2014ನೇ ಇಸವಿಯ ಶಿವರಾತ್ರಿಯಂದು WordPressನಲ್ಲಿ ನನ್ನದೊಂದು ಬ್ಲಾಗ್ ಕ್ರಿಯೇಟ್ ಮಾಡಿದೆ.ಇವತ್ತು ಶಿವರಾತ್ರಿ.ಅಲ್ಲಿಗೆ ಈ ಬ್ಲಾಗಿಗೆ ನಾಲ್ಕು ವರ್ಷ ತುಂಬುತ್ತ ಬಂತು.ನಾಲ್ಕು ವರ್ಷಗಳ ಹಿಂದೆ ಬ್ಲಾಗ್ ಬಗ್ಗೆ ಏನೊಂದೂ ಗೊತ್ತಿರಲಿಲ್ಲ.ನಾನೂ ಏನಾದರೂ ಲೇಖನ,ಕಥೆ,ಪದ್ಯಗಳನ್ನು ಬರೆಯಬೇಕು ಅಂತ ಯಾವಾಗಲೋ ಅನ್ನಿಸಿತ್ತು.ಆದರೆ ಎಲ್ಲಿ ಬರೆಯುವುದು,ಹೇಗೆ ಬರೆಯುವುದು ಎಂಬ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ.ಬರೆದು ಪತ್ರಿಕೆಗಳಿಗೆ ಕಳಿಸೋಣವೆಂದರೆ ಬರವಣಿಗೆಯ ಲೋಕದಲ್ಲಿ ಆಗತಾನೆ ಕಣ್ಣುಬಿಡುತ್ತಿದ್ದ ನನ್ನಂಥ ಹಸುಳೆಗಳು ಬರೆದದ್ದನ್ನು ಯಾರೂ ಪಬ್ಲಿಶ್ ಮಾಡುವುದಿಲ್ಲ ಅಂತ ಗೊತ್ತಿತ್ತು.ಇಂತಿಪ್ಪ ಸಂದರ್ಭದಲ್ಲೇ 2014ರ ಫೆಬ್ರವರಿ ತಿಂಗಳಲ್ಲಿ ಫೇಸ್ಬುಕ್ ಮಿತ್ರರಾದ ವಿಕಾಸ್ ಹೆಗಡೆಯವರು ಬ್ಲಾಗಿಂಗ್ ಬಗ್ಗೆ ‘ವಿಜಯವಾಣಿ’ ದಿನಪತ್ರಿಕೆಯಲ್ಲಿ ವಿವರವಾದ ಒಂದು ಲೇಖನ ಬರೆದಿದ್ದರು.ಬ್ಲಾಗ್ ಎಂದರೇನು,ಬ್ಲಾಗ್’ನಲ್ಲಿ ಬರೆಯುವುದರಿಂದ ಏನು ಉಪಯೋಗ,ನಮ್ಮದೇ ಸ್ವಂತ ಬ್ಲಾಗ್ ತೆರೆಯುವುದು ಹೇಗೆ,ಅದನ್ನು ನಿರ್ವಹಣೆ ಮಾಡುವುದು ಹೇಗೆ ಎಂಬ ಎಲ್ಲ ಮಾಹಿತಿಯನ್ನೂ ನೀಡಿದ್ದರು.ಬರವಣಿಗೆಯ ಸಮುದ್ರಕ್ಕೆ ಹಾರಲು ಕಾಯುತ್ತಿದ್ದ ನನಗೆ ಅಷ್ಟೇ ಸಾಕಾಯಿತು.ಅದೇ ವರ್ಷದ ಶಿವರಾತ್ರಿಯ ದಿನ ಒಂದು ಬ್ಲಾಗ್ ತೆರೆದೆ.ಹಾಗಾಗಿ ನಾನೂ ಒಬ್ಬ ಕನ್ನಡ ಬ್ಲಾಗರ್ ಆಗಲು ಕಾರಣವಾಗಿದ್ದು ವಿಕಾಸ್ ಹೆಗಡೆಯವರ ಆ ಲೇಖನ.

ಹೈಸ್ಕೂಲಿನಲ್ಲಿ ಇದ್ದಾಗಲೇ ‘ಬರಹ’ದಲ್ಲಿ ಕನ್ನಡ ಟೈಪಿಂಗ್ ಕಲಿತುಕೊಂಡಿದ್ದ ನನಗೆ ಹಿಂದೆಯೇ ಬರೆದಿದ್ದ ಸಣ್ಣ ಪುಟ್ಟ ಕಥೆ,ಲೇಖನಗಳನ್ನು ಲ್ಯಾಪ್ಟಾಪ್’ನ ಕೀಲಿಮಣೆಯಲ್ಲಿ ಕುಟ್ಟಿ ಸೇವ್ ಮಾಡುವುದು ಅಷ್ಟೇನೂ ಕಷ್ಟವಾಗಿರಲಿಲ್ಲ.ಮನಸ್ಸಿನಲ್ಲಿ ಚಿಂತನೆಗಳ ಪ್ರವಾಹವೇ ಹರಿಯುತ್ತಿದ್ದುದ್ದರಿಂದ ಹೊಸ ಹೊಸ ಲೇಖನಗಳನ್ನೂ ಬರೆಯತೊಡಗಿದೆ.ಬರೆದದ್ದನ್ನು ಬ್ಲಾಗಿಗೆ ಹಾಕುವುದು,ಲಿಂಕನ್ನು ಫೇಸ್ಬುಕ್ಕಿನಲ್ಲಿ ಶೇರ್ ಮಾಡುವುದು ಒಂದು ಚಟವಾಗತೊಡಗಿತು.ನಿಧಾನವಾಗಿ ಬ್ಲಾಗ್ ಬಗ್ಗೆ ಹೊಸ ಹೊಸ ವಿಷಯಗಳು ತಿಳಿಯತೊಡಗಿದವು.ನಮಗೆ ಬೇಕಾದ ಥೀಮ್ ಅಳವಡಿಸುವುದು ಹೇಗೆ,ನಮ್ಮ ಇಷ್ಟದಂತೆ ಬ್ಲಾಗನ್ನು ಡಿಸೈನ್ ಮಾಡುವುದು ಹೇಗೆ,ಬೇರೆ ಬ್ಲಾಗ್,ವೆಬ್ಸೈಟ್’ಗಳ ಲಿಂಕನ್ನು ನಮ್ಮ ಬ್ಲಾಗಿಗೆ ಸೇರಿಸುವುದು ಹೇಗೆ ಇವೇ ಮೊದಲಾದ ಹಲವು ವಿಷಯಗಳನ್ನು ನೋಡಿ ತಿಳಿದುಕೊಂಡೆ,ಮಾಡಿ ಕಲಿತುಕೊಂಡೆ.ನಾನೇ ಬರಹಗಾರ,ನಾನೇ ವಿನ್ಯಾಸಕ,ಪ್ರಕಾಶಕ ಎಲ್ಲ.ಪರವಾಗಿಲ್ಲ ನಾನೂ ಒಬ್ಬ ಬ್ಲಾಗರ್ ಎಂಬ ಧನ್ಯತಾ ಭಾವ ಮೂಡತೊಡಗಿತು.ಫೇಸ್ಬುಕ್ಕಿನಲ್ಲಿ ಶೇರ್ ಆಗುತ್ತಿದ್ದ ಬ್ಲಾಗಿನ ಬರಹಗಳಿಗೆ ಬರುತ್ತಿದ್ದ ಪ್ರತಿಕ್ರಿಯೆಗಳಿಂದಾಗಿ,ಪತ್ರಿಕೆಗಳಿಗೂ ಲೇಖನ ಕಳಿಸಬಾರದೇಕೆ ಅಂತ ಅನ್ನಿಸಿತು. ಕನ್ನಡದ ಆಹುತಿಗೆ ತುಪ್ಪ ಸುರಿದ ಸುಪ್ರೀಂ ಕೋರ್ಟ್ ತೀರ್ಪು ಎಂಬ ಲೇಖನವನ್ನು ‘ಹೊಸದಿಗಂತ’ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಕಸಿನ್ ಬ್ರದರ್ ಎಸ್.ಶಾಂತಾರಾಮ್ ಅವರಿಗೆ ಈಮೇಲ್ ಮಾಡಿ,ಈ ಲೇಖನ ಸರಿಯಾಗಿದ್ದರೆ ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಬಹುದೇ ನೋಡಿ ಅಂದೆ.ಕಳಿಸಿದ ಹತ್ತು ದಿನಗಳ ನಂತರ ಬುಧವಾರ,ಗುರುವಾರ ಮತ್ತು ಶುಕ್ರವಾರ ನಿರಂತರವಾಗಿ ಮೂರು ಭಾಗಗಳಲ್ಲಿ ಹೊಸದಿಗಂತದಲ್ಲಿ ಲೇಖನ ಪ್ರಕಟವಾಯಿತು. “ಇನ್ನು ನಿನ್ನ ಲೇಖನಗಳನ್ನು ನನಗೆ ಕಳಿಸುವ ಬದಲು ನಮ್ಮ ಪತ್ರಿಕೆಯ ಸಂಪಾದಕೀಯ ವಿಭಾಗಕ್ಕೇ ನೇರವಾಗಿ ಕಳಿಸು,ಪ್ರಕಟಣೆಗೆ ಯೋಗ್ಯವಿದ್ದರೆ ಅವರೇ ಪ್ರಕಟಿಸುತ್ತಾರೆ” ಅಂತ ಶಾಂತಣ್ಣ ಹೇಳಿದರು.ನಂತರದ ದಿನಗಳಲ್ಲಿ ಹೊಸದಿಗಂತ ಪತ್ರಿಕೆಯಲ್ಲಿ ಸುಮಾರು ಲೇಖನಗಳು ಪ್ರಕಟವಾದವು.ಉದಯವಾಣಿಯಲ್ಲಿ ಕೆಲವು ಬರಹಗಳನ್ನು ಬರೆದೆ.ಪ್ರಜಾವಾಣಿಯಲ್ಲೂ ಒಂದು ಲೇಖನ ಬಂತು.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಸರಣವುಳ್ಳ ‘ಅನಂತಪ್ರಕಾಶ’ ಮಾಸಪತ್ರಿಕೆಯಲ್ಲೂ ಒಂದಷ್ಟು ಲೇಖನ,ಕಥೆ ಬರೆದೆ.ಅವಧಿ ಪಂಜು ಸುರಹೊನ್ನೆ ರೀಡೂ ಕನ್ನಡ ವೆಬ್ಸೈಟ್’ಗಳಲ್ಲೂ ಸುಮಾರು ಬರಹಗಳನ್ನು ಬರೆದೆ.

ನನಗರಿವಿಲ್ಲದೇ ನನ್ನ ಬ್ಲಾಗಿನ ಕೆಲವು ಬರಹಗಳು ಬೇರೆ ಕಡೆಯೂ ಪ್ರಕಟವಾದವು.ಹೊಸದಿಗಂತದಲ್ಲಿ ಅದಾಗಲೇ ಪ್ರಕಟವಾಗಿದ್ದ ಪ್ರಥಮಗಳಿಗೆಲ್ಲಾ ಪ್ರಥಮರು ಭಾರತೀಯರು ಅನ್ನುವ ಲೇಖನವನ್ನು ನನಗೆ ತಿಳಿಸದೇ ಬ್ಲಾಗಿನಿಂದ ಅನಾಮತ್ತು ಎತ್ತಿಕೊಂಡು ತುಳುನಾಡಿನ ಸಂಜೆ ಪತ್ರಿಕೆ ‘ಜಯಕಿರಣ’ ಪ್ರಕಟಿಸಿತ್ತು.ಅದು ಎಷ್ಟೋ ತಿಂಗಳ ನಂತರ ನನಗೆ ತಿಳಿಯಿತು.ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ಸಿಟಿಗಳು ಸ್ಮಾರ್ಟ್ ಆಗುವಾಗ ಹಳ್ಳಿಗಳು ನಿರ್ಲಕ್ಷ್ಯಕ್ಕೊಳಗಾಗದಿರಲಿ ಲೇಖನವನ್ನು ನನ್ನ ಬ್ಲಾಗಿನಿಂದ ಕದ್ದು ಚಂದ್ರು ಹಿರೇಮಠ್ ಎಂಬವರು ‘ವಿಶ್ವವಾಣಿ’ ಪತ್ರಿಕೆಗೆ ಕಳಿಸಿದ್ದರು.ಕದ್ದ ಲೇಖನ ಅದು ಅಂತ ಗೊತ್ತಿಲ್ಲದ ವಿಶ್ವವಾಣಿಯ ಸಂಪಾದಕೀಯ ವಿಭಾಗದವರು ಅದನ್ನು ಚಂದ್ರು ಹಿರೇಮಠರ ಫೋಟೋದೊಂದಿಗೆ ಪ್ರಕಟಿಸಿದ್ದರು.ಅದು ಆ ದಿನವೇ ಗೊತ್ತಾಗಿ ವಿಶ್ವವಾಣಿಯವರನ್ನು ಸಂಪರ್ಕಿಸಿ,ಲೇಖನ ಕದ್ದು ಕಳಿಸಿದವರ ಫೋನ್ ನಂಬರ್ ಇದ್ದರೆ ಕೊಡುವಂತೆ ಹೇಳಿದೆ.ಅದು ಸಿಕ್ಕಲಿಲ್ಲ.ಆದರೆ ವಿಶ್ವವಾಣಿಯವರನ್ನು ಸೋಷಿಯಲ್ ಮೀಡಿಯಾಗಳಲ್ಲಿ ಒಂದಷ್ಟು ಜನ ಸರಿಯಾಗಿ ಝಾಡಿಸಿದರು.ಬ್ಲಾಗ್’ನಲ್ಲಿ ನಾವು ಪ್ರಕಟಿಸುವ ಲೇಖನಗಳನ್ನು ನಮಗೆ ತಿಳಿಸದೇ ಎತ್ತಿಕೊಳ್ಳುತ್ತಾರೆ ಅಂತ ಕೇಳಿ ಗೊತ್ತಿದ್ದ ನನಗೆ ಅದು ಅನುಭವಕ್ಕೂ ಬಂತು.

ಆ ಹೊತ್ತಿಗಾಗಲೇ ನನಗೆ ಬ್ಲಾಗಿಂಗ್ ಹುಚ್ಚು ಹಿಡಿದಿತ್ತು.ಎಲ್ಲ ವಿಷಯಗಳ ಮೇಲೂ ಲೇಖನಗಳನ್ನು ಬರೆದೆ.ಬ್ಲಾಗ್ ಆರಂಭಿಸಿದ ಸಮಯದಲ್ಲಿ ನಾನು ಎಂಬಿಬಿಎಸ್ ಮೂರನೇ ವರ್ಷದಲ್ಲಿ ಓದುತ್ತಿದ್ದೆ.ಐದೂವರೆ ವರ್ಷಗಳ MBBS ಅಧ್ಯಯನದಲ್ಲಿ ಸ್ವಲ್ಪ ಕಡಿಮೆ ಓದಲಿಕ್ಕಿರುವುದು,ಹಾಯಾಗಿರಲು ಸಮಯ ಸ್ವಲ್ಪ ಜಾಸ್ತಿಯೇ ಸಿಗುವುದು ಮೂರನೇ ವರ್ಷದಲ್ಲಿ ಮಾತ್ರ.ನಾನು ಆ ಸಮಯದಲ್ಲೇ ಬ್ಲಾಗಿಂಗ್ ಆರಂಭಿಸಿದ್ದರಿಂದ ಬರಹಗಳನ್ನು ಕುಟ್ಟಲು ಸ್ವಲ್ಪ ಸಮಯವೂ ಸಿಗುತ್ತಿತ್ತು.ಫ್ರೀ ಇದ್ದಾಗಲೆಲ್ಲ ಲೇಖನ ಬರೆಯುವುದರ ಬಗ್ಗೆ,ಅದು ಆಕರ್ಷಕವಾಗಿ ಕಾಣುವಂತೆ ಬ್ಲಾಗಿನಲ್ಲಿ ಪಬ್ಲಿಶ್ ಮಾಡುವುದರ ಬಗ್ಗೆ ಯೋಚಿಸುತ್ತಿದ್ದೆ.ಬ್ಲಾಗ್ ಆರಂಭಿಸಿ ಒಂದು ವರ್ಷದೊಳಗೆ ಐವತ್ತಕ್ಕೂ ಹೆಚ್ಚು ಲೇಖನಗಳನ್ನು ಅದರಲ್ಲಿ ಪ್ರಕಟಿಸಿದ್ದೆ.ಬರವಣಿಗೆಯಲ್ಲಿ ಆಸಕ್ತಿಯಿದ್ದ ನನ್ನ Non Medico ಫ್ರೆಂಡ್’ಗಳನ್ನೂ ಬ್ಲಾಗ್ ತೆರೆಯಲು ಪ್ರಚೋದಿಸಿದೆ.ಕೆಲವರು WordPressನಲ್ಲಿ ಇನ್ನು ಕೆಲವರು ಗೂಗಲ್’ನವರ Bloggerನಲ್ಲಿ ಬ್ಲಾಗ್ ಮಾಡಿಕೊಂಡು ಬರೆಯಲಾರಂಭಿಸಿದರು.ಒಂದೆರಡು ಬರಹಗಳನ್ನು ಬ್ಲಾಗಿನಲ್ಲಿ ಹಾಕಿ ಸುಮ್ಮನೇ ಇರುತ್ತಿದ್ದ ಕೆಲವರಿಗೆ “ನೀವು,ಬ್ಲಾಗ್ ಮಾಡಿದ್ದು ಯಾವ ಚೆಂದಕ್ಕೆ?ಕ್ರಿಯೇಟ್ ಮಾಡಿದ ಮೇಲೆ ಅದರಲ್ಲಿ ಆಗಾಗ ಬರಹಗಳನ್ನು ಪ್ರಕಟಿಸಿ ಬ್ಲಾಗ್ ಮುಂದುವರೆಸಿಕೊಂಡು ಹೋಗಬೇಕು ಮಾರ್ರೆ” ಅಂತ ಬಯ್ಯುತ್ತಿದ್ದೆ.ಅವರದ್ದೂ ಕೆಲವು ಲೇಖನಗಳು ಪತ್ರಿಕೆಯಲ್ಲಿ ಬಂದವು.ಪತ್ರಿಕೆಯಲ್ಲಿ ಪ್ರಕಟವಾದ ನಂತರ ಆ ಲೇಖನಗಳನ್ನು ಅವರು ಬ್ಲಾಗಿನಲ್ಲಿ ಹಾಕದಿದ್ದಾಗ “ಏನು ಮಾರಯ,ಪೇಪರಲ್ಲಿ ಆರ್ಟಿಕಲ್ ಬಂತು ಅಂತ ದೊಡ್ಡ ಜನ ಆಗಿಬಿಟ್ಯಾ ಹೇಗೆ?ಬ್ಲಾಗಿಗೆ ಯಾಕೆ ಹಾಕಲಿಲ್ಲ ಆ ಲೇಖನವನ್ನು” ಅಂತೆಲ್ಲ ಗದರುತ್ತಿದ್ದೆ.ನನಗೆ ಬ್ಲಾಗಿಸುವ ತೆವಲು ಹತ್ತಿಬಿಟ್ಟಿತ್ತು.ಆ ಚಟವನ್ನು ಬೇರೆಯವರಿಗೂ ಅಂಟಿಸುವ ಉಮೇದಿತ್ತು.

“ಒಬ್ಬ ಮೆಡಿಕಲ್ ಸ್ಟೂಡೆಂಟ್ ಆಗಿ ಎಲ್ಲಾ ವಿಷಯಗಳ ಬಗ್ಗೆಯೂ ಲೇಖನ ಬರೆಯುತ್ತೀಯಲ್ಲ,ಹೇಗೆ ಮಾರಯ ಇದು? ವೈದ್ಯಕೀಯ ವಿದ್ಯಾರ್ಥಿಯಾಗಿ ಬ್ಲಾಗಿಂಗ್ ಮಾಡುವುದಕ್ಕೆ,ಪತ್ರಿಕೆಗೆ ಲೇಖನ ಕಳಿಸುವುದಕ್ಕೆಲ್ಲ ಸಮಯ ಎಲ್ಲಿಂದ ಸಿಗುತ್ತದೆ ನಿನಗೆ” ಅಂತೆಲ್ಲ ಕೆಲವರು ಆಶ್ಚರ್ಯದಿಂದ ಕೇಳುತ್ತಿದ್ದರು.ಕೇಳಿದವರಿಗಿಂತ ನನಗೇ ಜಾಸ್ತಿ ಆಶ್ಚರ್ಯವಾಗುತ್ತಿತ್ತು.ಮೆಡಿಕಲ್ ಸ್ಟೂಡೆಂಟ್’ಗಳು ಲೇಟ್ ನೈಟ್ ಪಾರ್ಟಿಗಳಿಗೆ ಹೋಗುವಾಗ,Medicoಗಳು ಬೈಕ್ ಹತ್ತಿಕೊಂಡು ಅಲ್ಲಿ ಇಲ್ಲಿ ಟೂರು ಹೋಗುವಾಗ,ಹಿಂದಿನ ರಾತ್ರಿ ತೆಗೆದುಕೊಂಡ ‘ತೀರ್ಥ’ದ ಹ್ಯಾಂಗ್ ಓವರ್ ಇಳಿಯದಿದ್ದಕ್ಕೆ ಕ್ಲಿನಿಕಲ್ ಪೋಸ್ಟಿಂಗ್ಸ್’ಗೆ ಬಂಕ್ ಹೊಡೆದು ಹಾಸ್ಟೆಲ್ಲಿನ ರೂಮಿನಲ್ಲಿ ಸುಮ್ಮನೇ ಬಿದ್ದುಕೊಳ್ಳುವಾಗ,ಸಿಂಗಿಂಗ್,ಡ್ಯಾನ್ಸ್,ಶಾರ್ಟ್ ಮೂವಿ ಮೇಕಿಂಗ್ ಅಂತೆಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ಕಳೆದು ಹೋಗುವ ಮೆಡಿಕೋಗಳಿರುವಾಗ ಅವರನ್ನೆಲ್ಲ “ನೀವು ಮೆಡಿಕಲ್ ಸ್ಟೂಡೆಂಟ್ ಆಗಿ ಇದ್ದೆಲ್ಲ ಮಾಡುವುದಕ್ಕೆ ಸಮಯವಿದೆಯೇ” ಅಂತ ಆಶ್ಚರ್ಯದಿಂದ ಕೇಳದೇ ಇರುವವರು ನಾನು ಬ್ಲಾಗ್ ಬರೆಯುತ್ತೇನೆ,ಪತ್ರಿಕೆಗಳಿಗೆ ಲೇಖನ ಕಳಿಸುತ್ತೇನೆ ಎಂದು ಗೊತ್ತಾದಾಗ ನಾನೊಬ್ಬ ಅನ್ಯಗ್ರಹ ಜೀವಿಯೇನೋ ಎಂಬಂತೆ ಆಪಾದಮಸ್ತಕ ದಿಟ್ಟಿಸುವುದು ನೋಡಿ ನನಗೇ ಬೆರಗಾಗುತ್ತಿತ್ತು.ಹವ್ಯಾಸವಾಗಿದ್ದ ಬರವಣಿಗೆ ನನ್ನ ವೈದ್ಯಕೀಯ ಅಧ್ಯಯನಕ್ಕೆ ಯಾವ ಅಡ್ಡಿಯನ್ನೂ ಉಂಟು ಮಾಡುತ್ತಿರಲಿಲ್ಲ.ಅಲ್ಲದೇ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಇಂಗ್ಲೀಷ್ ಬ್ಲಾಗರ್ಸ್ ಕೆಲವು ಜನ ಇದ್ದರು.ಕನ್ನಡದಲ್ಲಿ ಬ್ಲಾಗ್ ಬರೆಯುತ್ತಿದ್ದವನು ನಾನೊಬ್ಬನೆ.

ಬರವಣಿಗೆ ಆರಂಭಿಸಲು ನನಗೆ ಸ್ಪೂರ್ಥಿಯಾದವರು ನನ್ನಪ್ಪ.ಸಣ್ಣವನಿದ್ದಾಗ ‘ಬಾಲಮಂಗಳ’, ‘ತುಂತುರು’ ,‘ಚಂಪಕ’ ತಂದು ಕೊಟ್ಟು ಓದಿಸುತ್ತಿದ್ದರು.ಅದರ ಹುಚ್ಚು ಒಮ್ಮೆ ಹಿಡಿದ ಮೇಲೆ ಮೂಡಬಿದ್ರೆ ಪೇಟೆಗೆ ಹೋದಾಗಲೆಲ್ಲ ನನಗಾಗಿ ಬಾಲಮಂಗಳ,ತುಂತುರು ತರಲೇಬೇಕೆಂದು ಒತ್ತಾಯಿಸುತ್ತಿದ್ದೆ.ಸ್ವಲ್ಪ ಬುದ್ಧಿ ಬೆಳೆಯಲು ಆರಂಭಿಸಿದ ಮೇಲೆ ಸ್ವಾಮಿ ವಿವೇಕಾನಂದರ,ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಯನ್ನು ಅಪ್ಪ ಓದಲು ಕೊಟ್ಟರು.ಅದು ಇಷ್ಟವಾಗಿ ಇನ್ನು ಮೇಲೆ ದೊಡ್ದ ದೊಡ್ಡ ಪುಸ್ತಕಗಳನ್ನೂ ಓದಬೇಕು ಅಂತ ಅನ್ನಿಸಿ ಮನೆಯ ಕಪಾಟಿನಲ್ಲಿದ್ದ ಭೈರಪ್ಪನವರ ‘ಧರ್ಮಶ್ರೀ’ ಕಾದಂಬರಿ ಎತ್ತಿಕೊಂಡು ಓದಿದೆ.ಅಪರೂಪಕ್ಕೆ ಮನೆಗೆ ಬರುತ್ತಿದ್ದ ‘ಹಾಯ್ ಬೆಂಗಳೂರ್’,‘ಲಂಕೇಶ್ ಪತ್ರಿಕೆ’, ಬಿ.ವಿ.ಅನಂತರಾಮ್,ಕೌಂಡಿನ್ಯ ಅವರ ಕಿರುಕಾದಂಬರಿಗಳನ್ನೂ ಓದಲಾರಂಭಿಸಿದೆ.ಆಮೇಲೆ ಸಿಕ್ಕಿದ್ದೆಲ್ಲ ಓದುವ ಹುಚ್ಚು ಹತ್ತಿತು.ಪಿಯೂಸಿಗೆ ಮೂಡಬಿದ್ರೆಯ ‘ಆಳ್ವಾಸ್’ ಕಾಲೇಜಿಗೆ ಹೋದಾಗ ಅಲ್ಲಿ ಅದ್ಭುತವಾದ ಪುಸ್ತಕಗಳ ಸಂಗ್ರಹವಿದ್ದ ವಿಶಾಲವಾದ ಲೈಬ್ರರಿ ಇತ್ತು.ಅಲ್ಲಿಂದ ತಂದು ಶಿವರಾಮ ಕಾರಂತ,ತರಾಸು,ಪೂರ್ಣಚಂದ್ರ ತೇಜಸ್ವಿ,ದೇವುಡು ಮುಂತಾದವರ ಪುಸ್ತಕಗಳನ್ನೂ ಓದಿದೆ.
“ಬರೀ ಓದದು ಒಂದೇ ಅಲ್ಲ.ನೀನೇ ಎಂಥಾರೂ ಕಥೆ,ಲೇಖನ ಬರೆಯಲು ಆಗ್ತಾ ನೋಡು.ಓದದ್ರ ಜೊತಿಗೆ ಬರ್ಯ ರೂಢಿ ಇದ್ರೆ ಮತ್ತೂ ಒಳ್ಳೆದು” ಅಂತ ಅಪ್ಪ ಹೇಳಲಾರಂಭಿಸಿದರು.ಆಗೆಲ್ಲ ಯಾವುದೋ ವಿಷಯಗಳ ಬಗ್ಗೆ ಸಣ್ಣ ಲೇಖನಗಳನ್ನೋ,ಕಥೆ ಅಂತ ನಾನು ಹೇಳಿದರಷ್ಟೇ ಗೊತ್ತಾಗುವ ಚಿಕ್ಕ ಕಥೆಗಳನ್ನು ಮನಸ್ಸಿಗೆ ತೋಚಿದಂತೆ ಹಾಳೆಯ ಮೇಲೆ ಗೀಚುತ್ತಿದ್ದೆ.ಅಪ್ಪ ಅವತ್ತು ಮಾಡಿಸಿದ ಬರವಣಿಗೆಯ ರೂಢಿ ಒಂದು ಸರಿಯಾದ ರೂಪ ಪಡೆದದ್ದು ‘ಮನದ ದನಿ’ ಬ್ಲಾಗ್ ಆರಂಭಿಸಿದ ಮೇಲೆಯೇ.ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ನನ್ನ ಲೇಖನಗಳನ್ನು ಓದಿ ಅಪ್ಪ ತನ್ನ ಅನಿಸಿಕೆ ಹೇಳುತ್ತಿದ್ದರು.ಹೇಗೆ ಬರೆದಿದ್ದರೆ ಈ ಬರಹಕ್ಕೆ ಇನ್ನಷ್ಟು ತೂಕ ಬರುತ್ತಿತ್ತು,ಈ ಪದ,ವಾಕ್ಯದ ಬದಲು ಅದನ್ನು ಬಳಸಬಹುದಿತ್ತು ಎಂದೆಲ್ಲ ವಿಮರ್ಶಿಸುತ್ತಿದ್ದರು.ಪೇಪರ್’ನಲ್ಲಿ ಪ್ರಕಟವಾಗದೇ ಬರೀ ಬ್ಲಾಗಿನಲ್ಲಿ ಮಾತ್ರ ಇದ್ದ ಲೇಖನಗಳನ್ನು ನಾನು ಊರಿಗೆ ಹೋದಾಗ ತೋರಿಸುತ್ತಿದ್ದೆ.ಆಗ ಅದಕ್ಕೂ ತಮ್ಮ ಅನಿಸಿಕೆಗಳನ್ನು ಹೇಳುತ್ತಿದ್ದರು.ಅದು ನನಗೂ ಖುಷಿಯಾಗುತ್ತಿತ್ತು.

ಎಂಬಿಬಿಎಸ್ ಮೂರನೇ ವರ್ಷದಲ್ಲಿದ್ದಾಗ ಆರಂಭಿಸಿದ ಬ್ಲಾಗಿಂಗನ್ನು ಫೈನಲ್ ಇಯರ್ ಎಂಬಿಬಿಎಸ್ ನಲ್ಲೂ ಮುಂದುವರೆಸಿದೆ.ಸಮಯ ಸಿಕ್ಕಾಗ ಬರೆಯುತ್ತಿದ್ದೆ.ಫೈನಲ್ ಇಯರ್’ನ ಪರೀಕ್ಷೆಗಳು ಬಂದಾಗ, ನಂತರ Internship ಮಾಡುವಾಗಿನ ಒಂದು ವರ್ಷದ ಅವಧಿಯಲ್ಲಿ ಬರವಣಿಗೆ ಕುಂಠಿತವಾಯಿತು.Internship ಮುಗಿದು ಪಿಜಿ ಮಾಡುವುದಕ್ಕೆ NEET PG ಪರೀಕ್ಷೆಗೆ ಓದುತ್ತಿದ್ದುದರಿಂದ ಸುಮಾರು ಒಂದು ವರ್ಷ ಬ್ಲಾಗ್ ಕಡೆ ನೋಡಲಾಗಲಿಲ್ಲ.ಲಾಗಿನ್ ಪಾಸ್ ವರ್ಡ್ ಕೂಡ ಮರೆತುಹೋಗಿತ್ತು.ಈಗ ಬಿಡುವಾದಾಗ ಮತ್ತೆ ಬರೆಯಲು ಶುರು ಮಾಡಿ ಮೂರು ನಾಲ್ಕು ಲೇಖನಗಳನ್ನು ಬ್ಲಾಗಿಸಿದೆ.ಪತ್ರಿಕೆಗಳಿಗೆ ಬರಹಗಳನ್ನು ಕಳಿಸಲು ಈಗ ಅಷ್ಟಾಗಿ ಆಸಕ್ತಿ ಇಲ್ಲ.ಯಾಕೆ ಅಂಥ ಗೊತ್ತಿಲ್ಲ.ಆದರೆ ಬ್ಲಾಗ್ ಬರವಣಿಗೆಯನ್ನು ನಿಲ್ಲಿಸಲು ಮಾತ್ರ ಮನಸ್ಸಿಲ್ಲ.

ಕನ್ನಡದಲ್ಲಿ ಸುಮಾರು ಒಳ್ಳೊಳ್ಳೆ ಬ್ಲಾಗ್’ಗಳಿವೆ.ಆದರೆ ರೆಗ್ಯುಲರ್ ಆಗಿ ಬರೆಯುವವರು ಮಾತ್ರ ತುಂಬಾ ಕಡಿಮೆ ಜನ.ಆ ಬ್ಲಾಗಿಗರಲ್ಲಿ ನಾನೂ ಒಬ್ಬನಾಗದೇ ಇರುವುದಕ್ಕೆ ಪ್ರಯತ್ನಿಸಬೇಕು.ಎಂಥ ಬ್ಯುಸಿ ಶೆಡ್ಯೂಲ್ ಇದ್ದರೂ ಇನ್ನು ಮುಂದೆ ತಿಂಗಳಿಗೆ ಒಂದಾದರೂ ಬರಹವನ್ನು ಬ್ಲಾಗಿನಲ್ಲಿ ಪ್ರಕಟಿಸಲು ಆಗುತ್ತದಾ ನೋಡಬೇಕು.ಒಂದಷ್ಟು ಕಡೆಗಳಿಂದ ಮಾಹಿತಿ ಕಲೆ ಹಾಕಿ ಅದಕ್ಕೆ ನಮಗೆ ಗೊತ್ತಿದ್ದ ವಿಷಯಗಳನ್ನೂ ಸೇರಿಸಿ ಲೇಖನ ಬರೆಯುವುದು ಕಥೆ,ಕವನ,ಕಾದಂಬರಿಗಳಂಥ ಸಾಹಿತ್ಯ ರಚನೆ ಮಾಡುವುದಕ್ಕಿಂತ ಸುಲಭ.ಕಥೆ,ಕಾದಂಬರಿಗಳನ್ನು ಬರೆಯಲು ಅಪಾರವಾದ ತಾಳ್ಮೆ,ಒಂದಷ್ಟು ಅಮೂಲ್ಯವಾದ ಸಮಯ,ಸೃಜನಶೀಲ ಮನಸ್ಸು ಬೇಕಾಗುತ್ತದೆ ಎಂಬುದು ನನ್ನ ಅಂಬೋಣ.ನನಗೆ ಇದೆಲ್ಲ ಸಾಧ್ಯವಾದೀತೋ ಇಲ್ಲವೋ ಗೊತ್ತಿಲ್ಲ.ಆದರೆ ಆಗಾಗ ಲೇಖನಗಳನ್ನು ಬರೆಯುವುದಕ್ಕೇನೂ ಮೋಸವಾಗಲಿಕ್ಕಿಲ್ಲ.ನಾನು ಇಷ್ಟಪಟ್ಟು ಶುರು ಮಾಡಿದ ಬ್ಲಾಗನ್ನು Active ಆಗಿ ಇಡಲಿಕ್ಕಾದರೂ ಆಗಾಗ ಬರೆಯಬೇಕು.ಅದಕ್ಕಾಗಿ ಬ್ಲಾಗಿಸುವ ತೆವಲು ಹೀಗೇ ಇದ್ದರೆ ಒಳ್ಳೆಯದೇನೋ.