ಧರ್ಮ,ಪರಂಪರೆ,ಧಾರ್ಮಿಕ ಆಚರಣೆಗಳು,ದೈವೀ ಶಕ್ತಿಗಳ ಕುರಿತು ಅನೇಕ ಕಾದಂಬರಿಗಳು ಕನ್ನಡದಲ್ಲಿ ಹಲವಾರು ಬಂದಿವೆ.‘ಸಂಸ್ಕಾರ’ ‘ವಂಶವೃಕ್ಷ’ ಗಳಂಥವು ಸದಾ ಕಾಲ ನೆನಪಿನಲ್ಲುಳಿಯುತ್ತವೆ.ಈಗ ಅದಕ್ಕೆ ‘ಕರ್ಮ’ ಕಾದಂಬರಿ ಹೊಸ ಸೇರ್ಪಡೆ.ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಕರಣಂ ಪವನ್ ಪ್ರಸಾದ್ ಅವರು ತಮ್ಮ ಚೊಚ್ಚಲ ಕಾದಂಬರಿಯಲ್ಲೇ ಅನೇಕ ಓದುಗರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.ಮರಣದ ನಂತರ ನಡೆಯುವ ಕಾರ್ಯ ವಿಧಾನಗಳನ್ನು,ಇಂದಿನ ಆಧುನಿಕ ಯುಗದಲ್ಲಿ ಅದು ಪಡೆದುಕೊಂಡಿರುವ ಹೊಸ ರೂಪಗಳನ್ನು ಸರಳವಾಗಿ,ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

1609766_888924764467128_711470087385241883_n

ಬೆಂಗಳೂರಿನಲ್ಲಿ ಹುಡುಗಿಯೊಂದಿಗೆ ‘ಲಿವಿಂಗ್ ಟುಗೆದರ್’ ಸಂಬಂಧದಲ್ಲಿ ವಾಸಿಸುತ್ತಿರುವ ಸುರೇಂದ್ರ ತನ್ನ ಅಪ್ಪನ ಸಾವಿನ ಸುದ್ದಿಯನ್ನು ತಿಳಿದು ಊರಿಗೆ ಬರುತ್ತಾನೆ.ಅವನ ಹೆಂಡತಿ ನೇಹಾ ಜೀವಂತಿ ಇಷ್ಟವಿಲ್ಲದಿದ್ದರೂ ಸುರೇಂದ್ರನ ಜೊತೆ ಬರುತ್ತಾಳೆ.ಅನ್ಯ ಜಾತಿಯವಳನ್ನು ಕಟ್ಟಿಕೊಂಡ ಎಂಬ ಕಾರಣಕ್ಕೆ ಅಪ್ಪ ವಿರೋಧಿಸಿದಾಗ ತಾನೂ ಬದುಕಿ ತೋರಿಸಬೇಕು ಎಂಬ ಛಲದಿಂದ ಬೆಂಗಳೂರಿಗೆ ಬಂದು ಅಲ್ಲೇ ಸೆಟ್ಲ್ ಆದ ಸುರೇಂದ್ರ ಮತ್ತೆ ವಾಪಸ್ಸು ಬರುವುದು ಅಪ್ಪ ಸತ್ತಾಗಲೇ.ಹಿರಿ ಮಗ ಎಂಬ ಕಾರಣಕ್ಕೆ ಅಪ್ಪನ ಅಂತ್ಯಕ್ರಿಯೆಗಳನ್ನು ನೀನೇ ಮಾಡಬೇಕು,ಆಗ ಮಾತ್ರ ನಿನ್ನ ಅಪ್ಪನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಎಲ್ಲರೂ ಒತ್ತಾಯಿಸಿದ್ದರಿಂದ ಇಷ್ಟವಿಲ್ಲದಿದ್ದರೂ ಒಪ್ಪಿಕೊಳ್ಳುತ್ತಾನೆ.ಆದರೂ ಅಂತ್ಯಕ್ರಿಯೆ ನಡೆಸುವ ಭಟ್ಟರಿಗೆ ಕೋಪ ತರಿಸುತ್ತಾ,ಸುಮ್ಮನೇ ಪ್ರಶ್ನೆಗಳನ್ನು ಕೇಳುತ್ತಾ ಯಾವುದನ್ನೂ ಸರಿಯಾಗಿ ಮಾಡುವುದಿಲ್ಲ.ಅತ್ತ ಕಡೆ ಅವನ ಹೆಂಡತಿ ನೇಹಾ ಬೇರೆ ಜಾತಿಯವಳು ಎಂಬ ಕಾರಣಕ್ಕೆ ಎಲ್ಲರಿಂದ ದೂಷಿಸಲ್ಪಡುತ್ತಾ,ಅಂತ್ಯಕ್ರಿಯೆಗೂ ತನಗೂ ಸಂಬಂಧವೇ ಇಲ್ಲವೇನೋ ಎಂಬಂತೆ ಇರುತ್ತಾಳೆ.ಸುರೇಂದ್ರನಿಗೆ ಮೊದಲನೇ ದಿನದಿಂದ ಅಪ್ಪನ ಕಾರ್ಯಗಳನ್ನು ಆರಂಭಿಸಿದಾಗಿನಿಂದಲೂ ಒಂದು ರೀತಿಯ ಮಾನಸಿಕ ತೊಳಲಾಟ ಆರಂಭವಾಗುತ್ತದೆ.ಒಂದು ಕಡೆ ಇದನ್ನೆಲ್ಲಾ ನಾನು ಯಾಕೆ ಮಾಡಲಿ ಎಂಬ ಭಾವವಾದರೆ ಇನ್ನೊಂದು ಕಡೆ ಈಗಲಾದರೂ ನನಗೆ ಅಪ್ಪನ ಮೇಲೆ ಪ್ರೀತಿ,ಗೌರವ ಹುಟ್ಟಲಿ,ಆ ಮೂಲಕ ಅಪ್ಪನಿಗೆ ನಾನು ಸದ್ಗತಿ ದೊರಕಿಸುವಂತಾಗಲಿ ಎಂಬ ಭಾವನೆ.ಈ ಮಾನಸಿಕ ಗೊಂದಲದಲ್ಲೇ ಕಾರ್ಯದ ಹದಿನಾಲ್ಕು ದಿನವೂ ಇರುತ್ತಾನೆ. ಪುರೋಹಿತ ವೆಂಕಟೇಶ ಭಟ್ಟರನ್ನು,ತನ್ನ ತಮ್ಮ ನರಹರಿಯನ್ನು ಎಲ್ಲದಕ್ಕೂ ವಿವರಣೆ ಕೇಳುತ್ತಾನೆ.ಸಾಮಾಜಿಕ ವ್ಯವಸ್ಥೆಯಿಂದ ತಾನು ತುಂಬಾ ದೂರ ಹೋಗಿದ್ದೇನೆ ಎಂದು ಅವನಿಗೆ ಅನ್ನಿಸುತ್ತದೆ.ಮಾನಸಿಕ ಶಾಂತಿ ಪಡೆಯಲು ಸಿಗರೇಟ್ ಸೇದಬೇಕು,ಕುಡಿಯಬೇಕು ಎಂದು ಅನ್ನಿಸಿದರೂ ತನಗೇ ಗೊತ್ತಿಲ್ಲದಂತೆ ಕಂಟ್ರ‍ೋಲ್ ಮಾಡಿಕೊಳ್ಳುತ್ತಾನೆ. ತನ್ನ ಹೆಂಡತಿಗೂ ಸ್ವಲ್ಪ ನಿಯಮ,ನಿಷ್ಠೆಯಿಂದಿರಲು ಆದೇಶಿಸುತ್ತಾನೆ.ಆದರೂ ನೇಹಾ ಕೇಳದೇ ತನ್ನ ಪಾಡಿಗೆ ಸಿಗರೇಟ್ ಸೇದುತ್ತಾಳೆ,ಮನೆಯಲ್ಲಿ ಸೂತಕವಿದ್ದರೂ ಹೊರಗಡೆ ಸ್ವಚ್ಛಂದವಾಗಿ ತಿರುಗಾಡುತ್ತಿರುತ್ತಾಳೆ.ಗರುಡ ಪುರಾಣವನ್ನು ಕೆಳುವಾಗಲಂತೂ ಸುರೇಂದ್ರ ಅತೀವ ಯಾತನೆಯನ್ನು ಅನುಭವಿಸುತ್ತಾನೆ.ತಾನು ಮಾಡಿರುವ ಕೃತ್ಯಗಳಿಂದ ತನಗೆ ಸದ್ಗತಿ ಸಿಕ್ಕಲು ಸಾಧ್ಯವೇ?ನಾನು ಪ್ರೇತವಾಗಿ ಅಲೆಯಬೇಕೆ? ಎಂಬ ಪ್ರಶ್ನೆಗಳು ಅವನಿಗೆ ವಾಕರಿಕೆ ಬರಿಸುತ್ತವೆ.ಹದಿನಾಲ್ಕು ದಿನಗಳ ಕಾರ್ಯ ಮುಗಿದಾಗ ಕೊನೆಯಲ್ಲಿ ಸುರೇಂದ್ರನಿಗೆ ತಾನು ಯಾರ ಕರ್ಮವನ್ನು ನಂಬಿಕೆಯಿಲ್ಲದಿದ್ದರೂ ಶ್ರದ್ಧೆಯಿಂದ ಮಾಡಿದೆನೋ ಆತ ತನ್ನ ನಿಜವಾದ ತಂದೆಯಲ್ಲ ಎಂದು ಗೊತ್ತಾಗುತ್ತದೆ.ಈ ಜಗತ್ತಿನಲ್ಲಿ ಎಲ್ಲವೂ ಸುಳ್ಳು,ನಾನು ಎಂಬುದು ಮಾತ್ರ ನಿಜ ಎಂದು ಸುರೇಂದ್ರ ತೀರ್ಮಾನಿಸುತ್ತಾನೆ.ಅಷ್ಟರಲ್ಲಿ ಅವನ ಹೆಂಡತಿಯೂ ಅವನನ್ನು ಬಿಟ್ಟು ಹೋಗಿರುತ್ತಾಳೆ.

ಕೇವಲ ಹದಿನಾಲ್ಕು ದಿನಗಳಲ್ಲಿ ನಡೆಯುವ ಕಥೆಯಾದರೂ ಕಾದಂಬರಿ ಎಲ್ಲಿಯೂ ಬೋರಾಗದಂತೆ ಓದಿಸಿಕೊಂಡು ಹೋಗುತ್ತದೆ.ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಲ್ಲಿ ಪವನ್ ಅವರು ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿ ಅದಕ್ಕೆ ವ್ಯಾಖ್ಯಾನವನ್ನೂ ತಿಳಿಸುತ್ತಾರೆ.ಹಿಂದೂ ಧರ್ಮದಲ್ಲಿ ಅದರಲ್ಲೂ ಸಂಸ್ಕಾರವಂತ ಬ್ರಾಹ್ಮಣರಲ್ಲಿ ಹದಿನಾಲ್ಕು ದಿನಗಳ ಕಾಲ ನೆಡೆಯುವ ಉತ್ತರಕ್ರಿಯೆಯನ್ನು ಸಂಪೂರ್ಣವಾಗಿ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ವಿವರಿಸಿದ್ದಾರೆ.ಕೆಲವು ಕಡೆ ವೈಜ್ಞಾನಿಕ ವಿವರಣೆಯನ್ನೂ ಕೊಡುತ್ತಾರೆ.ಮತ್ತೊಂದು ಕಡೆ ಇಂದಿನ ಆಧುನಿಕ ಜಗತ್ತಿನ ಕೆಲವು ವಿಷಯಗಳನ್ನು ಎತ್ತಿಕೊಂಡು ಅದರ ಕುರಿತೂ ಚರ್ಚಿಸುತ್ತಾರೆ.‘ಲಿವಿಂಗ್ ಟುಗೆದರ್’ ಸಂಬಂಧದ ಕರಾಳ ಮುಖವನ್ನು ತೆರೆದಿಡುತ್ತಾರೆ.ಅದಕ್ಕೆ ಪುಷ್ಟಿ ನೀಡುವಂತೆ ನೇಹಾಳನ್ನು ಕಾಮಲೋಲುಪತೆಯಿಂದ ಕೂಡಿದ ವ್ಯಕ್ತಿಯನ್ನಾಗಿ ಚಿತ್ರಿಸಿದ್ದಾರೆ.ತನ್ನ ಇನಿಯನಿಗೆ ನಿಷ್ಠಳಾಗಿಲ್ಲದ ಅವಳು ತನ್ನ ಇತರ ಬಾಯ್ ಫ್ರೆಂಡ್ ಗಳ ಜೊತೆ,ಆಫೀಸ್ ಮ್ಯಾನೇಜರ್ ಜೊತೆ ದೈಹಿಕ ಸಂಪರ್ಕ ಇಟ್ಟುಕೊಳ್ಳುತ್ತಾಳೆ.ಕೊನೆಗೆ ತನ್ನ ಗಂಡನ ತಮ್ಮನನ್ನೂ ಕಾಮಿಸುತ್ತಾಳೆ.ಇಂದಿನ ಸಾಮಜದಲ್ಲಿ ಮುಂದುವರೆದ ಹೈ ಸೊಸೈಟಿಯ ಹೆಣ್ಣು ಮಕ್ಕಳು ಹೇಗೆ ಬದಲಾಗಿದ್ದಾರೆ ಎಂಬುದಕ್ಕೆ ನೇಹಾ ಸಿಗರೇಟ್ ಸೇದುವುದು,ಕುಡಿಯುವುದು,ವೈಫ್ ಸ್ವಾಪಿಂಗ್ ನಂಥವನ್ನು ಸಮರ್ಥಿಸುವುದು ಎಲ್ಲವೂ ನಿದರ್ಶನವನ್ನೊದಗಿಸುತ್ತವೆ.‘ಲಿವಿಂಗ್ ಟುಗೆದರ್’ ಅನ್ನು ವಿಮರ್ಶಿಸುವ ಭರದಲ್ಲಿ ಕಾದಂಬರಿಯಲ್ಲಿ ಕಾಮವನ್ನು ಸ್ವಲ್ಪ ಜಾಸ್ತಿಯೇ ತುರುಕಿದ್ದಾರೆ.ಆಧುನಿಕ ಕಾಲಕ್ಕೆ ತಕ್ಕಂತೆ ಪುರೋಹಿತರು ಹೇಗೆ ಬದಲಾಗಿದ್ದಾರೆ ಎಂಬುದನ್ನು ವೆಂಕಟೇಶ ಭಟ್ಟರು ಇಂಗ್ಲೀಷ್ ಮಾತನಾಡುವ ಮೂಲಕ ತೋರಿಸುತ್ತಾರೆ.ಗರುಡ ಪುರಾಣದ ವಿವರಣೆಯನ್ನಂತೂ ಅತ್ಯುತ್ತಮವಾಗಿ ನೀಡಲಾಗಿದೆ.ತಾವೂ ಸ್ವತ: ನಾಟಕಕಾರರಾಗಿರುವುದರಿಂದಲೋ ಏನೋ ಲೇಖಕರು ಕಾದಂಬರಿಯಲ್ಲಿ ಪುರುಷೋತ್ತಮ ಎಂಬ ರಂಗಭೂಮಿ ಕಲಾವಿದನ ಪಾತ್ರವನ್ನು ತಂದು ‘ಗರುಡ ಪುರಾಣ’ವನ್ನು ಆಧುನಿಕ ನೆಲೆಗಟ್ಟಿನಲ್ಲಿ ನಾಟಕವನ್ನಾಗಿಸಿ ತೋರಿಸುತ್ತಾರೆ.

ಈ ಕಾದಂಬರಿಯಲ್ಲಿ ಬರುವ ಕೆಲವು ಸನ್ನಿವೇಶಗಳು,ಪಾತ್ರಗಳು ನಮ್ಮನ್ನು ಚಿಂತನೆಗೊಳಪಡಿಸುತ್ತವೆ.ಅತ್ಯಂತ ನಿಯಮ,ನಿಷ್ಠೆಯಿಂದಿರುವ ವೆಂಕಟೇಶ ಭಟ್ಟರು ತಮ್ಮ ಮೊಮ್ಮಗ ಪುರುಷೋತ್ತಮನ ನಾಟಕ ತಂಡದವರು ಮನೆಗೆ ಬಂದಾಗ ಯಾರಿಗೂ ಜಾತಿ ಬೇಧ ಮಾಡದೇ ಅತ್ಯಂತ ಆದರದಿಂದ ಉಪಚರಿಸುತ್ತಾರೆ.ವೆಂಕಟೇಶ ಭಟ್ಟರು ಆಡುವ ಮಾತುಗಳೂ ಸಹ ಕೆಲಕಾಲ ನಮ್ಮನ್ನು ಚಿಂತನೆಗೆ ನೂಕುತ್ತವೆ.ಉದಾಹರಣೆಗೆ “ಬೇಕಾದರೆ ಮುಂದಿನ ಜನ್ಮದಲ್ಲಿ ಬೇರೆ ದೇಶದಲ್ಲಿ ಹುಟ್ಟುವಂತೆ ದೇವರಲ್ಲಿ ಬೇಡಿಕೋ ಏಕೆಂದರೆ ಆಗ ಅಲ್ಲಿ ಕುಟುಂಬ ಪದ್ಧತಿ ಬಂದಿರುತ್ತದೆ.ಇಲ್ಲಿ ಸ್ವೇಚ್ಛಾ ಸಮಾಜ ಆಗಿರುತ್ತದೆ.ಗಂಡ-ಹೆಂಡತಿ,ಅಣ್ಣ-ತಂಗಿ,ತಾಯಿ-ತಂದೆ ಯಾವ ಸಂಬಂಧಗಳಿಗೂ ಇಲ್ಲಿ ಬೆಲೆಯೇ ಇರುವುದಿಲ್ಲ”.” ಜೀವನದಲ್ಲಿ ಶ್ರದ್ಧೆ ಬೇರೆ.ವಿಜ್ಞಾನ ಬೇರೆ.ಕ್ರೈಸ್ತರು ಬಹಳ ಮೊದಲೇ ಹೇಳಿದ್ದಾರೆ Faith is different Science is different ಅಂತ.ನಾವು ಮಾತ್ರ ಎಲ್ಲದಕ್ಕೂ ವಿಜ್ಞಾನದ ಪ್ಯಾರಾಮೀಟರ್ ಕೇಳುತ್ತಾ ನಮ್ಮನ್ನು ನಾವೇ ಗೇಲಿ ಮಾಡಿಕೊಳ್ಳುತ್ತಿದ್ದೇವೆ”ನಮ್ಮ ದೇಶದಲ್ಲಿ ದೇವರನ್ನು ನಂಬೋದು ಅತಿರೇಕ,ನಂಬದೇ ಇರೋದು ಶೋಕಿ,ದೇವರನ್ನು ಗೇಲಿ ಮಾಡೋದು ಚಿಂತನೆ.ಹಿನ್ನಲೆ ಹುಡುಕುವ ಅವಸರದಲ್ಲಿ ಹಿಂದೂ ಧರ್ಮ ತನ್ನ ಹುಳುಕನ್ನು ತಾನೇ ಬಿಚ್ಚಿಡುತ್ತಿದೆ” ಇಂತಹ ಅನೇಕ ಡೈಲಾಗ್ ಗಳು ನಾವು ಕೆಲ ಕಾಲ ಆಲೋಚಿಸುವಂತೆ ಮಾಡುತ್ತವೆ.

ಒಟ್ಟಿನಲ್ಲಿ ಮೃತ್ಯುವಿನ ನಂತರ ನಡೆಯುವ ಕರ್ಮ,ಕಾರ್ಯ ವಿಧಾನಗಳ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಬೇಕಾದರೆ ಎಲ್ಲರೂ ಈ ಕಾದಂಬರಿಯನ್ನು ಓದಲೇಬೇಕು.ಕೂಡಿ ಬಾಳುವ ಕುಟುಂಬವೇ ಶ್ರೇಷ್ಠ,ನಂಬಿಕೆ ನಾಶವಾಗಬಹುದು ಆದರೆ ಶ್ರದ್ಧೆ ಅಚಲಾವಾದದ್ದು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ.ಅಲ್ಲಲ್ಲಿ ಒಂದೆರಡು ಮುದ್ರಣ ದೋಷಗಳು ಕಂಡು ಬಂದರೂ ಕಾದಂಬರಿಯ ವೇಗಕ್ಕೆ ಅದು ಅಡ್ಡಿಯಾಗುವುದಿಲ್ಲ.ರಂಗಭೂಮಿಯಲ್ಲಿ ಒಳ್ಳೆಯ ಹೆಸರು ಮಾಡಿರುವ ಕರಣಂ ಪವನ್ ಪ್ರಸಾದ್ ಅವರು ‘ಕರ್ಮ’ದ ಮೂಲಕ ಬರವಣಿಗೆಯ ಲೋಕಕ್ಕೆ ಎಂಟ್ರಿ ಆಗಿದ್ದಾರೆ.ಭೈರಪ್ಪನವರಿಂದ ತಮ್ಮ ಮೊದಲ ಕಾದಂಬರಿಯಲ್ಲೇ ಭೇಷ್ ಎನಿಸಿಕೊಂಡಿದ್ದಾರೆ.ಅವರಿಗೆ ಶುಭವಾಗಲಿ.ಮುಂದೆ ಇನ್ನೂ ಒಳ್ಳೆಯ ಕೃತಿಗಳನ್ನು ಬರೆಯುವಂತಾಗಲಿ.