ಅದು 2011 ರ ಮೇ ತಿಂಗಳು.ಕರ್ನಾಟಕ ಸಿಇಟಿ ಪರೀಕ್ಷೆಯ ಫಲಿತಾಂಶ ಬಂದಿತ್ತು.ವೈದ್ಯಕೀಯದಲ್ಲಿ ನನಗೆ 728ನೇ Rank ಬಂದಿತ್ತು.ಮೆಡಿಕಲ್ ಓದುವ ಕನಸು ಕಾಣುತ್ತಿದ್ದ ನನಗೆ,ನಾನು ಊಹಿಸಿಯೇ ಇರದ ರೀತಿಯಲ್ಲಿ ಒಳ್ಳೆಯ Rank ಬಂದು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಸಿಕ್ಕಿತ್ತು.ಜೂನ್ ತಿಂಗಳಲ್ಲಿ ಹೋಗಿ ಕಾಲೇಜ್ ಅಡ್ಮಿಷನ್ ಮಾಡಿಸಿ ಬಂದಿದ್ದೆ.ಆಗಸ್ಟ್ ತಿಂಗಳಲ್ಲಿ ಕಾಲೇಜು ಶುರುವಾಯಿತು.ದಕ್ಷಿಣ ಕನ್ನಡ ಜಿಲ್ಲೆಯ ಮಿಜಾರು ಎಂಬ ಸಣ್ಣ ಗ್ರಾಮದಿಂದ ಮೈಸೂರೆಂಬ ದೊಡ್ಡ ಪಟ್ಟಣಕ್ಕೆ ಹೊರಟು ನಿಂತಿದ್ದೆ.ಅಪ್ಪ ಅಮ್ಮನ ಮುಖ ಸಣ್ಣದಾಗಿತ್ತು.ಆದರೂ ನಗುನಗುತ್ತಲೇ ನನ್ನನ್ನು ಬೀಳ್ಕೊಟ್ಟರು.ಕಾಲೇಜಿಗೆ ಸೇರಿಸಲು ಅಪ್ಪನೂ ನನ್ನ ಜೊತೆಗೆ ಮೈಸೂರಿಗೆ ಬಂದರು.ಅಲ್ಲಿ ನಮ್ಮದೇ ಕಾಲೇಜಿನ ಹಾಸ್ಟೆಲ್’ಗೆ ನಾನು ಸೇರಲಿಲ್ಲ.ಬದಲಿಗೆ ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ,‘ಮೈಸೂರು ತಾತಯ್ಯ’ ಎಂದೇ ಹೆಸರಾದ ವೃದ್ಧಪಿತಾಮಹ ವೆಂಕಟಕೃಷ್ಣಯ್ಯನವರು ಸ್ಥಾಪಿಸಿದ ‘ಅನಾಥಾಲಯ’ ಹಾಸ್ಟೆಲ್’ಗೆ ಸೇರಿಕೊಂಡೆ.ಅದು ಬ್ರಾಹ್ಮಣ ವಿದ್ಯಾರ್ಥಿಗಳಿಗಾಗಿಯೇ ಮೀಸಲಾದ ಹಾಸ್ಟೆಲ್.ಅದರಲ್ಲೂ ಅಲ್ಲಿರುವ ಶೇಕಡಾ 60ರಷ್ಟು ಹುಡುಗರು ನಮ್ಮ ಹವ್ಯಕರೇ ಆಗಿದ್ದರು.ಹಾಗಾಗಿ ಅಪ್ಪನಿಗೆ ಖುಷಿಯಾಗಿತ್ತು.ನನಗೂ ಆಲ್ಮೋಸ್ಟ್ ಮನೆಯ ವಾತಾವರಣದಂತೇ ಭಾಸವಾಯಿತು.

ಆಗಸ್ಟ್’ನಲ್ಲಿ ನನ್ನ ಎಂಬಿಬಿಎಸ್ ಕಾಲೇಜು ಶುರುವಾಗಿತ್ತು.ಅಕ್ಟೋಬರ್ ಐದು ಮತ್ತು ಆರನೇ ತಾರೀಖಿಗೆ ಆಯುಧಪೂಜೆ ಮತ್ತು ವಿಜಯದಶಮಿಯ ಸಲುವಾಗಿ ರಜೆ ಇತ್ತು.ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲೇ ಮನೆಯಿಂದ ಫೋನ್ ಬಂದಾಗಲೆಲ್ಲ ಈ ಎರಡು ದಿನಗಳ ರಜೆಯಲ್ಲೇ ಊರಿಗೆ ಬರುವಂತೆ ನನ್ನನ್ನು ಒತ್ತಾಯಿಸಲು ಶುರು ಮಾಡಿದ್ದರು.ನನಗೋ ಕೇವಲ ಎರಡು ದಿನ ರಜೆಗೆ ಯಾರು ಊರಿಗೆ ಹೋಗ್ತಾರೆ ಅನ್ನುವ ಅಸಡ್ಡೆ.ಆದರೆ ಅಮ್ಮ ಕೇಳಬೇಕಲ್ಲ.ನೀನು ಬರದೇ ಇದ್ದರೆ ನಾವೇ ಬಂದುಬಿಡುತ್ತೇವೆ ಮೈಸೂರಿಗೆ ಈಗ.ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ.ಎರಡು ದಿನಗಳ ಮಟ್ಟಿಗಾದರೂ ಬರಲೇಬೇಕು ಅಂತ ಒತ್ತಾಯಿಸಿದಳು.ಅಲ್ಲಿ ಊರಲ್ಲಿ ನಾನಿಲ್ಲದೇ ಅಪ್ಪ ಅಮ್ಮನಿಗೆ ಮನೆಯೇ ಖಾಲಿ ಖಾಲಿ ಅಂತ ಅನ್ನಿಸುತ್ತಿತ್ತು.ಆದರೆ ಇಲ್ಲಿ ಮೈಸೂರಿನಲ್ಲಿ ನಾನು ಆರಾಮವಾಗಿಯೇ ಇದ್ದೆ.ಮನೆಯಿಂದ ದೂರ ಇದ್ದೇನೆ ಎಂಬ ಸ್ವಾಭಾವಿಕ ಫೀಲಿಂಗ್ಸ್ ಬಿಟ್ಟರೆ ಈ ತಕ್ಷಣವೇ ಇಲ್ಲಿಂದ ಊರಿಗೆ ಹೋಗಬೇಕು,ಅಪ್ಪ ಅಮ್ಮನನ್ನು ನೋಡಲೇಬೇಕು,ಇಲ್ಲಿರಲು ಸಾಧ್ಯವೇ ಇಲ್ಲ ಎಂಬಂಥ ‘Home sickness’ ನನ್ನನ್ನು ಕಾಡಲೇ ಇಲ್ಲ.ಇದು ನನಗೂ ನನ್ನ ಅಪ್ಪ ಅಮ್ಮನಿಗೂ ಅತ್ಯಾಶ್ಚರ್ಯದ ಸಂಗತಿಯಾಗಿತ್ತು.ಏಕೆಂದರೆ ನಾನು ಹೋಗಿ ಸೇರಿಕೊಂಡ ಮೈಸೂರು ನನ್ನನ್ನು ಆ ಪರಿಯಾಗಿ ಆಕರ್ಷಿಸಿಬಿಟ್ಟಿತ್ತು.

ಹೌದು.ಮೈಸೂರು ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡು ಬಿಟ್ಟಿತ್ತು.ಒಂದು ಕ್ಷಣಕ್ಕೂ ನಾನು ಮನೆಯಿಂದ ದೂರ ಇದ್ದೇನೆ,ನನ್ನವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬ ಭಾವನೆಯೇ ಬರದಷ್ಟು ಮಟ್ಟಿಗೆ ಮೈಸೂರೆಂಬ ಅಪ್ಸರೆಯ ಮೋಹಕ್ಕೊಳಗಾಗಿದ್ದೆ ನಾನು.ಮೊದಲೇ ರಾಜ್ಯದ ಸಾಂಸ್ಕೃತಿಕ ನಗರಿ.ಎಲ್ಲಿ ನೋಡಿದರೂ ಪಾರಂಪರಿಕ ಸ್ಥಳಗಳು.ಅರಸರ ಕಾಲದ ಕಟ್ಟಡಗಳು,ಪ್ರೇಕ್ಷಣೀಯ ಸ್ಥಳಗಳು,ಸುಂದರವಾದ ಗಲ್ಲಿಗಳು ಎಲ್ಲದಕ್ಕೂ ಫಿದಾ ಆಗಿದ್ದೆ ನಾನು.ಅದರಲ್ಲೂ ನಮ್ಮ ‘ಅನಾಥಾಲಯ’ ಹಾಸ್ಟೆಲ್ ಇರುವ ಸ್ಥಳದಿಂದ ಬಸ್ ನಿಲ್ದಾಣ,ರೈಲು ನಿಲ್ದಾಣ ಎಲ್ಲವೂ ಸಮಾನ ದೂರದಲ್ಲಿದ್ದವು.ಹಾಸ್ಟೆಲ್ ಪಕ್ಕದಲ್ಲೇ ‘ಶಾಂತಲಾ’ ಚಿತ್ರಮಂದಿರವಿತ್ತು.

ಚಿತ್ರಕೃಪೆ:ಶಿವಪ್ರಸಾದ್ ಹಳುವಳ್ಳಿ

ತುಂಬ ಸುಂದರವಾದ ಒಬ್ಬ ಹೆಣ್ಣನ್ನು ಪದಗಳಲ್ಲಿ ವರ್ಣಿಸಲು ಹೇಗೆ ಸಾಧ್ಯವಿಲ್ಲವೋ ಹಾಗೇ ಮೈಸೂರನ್ನು ನಾನೆಷ್ಟು ಇಷ್ಟಪಟ್ಟಿದ್ದೆ ಎಂಬುದನ್ನು ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ.ನಮ್ಮ ಹಾಸ್ಟೆಲ್ ಕಟ್ಟಡದಲ್ಲೇ ಇದ್ದ ‘ರಾಘವೇಂದ್ರ ಟಿಫಾನೀಸ್’ನ ಫಿಲ್ಟರ್ ಕಾಫಿ,ಪಕ್ಕದ ಅಂಕಲ್ ಅಂಗಡಿಯ ಆಲೂಗಡ್ಡೆ ಚಿಪ್ಸ್,ಎರಡು ರೂಪಾಯಿಯ ಕುಲ್ಫಿ,ಹೋಮ್ ಮೇಡ್ ಇಡ್ಲಿ,ರೈಸ್ ಬಾತ್,ದೋಸೆ ಸಿಗುತ್ತಿದ್ದ ‘ಅಜ್ಜಿ ಬೋಂಡಾ’ ಅಂಗಡಿ,ಎಲ್ಲಾ ಭಾಷೆಯ ಪೇಪರ್’ಗಳು ಮ್ಯಾಗಝೀನ್’ಗಳು ಸಿಗುತ್ತಿದ್ದ ಶೆಟ್ರ ಅಂಗಡಿ,ತ್ರಿವೇಣಿ ಜ್ಯೂಸ್ ಸೆಂಟರ್,ಸಂಜೆಯಾದರೆ ರುಚಿಯಾದ ಗೋಬಿ ಮಂಚೂರಿ ಮಾಡಿಕೊಡುತ್ತಿದ್ದ ನವೀನನ ಗೋಬಿ ಸ್ಟಾಲ್,ಜಿಯೋ ನೆಟ್ವರ್ಕ್ ಇಲ್ಲದ ಕಾಲದಲ್ಲಿ ಬರೀ ಹದಿನೈದು ರೂಪಾಯಿಗೆ ಗಂಟೆಗಟ್ಟಲೆ ಇಂಟರ್ನೆಟ್ ಯೂಸ್ ಮಾಡಬಹುದಾಗಿದ್ದ ಸುರೇಶನ ಸೈಬರ್ ಕೆಫೆ,ಸದಾ ಶಾಂತವಾಗಿರುವ ಮತ್ತೆ ಮತ್ತೆ ಹೋಗಬೇಕೆನ್ನಿಸುವ ಶಂಕರಮಠ,ಬಿಸಿಬಿಸಿಯಾದ ಪಪ್ಸ್,ಸಮೋಸ ಸಿಗುತ್ತಿದ್ದ 100 feet ರೋಡ್’ನಲ್ಲಿರುವ ‘ಕೃಷ್ಣ ಬೇಕರಿ’, ‘ದಿಲ್ ಪಸಂದ್’ ಮತ್ತು ಬಾದಾಮಿ ಹಾಲಿಗೆ ಫೇಮಸ್ ಆದ ‘ವಿ.ಬಿ. ಬೇಕರಿ’,ಹತ್ತು ರೂಪಾಯಿಗೆ ಮೂರು ನಾಲ್ಕು ದೊಡ್ಡದೊಡ್ಡ ಬಾಳೆಹಣ್ಣುಗಳನ್ನು ಕೊಡುತ್ತಿದ್ದ ಬಾಳೆಹಣ್ಣಿನ ವ್ಯಾಪಾರಿ,ಸದಾ ಬೆರಗು ಹುಟ್ಟಿಸುವ ಅರಮನೆ,ಚಾಮುಂಡಿ ಬೆಟ್ಟ,ರಣಜಿ ಟ್ರೋಫಿ ಪಂದ್ಯಗಳನ್ನು ಉಚಿತವಾಗಿ ನೋಡಲು,ಹಾಗೂ ಕೆಪಿಎಲ್ ಕ್ರಿಕೆಟ್ ಲೀಗನ್ನು ಹೊನಲು ಬೆಳಕಿನಲ್ಲಿ ನೋಡಲು ಅನುವು ಮಾಡಿಕೊಡುತ್ತಿದ್ದ ಗಂಗೋತ್ರಿ ಗ್ಲೇಡ್ಸ್ ಕ್ರಿಕೆಟ್ ಸ್ಟೇಡಿಯಂ,ನಲ್ವತ್ತು ರೂಪಾಯಿಗೆ ಹೊಟ್ಟೆ ತುಂಬಾ Unlimited ಊಟ ಕೊಡುತ್ತಿದ್ದ ‘ದುರ್ಗಾಂಬಾ ಮೆಸ್’,ಬೆಳಿಗ್ಗೆ ಬೆಳಿಗ್ಗೆ ಫೋನ್ ಮಾಡಿ ಜನರಿಗೆ ಕಾಗೆ ಹಾರಿಸಿ ಅದನ್ನು ಇಡೀ ಮೈಸೂರಿಗೆ ಕೇಳಿಸುತ್ತಿದ್ದ RED FMನ ಆರ್.ಜೆ.ಸುನೀಲ್,Internship ಸಮಯದಲ್ಲಿ ಬಿಳಿಗಿರಿರಂಗನಬೆಟ್ಟ,ಪೊನ್ನಂಪೇಟೆಯಲ್ಲಿ ಕಳೆದ ದಿನಗಳು,ಜೀವಕ್ಕೆ ಹತ್ತಿರವಾಗಿದ್ದ ಹಾಸ್ಟೆಲ್ಲಿನ ಕೆಲವು ಗೆಳೆಯರು ಹೀಗೇ ಹೇಳಿ ಮುಗಿಸಲು ಸಾಧ್ಯವಿಲ್ಲದಷ್ಟು ಸಂಗತಿಗಳಲ್ಲಿ ನಾನು ಕಳೆದು ಹೋಗಿದ್ದೆ.ಹಾಗಾಗಿ ಯಾವ ಕ್ಷಣದಲ್ಲೂ ಮನೆಯನ್ನು ಮಿಸ್ ಮಾಡಿಕೊಳ್ಳುವಂಥ,ಬೇಜಾರು ಬರುವಂಥ ವಾತಾವರಣವೇ ಇರಲಿಲ್ಲ.
ಚಿತ್ರಕೃಪೆ:ಶಿವಪ್ರಸಾದ್ ಹಳುವಳ್ಳಿ

ಮೈಸೂರು ಅಪ್ಸರೆಯಂತೆ ಸೆಳೆಯುವುದು ಅದರ ಪಾರಂಪರಿಕ ಹಿರಿತನಕ್ಕೆ.ಅಗಲವಾದ ರಸ್ತೆಗಳು,ಮುಖ್ಯಹೆದ್ದಾರಿಗಳ ಮಧ್ಯೆ ಸಾಲು ಮರಗಳು.ಬೆಳಿಗ್ಗೆ ಚಳಿ,ಮಧ್ಯಾಹ್ನ ಸುಡುವ ಬಿಸಿಲು,ಸಂಜೆ ಹೊತ್ತಿನಲ್ಲಿ ಒಮ್ಮಿಂದೊಮ್ಮೆಲೆ ಸುರಿಯುವ ಮಳೆ ಇವೆಲ್ಲವುಗಳಿಂದಾಗಿ ಪಟ್ಟಣದೊಳಗಿನ ಹಳ್ಳಿಯಂತೆ ಕಾಣುತ್ತದೆ ಮೈಸೂರು.ಎಲ್ಲೋ ಒಂದೆರಡು ಸರ್ಕಲ್’ಗಳನ್ನು ಬಿಟ್ಟರೆ ಬೇರೆ ಕಡೆಯೆಲ್ಲ ಟ್ರಾಫಿಕ್ ಜಾಮ್ ಆಗುವುದು ಅಲ್ಲಿ ಭಾರೀ ಅಪರೂಪ.ಇನ್ನು ಹತ್ತು ವರ್ಷ ಕಳೆದರೂ ಬೆಂಗಳೂರಿನ ಟ್ರ‍ಾಫಿಕ್’ಗೆ ಮೈಸೂರಿನ ಟ್ರ‍ಾಫಿಕ್ ಸರಿಸಾಟಿಯಾಗಲಾರದು.ದಸರಾ ಸಮಯದಲ್ಲಂತೂ ಈ ಅಪ್ಸರೆ ನವವಧುವಿಂತೆ ಕಾಣುತ್ತಾಳೆ.ನವರಾತ್ರಿಯಲ್ಲಿ ಮೈಸೂರಿನ ಬೀದಿಗಳಲ್ಲಿ ಸುತ್ತಾಡುವುದೇ ಒಂಥರಾ ಮಜವಾಗಿರುತ್ತದೆ.ಬಣ್ಣಬಣ್ಣದ ಲೈಟಿಂಗ್ಸ್’ನಿಂದ ಝಗಮಗಿಸುವ ರಸ್ತೆಗಳು,ಸಂಜೆಯ ತಂಗಾಳಿ,ಬೀದಿಬದಿಯಲ್ಲಿ ಸಿಗುವ ಪಾನಿಪುರಿ,ಘಮ್ಮೆನ್ನುವ ಅತ್ತರು ಸೂಸಿಕೊಂಡು ಅರಮನೆ ನೋಡಲು ಬರುವ ತರುಣಿಯರು ಎಲ್ಲವೂ ನೋಡಲು ಅಂದವೋ ಅಂದ.
ಮೈಸೂರಿನ ಹಾಸ್ಟೆಲ್ ಗೆಳೆಯರು

ವಿದ್ಯಾರ್ಥಿಯೊಬ್ಬ ಓದಲು ಮೈಸೂರು ಅತ್ಯಂತ ಪ್ರಶಸ್ತವಾದ ಸ್ಥಳ.ಶೈಕ್ಷಣಿಕವಾಗಿ ಏನನ್ನು ಕಲಿಯಲು ಬೇಕಾದರೂ ಒಳ್ಳೊಳ್ಳೆ ವಿದ್ಯಾಮಂದಿರಗಳಿವೆ.ಮರಿಮಲ್ಲಪ್ಪ,ಸದ್ವಿದ್ಯಾ ಶಾಲಾ ಕಾಲೇಜು,SJCE,NIE ಇಂಜಿನಿಯರಿಂಗ್ ಕಾಲೇಜು,ಮೈಸೂರು ಮೆಡಿಕಲ್ ಕಾಲೇಜ್,JSS ಮೆಡಿಕಲ್ ಕಾಲೇಜು ಹೀಗೆ ಒಳ್ಳೊಳ್ಳೆ ವಿದ್ಯಾಸಂಸ್ಥೆಗಳಿವೆ.ಪಠ್ಯೇತರ ಚಟುವಟಿಕೆಗಳನ್ನು ಕಲಿಯಲೂ ಅಷ್ಟೇ ಒಳ್ಳೆಯ ಅವಕಾಶಗಳಿವೆ.ಅದೂ ತುಂಬಾ ಹತ್ತಿರದಲ್ಲೇ.ಎಲ್ಲಾ ಕಡೆಗಳಿಗೂ ನಡೆದುಕೊಂಡು ಅಥವಾ ಸೈಕಲ್’ನಲ್ಲಿ ಹೋಗಿಬಿಡುವಷ್ಟು ಹತ್ತಿರದಲ್ಲಿ ಪಠ್ಯೇತರ ಚಟುವಟಿಕೆಗಳಾದ ಸಂಗೀತ,ನಾಟಕ,ಯಕ್ಷಗಾನ,ಜ್ಯೋತಿಷ್ಯ,ಪೌರೋಹಿತ್ಯ ಎಲ್ಲವನ್ನೂ ಕಲಿಸುವ ಜಾಗಗಳಿವೆ.ಮೈಸೂರಿನ ‘ರಂಗಾಯಣ’ ಜಗತ್ಪ್ರಸಿದ್ಧವಾದದ್ದು.ನಮ್ಮೂರಲ್ಲಿ ಆಡುವ ತುಳು ನಾಟಕಗಳನ್ನೇ ರಂಗಕಲೆ ಎಂದುಕೊಂಡಿದ್ದ ನನಗೆ,ನಿಜವಾದ ರಂಗಭೂಮಿ ಅಂದರೆ ಏನು ಅಂತ ಗೊತ್ತಾಗಿದ್ದೇ ಮೈಸೂರಿನ ರಂಗಾಯಣದಲ್ಲಿ ನಾಟಕ ನೋಡಿದ ಮೇಲೆ.ಇವತ್ತಿಗೂ ಮೈಸೂರಿನಲ್ಲಿ ನಾನು ಮಿಸ್ ಮಾಡಿಕೊಳ್ಳುತ್ತಿರುವ ವಿಷಯಗಳಲ್ಲಿ ರಂಗಾಯಣದ ನಾಟಕ ಮುಂಚೂಣಿಯಲ್ಲಿದೆ.ಕುಕ್ಕರಹಳ್ಳಿ ಕೆರೆಯೂ ಅತ್ಯಂತ ಪ್ರಿಯವಾಗಿತ್ತು.ಅಲ್ಲಿ ವಾಕಿಂಗ್,ಜಾಗಿಂಗ್ ಮಾಡಲು ಬರುವ ಜನಸಾಮಾನ್ಯರು,ಕೈಕೈ ಹಿಡಿದು ನಡೆದಾಡುವ ಯುವ ಜೋಡಿಗಳು,ಹಕ್ಕಿಗಳ ಚಿಲಿಪಿಲಿ ಎಲ್ಲವೂ ಮೈಸೂರೆಂಬ ಅಪ್ಸರೆಯ ಸೌಂದರ್ಯವನ್ನು ಹೆಚ್ಚಿಸಿವೆ.ಮೈಸೂರಿನ ಜನರೂ ಅಷ್ಟೇ,ಸ್ನೇಹಜೀವಿಗಳು.ವಿಶಾಲ ಹೃದಯದವರು.ಪ್ರವಾಸಿಗರಿಗೆ ತಮ್ಮೂರಿನ ಹೆಮ್ಮೆಯನ್ನು ತೋರಿಸಲು ಸದಾ ಸಿದ್ಧರಾಗಿರುವವರು.
ಮೆಡಿಕಲ್ ಕಾಲೇಜಿನ ಹೈಕ್ಳ ಜೊತೆ ಕೇರಳ ಟೂರ್ ಹೋದಾಗ ಕ್ಲಿಕ್ಕಿಸಿದ್ದು
ಬಿಳಿಗಿರಿ ರಂಗನ ಬೆಟ್ಟದ ತುದಿಯ ಮುಂಜಾವಿನಲ್ಲೊಂದು ಸೆಲ್ಫಿ

ಈ ಎಲ್ಲ ಕಾರಣಗಳಿಂದಾಗಿ ಮೈಸೂರಿನಲ್ಲಿ ಇದ್ದ ಐದೂವರೆ ವರ್ಷಗಳ ಕಾಲವೂ ನಾನು ಮನೆಯಿಂದ ದೂರ ಇದ್ದೇನೆ,ಏನನ್ನೋ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಂತ ಅನ್ನಿಸುತ್ತಲೇ ಇರಲಿಲ್ಲ.ಸುಮಾರು ಸಲ ನನ್ನ ಗೆಳೆಯರ ಜೊತೆ ಮಾತಾಡುವಾಗ ಹೇಳಿದ್ದಿದೆ,ಅವಕಾಶ ಸಿಕ್ಕರೆ ಮುಂದೊಂದು ದಿನ ಮೈಸೂರಿನಲ್ಲಿ ಸೆಟ್ಲ್ ಆದೇನು ಅಂತ.2017ರ ಮಾರ್ಚ್ ತಿಂಗಳಲ್ಲಿ ಎಂಬಿಬಿಎಸ್ ಮುಗಿಸಿ ವೈದ್ಯ ಪದವಿ ಪಡೆದು ಮೈಸೂರನ್ನು ಬಿಟ್ಟು ಬಂದೆ.ಆವಾಗಿನಿಂದ ಪ್ರತಿಕ್ಷಣವೂ ಮೈಸೂರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ.ಈಗ Post Graduation ಮಾಡಲು ಮುಂಬೈಗೆ ಬಂದಿದ್ದೇನೆ.ದಸರಾ ಸಮಯದಲ್ಲಿ ಇಲ್ಲಿನ FM ರೇಡಿಯೋಗಳಲ್ಲಿ ಮೈಸೂರು ದಸರಾದ ಬಗ್ಗೆ ಜಾಹಿರಾತು ಬರುವಾಗ ಕಿವಿ ನಿಮಿರುತ್ತದೆ.ಎನೋ ಒಂದು ರಮಣೀಯ ಭಾವ ಒಳಗಿಂದೊಳಗೇ ಉದ್ಭವವಾಗುತ್ತದೆ.

2018 ರ ಮೇ ತಿಂಗಳಿನಲ್ಲಿ ಮುಂಬೈಗೆ ಬಂದೆ.ಮುಂಬೈನ ಪ್ರಸಿದ್ಧ Sion Hospital(Lokamanya tilak Municipal Medical college)ನಲ್ಲಿ ಅನಸ್ತೇಷಿಯಾದಲ್ಲಿ Post Graduation ಮಾಡಲು ಸೀಟು ಸಿಕ್ಕಿತ್ತು.ಕನಸಿನ ನಗರಿಗೆ ಕನಸುಗಳ ಮೂಟೆಯನ್ನೇನೂ ಹೊತ್ತು ಬರಲಿಲ್ಲ ನಾನು.ಮೈಸೂರಿನ ಕನವರಿಕೆಯಲ್ಲೇ ಬಾಂಬೆಗೆ ಬಂದ ನನಗೆ ಇಲ್ಲಿಗೆ ಹೊಂದಿಕೊಳ್ಳುವುದಕ್ಕೇನೂ ಕಷ್ಟವಾಗಲಿಲ್ಲ.ಇಲ್ಲಿ ಬರುತ್ತಿದ್ದ ಹಾಗೆಯೇ ನನ್ನನ್ನು ಸ್ವಾಗತಿಸಿದ್ದು ನಮ್ಮ ಆಸ್ಪತ್ರೆಯ ಹೆಕ್ಟಿಕ್ ಡ್ಯೂಟಿ ಶೆಡ್ಯೂಲ್.ಹಾಗಾಗಿಯೇ ಬ್ಲಾಗಿಂಗ್ ಮಾಡಲು ಸಮಯವಿಲ್ಲದೇ ಸುಮಾರು ಒಂದುವರೆ ವರ್ಷದ ನಂತರ ಬ್ಲಾಗ್ ಪೋಸ್ಟ್ ಮಾಡುತ್ತಿದ್ದೇನೆ.ಸಾಂಸ್ಕೃತಿಕ ನಗರಿಯ ಸುಂದರ ವಾತಾವರಣದಲ್ಲಿ ಐದೂವರೆ ವರ್ಷ ಕಳೆದಿದ್ದ ನನಗೆ ಈ ಮುಂಬೈ ಎಂಬ ಮಾಯಾನಗರಿಯ ರಂಗುರಂಗಿನ ಜೀವನ ಅಷ್ಟಾಗಿ ಹಿಡಿಸಲಿಕ್ಕಿಲ್ಲವೇನೋ,ಈ ಊರು ನನ್ನನ್ನು ಆಕರ್ಷಿಸಲಾರದು ಅಂದುಕೊಂಡುಬಿಟ್ಟಿದ್ದೆ.ಊಹೂಂ,ಕೆಲವೇ ದಿನಗಳಲ್ಲಿ ಸಮ್ಮೋಹನಕ್ಕೊಳಗಾದವನಂತೆ ಈ ಊರೂ ನನ್ನನ್ನು ಸೆಳೆದುಬಿಟ್ಟಿತ್ತು.ಎಂದೂ ನಿದ್ರಿಸದ ಇಲ್ಲಿನ ನಗರ,ರೋಡು ತುಂಬಾ ಓಡಾಡುವ ಟ್ಯಾಕ್ಸಿಗಳು,ಇಲ್ಲಿನ ಜನರ Life Line ಆಗಿರುವ ಲೋಕಲ್ ಟ್ರೈನ್’ಗಳು,ಡಬ್ಬಾವಾಲಾಗಳು ತಂದುಕೊಡುವ ಊಟ,ಸದಾ ನವನವೋನ್ಮೇಷಶಾಲಿಯಾದ ಮರೀನ್ ಡ್ರೈವ್,ನಾರಿಮನ್ ಪಾಯಿಂಟ್,ಬೀದಿ ಬದಿ ಸಿಗುವ ವಡಾಪಾವ್,ಸದಾ ಜನಜಂಗುಳಿಯಿಂದ ತುಂಬಿರುವ ಮಹಾನಗರಪಾಲಿಕೆಯ ಕಛೇರಿಗಳು,ಹೊಟ್ಟೆಪಾಡಿಗಾಗಿ ಹತ್ತುಹಲವು ಕೆಲಸ ಮಾಡುವ ಇಲ್ಲಿನ ಜನರು,ಅತ್ಯಂತ ದೊಡ್ಡ ಕೊಳಗೇರಿ ಧಾರಾವಿ ಈ ಎಲ್ಲದರ ಮೂಲಕ ಕನಸುಗಳ ನಗರಿ ನನ್ನ ಮೇಲೆ ಮಾಟ ಮಾಡಿತ್ತು.ಮೈಸೂರಿನ ಕನವರಿಕೆಯಲ್ಲೇ ಈ ಬಾಂಬೆಯ ಮೋಹಕ್ಕೂ ಬಿದ್ದುಬಿಟ್ಟೆ.ಪಾರ್ಟಿ ಮಾಡದ,ಪಬ್-ಬಾರ್’ಗಳಿಗೆ ಹೋಗದ,ಟೈಂಪಾಸ್ ಮಾಡಲು ಗರ್ಲ್ ಫ್ರೆಂಡ್ ಇಲ್ಲದ ನನ್ನನ್ನು ಈ ಮಹಾನಗರಿ ಆಕರ್ಷಿಸಲಾರದು ಅಂದುಕೊಂಡಿದ್ದ ನನ್ನ ಊಹೆ ತಪ್ಪಾಗಿತ್ತು.

ಮುಂಬೈನ ಗೆಳೆಯರ ಗ್ಯಾಂಗ್

ಮುಂಬೈನಲ್ಲಿ ನೀನು ತೋರಿಸಲು ಇಷ್ಟಪಡುವ ಒಂದೇ ಒಂದು ಸ್ಥಳ ಯಾವುದು ಅಂತ ಯಾರಾದರೂ ಕೇಳಿದರೆ ನನ್ನ ಸಾರ್ವಕಾಲಿಕ ಉತ್ತರ ಮರೀನ್ ಡ್ರೈವ್.ರಸ್ತೆಗೆ ತಾಗಿಕೊಂಡೇ ಇರುವ ಸಮುದ್ರದಂಡೆ,ವಿಶಾಲವಾದ ಸಾಗರ,ಪಕ್ಕದಲ್ಲೇ ಇರುವ ದೊಡ್ಡದೊಡ್ಡ ಕಟ್ಟಡಗಳು ಎಲ್ಲವೂ ಸೂಪರ್.ನಮಗೆ ಆತ್ಮೀಯರಾದವರ ಜೊತೆ ಕುಳಿದುಕೊಂಡು ತಂಪಾದ ಗಾಳಿಗೆ ಮಯ್ಯೊಡ್ಡಿ ಮಸುಕು ದೀಪದಲ್ಲಿ ಆಕಾಶದ ನಕ್ಷತ್ರಗಳನ್ನು ನೋಡುತ್ತ ಇಲ್ಲಿ ಕಳೆಯುವ ರಾತ್ರಿಯ ಸುಂದರ ಕ್ಷಣಗಳನ್ನು ಬಣ್ಣಿಸಲಾಗದು.
ಮರೀನ್ ಡ್ರೈವ್
Mumbai

ಅದು ಬಿಟ್ಟರೆ ‘ಗೇಟ್ ವೇ ಆಫ್ ಇಂಡಿಯಾ’ ಇದೆ.ಬೇಕಾದಷ್ಟು ಸಮುದ್ರಗಳಿವೆ.ಸ್ವಾದಿಷ್ಟವಾದ ತಿನಿಸುಗಳು ಸಿಗುವ ಮೊಹಮ್ಮದ್ ಆಲಿ ರೋಡ್ ಇದೆ.ದಾದರ್’ನ ಸಿದ್ಧಿವಿನಾಯಕ ಮಂದಿರವಿದೆ.‘ಛತ್ರಪತಿ ಶಿವಾಜಿ ಟರ್ಮಿನಸ್’ ರೈಲು ನಿಲ್ದಾಣವಿದೆ. ರಮಣೀಯವಾದ ಲೋನಾವಾಲ ಇದೆ.ಸಂಜೆಗಳಲ್ಲಿ ಕಳೆದು ಹೋಗಲು ಬೇಕಾದಷ್ಟು ಬಾರ್,ಪಬ್ಬುಗಳಿವೆ.ಎಲ್ಲಕ್ಕಿಂತ ಮಿಗಿಲಾಗಿ ದೇಶದ ಬೇರೆ ಬೇರೆ ಮೂಲೆಗಳಿಂದ ಬಂದು ಹಗಲು-ರಾತ್ರಿ ದುಡಿದು ಬದುಕು ಕಟ್ಟಿಕೊಂಡ ಜನರಿದ್ದಾರೆ.ಎಂದೂ ನಿದ್ರಿಸದ ನಗರವಿದೆ.ದುಬಾರಿ ಜೀವನಶೈಲಿಯಿದೆ.ಸೆಲೆಬ್ರೆಟಿಗಳ ವಯ್ಯಾರದ ಬದುಕಿದೆ.ಎಲ್ಲವೂ ಮಾಟಗಾರರಂತೆ ನನ್ನನ್ನು ಸನ್ಮೋಹಿಸಿವೆ.ತಿಂಗಳಿಗೆ ಐನೂರು ರೂಪಾಯಿ ದುಡಿಯುವವನೂ ಇಲ್ಲಿ ಬದುಕಬಲ್ಲ.ಐದು ಲಕ್ಷ ದುಡಿಯುವವನೂ ಅವನದೇ ಶೈಲಿಯಲ್ಲಿ ಜೀವಿಸಬಲ್ಲ.ಯಾವುದಾದರೂ ಕೆಲಸಮಾಡಿ ಹೇಗಾದರೂ ಬದುಕುತ್ತೇನೆ ಎಂದುಕೊಂಡು ಬಂದವನ್ನು ಎಂದೂ ಕೈಬಿಟ್ಟಿಲ್ಲ ಈ ಕನಸಿನ ನಗರಿ.

ಮೈಸೂರು ಒಂದು ಶಾಂತ ಸರೋವರವಾದರೆ ಮುಂಬೈ ಭೋರ್ಗರೆಯುವ ಸಮುದ್ರ.ಆಧುನೀಕರಣಕ್ಕೆ ಸಿಲುಕಿದರೂ ತನ್ನ ಪಾರಂಪರಿಕ ಸೊಗಡನ್ನು ಇನ್ನೂ ಉಳಿಸಿಕೊಂಡಿರುವ ‘ಕ್ಲೀನ್ ಸಿಟಿ’ ಒಂದೆಡೆಯಾದರೆ ಅತ್ಯಂತ ದೊಡ್ಡ ಕೊಳಗೇರಿಗಾಗಿಯೇ ಜಗತ್ಪ್ರಸಿದ್ಧವಾದ ಬಾಂಬೆ ಇನ್ನೊಂದೆಡೆ.ಅಪ್ಸರೆಯಾದ ಮೈಸೂರಿನ ಪ್ರೀತಿ ಆ ಕಡೆ,ಕನಸಿನ ನಗರಿಯ ವಶೀಕರಣಕ್ಕೊಳಗಾದ ಭಾವ ಈ ಕಡೆ.ಈ ಎರಡರ ಪೈಕಿ ಮನಸ್ಸು ಮತ್ತೆ ಮತ್ತೆ ಹಂಬಲಿಸುವುದು ನಮ್ಮ ಮೈಸೂರನ್ನೇ.2017ರ ನಂತರ ಮೈಸೂರಿಗೆ ಹೋಗುವ ಕಾಲ ಇನ್ನೂ ಕೂಡಿ ಬಂದಿಲ್ಲ.ಪ್ರತಿದಿನವೂ ಅಲ್ಲಿ ಕಳೆದ ಸುಂದರ ದಿನಗಳನ್ನೇ ಮೆಲುಕು ಹಾಕುತ್ತ ಸಾಂಸ್ಕೃತಿಕ ನಗರಿಯ ಅಪ್ಸರೆಯನ್ನು ಆದಷ್ಟು ಬೇಗ ಭೇಟಿಯಾಗಲು ಕಾತರಿಸುತ್ತಿದ್ದೇನೆ.
“ಮಿಸ್ ಯೂ ಮೈಸೂರು”
ತಾನು ಕ್ಲಿಕ್ಕಿಸಿದ ಮೈಸೂರಿನ ಸುಂದರ ಫೋಟೋಗಳನ್ನು ಈ ಲೇಖನದಲ್ಲಿ ಬಳಸಿಕೊಳ್ಳಲು ಪ್ರೀತಿಯಿಂದ ಕೊಟ್ಟವನು ಗೆಳೆಯ ಶಿವಪ್ರಸಾದ್ ಹಳುವಳ್ಳಿ