದಲ್ಲಿದ್ದ ಕಲಾವಿದರೇ ಇವತ್ತೂ ಇದ್ದಾರೆ.ಇಡೀ ರಾತ್ರಿಯ ಯಕ್ಷಗಾನದ ಬದಲಿಗೆ ಕಾಲಮಿತಿಯ ಪ್ರಸಂಗಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದ ಹೆಗ್ಗಳಿಕೆ ಹೊಸನಗರ ಮೇಳಕ್ಕಿತ್ತು.ಈಗ ಹನುಮಗಿರಿ ಮೇಳವೂ ಕಾಲಮಿತಿ ಯಕ್ಷಗಾನದ ಪರಂಪರೆಯನ್ನು ಚೆನ್ನಾಗಿ ಮುನ್ನಡೆಸಿಕೊಂಡು ಬಂದಿದೆ.

ಶ್ರೀ ತಾರಾನಾಥ ವರ್ಕಾಡಿಯವರು ರಚಿಸಿದ ‘ಸಿಂಧೂರತೇಜ’ ಅರ್ಥಾತ್ ಹನುಮಗಿರಿ ಮಹಾತ್ಮೆ ಈ ತಿರುಗಾಟದ ನೂತನ ಪ್ರಸಂಗಗಳಲ್ಲೊಂದು.ಇದನ್ನು ನೋಡುವ ಅವಕಾಶ ಇತ್ತೀಚೆಗೆ ನನಗೆ ಲಭ್ಯವಾಯಿತು.ಫೆಬ್ರವರಿ ಹದಿನಾರರಂದು ಮೂಡಬಿದ್ರೆ ಸಮೀಪದ ಅಲಂಗಾರಿನಲ್ಲಿ ಹನುಮಗಿರಿ ಮೇಳದವರು ಅವರ ಪ್ರಸಿದ್ಧ ‘ಸಿಂಧೂರತೇಜ’ ಪ್ರಸಂಗವನ್ನು ರಾತ್ರಿ ಎಂಟುಗಂಟೆಯಿಂದ ಒಂದೂ ಮೂವತ್ತರವರೆಗೆ ಕಾಲಮಿತಿಯಲ್ಲಿ ಆಡಿತೋರಿಸಿದರು.ಪುತ್ತೂರಿನ ಈಶ್ವರಮಂಗಲದ ಸಮೀಪದಲ್ಲಿರುವ ಹನುಮಗಿರಿಯಲ್ಲಿ ಹನೂಮಂತ ತನ್ನ ದೈವ ಕೋದಂಡರಾಮನೊಂದಿಗೆ ನೆಲೆಸಿ ಅಲ್ಲಿನ ಕ್ಷೇತ್ರಪಾಲನಾಗಿದ್ದು ಹೇಗೆ ಎಂಬುದನ್ನು ವಿವರಿಸಿ ನಂತರದ ಕಥಾಭಾಗದಲ್ಲಿ ರಾಮನ ಕಾಲ ಮುಗಿದು ಎಷ್ಟೋ ವರ್ಷಗಳಾದ ಮೇಲೆ ತನ್ನ ದೇವರನ್ನು ಮತ್ತೊಮ್ಮೆ ನೋಡುವ ಬಯಕೆಯಿಂದ ವೃದ್ಧ ಆಂಜನೇಯ ಶ್ರೀರಾಮನನ್ನು ಹುಡುಕುತ್ತಾ ಹೋಗುವ ಕಥೆಯನ್ನು ಹೇಳುತ್ತದೆ ‘ಸಿಂಧೂರತೇಜ’ ಪ್ರಸಂಗ.

ಕೈಲಾಸದಲ್ಲಿ ಶಿವ-ಪಾರ್ವತಿಯರ ನಯನ ಮನೋಹರವಾದ ನೃತ್ಯದೊಂದಿಗೆ ಪ್ರಸಂಗ ಆರಂಭವಾಗುತ್ತದೆ.ಪಾರ್ವತಿಗೆ ಭೂಲೋಕಕ್ಕೆ ಒಮ್ಮೆ ಸುತ್ತಾಡಲು ಹೋಗಬೇಕು ಎಂಬ ಬಯಕೆಯಾಗಿ ಅದನ್ನು ತನ್ನ ಪತಿಯಲ್ಲಿ ವಿನಂತಿಸಿಕೊಂಡು ಈಶ್ವರನನ್ನು ಒಪ್ಪಿಸಿ ಭೂಮಿಗೆ ಕರೆತರುತ್ತಾಳೆ.ಎಲ್ಲೆಲ್ಲೂ ಹಸಿರು ಹೊದ್ದು ಕಂಗೊಳಿಸುತ್ತಿರುವ ಗಿರಿ,ಕಾನನಗಳನ್ನು ನೋಡಿ,ರಮಣೀಯವಾದ ಜಲಪಾತ,ಸಮುದ್ರಗಳನ್ನು ಕಂಡು,ವನ್ಯಮೃಗಗಳ ಆಟವನ್ನು ನೋಡುತ್ತ ಶಿವ-ಪಾರ್ವತಿಯರು ಮೈಮರೆತು ಆನಂದದಿಂದ ಮಿಲನ ಹೊಂದುತ್ತಾರೆ.ಅವರ ಮಿಲನದಿಂದಾಗಿ ಹೊರಬಿದ್ದ ರೇತಸ್ಸಿನ ಶಕ್ತಿಯನ್ನು ವಾಯುದೇವ ತೆಗೆದುಕೊಂಡು ಹೋಗಿ ಅಂಜನಾದೇವಿಯ ಗರ್ಭದಲ್ಲಿ ಹಾಕಿದ್ದರಿಂದ ಆಂಜನೇಯನ ಜನನವಾಯಿತು ಎಂದು ರಂಗಸ್ಥಳದಲ್ಲಿ ತೋರಿಸಿದ ಮೇಲೆ ಕಥೆ ರಾಮಾಯಣದ ಕಾಲಕ್ಕೆ ಹೋಗುತ್ತದೆ.

ಇಂದ್ರಜಿತುವಿನೊಂದಿಗಿನ ಯುದ್ಧದಲ್ಲಿ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಅವನನ್ನು ಎಚ್ಚರಿಸಲು ಸಂಜೀವಿನಿ ಗಿಡಮೂಲಿಕೆ ಬೇಕಾಗುತ್ತದೆ.ಇದನ್ನು ತರಲು ಹನೂಮಂತ ಹಿಮಾಲಯ ಪರ್ವತ ಶ್ರೇಣಿಗೆ ಬರುತ್ತಾನೆ.ಅಲ್ಲಿ ಅವನಿಗೆ ಸಂಜೀವಿನಿ ಗಿಡಮೂಲಿಕೆಯನ್ನು ಗುರುತಿಸಲು ಸಾಧ್ಯವಾಗದೇ ಇರುವುದರಿಂದ ಇಡೀ ಪರ್ವತವನ್ನೇ ಹೊತ್ತು ಲಂಕೆಗೆ ಹಾರಲು ಆಂಜನೇಯ ನಿರ್ಧರಿಸುತ್ತಾನೆ.ಇದನ್ನು ವಿರೋಧಿಸಿ ಕೆಣಕಲು ಬಂದ ಕಾಲನೇಮಿ ಎಂಬ ರಾಕ್ಷಸನನ್ನು ಕೊಂದ ಬಳಿಕ ಅಲ್ಲಿನ ವಲಪಾಲಕನಲ್ಲಿ, ಕೊಂಡು ಹೋದ ಪರ್ವತವನ್ನು ಅದರ ಕೆಲಸ ಮುಗಿದ ಮೇಲೆ ಮತ್ತೆ ತಂದು ಸ್ವಸ್ಥಾನದಲ್ಲೇ ಇರಿಸುವುದಾಗಿ ಮಾತುಕೊಟ್ಟು ಮಾರುತಿ ಲಂಕೆಗೆ ಹೋಗುತ್ತಾನೆ.ಲಕ್ಷ್ಮಣ ಎಚ್ಚರವಾದ ಬಳಿಕ ಸಂಜೀವಿನಿ ಗಿಡಮೂಲಿಕೆಯಿದ್ದ ಪರ್ವತವನ್ನು ಹನೂಮಂತ ವಾಪಾಸ್ ಹಿಮಾಲಯಕ್ಕೆ ತಂದಾಗ ಪರ್ವತದ ಒಂದು ಭಾಗ ಎಲ್ಲೋ ಬಿದ್ದು ಹೋಗಿರುವುದು ವನಪಾಲಕನಿಗೆ ಕಂಡು ಅದನ್ನು ಹುಡುಕಿ ತರಲೇಬೇಕೆಂದು ಆಂಜನೇಯನನ್ನು ಒತ್ತಾಯಿಸುತ್ತಾನೆ.ತನ್ನ ಮಾತನ್ನು ಉಳಿಸಿಕೊಳ್ಳಲು ಬಿದ್ದು ಹೋದ ಪರ್ವತದ ತುಂಡನ್ನು ಹುಡುಕುತ್ತ ವಾಯುಸುತ ಸಾಗುತ್ತಾನೆ.

ಎಲ್ಲಿ ಹುಡುಕಿದರೂ ಪರ್ವತದ ಆ ತುಂಡು ಸಿಗದೇ ಚಿಂತಿಸುತ್ತಾ ಸಾಗುತ್ತಿರುವ ಸಮಯದಲ್ಲಿ ಗುಹೆಯೊಂದರ ಬಳಿ ಋಷಿಯೊಬ್ಬ ತಪಸ್ಸಿನಲ್ಲಿ ಕುಳಿತಿರುವುದನ್ನು ನೋಡಿ ಹನೂಮಂತ ನಿಲ್ಲುತ್ತಾನೆ.ಆ ಋಷಿಯ ಪಕ್ಕದಲ್ಲೇ ಬಿದ್ದ ಪರ್ವತದ ಭಾಗವೂ ಇರುತ್ತದೆ.ಹನೂಮಂತ ಋಷಿಯನ್ನು ಧ್ಯಾನದಿಂದ ಎಬ್ಬಿಸಿ ತನ್ನ ಪ್ರವರವನ್ನೆಲ್ಲ ಹೇಳಿ ವಿಚಾರಿಸಲಾಗಿ ಆ ಮುನಿಯ ಹೆಸರು ವಸು ಮಹರ್ಷಿಯೆಂದು ತಿಳಿಯುತ್ತದೆ.ತಪಸ್ಸನ್ನಾಚರಿಸುತ್ತಿದ್ದ ಮುನಿಪುಂಗವನ ಮೇಲೇ ಈ ಪರ್ವತದ ಭಾಗ ಬಿದ್ದಿರಬಹುದು.ಹಾಗಿದ್ದರೂ ಈ ಲೋಕದ ಪರಿವೆಯೇ ಇಲ್ಲದಂತೆ ಧ್ಯಾನಸ್ಥನಾಗಿರುವ ವಸು ಮಹರ್ಷಿಯನ್ನು ಕಂಡು ಹನೂಮಂತನಿಗೆ ಆಶ್ಚರ್ಯವಾಗುತ್ತದೆ.ಮುನಿವರೇಣ್ಯರಿಗೆ ಸಕಲ ಗೌರವಾದರಗಳನ್ನು ಸಲ್ಲಿಸಿ ಬಿದ್ದ ಆ ಪರ್ವತವನ್ನು ಎತ್ತಿಕೊಂಡು ಹೋಗಿ ಹಿಮಾಲಯಕ್ಕೆ ಮುಟ್ಟಿಸಲು ಆಂಜನೇಯ ಸಿದ್ಧನಾಗುತ್ತಾನೆ.ವಸು ಮಹರ್ಷಿ ತಡೆದು “ನೀನು ಮಾತುಕೊಟ್ಟ ಪ್ರಕಾರ ಹಿಮಾಲಯದಿಂದ ತೆಗೆದುಕೊಂಡು ಹೋದ ಪರ್ವತವನ್ನು ಅಲ್ಲಿಗೇ ಮುಟ್ಟಿಸಿದ್ದೀಯ.ನೀನು ಹಾರಿ ಹೋಗುವಾಗ ಆ ಪರ್ವತದ ಒಂದು ಭಾಗ ಇಲ್ಲಿ ಬಿದ್ದು ಹೋಗಿರುವುದಕ್ಕೆ ನೀನು ಚಿಂತಿಸಬೇಕಾಗಿಲ್ಲ.ಈ ಪರ್ವತದ ಭಾಗ ಇಲ್ಲೇ ಇರಲಿ,ತೆಗೆದುಕೊಂಡು ಹೋಗುವುದು ಬೇಡ.ಬೇಕಾದರೆ ಅಲ್ಲಿನ ವನಪಾಲಕನಿಗೆ ಪರ್ವತದ ತುಂಡು ಇಲ್ಲಿ ಬಿದ್ದಿದೆ ಅಂತ ಹೇಳು” ಎನ್ನುತ್ತಾನೆ.ಇಲ್ಲ ಅದಾಗುವುದಿಲ್ಲ,ನಾನು ಮಾತುಕೊಟ್ಟ ಪ್ರಕಾರ ಸಂಪೂರ್ಣ ಪರ್ವತವನ್ನೇ ಅಲ್ಲಿಗೆ ತೆಗೆದುಕೊಂಡು ಹೋಗಬೇಕು.ಹಾಗಾಗಿ ಈ ಪರ್ವತವನ್ನು ತೆಗೆದುಕೊಳ್ಳುತ್ತೇನೆ ಎನ್ನುತ್ತಾನೆ ಹನೂಮಂತ.ಬೇಡ,ಅದು ಇಲ್ಲಿಯೇ ಇರಬೇಕು ಅಂತ ವಸು ಮಹರ್ಷಿ ಮತ್ತೆ ಹೇಳುತ್ತಾನೆ.ಹನೂಮಂತನಿಗೂ ಮಹರ್ಷಿಗೂ ವಾಗ್ವಾದವಾಗುತ್ತದೆ.ಕೊನೆಗೆ ಮುನಿಯ ಮಾತನ್ನು ಮೀರಿ ಹನೂಮಂತ ಆ ಪರ್ವತದ ತುಂಡನ್ನು ಎತ್ತಿಕೊಳ್ಳಲು ಹೋಗುತ್ತಾನೆ.ಸಂಪೂರ್ಣ ಪರ್ವತವನ್ನೇ ಹಿಮಾಲಯದಿಂದ ಎತ್ತಿಕೊಂಡು ಲಂಕೆಗೆ ಹಾರಿದವನಿಗೆ ಪರ್ವತದ ಸಣ್ಣ ಭಾಗವನ್ನು ತನ್ನೆಲ್ಲಾ ಶಕ್ತಿಯನ್ನು ಪ್ರಯೋಗಿಸಿದರೂ ಎತ್ತಲಾಗುವುದಿಲ್ಲ.ಮುಂದೇನಾಗುತ್ತದೆ,ಶ್ರೀಕ್ಷೇತ್ರ ಹನುಮಗಿರಿಯ ಸ್ಥಳಪುರಾಣ ಏನು ಎಂಬುದನ್ನು ರಂಗಸ್ಥಳದಲ್ಲಿಯೇ ನೋಡಿ.

ರಾಮಾಯಣ ಮುಗಿದು ಎಷ್ಟೋ ಸಾವಿರ ವರ್ಷಗಳು ಕಳೆದ ಮೇಲೆ ಹನೂಮಂತನಿಗೆ ತನ್ನ ದೇವರಾದ ಶ್ರೀರಾಮನನ್ನು ಮತ್ತೊಮ್ಮೆ ನೋಡುವ ಮನಸ್ಸಾಗಿ ಭೂಲೋಕದಲ್ಲೆಲ್ಲ ರಾಮನನ್ನು ಹುಡುಕುತ್ತಾನೆ.ಸಿಗದಿದ್ದಾಗ ಪಾತಾಳಲೋಕದಲ್ಲಿದ್ದಾನೋ ಎಂದು ಪಾತಾಳಲೋಕಕ್ಕೆ ಇಳಿದು ಬರುತ್ತಾನೆ.ಅಲ್ಲಿ ಬಲಿ ಚಕ್ರವರ್ತಿಯ ಪೂಜಾಮಂದಿರದಲ್ಲಿ ಶ್ರೀಹರಿಯ ಅವತಾರಗಳಾದ ಮತ್ಸ್ಯ,ವರಾಹ,ಕೂರ್ಮ,ನರಸಿಂಹ ದೇವರ ಮೂರ್ತಿಗಳು ಕಂಡರೂ ರಾಮ ಸಿಗುವುದಿಲ್ಲ.ರಾಮನಿಲ್ಲದ ಮಂದಿರದಲ್ಲಿ ಬೇರೆ ಯಾರು ಇದ್ದರೆ ಏನು ಪ್ರಯೋಜನ ಎಂದು ಕ್ರೋಧದಿಂದ ಹನೂಮಂತ ಪೂಜಾಸಾಮಗ್ರಿಗಳನ್ನೆಲ್ಲ ಧ್ವಂಸಗೊಳಿಸುತ್ತಾನೆ.ಬಲಿ ಚಕ್ರವರ್ತಿಗೂ ಆಂಜನೇಯನಿಗೂ ಯುದ್ಧವಾಗಿ ಬಲಿ ಸೋತು ನರಸಿಂಹನನ್ನು ರಕ್ಷಣೆಗಾಗಿ ಪ್ರಾರ್ಥಿಸುತ್ತಾನೆ.ಉಗ್ರನರಸಿಂಹನಿಗೂ ವಾಯುಸುತನಿಗೂ ಸುಮಾರು ದಿನಗಳ ಕಾಲ ಯುದ್ಧವಾಗಿ ಅದರಿಂದ ಪ್ರಾಕೃತಿಕ ವಿಕೋಪಗಳಾಗುವುದರಿಂದ ಕಾದಾಟ ನಿಲ್ಲಿಸುವಂತೆ ದೇವತೆಗಳು ಮೊರೆಯಿಡುತ್ತಾರೆ.ಇಬ್ಬರೂ ಸಂಧಾನ ಮಾಡಿಕೊಂಡು ಯುದ್ಧ ನಿಲ್ಲಿಸುತ್ತಾರೆ.ಪಾತಾಳದಲ್ಲೂ ಸಿಗದಿದ್ದ ರಾಮ ಎಲ್ಲಿದ್ದಾನೆಂದು ಕೇಳಲು ಕೈಲಾಸನಾಥನಲ್ಲಿಗೂ ಹೋಗಲು ಆಂಜನೇಯ ನಿರ್ಧರಿಸುತ್ತಾನೆ.ಮುಂದೆ ಹನೂಮಂತ ರಾಮನನ್ನು ಎಲ್ಲೆಲ್ಲಿ ಹುಡುಕುತ್ತಾನೆ,ಆಗ ಅವನಿಗೆ ಎದುರಾಗುವ ಪರಿಸ್ಥಿತಿಗಳು ಯಾವುವು,ಕೊನೆಗೆ ಆಂಜನೇಯನಿಗೆ ರಾಮ ಸಿಗುತ್ತಾನಾ ಎಂಬುದನ್ನು ತಿಳಿಯಲು ನೀವು ‘ಸಿಂಧೂರತೇಜ’ ಪ್ರಸಂಗವನ್ನು ನೋಡಬೇಕು.

ಪೂರ್ವಾರ್ಧದಲ್ಲಿ ರವಿಚಂದ್ರ ಕನ್ನಡಿಕಟ್ಟೆ ಮತ್ತು ಉತ್ತರಾರ್ಧದಲ್ಲಿ ಪದ್ಯಾಣ ಗಣಪತಿ ಭಟ್ಟರ ಭಾಗವತಿಕೆ ಕಿವಿಗಳಿಗೆ ಇಂಪಾಗುತ್ತದೆ.ಮದ್ದಳೆಯಲ್ಲಿ ಕಡಬ ವಿನಯ ಆಚಾರ್ಯ ಮತ್ತು ಪದ್ಮನಾಭ ಉಪಾಧ್ಯಾಯ ಅವರು ಸಹಕರಿಸಿದರೆ ಚೈತನ್ಯಕೃಷ್ಣ ಪದ್ಯಾಣ,ಶಂಕರನಾರಾಯಣ ಭಟ್ಟರು ಚೆಂಡೆಯಲ್ಲಿ ಮೋಡಿ ಮಾಡುತ್ತಾರೆ.ವಸಂತ ವಾಮದಪದವು ಮತ್ತು ರಾಜೇಂದ್ರ ಕೃಷ್ಣ ಇವರ ಚಕ್ರತಾಳದ ಧ್ವನಿಯೂ ಹಿಮ್ಮೇಳದೊಂದಿಗೆ ಸೇರಿ ರಂಗದ ಭವ್ಯತೆಯನ್ನು ಹೆಚ್ಚಿಸುತ್ತದೆ.

ಪೂರ್ವಾರ್ಧದ ಹನುಮಗಿರಿ ಮಹಾತ್ಮೆಯ ಹನೂಮಂತನಾಗಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಮೆರೆಯುತ್ತಾರೆ.ಅವರೊಂದಿಗೆ ವಸು ಮಹರ್ಷಿಯ ಪಾತ್ರದಲ್ಲಿ ಪ್ರಸಿದ್ಧ ಅರ್ಥಧಾರಿ ವಾಸುದೇವ ರಂಗಾಭಟ್ ವಾದ ಮಾಡುತ್ತಾರೆ.ಪ್ರಸಂಗದ ಮೊದಲ ದೃಶ್ಯದಲ್ಲಿ ಶಿವ ಪಾರ್ವತಿಯರಾಗಿ ರಕ್ಷಿತ್ ಶೆಟ್ಟಿ ಪಡ್ರೆ ಮತ್ತು ಸಂತೋಷ್ ಹಿಲಿಯಾಣ ಅದ್ಭುತವಾದ ನಾಟ್ಯ ಪ್ರದರ್ಶಿಸುತ್ತಾರೆ.ಗೃಹಿಣಿಯೊಬ್ಬಳ ಆತ್ಮವನ್ನು ಸೇರಿ ಕಾಟಕೊಡುವ ಭೂತಗಣಗಳನ್ನು ಓಡಿಸಲು ಬರುವ ಮಂತ್ರವಾದಿಯ ಪಾತ್ರದಲ್ಲಿ ಯಕ್ಷರಂಗದ ಚಾರ್ಲಿ ಚಾಪ್ಲಿನ್ ಎಂದು ಖ್ಯಾತಿ ಪಡೆದಿರುವ ಸೀತಾರಾಮ್ ಕುಮಾರ್ ಕಟೀಲ್ ಅವರದ್ದು ವಿಶೇಷ ಆಕರ್ಷಣೆ.ಹನುಮಗಿರಿಯ ರಮಣೀಯವಾದ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಸುಂದರ ಯುವತಿಯ ರೂಪದಲ್ಲಿ ಕೈಲಾಸದಿಂದ ಸುತ್ತಾಡಲು ಹನುಮಗಿರಿಗೆ ಬರುವ ಗೌರಿಯನ್ನು ಸಾಮಾನ್ಯ ಸ್ತ್ರೀಯೆಂದೇ ಭಾವಿಸಿ ಮದುವೆಯಾಗುವಂತೆ ಪೀಡಿಸುವ ಯದುವೀರ ಸಹ್ಯಾದ್ರಿಕೇತನಾಗಿ ಪ್ರಸಿದ್ಧ ಪುಂಡುವೇಷಧಾರಿ ದಿವಾಕರ್ ರೈ ಸಂಪಾಜೆ ಭರ್ಜರಿಯಾಗಿ ಗಿರಕಿ ಹೊಡೆದು ಕುಣಿಯುತ್ತ ಧಿಗಿಣ ಹಾಕುತ್ತಾರೆ.

ಉತ್ತರಾರ್ಧದಲ್ಲಿ ಪರಂಪರೆಯ ಹನೂಮಂತನ ಪಾತ್ರವನ್ನು ಒಡ್ಡೋಲಗದೊಂದಿಗೆ ಹಿರಿಯ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು ಸಮರ್ಥವಾಗಿ ನಿರ್ವಹಿಸುತ್ತಾರೆ.ಬಲಿ ಚಕ್ರವರ್ತಿಯಾಗಿ ಇನ್ನೋರ್ವ ಹಿರಿಯ ಕಲಾವಿದ ಶಿವರಾಮ ಜೋಗಿ ಪಾತ್ರ ಮಾಡಿದರೆ,ಜಗದಾಭಿರಾಮ ಪಡುಬಿದ್ರಿ ಉಗ್ರನರಸಿಂಹನಾಗಿ ಅಬ್ಬರಿಸುತ್ತಾರೆ.ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಅವರ ಬಣ್ಣದ ವೇಷವೂ ಇದೆ.ಇತರ ಪಾತ್ರಗಳಲ್ಲಿ ಪೆರ್ಲ ಜಗನ್ನಾಥ ಶೆಟ್ಟಿ,ಪ್ರಕಾಶ್ ನಾಯ್ಕ್,ವಿಶ್ವನಾಥ ಎಡನೀರು,ಅಕ್ಷಯ್ ಭಟ್ ಮೂಡಬಿದ್ರೆ ಮತ್ತಿತರರು ಮಿಂಚುತ್ತಾರೆ.

ಹನೂಮಂತ ಮತ್ತು ವಸು ಮಹರ್ಷಿಯ ಮಧ್ಯೆ ಸುಮಾರು ಒಂದು ಗಂಟೆಗಳ ಕಾಲ ನಡೆಯುವ ಸಂಭಾಷಣೆಯ ಭಾಗವನ್ನು ತುಸು ಕಡಿತಗೊಳಿಸಿದರೆ,ಭೂತಗಣಗಳ ಪಾತ್ರಗಳಲ್ಲಿ ಬರುವ ನಾಲ್ಕೈದು ಮಕ್ಕಳಲ್ಲಿ ಪ್ರತಿಯೊಬ್ಬರೂ ಸುಮಾರು ಮೂವತ್ತರಿಂದ ನಲವತ್ತು ಸೆಕೆಂಡುಗಳಂತೆ ಎರಡು ಮೂರು ಸಲ ಗಿರಕಿ ಹೊಡೆದು ಧಿಗಿಣ ಹಾಕುವುದನ್ನು ಸ್ವಲ್ಪ ಕಡಿಮೆ ಮಾಡಿದರೆ ಪ್ರಸಂಗ ಅಚ್ಚುಕಟ್ಟಾಗಿ ಇನ್ನೂ ಚೆನ್ನಾಗಿ ಮೂಡಿ ಬರುತ್ತದೆ.

ಅವತ್ತು ಅಲಂಗಾರಿನಲ್ಲಿ ನಾನು ನೋಡಿದ ಆಟದಲ್ಲಿ ಬ್ಯಾಂಡ್ ಸೆಟ್,ಕಹಳೆ ಯಾವುದೂ ಇಲ್ಲದೇ ಇದ್ದುದ್ದರಿಂದ ಹಿಮ್ಮೇಳದ ಧ್ವನಿ ಸಂಪೂರ್ಣವಾಗಿ ಕೇಳಿ ಯಕ್ಷಗಾನವನ್ನು ಸಂಪೂರ್ಣ ರಸಾನುಭೂತಿಯಿಂದ ಆಸ್ವಾದಿಸಲು ಸಾಧ್ಯವಾಯಿತು.ರಂಗಸ್ಥಳಕ್ಕೆ ಕೊಡುವ ಆಕರ್ಷಣೀಯವಾದ ಬಣ್ಣ ಬಣ್ಣದ ಬೆಳಕಿನ ಸಂಯೋಜನೆಯಲ್ಲಿ ಪ್ರಸಂಗ ಮತ್ತಷ್ಟು ಕಳೆಗಟ್ಟುತ್ತದೆ.ಒಟ್ಟಿನಲ್ಲಿ ‘ಸಿಂಧೂರತೇಜ’ ಪ್ರಸಂಗವನ್ನು ಅತ್ಯುತ್ತಮವಾಗಿ ಪ್ರದರ್ಶಿಸುವುದಕ್ಕೆ ಹನುಮಗಿರಿ ಮೇಳದವರು ಅಭಿನಂದನಾರ್ಹರು.ನೀವು ಯಕ್ಷಾಸಕ್ತರಾಗಿದ್ದರೆ ಈ ಪ್ರಸಂಗವನ್ನು ಇಷ್ಟಪಡುವುದರಲ್ಲಿ ಅನುಮಾನವಿಲ್ಲ.ಎಲ್ಲಿಯಾದರೂ ಸಿಕ್ಕಿದರೆ ‘ಸಿಂಧೂರತೇಜ’ ಪ್ರಸಂಗವನ್ನು ಸಂಪೂರ್ಣವಾಗಿ ಒಮ್ಮೆ ನೋಡಿ.ಇದೇ ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಈ ಪ್ರಸಂಗದ ಆಯ್ದ ಭಾಗಗಳನ್ನು ‘ಯಕ್ಷವಿಸ್ಮಯ’ ತಂಡದವರು ಚಿತ್ರೀಕರಣ ಮಾಡಿ ಯೂಟ್ಯೂಬಿನಲ್ಲಿ ಅಪ್ಲೋಡ್ ಮಾಡಿದ್ದಾರೆ.ಆ ವೀಡಿಯೋಗಳನ್ನು ಇಲ್ಲಿ ಹಾಕಿದ್ದೇನೆ.ನೋಡಿ ಆನಂದಿಸಿ.
‘ಸಿಂಧೂರತೇಜ’ ಪ್ರಸಂಗವನ್ನು ನೇರವಾಗಿ ನೋಡುವ ಅವಕಾಶ ಸಿಕ್ಕಿದರೆ ತಪ್ಪದೇ ನೋಡಿ.

Posted in ಯಕ್ಷಗಾನ | Leave a comment

ಶೂನ್ಯಪೂಜೆ

ನವರಾತ್ರಿಯ ಒಂಭತ್ತು ದಿನಗಳ ಉತ್ಸವ ಮುಗಿದಿತ್ತು.ಮಣ್ಣಿನಿಂದ ಮಾಡಿದ್ದ ದೇವಿಯ ವಿಗ್ರಹಕ್ಕೆ ಪ್ರತಿದಿನವೂ ಬೇರೆ ಬೇರೆ ರೀತಿ ಅಲಂಕಾರ ಮಾಡಿ ಸಂಭ್ರಮೋಲ್ಲಾಸದಿಂದ ಕೂಡಿದ ಭಕ್ತಿಯಿಂದ ಅಮ್ಮನವರನ್ನು ಒಂಭತ್ತು ದಿನಗಳ ಪರ್ಯಂತ ಪೂಜಿಸಿ ಇವತ್ತು ವಿಜಯದಶಮಿಯ ಮಂಗಳಾರತಿಯ ಬಳಿಕ ಜಗನ್ಮಾತೆಯನ್ನು ನೀರಿನಲ್ಲಿ ವಿಸರ್ಜಿಸಲು ಸಿದ್ಧತೆ ಆರಂಭವಾಗಿತ್ತು.

ವಿಜಯದಶಮಿಯ ಪೂಜೆಯೂ ಸಾಂಗವಾಗಿ ನೆರವೇರಿ ಶ್ರೀದೇವಿಗೆ ಎಲ್ಲರೂ ಜೈಕಾರ ಹಾಕಿದರು.ವಿಗ್ರಹದ ವಿಸರ್ಜನೆಗೆ ಕ್ಷಣಗಣನೆ ಆರಂಭವಾಯಿತು.ಜಾಗಟೆ,ತಾಳ ಬಡಿಯುವವರು,ಶಂಖ ಊದುವವರು ಅಮ್ಮನವರ ಮೆರವಣಿಗೆಗೆ ತಮ್ಮ ಶಬ್ದನಾದದ ಮೂಲಕ ಮೆರುಗು ನೀಡಲು ಉತ್ಸುಕರಾಗಿದ್ದರು.ಪುರೋಹಿತರು ಜೋರು ಸ್ವರದಲ್ಲಿ ಮಂತ್ರಘೋಷ ಮಾಡುತ್ತಿದ್ದರು.

“ದೇವಿಯ ವಿಗ್ರಹವನ್ನು ಈ ಸಲ ನಾನೇ ಮೊದಲು ಕೈಹಾಕಿ ಎತ್ತುತ್ತೇನೆ.ನಾನು ಎತ್ತಿಕೊಂಡ ಮೇಲೆ ನೀವೆಲ್ಲ ಬನ್ನಿ.ಆಮೇಲೆ ಎಲ್ಲರೂ ಅಮ್ಮನವರನ್ನು ಹೊತ್ತುಕೊಂಡು ಮೆರವಣಿಗೆ ಹೋದರಾಯಿತು” ಅಂತ ನಾನು ನವೀನನಲ್ಲಿ ಹೇಳಿದೆ.
“ಲೋ ನಿನ್ ಕೈಲಿ ಆಗತ್ತ ದೇವಿಯನ್ನು ಒಬ್ಬನೇ ಕೈಹಾಕಿ ಎತ್ತೋಕೆ.ತುಂಬಾ ಭಾರ ಇದೆ ಅದು.ನಾನು ಮೊದಲು ಎತ್ತುತ್ತೇನೆ.ಆಮೇಲೆ ನೀನು ಬಾ” ನನ್ನ ತೆಳ್ಳಗಿನ ಮೈಯನ್ನು ನೋಡುತ್ತ ಹೇಳಿದ ನವೀನ.
“ಇಲ್ಲ ಕಣೋ.ಈ ಸಲ ನಾನೇ ಎತ್ತುತ್ತೀನಿ.ದೇವಿಯನ್ನು ಎತ್ತಕ್ಕೆ ಬೇಕಾದಷ್ಟು ಶಕ್ತಿ ನನ್ನಲ್ಲಿದೆ” ಅಂದೆ.
“ಸರಿ ನಿನ್ನಿಷ್ಟ” ಅಂದ ನವೀನ.

“ಸಮಯವಾಯಿತು,ಅಮ್ಮನವರನ್ನು ಎತ್ತಿಕೊಳ್ಳಿ” ಅಂದರು ಪುರೋಹಿತರು ವಿಗ್ರಹವನ್ನು ಸ್ಥಾನಪಲ್ಲಟ ಮಾಡಿದ ಮೇಲೆ.
ನಾನು ಹೋದೆ.ದೇವಿಗೆ ಒಂದು ನಮಸ್ಕಾರ ಹಾಕಿ ಎರಡೂ ಕೈಗಳನ್ನು ಬಳಸಿ ಅಮ್ಮನ ವಿಗ್ರಹವನ್ನು ಎತ್ತಲಾರಂಭಿಸಿದೆ.ತುಸು ಭಾರವಿದ್ದಂತೆ ಅನ್ನಿಸಿತು.ನವೀನ,ಪುರೋಹಿತರು ಹತ್ತಿರವೇ ನಿಂತಿದ್ದರು.
“ಲೋ ಏನೋ ಮಾಡಿದೆ.ಆಗ್ಲೇ ಹೇಳಿದೆ ತಾನೆ,ನಿನ್ ಕೈಲಿ ಎತ್ತಕ್ಕೆ ಆಗಲ್ಲ ಅಂತ.ಈಗ ನೋಡು ನೀನು ಎತ್ತಿಕೊಳ್ಳುವಾಗ ವಿಗ್ರಹ ಸ್ವಲ್ಪ ಜಾಸ್ತಿಯೇ ಹಿಂದಕ್ಕೆ ಬಾಗಿದ್ದರಿಂದ ಅಮ್ಮನ ಕುತ್ತಿಗೆಯ ಹತ್ತಿರ ಬಿರುಕು ಬಿಟ್ಟಿದೆ.ನಾವು ಮೆರವಣಿಗೆ ಶುರು ಮಾಡುವ ಮೊದಲೇ ಅಮ್ಮನ ರುಂಡ ದೇಹದಿಂದ ತುಂಡಾಗುವ ಹಾಗೆ ಅನ್ನಿಸ್ತಾ ಇದೆ” ಅಂತ ಕಿರುಚಿದ ನವೀನ.
ನನಗೇನು ಮಾಡಲೂ ಗೊತ್ತಾಗಲಿಲ್ಲ.ಭಯದಿಂದ ಪುರೋಹಿತರನ್ನೇ ನೋಡುತ್ತ ನಿಂತೆ.

“ಏನು ಮಾಡೋದು ಭಟ್ರೇ ಈಗ.ಅಮ್ಮನ ವಿಗ್ರಹವನ್ನು ಘಾಸಿಗೊಳಿಸಿ ಇವನು ತಪ್ಪು ಮಾಡಿದ್ದಾನೆ.ಈಗ ಪ್ರಾಯಶ್ಚಿತ್ತ ನೀವೇ ಹೇಳಬೇಕು” ಅಂದರು ಅಲ್ಲಿ ಬಂದಿದ್ದವರೊಬ್ಬರು.
ನನ್ನ ಈ ತಪ್ಪಿಗೆ ಅಮ್ಮ ಶಿಕ್ಷೆ ಕೊಡುತ್ತಾಳ?ನಾನು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾ?ಅದು ಯಾವ ಸ್ವರೂಪದ್ದಾಗಿರಬಹುದು?ಅದರಿಂದ ನನಗೇನಾದರೂ ಆದರೆ… ಅಂತೆಲ್ಲ ನಾನು ಕಳವಳಗೊಂಡೆ.

ಪುರೋಹಿತರು ಏನನ್ನೋ ಚಿಂತಿಸುತ್ತ ಸುಮ್ಮನೇ ನಿಂತಿದ್ದರು.ಉಳಿದವರೂ ಏನೂ ಮಾತನಾಡದೇ ಮೌನವಾಗಿದ್ದರು.ಕೆಲವೇ ನಿಮಿಷಗಳ ಹಿಂದೆ ಕೇಳುತ್ತಿದ್ದ ಮಂತ್ರಘೋಷ,ಭಜನೆ,ಜಾಗಟೆ,ತಾಳಗಳ ಶಬ್ದವೆಲ್ಲ ನಿಂತು ಹೋಗಿ ವಾತಾವರಣವೇ ಬದಲಾಗಿತ್ತು.ನವೀನ ದೇವಿಯ ವಿಗ್ರಹವನ್ನು ಆಧರಿಸಿ ಹಿಡಿದಿದ್ದ.

“ವಿಗ್ರಹಕ್ಕೆ ಘಾಸಿಯಾಗಿದ್ದಕ್ಕಾಗಿ ನೀನು ‘ಶೂನ್ಯಪೂಜೆ’ ಮಾಡಬೇಕು” ನನ್ನ ಕಡೆ ನೋಡಿ ಹೇಳಿದರು ಭಟ್ರು.
“ಶೂನ್ಯಪೂಜೆಯೇ.ಇದೆಂಥದು ನಾವು ಕೇಳಿರದ ಹೊಸ ಪೂಜೆ.ಅದನ್ನು ಹೇಗೆ ಮಾಡುತ್ತಾರೆ ಭಟ್ರೇ” ಅಂತ ಕೆಲವರು ಕೇಳಲಾರಂಭಿಸಿದರು.ನಾನು ಪುರೋಹಿತರನ್ನೇ ನೋಡುತ್ತ ಸುಮ್ಮನೇ ನಿಂತಿದ್ದೆ.

“ಸಂಪೂರ್ಣವಾಗಿ ಲಯವಾಗಿದ್ದ ಪ್ರಪಂಚದಲ್ಲಿ ಮತ್ತೆ ಜೀವರಾಶಿಯನ್ನು ಹುಟ್ಟುಹಾಕಲು ತ್ರಿಮೂರ್ತಿಗಳನ್ನು ಶೂನ್ಯದಿಂದ ಸೃಷ್ಟಿಸಿದವಳು ಆದಿಮಾಯೆ.ಜಗನ್ಮಾತೆ ಹೇಗೆ ಹುಟ್ಟಿದವಳು ಎಂದೂ ಸರಿಯಾಗಿ ಗೊತ್ತಿಲ್ಲ ನಮಗೆ.ಮಹಿಷಾಸುರನ ಕಾಟವನ್ನು ತಾಳಲಾರದೆ ತ್ರಿಮೂರ್ತಿಗಳು ಮತ್ತು ದೇವತೆಗಳೆಲ್ಲ ತಮ್ಮ ರಕ್ಷಣೆಗಾಗಿ ಪರಿತಪಿಸುತ್ತಿದ್ದಾಗ ಶೂನ್ಯದಿಂದಲೇ ಜನ್ಮತಾಳಿ ‘ಅಯೋನಿಜೆ’ ಎನಿಸಿಕೊಂಡವಳು ಶ್ರೀದೇವಿ.ಹಾಗಾಗಿ ಏನೂ ಇಲ್ಲದ ಶೂನ್ಯದ ಸ್ಥಿತಿಗೂ ಜಗನ್ಮಾತೆಗೂ ಏನೋ ಸಂಬಂಧವಿರಬಹುದು.ಆದ್ದರಿಂದ ಶೂನ್ಯವನ್ನು ಪೂಜಿಸಿದರೆ ಅದು ಅಮ್ಮನವರನ್ನು ಪೂಜಿಸಿದ ಹಾಗಲ್ಲವೆ” ಅಂದರು ಪುರೋಹಿತರು.
“ಅಲ್ಲದೆ ಇವನೇನೂ ಗೊತ್ತಿದ್ದೂ ದೇವಿಯ ವಿಗ್ರಹಕ್ಕೆ ಘಾಸಿ ಮಾಡಿದ್ದಲ್ಲ.ತಿಳಿಯದೆ ಹೇಗೋ ಆಗಿ ಹೋಗಿದೆ.ಹಾಗಾಗಿ ವಿಶೇಷ ಪ್ರಾಯಶ್ಚಿತ್ತದ ಅಗತ್ಯವೇನೂ ಇಲ್ಲ” ಅಂತ ಭಟ್ರು ನನ್ನನ್ನು ನೋಡುತ್ತ ಹೇಳಿದರು.

“ಆದರೆ ಶೂನ್ಯವನ್ನು ಹೇಗೆ ಪೂಜಿಸುವುದು ಭಟ್ರೇ” ನವೀನ ಆಶ್ಚರ್ಯಚಕಿತನಾಗಿ ಕೇಳಿದ.

“ಜಗನ್ಮಾತೆ ಸೊನ್ನೆಯಿಂದಲೇ ಎಲ್ಲವನ್ನೂ ನಿರ್ಮಿಸಲು ಶಕ್ತಳಾಗಿರುವುದರಿಂದ ಎದುರಿಗೆ ಮೂರ್ತರೂಪದಲ್ಲಿ ಏನನ್ನೂ ಇಟ್ಟುಕೊಳ್ಳದೆ, ಪ್ರಪಂಚದ ಉಗಮಕ್ಕೆ ಕಾರಣವಾದ ಆ ಮೂಲಶಕ್ತಿಯನ್ನು ಮನಸ್ಸಿನಲ್ಲಿ ಧ್ಯಾನಿಸಿ ನಮಸ್ಕರಿಸಿದರೂ ಸಾಕು.ಅದು ಮಾಡಲಿಕ್ಕಾಗದಿದ್ದರೆ ವಿವಿಧ ರೂಪಗಳಲ್ಲಿ ದೇವಿಯು ಈ ಜಗತ್ತಿನಲ್ಲಿ ನೆಲೆಸಿರುವುದರಿಂದ ಈ ಪ್ರಕೃತಿ,ಗಿಡ-ಮರ,ಪ್ರಾಣಿ-ಪಕ್ಷಿಗಳು,ನದಿ ಏನನ್ನು ಬೇಕಾದರೂ ಪೂಜಿಸಬಹುದು.ಅದು ಬೇಡವೆಂದರೆ ಈಗ ಎದುರಿಗಿರುವ ಬಿರುಕು ಬಿಟ್ಟಿರುವ ದೇವಿಯ ವಿಗ್ರಹಕ್ಕೆ ಮತ್ತೊಮ್ಮೆ ನಮಸ್ಕರಿಸಿದರೂ ಆದೀತು.ಎಷ್ಟಂದರೂ ಆ ಲೀಲಾವಿನೋದಿನಿಯ ಮುಂದೆ ನಾವೆಲ್ಲರೂ ಶೂನ್ಯರಲ್ಲವೇ” ಎಂದು ಭಟ್ರು ಮತ್ತೊಮ್ಮೆ ಅಮ್ಮನವರಿಗೆ ವಂದಿಸಿದರು.

ಏನೇನೋ ಆಗಬಹುದು ಇಲ್ಲಿ ಅಂತ ನಿರೀಕ್ಷಿಸಿದ್ದ ನಾನು ಭಟ್ರ ಮಾತು ಕೇಳಿ ಸಮಾಧಾನದ ನಿಟ್ಟುಸಿರು ಬಿಟ್ಟೆ.

“ಶೂನ್ಯಪೂಜೆಯನ್ನು ಮುಗಿಸಿಯೇ ಅಮ್ಮನವರನ್ನು ವಿಸರ್ಜಿಸಬಹುದಲ್ಲವೇ ಭಟ್ರೇ” ಅಂದೆ ನಾನು.
ಪುರೋಹಿತರು ಮುಗುಳ್ನಕ್ಕರು.ಆ ಜಗನ್ಮಾತೆಯೂ ಎಲ್ಲವನ್ನು ನೋಡಿ ನಕ್ಕಂತಾಯಿತು..

ಚಿತ್ರಕೃಪೆ: ಗೂಗಲ್

Posted in ಅರ್ಥವಿಲ್ಲದ ಕನಸಿನ ಮಾತುಗಳು | 2 Comments

ಅವಳು ಮತ್ತು ಆರ್ಯ


ಸೂರ್ಯಾಸ್ತಕ್ಕೆ ದಿನಕರ ಅಣಿಯಾಗುತ್ತಿರುವ ಕೆಂಪಾದ ಸಂಜೆಯ ಸಮಯ.ಆಟದ ಬಯಲಿನಲ್ಲಿ ಆರ್ಯ ಕುಳಿತಿದ್ದ.ಹುಡುಗರು ಫುಟ್ಬಾಲ್ ಆಡುತ್ತಿದ್ದರು.ಇವನೂ ಆಡುವವನೇ ಆಗಿದ್ದರೂ ಅವತ್ತೇಕೋ ಮನಸ್ಸಿಲ್ಲದೆ ಸುಮ್ಮನೇ ಕುಳಿತು ಅವಳನ್ನು ನಿರೀಕ್ಷಿಸುತ್ತಿದ್ದ.ಪುಸ್ತಕಗಳನ್ನು ಹೊತ್ತುಕೊಂಡು ಹೋಮ್ ವರ್ಕ್ ಮಾಡಲು ತನ್ನ ಗೆಳತಿಯರೊಂದಿಗೆ ಯಥಾ ಪ್ರಕಾರ ಇಂದೂ ಅವಳು ಬರುತ್ತಾಳೆ ಅಂತಲೇ ಆರ್ಯ ಭಾವಿಸಿದ್ದ.ಹದಿಹರೆಯದ ಆರ್ಯನಿಗೆ ತನ್ನದೇ ವಯಸ್ಸಿನ ಅವಳ ಬಗ್ಗೆ ವಿಶೇಷ ಆಕರ್ಷಣೆ.ಅವಳು ಸಿಕ್ಕಾಗಲೆಲ್ಲ ಅವಳೊಂದಿಗೆ ಒಂದೇ ಸಮನೆ ಹರಟುತ್ತಿದ್ದ.ಯಾವುದನ್ನೂ ತನ್ನೊಳಗೆ ಬಚ್ಚಿಟ್ಟುಕೊಳ್ಳದೆ ಎಲ್ಲವನ್ನೂ ಅನಾವರಣಗೊಳಿಸುತ್ತಿದ್ದ.ಅವಳೇನೂ ಪ್ರತಿಕ್ರಿಯೆ ನೀಡದೆ ಸುಮ್ಮನೆ ನಗುತ್ತಿದ್ದಳು.ಆ ನಗುವೇ ತುಂಬಾ ಆಪ್ಯಾಯಮಾನವಾಗಿ ಅವಳ ಮುಂದೆ ತನ್ನನ್ನು ತಾನು ಮತ್ತಷ್ಟು ತೆರೆದುಕೊಳ್ಳಲು ಪ್ರೇರೇಪಿಸುತ್ತಿತ್ತು.ತನ್ನ ಮಾತು ಅವಳಿಗೆ ವೇದ್ಯವಾಗುವುದರಿಂದಲೇ ಕಿರುನಗೆಯನ್ನು ಚೆಲ್ಲುತ್ತಾಳೆ ಅಂತ ಅಂದುಕೊಂಡಿದ್ದ.ಇವತ್ತು ಅವಳು ಬಂದಾಗ ಮಾತಿನ ಪ್ರವಾಹವನ್ನೇ ಹರಿಸಿ ಆಹ್ಲಾದಕರವಾದ ಅವಳ ನಗುವನ್ನು ನೋಡಬೇಕು ಅಂತ ಆರ್ಯ ಯೋಚಿಸುತ್ತಿದ್ದ…..

ಅವಳ ಗೆಳತಿಯರೆಲ್ಲ ಪುಸ್ತಕ ಹೊತ್ತುಕೊಂಡು ಬಂದು ಹುಡುಗರ ಫುಟ್ಬಾಲ್ ಆಟ ನೋಡುತ್ತ ಹೋಮ್ ವರ್ಕ್ ಮಾಡಲು ಹುಲ್ಲು ಹಾಸಿನ ಮೇಲೆ ಕುಳಿತರು.ಅವಳು ಕಾಣುತ್ತಾಳೇನೂ ಅಂತ ದೃಷ್ಟಿ ಹೋದಷ್ಟು ದೂರ ಕಣ್ಣು ಹಾಯಿಸಿದ ಆರ್ಯ.ಅವಳು ಬರಲಿಲ್ಲ.
“ಎಲ್ಲಿ ಅವಳು?” ಅಂತ ಅವಳ ಗೆಳತಿಯರನ್ನು ಕೇಳಿದ.ಎಲ್ಲರೂ ಒಮ್ಮೆಲೇ ನಕ್ಕರು. “ನೀನು ತುಂಬಾ ಮಾತಾಡುತ್ತೀಯಂತೆ.ಯಾವುದನ್ನು ಹೇಳಬೇಕು,ಯಾವುದನ್ನು ಹೇಳಬಾರದು ಅಂತ ಯೋಚಿಸದೇ ಎಲ್ಲವನ್ನೂ ಆಡಿಬಿಡುತ್ತೀಯಂತೆ.ಆ ಸಿನಿಮಾ ಹೇಗಿದೆ ಅಂತ ನಿನ್ನಲ್ಲಿ ಕೇಳಿದಾಗ,ಚಿತ್ರದ ಇಡೀ ಕಥೆಯನ್ನೇ ಅವಳ ಮುಂದೆ ಅರುಹಿ ಅವಳು ಆ ಸಿನಿಮಾ ನೋಡದಂತೆ ಮಾಡಿಬಿಟ್ಟೆಯಂತೆ.ಸ್ವಲ್ಪವಾದರೂ ಕುತೂಹಲವಿಲ್ಲದಿದ್ದರೆ ಆಕರ್ಷಣೆ ಹುಟ್ಟಲಾರದು.ನೀನು ಯಾವುದನ್ನೂ ಮುಚ್ಚಿಡದೇ ಎಲ್ಲವನ್ನೂ ಹೇಳುವುದರಿಂದ ನಿನ್ನಲ್ಲಿ ಕುತೂಹಲವೇ ಇಲ್ಲವಂತೆ ಅವಳಿಗೆ” ಅಂದರು ಅವಳ ಗೆಳತಿಯರು.
ಅವಳ ನಗುವನ್ನು ತಾನಿನ್ನು ಕಾಣಲಾರೆ ಎಂಬ ಯೋಚನೆಯೇ ಆರ್ಯನನ್ನು ವಿಹ್ವಲಗೊಳಿಸಿತು.
“ಅವಳು ಬರಲಿಲ್ಲವೆ.ಸರಿ ಹಾಗಾದರೆ ನಾನು ಸಂಧ್ಯಾವಂದನೆ ಮಾಡಲು ಹೊರಟೆ” ಅಂತ ಎದ್ದ ಆರ್ಯ.
“ಹತ್ತು ನಿಮಿಷ ಇರು.ಹೋಮ್ ವರ್ಕ್ ಮುಗಿಸಿ ನಾವೂ ಸಂಧ್ಯಾವಂದನೆ ಮಾಡಲು ಬರುತ್ತೇವೆ.ಒಟ್ಟಿಗೆ ಹೋಗೋಣ” ಅಂದರು ಹುಡುಗಿಯರು.
ದಿಗ್ಭ್ರಮೆಯಾಗಿ ಕೇಳಿದ. “ನೀವು ಸಂಧ್ಯಾವಂದನೆ ಮಾಡುವುದೇ?”
“ಯಾಕೆ,ಹುಡುಗಿಯರು ಸಂಧ್ಯಾವಂದನೆ ಮಾಡಕೂಡದೇನು? ಧೀಶಕ್ತಿಯನ್ನು ಪ್ರಚೋದಿಸುವಂತೆ ಸವಿತೃ ದೇವತೆಯನ್ನು ಪ್ರಾರ್ಥಿಸಲು ನಮಗೆ ಹಕ್ಕಿಲ್ಲವೇ?”
ಹತ್ತು ನಿಮಿಷ ಬಿಟ್ಟು ಆ ಹುಡುಗಿಯರ ಜೊತೆ ಆರ್ಯ ಎದ್ದ ಸಂಧ್ಯಾವಂದನೆಗೆ..

ಯಾವತ್ತೂ ಆ ಥರ ಆಗಿರಲಿಲ್ಲ.ಗಾಯತ್ರಿ ಮಂತ್ರವನ್ನು ಜಪಿಸುತ್ತಿರುವಾಗ ನಗುತ್ತಿರುವ ಅವಳ ಮುಖ ಕಣ್ಣ ಮುಂದೆ ಬಂತು.ಏನು ಮಾಡಿದರೂ ನಿಯಂತ್ರಿಸಲಾಗುತ್ತಿಲ್ಲ.ಒಂದೇ ಸಮನೆ ನಗುತ್ತಿದ್ದಾಳೆ.ಇದ್ದಕ್ಕಿದ್ದಂತೆ ನಗು ನಿಲ್ಲಿಸಿ “ನಿನ್ನ ಮಾತುಗಳನ್ನು ಕೇಳುತ್ತೇನೆ, ಬಾ ಆರ್ಯ ಮಾತಾಡೋಣ.ಯಾವುದನ್ನೂ ಮುಚ್ಚಿಡದೇ ಸಂಭಾಷಿಸೋಣ. ಆರ್ಯ ಬಾ… ಬಾ ಆರ್ಯ… ” ಅಂತ ಅವಳು ಕರೆದಂತಾಯಿತು.

ಚಿತ್ರ ಕೃಪೆ:ಶಿವಪ್ರಸಾದ್ ಹಳುವಳ್ಳಿ

Posted in ಅರ್ಥವಿಲ್ಲದ ಕನಸಿನ ಮಾತುಗಳು | Leave a comment