ಸಾಯಬೇಕೆಂದು ತಾವಾಗೆ ಬಯಸುವವರು ತುಂಬಾ ಕಡಿಮೆ ಜನ.ಸಾವಿನ ಬಗ್ಗೆ ಯೋಚಿಸಲು,ಮಾತನಾಡಲು ಕೂಡ ಹೆದರುತ್ತಾರೆ ಹಲವರು.ಎಲ್ಲರೂ ಒಂದಲ್ಲ ಒಂದು ದಿನ ಸಾಯುವುದು ಹೌದಾದರೂ, ಯಾರಾದರೂ ಸಣ್ಣ ವಯಸ್ಸಿನಲ್ಲಿ ನಿಧನ ಹೊಂದಿದರೆ ಅಥವಾ ಭೀಬತ್ಸ ರೀತಿಯಲ್ಲಿ ದುರ್ಮರಣಕ್ಕೀಡಾದರೆ ತುಂಬಾ ಬೇಜಾರಾಗುತ್ತದೆ.ಈ ಫೆಬ್ರವರಿ ತಿಂಗಳಲ್ಲಿ ದೇಶದ ಎರಡು ಭಾಗಗಳಲ್ಲಾದ ಇಬ್ಬರ ಸಾವು ಮನಕಲಕುವಂತಿದೆ.ಅದರ ಸುದ್ದಿಯನ್ನು ಓದಿದಾಗ ತುಂಬಾ ನೋವಾಗುತ್ತದೆ.

ಘಟನೆ ಒಂದು
ದಿಲ್ಲಿಯ AIIMS,ಪಾಂಡಿಚೆರಿಯ JIPMER,ಹಾಗೂ ಚಂಧೀಗಡದ PGIMER ನಮ್ಮ ದೇಶದ ಅತ್ಯುನ್ನತ ವೈದ್ಯಕೀಯ ವಿದ್ಯಾ ಸಂಸ್ಥೆಗಳು.ಮೂರೂ ಕೂಡ ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆಗಳು.ಈ ಮೂರು ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ MBBS ಅಥವಾ Post Graduation ಮಾಡುವುದು ದೇಶದ ಪ್ರತಿಯೊಬ್ಬ ವೈದ್ಯಕೀಯ ವಿದ್ಯಾರ್ಥಿಯ ಕನಸು.ಆದರೆ ಕೆಲವೇ ಜನ ಪ್ರತಿಭಾವಂತರಿಗಷ್ಟೇ ಇಂಥ ಅತ್ಯುನ್ನತ ಸಂಸ್ಥೆಗಳಲ್ಲಿ ವೈದ್ಯ ತರಬೇತಿ ಪಡೆಯುವ ಅವಕಾಶ ಸಿಗುತ್ತದೆ.ತಮಿಳುನಾಡಿನ ರಾಮೇಶ್ವರಂನ 24 ವರ್ಷದ ವೈದ್ಯ ಡಾ.ಕೃಷ್ಣಪ್ರಸಾದ್ ರಾಮಸ್ವಾಮಿ ಅಂಥ ಪ್ರತಿಭಾವಂತ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಒಬ್ಬನಾಗಿದ್ದ.ಎಂಬಿಬಿಎಸ್ ಹಂತದಿಂದಲೂ ಮೆರಿಟ್ ವಿದ್ಯಾರ್ಥಿಯಾಗಿದ್ದ ಕೃಷ್ಣಪ್ರಸಾದ್ ದೇಶದ ಅತ್ಯುನ್ನತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಕನಸನ್ನು ಇಟ್ಟುಕೊಂಡು ಕಳೆದ ನವೆಂಬರ್’ನಲ್ಲಿ AIIMS,JIPMER ಮತ್ತು PGIMER ಈ ಮೂರೂ ಸ್ವಾಯತ್ತ ಸಂಸ್ಥೆಗಳ ಪ್ರವೇಶ ಪರೀಕ್ಷೆ ಬರೆದಿದ್ದ.ಮೂರೂ ಕಡೆಯೂ ಒಳ್ಳೆಯ Rank ಬಂದಿದ್ದರೂ ಕೃಷ್ಣಪ್ರಸಾದ್ ಚಂಧೀಗಡದ PGIMER ಅನ್ನು ಆರಿಸಿಕೊಂಡು ಮೆಡಿಸಿನ್ ವಿಭಾಗದಲ್ಲಿ MD ಸೀಟು ಪಡೆದು ಇದೇ ಜನವರಿಯಿಂದ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದ.ರಾಜ್ಯದ ಅತ್ಯುತ್ತಮ ಸರ್ಕಾರಿ ಆಸ್ಪತ್ರೆಯಾಗಿದ್ದರಿಂದ ದಿನವೂ ಸಾವಿರಾರು ರೋಗಿಗಳು ಬರುತ್ತಿದ್ದರು.ಒಪಿಡಿ,ಐಸಿಯು,ಎಮರ್ಜೆನ್ಸಿ ವಾರ್ಡ್ ಎಲ್ಲೆಲ್ಲೂ ರೋಗಿಗಳು ತುಂಬಿಕೊಂಡಿರುತ್ತಿದ್ದರು.PG ಮಾಡುತ್ತಿರುವ ರೆಸಿಡೆಂಟ್ ಡಾಕ್ಟರ್’ಗಳು ದಿನಕ್ಕೆ ಹತ್ತರಿಂದ ಹನ್ನೆರಡು ತಾಸುಗಳ ಕಾಲ ಕೆಲಸ ಮಾಡಬೇಕಿತ್ತು.ವಾರದಲ್ಲಿ ಎರಡು ದಿನ ಇಪ್ಪತ್ತನಾಲ್ಕು ಗಂಟೆಗಳ ಡ್ಯೂಟಿಯೂ ಇರುತ್ತಿತ್ತು.ಕೃಷ್ಣಪ್ರಸಾದನಿಗೆ ಈ ಒತ್ತಡವನ್ನು ನಿಭಾಯಿಸಲಾಗಲಿಲ್ಲ.ದಕ್ಷಿಣದ ತಮಿಳುನಾಡಿನಿಂದ ಉತ್ತರದ ಪಂಜಾಬಿಗೆ ತನ್ನ ಪ್ರೀತಿಪಾತ್ರರಾದ ಅಪ್ಪ-ಅಮ್ಮ,ತಂಗಿಯನ್ನು ಬಿಟ್ಟು ಬಂದವನಿಗೆ ಇಂಥ ವಾತಾವರಣದಲ್ಲಿ ಕೆಲಸ ಮಾಡುವುದು ಉಸಿರು ಕಟ್ಟಿದಂತಾಗುತ್ತಿತ್ತು.

ಮೂರನೇ ರೌಂಡಿನ ಕೌನ್ಸಿಲಿಂಗ್’ನಲ್ಲಿ ಭಾಗವಹಿಸಿ ಮೆಡಿಸಿನ್ ವಿಭಾಗವನ್ನು ಬಿಟ್ಟು ಅದೇ ಆಸ್ಪತ್ರೆಯ ರೇಡಿಯಾಲಜಿ ವಿಭಾಗಕ್ಕೆ ಸೇರಿಕೊಂಡ ಕೃಷ್ಣಪ್ರಸಾದ್.ಮೆಡಿಸಿನ್ ವಿಭಾಗದಷ್ಟು ಒತ್ತಡ ಇರದಿದ್ದರೂ ರೇಡಿಯಾಲಜಿ ಸೆಕ್ಷನ್’ಗೂ ಸಾಕಷ್ಟು ರೋಗಿಗಳು ಸ್ಕ್ಯಾನಿಂಗ್,ಎಕ್ಸ್ ರೇ ಮಾಡಿಸಲು ಬರುತ್ತಿದ್ದರು.PG ಮಾಡುತ್ತಿದ್ದವರಿಗೆ ಈ ವಿಭಾಗದಲ್ಲಿಯೂ ವಾರಕ್ಕೊಂದು ದಿನ ಇಪ್ಪತ್ತ ನಾಲ್ಕು ಗಂಟೆ ಡ್ಯೂಟಿ ಇರುತ್ತಿತ್ತು.ಕ್ರಮೇಣ ಕೃಷ್ಣಪ್ರಸಾದನಿಗೆ ರೇಡಿಯಾಲಜಿ ವಿಭಾಗದಲ್ಲೂ ಉಸಿರುಗಟ್ಟುವ ವಾತಾವರಣವಿದೆ ಅಂತ ಅನ್ನಿಸಲಾರಂಭಿಸಿತು.ಮನೆಯ ನೆನಪು ಪದೇ ಪದೇ ಕಾಡುತ್ತಿತ್ತು.ದೂರದ ಈ ಊರಿನಲ್ಲಿ ತನ್ನವರು ಯಾರೂ ಇಲ್ಲವೆಂದು ಖಿನ್ನತೆಗೊಳಗಾದ ಆತ,ಮಾನಸಿಕವಾಗಿ ಭಾರೀ ನೋವನ್ನು ಅನುಭವಿಸಿದ.

ಕಳೆದ ಸೋಮವಾರ ಬೆಳಿಗ್ಗೆ ಎಂಟು ಗಂಟೆಗೆ ರೇಡಿಯಾಲಜಿ ವಿಭಾಗಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಕೃಷ್ಣಪ್ರಸಾದ್ ಬಂದಿರಲಿಲ್ಲ.ಫೋನ್ ಸ್ವಿಚ್ ಆಫ್ ಆಗಿತ್ತು.ಅವನ ಸಹೋದ್ಯೋಗಿಗಳು ಹಾಸ್ಟೆಲ್ ರೂಮಿಗೆ ಹೋಗಿ ಬಾಗಿಲು ಒಡೆದು ನೋಡಿದಾಗ ಫ್ಯಾನ್’ಗೆ ನೇಣು ಹಾಕಿಕೊಂಡು ಶವವಾಗಿ ನೇತಾಡುತ್ತಿದ್ದ ಕೃಷ್ಣಪ್ರಸಾದ್.

ಸ್ವತಃ ಒಬ್ಬ ವೈದ್ಯ,ಅದರಲ್ಲೂ AIIMS,JIPMER,PGIMER ಈ ಮೂರೂ ಶಿಕ್ಷಣ ಸಂಸ್ಥೆಗಳ ಪ್ರವೇಶ ಪರೀಕ್ಷೆಗಳಲ್ಲಿ Rank ತೆಗೆದು ಎಲ್ಲಿ ಬೇಕಾದರೂ ಸೀಟು ಪಡೆದುಕೊಳ್ಳುವ ಅರ್ಹತೆಯಿದ್ದ ಪ್ರತಿಭಾವಂತ ಯುವ ವೈದ್ಯ,ಸಾವಿರಾರು ಕನಸುಗಳನ್ನು ಕಟ್ಟಿಕೊಂಡು ತನ್ನ ಅಪ್ಪ ಅಮ್ಮನಿಗೂ ಸುಂದರ ಭವಿತವ್ಯವನ್ನು ಕೊಡಲು ತಯಾರಾಗುತ್ತಿದ್ದ ಕೃಷ್ಣಪ್ರಸಾದ್ PG ಮಾಡುವಾಗ ಎಲ್ಲ ರೆಸಿಡೆಂಟ್ ಡಾಕ್ಟರುಗಳೂ ಅನುಭವಿಸುವ ವೃತ್ತಿ ಸಂಬಂಧಿತ ಒತ್ತಡವನ್ನು ಎದುರಿಸಲಾಗದೇ ಸಾವಿಗೆ ಶರಣಾದ.ದೂರದೂರದ ಊರುಗಳಿಂದ ನೂರಾರು ಕನಸು ಕಟ್ಟಿಕೊಡು ಬರುವ ವೈದ್ಯವಿದ್ಯಾರ್ಥಿಗಳು ಖಿನ್ನತೆಗೊಳಗಾದರೆ ಅವರಿಗೆ ಸಾಂತ್ವಾನ ನೀಡಲು ವಿಶೇಷ ವಿಭಾಗವೇ ಇತ್ತು ಚಂಧೀಗಡದ PGIMER ಆಸ್ಪತ್ರೆಯಲ್ಲಿ.ಇದೆಲ್ಲ ಗೊತ್ತಿದ್ದೂ ತನ್ನ ಖಿನ್ನತೆಯನ್ನು ಯಾರೊಂದಿಗೂ ಹೇಳಿಕೊಳ್ಳದೆ,ಸಾಮಾನ್ಯ ವೃತ್ತಿ ಒತ್ತಡವನ್ನು ನಿಭಾಯಿಸಲಾರದೆ ಹೋಗಿಬಿಟ್ಟ ಕೃಷ್ಣಪ್ರಸಾದ್.

ತಮಿಳುನಾಡಿನ ರಾಮೇಶ್ವರಂನ ದೇವಸ್ಥಾನವೊಂದರಲ್ಲಿ ಅರ್ಚಕರಾಗಿರುವ ತಂದೆ ರಾಮಸ್ವಾಮಿ,ತಾಯಿ ಮತ್ತು ಒಬ್ಬಳು ತಂಗಿಯನ್ನು ಬಿಟ್ಟು ಮೃತ್ಯುವನ್ನು ಆಯ್ಕೆ ಮಾಡಿಕೊಂಡ ಡಾ.ಕೃಷ್ಣಪ್ರಸಾದ್ ಬಿಟ್ಟು ಹೋದದ್ದು ಈ ಜಗತ್ತನ್ನಷ್ಟೇ ಅಲ್ಲ ನನಸಾಗದೇ ಉಳಿದ ಸಾವಿರಾರು ಸುಂದರ ಕನಸುಗಳನ್ನು ಕೂಡ.ಒಡೆದದ್ದು ಅವನ ಅಪ್ಪ ಅಮ್ಮನ ಹೃದಯವಷ್ಟೇ ಅಲ್ಲ ಆಗಷ್ಟೇ ಕಟ್ಟಲಾರಂಭಿಸಿದ್ದ ಸುಂದರ ಭವಿತವ್ಯವೆಂಬ ಭಾವನೆಗಳ ಅರಮನೆ ಕೂಡ.ಮಗನ ಸಾವನ್ನು ತಡೆದುಕೊಳ್ಳುವ ಶಕ್ತಿ ಸಿಗಲಿ ಕೃಷ್ಣಪ್ರಸಾದನ ಅಪ್ಪ-ಅಮ್ಮನಿಗೆ. ‘ಹಿಂದುಸ್ಥಾನ್ ಟೈಮ್ಸ್’ ಪತ್ರಿಕೆಯಲ್ಲಿ ಈ ಘಟನೆಯ ಬಗ್ಗೆ ಬಂದ ವರದಿಯನ್ನು ಇಲ್ಲಿ ಓದಬಹುದು.

ಘಟನೆ ಎರಡು
ಬಹುಷಃ ಕ್ರೌರ್ಯದ ಪರಮಾವಧಿ ಇದಕ್ಕಿಂತ ಇನ್ನೊಂದು ಇರಲಿಕ್ಕಿಲ್ಲ.ಅಕ್ಕಿ ಕದ್ದ ಎಂಬ ಕಾರಣಕ್ಕೆ ಕೇರಳದ ಪಾಲಕ್ಕಾಡ್’ನಲ್ಲಿ ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಮನಸೋ ಇಚ್ಛೆ ಹೊಡೆದು ಹತ್ಯೆ ಮಾಡಿದ್ದಾರೆ.ಈ ಕ್ರೌರ್ಯ ಮೆರೆಯುತ್ತಿರುವಾಗ ಮೊಬೈಲಿನಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾರೆ.27 ವರ್ಷ ವಯಸ್ಸಿನ, ಆದಿವಾಸಿ ಜನಾಂಗಕ್ಕೆ ಸೇರಿದ ಮಧು ಎಂಬ ಯುವಕ ಕದ್ದ ಅಕ್ಕಿಯೊಂದಿಗೆ ಸಿಕ್ಕಿಬಿದ್ದಿದ್ದಾನೆ.ಹಿಡಿದವರು ಅವನನ್ನು ಪೋಲೀಸರಿಗೆ ಒಪ್ಪಿಸುವ ಬದಲು ಕಂಬಕ್ಕೆ ಕಟ್ಟಿ ಸಾಯುವಂತೆ ಹೊಡೆದಿದ್ದಾರೆ.ಮಧು ಬಳಿ ಇದ್ದ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಒಂದಷ್ಟು ಅಕ್ಕಿ,ಮೆಣಸಿನ ಪುಡಿ,ಒಂದೆರಡು ಸಿಗರೇಟ್,ಕಿತ್ತು ಹೋದ ಮೊಬೈಲ್ ಚಾರ್ಜರ್ ಇದ್ದವಂತೆ.ಈ ಎಲ್ಲ ವಸ್ತುಗಳ ಒಟ್ಟು ಮೌಲ್ಯ ಇನ್ನೂರು ರೂಪಾಯಿ.ಮಧು ಮಾನಸಿಕ ಅಸ್ವಸ್ಥನಾಗಿದ್ದ ಮತ್ತು ಕಳೆದ ಕೆಲವು ತಿಂಗಳುಗಳಿಂದ ಕಳ್ಳತನ ಮಾಡುತ್ತಿದ್ದ ಎಂಬುದು ಸ್ಥಳೀಯರ ಅನಿಸಿಕೆ.ಹಾಗಿದ್ದಲ್ಲಿ ಅವನನ್ನು ಪೋಲೀಸರಿಗೆ ಒಪ್ಪಿಸುವ ಬದಲು ಕಂಬಕ್ಕೆ ಕಟ್ಟಿ ಹೊಡೆದು ಸಾಯಿಸಿದ್ದೇಕೆ?

ಪಾಲಕ್ಕಾಡ್’ನಲ್ಲಿ ಆಗಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ.ಸಣ್ಣ ಸಣ್ಣ ತಪ್ಪಿಗೂ ಪ್ರಾಣಕಳೆದುಕೊಳ್ಳುವ ಭೀತಿಯಿರುವ ವಾತಾವರಣ ನಮ್ಮ ನಾಡಿನಲ್ಲಿ ನಿರ್ಮಾಣವಾಗಿದ್ದಾದರೂ ಹೇಗೆ?ಜನರು ಏಕೆ ಹೀಗೆ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ?ಮನುಷ್ಯನ ಕೈಕಾಲು ಕತ್ತರಿಸುವುದು,ಕತ್ತು ಕೊಯ್ಯುವುದು,ಕೊಲ್ಲುವುದು ತರಕಾರಿ ಹೆಚ್ಚಿದಷ್ಟೇ ಸುಲಭದ ಸಂಗತಿಯಾಗುತ್ತಿರುವುದೇಕೆ?ಶಾಂತಿಯುತ ಸಮಾಜವಿರಬೇಕಾದ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲೆಲ್ಲೂ ಹಿಂಸೆಯೇ ವಿಜೃಂಭಿಸುವುದೇಕೆ?ಸೆಲ್ಫಿ ತೆಗೆದು ತಾವು ಮಾಡಿದ ಕ್ರೌರ್ಯವನ್ನು ಜಗತ್ತಿಗೆಲ್ಲ ತೋರಿಸುವ ವಿಕೃತ ಮನಸ್ಥಿತಿ ನಿರ್ಮಾಣವಾಗುತ್ತಿರುವುದೇಕೆ? ಯಾವುದಕ್ಕೂ ಉತ್ತರವಿಲ್ಲ.ಉತ್ತರ ಕಂಡುಕೊಳ್ಳಬೇಕಾದ ನಾವು ದಿನೇ ದಿನೇ ರಾಕ್ಷಸರಾಗುತ್ತಿದ್ದೇವಷ್ಟೇ.