ನವರಾತ್ರಿಯ ಒಂಭತ್ತು ದಿನಗಳ ಉತ್ಸವ ಮುಗಿದಿತ್ತು.ಮಣ್ಣಿನಿಂದ ಮಾಡಿದ್ದ ದೇವಿಯ ವಿಗ್ರಹಕ್ಕೆ ಪ್ರತಿದಿನವೂ ಬೇರೆ ಬೇರೆ ರೀತಿ ಅಲಂಕಾರ ಮಾಡಿ ಸಂಭ್ರಮೋಲ್ಲಾಸದಿಂದ ಕೂಡಿದ ಭಕ್ತಿಯಿಂದ ಅಮ್ಮನವರನ್ನು ಒಂಭತ್ತು ದಿನಗಳ ಪರ್ಯಂತ ಪೂಜಿಸಿ ಇವತ್ತು ವಿಜಯದಶಮಿಯ ಮಂಗಳಾರತಿಯ ಬಳಿಕ ಜಗನ್ಮಾತೆಯನ್ನು ನೀರಿನಲ್ಲಿ ವಿಸರ್ಜಿಸಲು ಸಿದ್ಧತೆ ಆರಂಭವಾಗಿತ್ತು.

ವಿಜಯದಶಮಿಯ ಪೂಜೆಯೂ ಸಾಂಗವಾಗಿ ನೆರವೇರಿ ಶ್ರೀದೇವಿಗೆ ಎಲ್ಲರೂ ಜೈಕಾರ ಹಾಕಿದರು.ವಿಗ್ರಹದ ವಿಸರ್ಜನೆಗೆ ಕ್ಷಣಗಣನೆ ಆರಂಭವಾಯಿತು.ಜಾಗಟೆ,ತಾಳ ಬಡಿಯುವವರು,ಶಂಖ ಊದುವವರು ಅಮ್ಮನವರ ಮೆರವಣಿಗೆಗೆ ತಮ್ಮ ಶಬ್ದನಾದದ ಮೂಲಕ ಮೆರುಗು ನೀಡಲು ಉತ್ಸುಕರಾಗಿದ್ದರು.ಪುರೋಹಿತರು ಜೋರು ಸ್ವರದಲ್ಲಿ ಮಂತ್ರಘೋಷ ಮಾಡುತ್ತಿದ್ದರು.

“ದೇವಿಯ ವಿಗ್ರಹವನ್ನು ಈ ಸಲ ನಾನೇ ಮೊದಲು ಕೈಹಾಕಿ ಎತ್ತುತ್ತೇನೆ.ನಾನು ಎತ್ತಿಕೊಂಡ ಮೇಲೆ ನೀವೆಲ್ಲ ಬನ್ನಿ.ಆಮೇಲೆ ಎಲ್ಲರೂ ಅಮ್ಮನವರನ್ನು ಹೊತ್ತುಕೊಂಡು ಮೆರವಣಿಗೆ ಹೋದರಾಯಿತು” ಅಂತ ನಾನು ನವೀನನಲ್ಲಿ ಹೇಳಿದೆ.
“ಲೋ ನಿನ್ ಕೈಲಿ ಆಗತ್ತ ದೇವಿಯನ್ನು ಒಬ್ಬನೇ ಕೈಹಾಕಿ ಎತ್ತೋಕೆ.ತುಂಬಾ ಭಾರ ಇದೆ ಅದು.ನಾನು ಮೊದಲು ಎತ್ತುತ್ತೇನೆ.ಆಮೇಲೆ ನೀನು ಬಾ” ನನ್ನ ತೆಳ್ಳಗಿನ ಮೈಯನ್ನು ನೋಡುತ್ತ ಹೇಳಿದ ನವೀನ.
“ಇಲ್ಲ ಕಣೋ.ಈ ಸಲ ನಾನೇ ಎತ್ತುತ್ತೀನಿ.ದೇವಿಯನ್ನು ಎತ್ತಕ್ಕೆ ಬೇಕಾದಷ್ಟು ಶಕ್ತಿ ನನ್ನಲ್ಲಿದೆ” ಅಂದೆ.
“ಸರಿ ನಿನ್ನಿಷ್ಟ” ಅಂದ ನವೀನ.

“ಸಮಯವಾಯಿತು,ಅಮ್ಮನವರನ್ನು ಎತ್ತಿಕೊಳ್ಳಿ” ಅಂದರು ಪುರೋಹಿತರು ವಿಗ್ರಹವನ್ನು ಸ್ಥಾನಪಲ್ಲಟ ಮಾಡಿದ ಮೇಲೆ.
ನಾನು ಹೋದೆ.ದೇವಿಗೆ ಒಂದು ನಮಸ್ಕಾರ ಹಾಕಿ ಎರಡೂ ಕೈಗಳನ್ನು ಬಳಸಿ ಅಮ್ಮನ ವಿಗ್ರಹವನ್ನು ಎತ್ತಲಾರಂಭಿಸಿದೆ.ತುಸು ಭಾರವಿದ್ದಂತೆ ಅನ್ನಿಸಿತು.ನವೀನ,ಪುರೋಹಿತರು ಹತ್ತಿರವೇ ನಿಂತಿದ್ದರು.
“ಲೋ ಏನೋ ಮಾಡಿದೆ.ಆಗ್ಲೇ ಹೇಳಿದೆ ತಾನೆ,ನಿನ್ ಕೈಲಿ ಎತ್ತಕ್ಕೆ ಆಗಲ್ಲ ಅಂತ.ಈಗ ನೋಡು ನೀನು ಎತ್ತಿಕೊಳ್ಳುವಾಗ ವಿಗ್ರಹ ಸ್ವಲ್ಪ ಜಾಸ್ತಿಯೇ ಹಿಂದಕ್ಕೆ ಬಾಗಿದ್ದರಿಂದ ಅಮ್ಮನ ಕುತ್ತಿಗೆಯ ಹತ್ತಿರ ಬಿರುಕು ಬಿಟ್ಟಿದೆ.ನಾವು ಮೆರವಣಿಗೆ ಶುರು ಮಾಡುವ ಮೊದಲೇ ಅಮ್ಮನ ರುಂಡ ದೇಹದಿಂದ ತುಂಡಾಗುವ ಹಾಗೆ ಅನ್ನಿಸ್ತಾ ಇದೆ” ಅಂತ ಕಿರುಚಿದ ನವೀನ.
ನನಗೇನು ಮಾಡಲೂ ಗೊತ್ತಾಗಲಿಲ್ಲ.ಭಯದಿಂದ ಪುರೋಹಿತರನ್ನೇ ನೋಡುತ್ತ ನಿಂತೆ.

“ಏನು ಮಾಡೋದು ಭಟ್ರೇ ಈಗ.ಅಮ್ಮನ ವಿಗ್ರಹವನ್ನು ಘಾಸಿಗೊಳಿಸಿ ಇವನು ತಪ್ಪು ಮಾಡಿದ್ದಾನೆ.ಈಗ ಪ್ರಾಯಶ್ಚಿತ್ತ ನೀವೇ ಹೇಳಬೇಕು” ಅಂದರು ಅಲ್ಲಿ ಬಂದಿದ್ದವರೊಬ್ಬರು.
ನನ್ನ ಈ ತಪ್ಪಿಗೆ ಅಮ್ಮ ಶಿಕ್ಷೆ ಕೊಡುತ್ತಾಳ?ನಾನು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾ?ಅದು ಯಾವ ಸ್ವರೂಪದ್ದಾಗಿರಬಹುದು?ಅದರಿಂದ ನನಗೇನಾದರೂ ಆದರೆ… ಅಂತೆಲ್ಲ ನಾನು ಕಳವಳಗೊಂಡೆ.

ಪುರೋಹಿತರು ಏನನ್ನೋ ಚಿಂತಿಸುತ್ತ ಸುಮ್ಮನೇ ನಿಂತಿದ್ದರು.ಉಳಿದವರೂ ಏನೂ ಮಾತನಾಡದೇ ಮೌನವಾಗಿದ್ದರು.ಕೆಲವೇ ನಿಮಿಷಗಳ ಹಿಂದೆ ಕೇಳುತ್ತಿದ್ದ ಮಂತ್ರಘೋಷ,ಭಜನೆ,ಜಾಗಟೆ,ತಾಳಗಳ ಶಬ್ದವೆಲ್ಲ ನಿಂತು ಹೋಗಿ ವಾತಾವರಣವೇ ಬದಲಾಗಿತ್ತು.ನವೀನ ದೇವಿಯ ವಿಗ್ರಹವನ್ನು ಆಧರಿಸಿ ಹಿಡಿದಿದ್ದ.

“ವಿಗ್ರಹಕ್ಕೆ ಘಾಸಿಯಾಗಿದ್ದಕ್ಕಾಗಿ ನೀನು ‘ಶೂನ್ಯಪೂಜೆ’ ಮಾಡಬೇಕು” ನನ್ನ ಕಡೆ ನೋಡಿ ಹೇಳಿದರು ಭಟ್ರು.
“ಶೂನ್ಯಪೂಜೆಯೇ.ಇದೆಂಥದು ನಾವು ಕೇಳಿರದ ಹೊಸ ಪೂಜೆ.ಅದನ್ನು ಹೇಗೆ ಮಾಡುತ್ತಾರೆ ಭಟ್ರೇ” ಅಂತ ಕೆಲವರು ಕೇಳಲಾರಂಭಿಸಿದರು.ನಾನು ಪುರೋಹಿತರನ್ನೇ ನೋಡುತ್ತ ಸುಮ್ಮನೇ ನಿಂತಿದ್ದೆ.

“ಸಂಪೂರ್ಣವಾಗಿ ಲಯವಾಗಿದ್ದ ಪ್ರಪಂಚದಲ್ಲಿ ಮತ್ತೆ ಜೀವರಾಶಿಯನ್ನು ಹುಟ್ಟುಹಾಕಲು ತ್ರಿಮೂರ್ತಿಗಳನ್ನು ಶೂನ್ಯದಿಂದ ಸೃಷ್ಟಿಸಿದವಳು ಆದಿಮಾಯೆ.ಜಗನ್ಮಾತೆ ಹೇಗೆ ಹುಟ್ಟಿದವಳು ಎಂದೂ ಸರಿಯಾಗಿ ಗೊತ್ತಿಲ್ಲ ನಮಗೆ.ಮಹಿಷಾಸುರನ ಕಾಟವನ್ನು ತಾಳಲಾರದೆ ತ್ರಿಮೂರ್ತಿಗಳು ಮತ್ತು ದೇವತೆಗಳೆಲ್ಲ ತಮ್ಮ ರಕ್ಷಣೆಗಾಗಿ ಪರಿತಪಿಸುತ್ತಿದ್ದಾಗ ಶೂನ್ಯದಿಂದಲೇ ಜನ್ಮತಾಳಿ ‘ಅಯೋನಿಜೆ’ ಎನಿಸಿಕೊಂಡವಳು ಶ್ರೀದೇವಿ.ಹಾಗಾಗಿ ಏನೂ ಇಲ್ಲದ ಶೂನ್ಯದ ಸ್ಥಿತಿಗೂ ಜಗನ್ಮಾತೆಗೂ ಏನೋ ಸಂಬಂಧವಿರಬಹುದು.ಆದ್ದರಿಂದ ಶೂನ್ಯವನ್ನು ಪೂಜಿಸಿದರೆ ಅದು ಅಮ್ಮನವರನ್ನು ಪೂಜಿಸಿದ ಹಾಗಲ್ಲವೆ” ಅಂದರು ಪುರೋಹಿತರು.
“ಅಲ್ಲದೆ ಇವನೇನೂ ಗೊತ್ತಿದ್ದೂ ದೇವಿಯ ವಿಗ್ರಹಕ್ಕೆ ಘಾಸಿ ಮಾಡಿದ್ದಲ್ಲ.ತಿಳಿಯದೆ ಹೇಗೋ ಆಗಿ ಹೋಗಿದೆ.ಹಾಗಾಗಿ ವಿಶೇಷ ಪ್ರಾಯಶ್ಚಿತ್ತದ ಅಗತ್ಯವೇನೂ ಇಲ್ಲ” ಅಂತ ಭಟ್ರು ನನ್ನನ್ನು ನೋಡುತ್ತ ಹೇಳಿದರು.

“ಆದರೆ ಶೂನ್ಯವನ್ನು ಹೇಗೆ ಪೂಜಿಸುವುದು ಭಟ್ರೇ” ನವೀನ ಆಶ್ಚರ್ಯಚಕಿತನಾಗಿ ಕೇಳಿದ.

“ಜಗನ್ಮಾತೆ ಸೊನ್ನೆಯಿಂದಲೇ ಎಲ್ಲವನ್ನೂ ನಿರ್ಮಿಸಲು ಶಕ್ತಳಾಗಿರುವುದರಿಂದ ಎದುರಿಗೆ ಮೂರ್ತರೂಪದಲ್ಲಿ ಏನನ್ನೂ ಇಟ್ಟುಕೊಳ್ಳದೆ, ಪ್ರಪಂಚದ ಉಗಮಕ್ಕೆ ಕಾರಣವಾದ ಆ ಮೂಲಶಕ್ತಿಯನ್ನು ಮನಸ್ಸಿನಲ್ಲಿ ಧ್ಯಾನಿಸಿ ನಮಸ್ಕರಿಸಿದರೂ ಸಾಕು.ಅದು ಮಾಡಲಿಕ್ಕಾಗದಿದ್ದರೆ ವಿವಿಧ ರೂಪಗಳಲ್ಲಿ ದೇವಿಯು ಈ ಜಗತ್ತಿನಲ್ಲಿ ನೆಲೆಸಿರುವುದರಿಂದ ಈ ಪ್ರಕೃತಿ,ಗಿಡ-ಮರ,ಪ್ರಾಣಿ-ಪಕ್ಷಿಗಳು,ನದಿ ಏನನ್ನು ಬೇಕಾದರೂ ಪೂಜಿಸಬಹುದು.ಅದು ಬೇಡವೆಂದರೆ ಈಗ ಎದುರಿಗಿರುವ ಬಿರುಕು ಬಿಟ್ಟಿರುವ ದೇವಿಯ ವಿಗ್ರಹಕ್ಕೆ ಮತ್ತೊಮ್ಮೆ ನಮಸ್ಕರಿಸಿದರೂ ಆದೀತು.ಎಷ್ಟಂದರೂ ಆ ಲೀಲಾವಿನೋದಿನಿಯ ಮುಂದೆ ನಾವೆಲ್ಲರೂ ಶೂನ್ಯರಲ್ಲವೇ” ಎಂದು ಭಟ್ರು ಮತ್ತೊಮ್ಮೆ ಅಮ್ಮನವರಿಗೆ ವಂದಿಸಿದರು.

ಏನೇನೋ ಆಗಬಹುದು ಇಲ್ಲಿ ಅಂತ ನಿರೀಕ್ಷಿಸಿದ್ದ ನಾನು ಭಟ್ರ ಮಾತು ಕೇಳಿ ಸಮಾಧಾನದ ನಿಟ್ಟುಸಿರು ಬಿಟ್ಟೆ.

“ಶೂನ್ಯಪೂಜೆಯನ್ನು ಮುಗಿಸಿಯೇ ಅಮ್ಮನವರನ್ನು ವಿಸರ್ಜಿಸಬಹುದಲ್ಲವೇ ಭಟ್ರೇ” ಅಂದೆ ನಾನು.
ಪುರೋಹಿತರು ಮುಗುಳ್ನಕ್ಕರು.ಆ ಜಗನ್ಮಾತೆಯೂ ಎಲ್ಲವನ್ನು ನೋಡಿ ನಕ್ಕಂತಾಯಿತು..

ಪ್ರತಿಲಿಪಿ ಕನ್ನಡದಲ್ಲಿ ಪ್ರಕಟವಾಗಿದೆ.

ಚಿತ್ರಕೃಪೆ: ಗೂಗಲ್