ನೆಪೋಟಿಸಂ ಶಬ್ದಇತ್ತೀಚೆಗೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಳ್ಳುವವರೆಗೂ ಅಷ್ಟಾಗಿ ಜನರ ನಾಲಗೆಯಲ್ಲಿ ಹರಿದಾಡುತ್ತಿರಲಿಲ್ಲ. ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದರೆಂದೂ, ಅದರ ತೀವ್ರತೆಯಿಂದಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆಂದು ಪ್ರಾಥಮಿಕ ವರದಿಗಳಲ್ಲಿ ದಾಖಲಾಯಿತು.ಕೆಲದಿನಗಳ ನಂತರ ನಟಿ ಕಂಗನಾ ರಣಾವತ್ ಇದ್ದಕ್ಕಿದ್ದಂತೇ ಸುಶಾಂತ್ ನೆಪೋಟಿಸಂಗೆ ಬಲಿಯಾದರು ಎಂದುಬಿಟ್ಟರು.ಸುಶಾಂತ್ ತುಂಬಾ ಪ್ರತಿಭಾವಂತ ನಟ.ಆದರೆ ಅಷ್ಟೇನೂ ಪ್ರಭಾವೀ ವ್ಯಕ್ತಿಯಲ್ಲವಾದ್ದರಿಂದ ಬಾಲಿವುಡ್’ನ ದೊಡ್ಡ ದೊಡ್ಡ ಸ್ಟಾರ್ ನಟ,ನಿರ್ದೇಶಕ,ನಿರ್ಮಾಪಕರುಗಳು ಸುಶಾಂತ್ ಅವರನ್ನು ಬೆಳೆಯಲು ಬಿಡಲಿಲ್ಲ.ಸಿನಿಮಾಗಳು ಲಭ್ಯವಾಗದ ಕಾರಣ ಒಳ್ಳೆಯ ಟ್ಯಾಲೆಂಟ್ ಇರುವ ಸುಶಾಂತ್ ನೊಂದುಕೊಂಡು ಖಿನ್ನತೆಗೆ ಒಳಗಾಗಿರಲಿಕ್ಕೂ ಸಾಕು.ತಮಗಿಂತ ಕೆಳಗಿನ ವ್ಯಕ್ತಿಯೊಬ್ಬ ತಮ್ಮ ಸಮಕ್ಕೆ ಬೆಳೆಯುತ್ತಿದ್ದಾನೆಂದರೆ ಬಾಲಿವುಡ್’ನ ಈ ಸ್ಟಾರ್’ಗಳು ಎಂದಿಗೂ ಸಹಿಸುವುದಿಲ್ಲ.ಹಾಗಾಗಿ ಇದೊಂದು ಟ್ಯಾಲೆಂಟ್’ನ ಹತ್ಯೆ.ಸುಶಾಂತ್ ಕೊಲೆಯಾಗಿರಲಿಕ್ಕೂ ಸಾಕು ಎಂಬೆಲ್ಲ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಕೇಳಿಬಂದವು.

ಪ್ರಭಾವೀ ವ್ಯಕ್ತಿಗಳು, ಹಣ ಮತ್ತು ಅಧಿಕಾರ ಬಲವುಳ್ಳವರು ತಮ್ಮ ಶಕ್ತಿಯನ್ನು ಉಪಯೋಗಿಸಿಕೊಂಡು ತಮಗೆ ಬೇಕಾದವರಿಗೆ ಸಹಾಯ ಮಾಡುವುದು ಹಾಗೂ ಇತರರನ್ನು ಬೆಳೆಯಲು ಬಿಡದೇ ದಮನಿಸುವುದು ಎಂಬುದು ನೆಪೋಟಿಸಂನ ಸ್ಥೂಲ ಅರ್ಥ.ಬಾಲಿವುಡ್’ಗೆ ಇದನ್ನು ಅನ್ವಯಿಸುವುದಾದರೆ ಇಂದಿನ ಬಹುತೇಕ ಸಣ್ಣಪುಟ್ಟ ನಟನಟಿಯರೆಲ್ಲ ದೊಡ್ಡ ಸ್ಟಾರ್ ಕಲಾವಿದರ ಮಕ್ಕಳೋ,ಸಂಬಂಧಿಕರೋ ಆಗಿದ್ದಾರೆ.ತಮ್ಮ ಅಪ್ಪ ಅಮ್ಮಂದಿರ ಹೆಸರಿನ ಮೇಲೆಯೇ ಇವರು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ.ಯಾವ ಗಾಡ್ ಫಾದರ್’ಗಳ ಬೆಂಬಲವಿಲ್ಲದ ಪ್ರತಿಭಾವಂತ ನಟನಟಿಯರು ತಮ್ಮ ಅಸ್ತಿತ್ವ ಕಂಡುಕೊಳ್ಳಲು ಸದಾ ಹೆಣಗಾಡುತ್ತಲೇ ಇರುತ್ತಾರೆ.ದೊಡ್ಡವರು ಅವರನ್ನು ತುಳಿಯುವ ಕೆಲಸವನ್ನು ಮಾಡುತ್ತಲೇ ಇರುತ್ತಾರೆ.ಇದು ಜನಸಾಮಾನ್ಯರಿಗೆ ಗೊತ್ತಿಲ್ಲದ ಸಂಗತಿಯೇನೂ ಅಲ್ಲ.ಬಹುತೇಕ ಎಲ್ಲ ಭಾಷೆಗಳ ಚಿತ್ರರಂಗದಲ್ಲೂ ಲಾಗಾಯ್ತಿನಿಂದ ನಡೆಯುತ್ತಿರುವ ವಿದ್ಯಮಾನವಿದು.ಜನರಿಗೆ ಇದು ಗೊತ್ತಿತ್ತು.ಆದರೆ ಅದಕ್ಕೆ ನೆಪೋಟಿಸಂ ಎಂದೂ ಕರೆಯಬಹುದು ಅಂತ ಗೊತ್ತಾಗಿದ್ದು ಸುಶಾಂತ್ ಸಿಂಗ್ ಪ್ರಕರಣ ಭಾರೀ ಮಟ್ಟದಲ್ಲಿ ಸುದ್ದಿಯಾದಮೇಲೆ.

ಚಿತ್ರರಂಗದ ಆಚೆಗೂ ಈ ನೆಪೋಟಿಸಂ ಅನ್ನು ನೋಡುವುದಾದರೆ ಅದು ಇವತ್ತು ನಿನ್ನೆಯದಲ್ಲ.ತುಂಬ ಹಿಂದೆ ಅಂದರೆ ಪ್ರಹ್ಲಾದ ಮಹಾರಾಜನ ಆಳ್ವಿಕೆಯ ಕಾಲಕ್ಕೆ ಹೋದರೂ ನೆಪೋಟಿಸಂನ ಉದಾಹರಣೆ ಸಿಗುತ್ತದೆ. ಶ್ರೀಹರಿಯ ಪರಮಭಕ್ತನಾಗಿ,ಶುಕ್ರಾಚಾರ್ಯರ ಮಾರ್ಗದರ್ಶನದಲ್ಲಿ ಪರಮಭಾಗವತೋತ್ತಮನಾಗಿ ಶೋಣಿತಾಪುರದಲ್ಲಿ ಅಸುರಕುಲವನ್ನು ಆಳುತ್ತಿರುತ್ತಾನೆ ಪ್ರಹ್ಲಾದ.ಆತನಿಗೆ ಇತರ ರಾಕ್ಷಸರಂತೆ ಸ್ವರ್ಗಲೋಕದ ಸಿಂಹಾಸನದ ಆಸೆ ಇರುವುದಿಲ್ಲ.ಆದರೂ ದೇವೆಂದ್ರನಿಗೆ ಒಳಗೊಳಗೇ ಭಯ ಶುರುವಾಗಿರುತ್ತದೆ.ಮೊದಲೇ ಹರಿಭಕ್ತ.ಅಸುರಕುಲಕ್ಕೆ ಅಸಹಜವಾದ ಒಳ್ಳೆಯತನವನ್ನು ಹೊಂದಿದ್ದಾನೆ.ಮುಂದೆ ಎಂದಾದರೂ ಈತ ದೇವತೆಗಳ ಪಟ್ಟಕ್ಕೇರುವ ಅರ್ಹತೆ ಗಳಿಸಿಬಿಟ್ಟರೆ ಕಷ್ಟ.ಹಾಗಾಗಿ ವೇಷಮರೆಸಿಕೊಂಡು ಬಂದು ಇಂದ್ರ, ಪ್ರಹ್ಲಾದನಿಂದ ಆತನ ಶೀಲವನ್ನು,ಸುಸಂಸ್ಕಾರವುಳ್ಳ ಒಳ್ಳೆಯ ಗುಣಗಳನ್ನು ದಾನವಾಗಿ ವಂಚನೆಯಿಂದ ಪಡೆಯುತ್ತಾನೆ.ಆ ಮೂಲಕ ದೇವತೆಗಳಿಗೆ ಸಮನಾಗುವ ಪ್ರಹ್ಲಾದನ ಪ್ರಯತ್ನ ಫಲಿಸದೇ ಹೋಗಲಿ ಎಂದು ತಂತ್ರ ಹೂಡುತ್ತಾನೆ.ಸ್ವರ್ಗದ ಅಧಿಕಾರಕ್ಕೆ ಎಂದೂ ಆಸೆಪಡುವವನಲ್ಲ ಪ್ರಹ್ಲಾದ ಎಂದು ಇಂದ್ರನಿಗೆ ಗೊತ್ತಿರುತ್ತದೆ.ಆದರೂ ಸಹ, ಎಲ್ಲ ಅರ್ಹತೆಗಳಿದ್ದೂ ಆತ ದೇವತೆಗಳಷ್ಟೇ ಒಳ್ಳೆಯಯವನಾಗಬಾರದು ಎಂದು ಇಂದ್ರ ಪ್ರಹ್ಲಾದನನ್ನು ಯುಕ್ತಿಯಿಂದ ದಮನಿಸಲು ಮುಂದಾಗುತ್ತಾನೆ.ದೇವಗುಣಗಳನ್ನು ಹೊಂದುವ ಅರ್ಹತೆಯಿದ್ದ ಪ್ರಹ್ಲಾದನ ಬೆಳೆವಣಿಗೆಯನ್ನು ಸಹಿಸದೇ ಇರುವ ಇಂದ್ರನ ಗುಣ ನೆಪೋಟಿಸಂ ಅಲ್ಲದೆ ಇನ್ನೇನು? ರಾಮಾಯಣದ ಕಾಲಕ್ಕೆ ಬಂದರೆ ಪ್ರಜಾರಂಜಕನಾಗಿ ಮೆರಯಬೇಕಾದ ಶ್ರೀರಾಮನ ಪಟ್ಟಾಭಿಷೇಕದ ಸಮಯದಲ್ಲಿ ಕೈಕೆ ತನ್ನ ಮಗನಾದ ಭರತನಿಗೆ ಅಯೋಧ್ಯೆಯ ಸಿಂಹಾಸನ ಲಭ್ಯವಾಗಬೇಕು,ರಾಮ ಕಾಡಿಗೆ ಹೋಗಬೇಕು ಅಂತ ದಶರಥನಲ್ಲಿ ಪಟ್ಟು ಹಿಡಿಯುತ್ತಾಳೆ.ಸಾಕೇತದ ಜನರ ಪ್ರೀತಿಯಿರುವುದು ಶ್ರೀರಾಮನ ಮೇಲೆ,ಭರತನಿಗೆ ಸಿಂಹಾಸನವನ್ನಾಳುವ ಸಾಮರ್ಥ್ಯವಿಲ್ಲ ಎಂದು ಕೈಕೆಗೆ ಗೊತ್ತಿದ್ದರೂ ಮಂಥರೆಯ ದುರ್ಬೋಧನೆಯಿಂದ ರಾಮ ಕಾಡಿಗೆ ಹೋಗುವಂತೆ ಮಾಡುತ್ತಾಳೆ.ಭರತ ಪಟ್ಟಕ್ಕೇರಿದರೂ ಅಯೋಧ್ಯೆ ಅರಾಜಕವಾಗುತ್ತದೆ.ಇದಕ್ಕೆ ಕೈಕೆ ಕಾರಣಳಾಗುತ್ತಾಳೆ.ಅರ್ಹನಾದವನನ್ನು ದಮನಿಸುವ,ಅನರ್ಹನಾದವನ ಬೆಳವಣಿಗೆಗೆ ಸಹಕರಿಸುವ ಕೈಕೆಯದ್ದು ನೆಪೋಟಿಸಂ ಅಲ್ಲವೇ?

ಕಂಗನಾ ರಣಾವತ್ ನೆಪೋಟಿಸಂ ಬಗ್ಗೆ ಹೇಳುತ್ತಿದ್ದಂತೆಯೇ ರಿಪಬ್ಲಿಕ್ ಟಿವಿ ಸುದ್ದಿವಾಹಿನಿಯ ಅರ್ನಬ್ ಗೋಸ್ವಾಮಿ ಮೈಮೇಲೆ ಆವೇಶ ಬಂದವರಂತೆ ವರ್ತಿಸತೊಡಗಿದರು.ಸುಶಾಂತ್ ಸಿಂಗ್ ರಜಪೂತ್ ಕೊಲೆಯಾಗಿದ್ದಾರೆ.ಇದರಲ್ಲಿ ಬಾಲಿವುಡ್’ನ ದೊಡ್ಡ ದೊಡ್ಡ ಜನರ ಕೈವಾಡವಿದೆ.ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ದಿನವಿಡೀ ತಮ್ಮ ಚಾನೆಲ್’ನಲ್ಲಿ ಕಿರುಚಲಾರಂಭಿಸಿದರು.ಸುಶಾಂತ್ ಅವರ ಬ್ಯಾಂಕ್ ಖಾತೆಯ ವಿವರಗಳು,ಅವರ ಆಪ್ತಸ್ನೇಹಿತರ ಬಗ್ಗೆ ಮಾಹಿತಿ,ಗೆಳತಿ ರಿಯಾ ಚಕ್ರವರ್ತಿಯ ಬಗ್ಗೆ ಆಘಾತಕಾರೀ ಮಾಹಿತಿಗಳನ್ನೆಲ್ಲ ಹೊರಹಾಕಿದರು.ಇನ್ವೆಸ್ಟಿಗೇಟಿವ್ ಜರ್ನಲಿಸಂ ಅರ್ಥಾತ್ ತನಿಖಾ ಪತ್ರಿಕೋದ್ಯಮದ ಹೆಸರಲ್ಲಿ ಸಂಪೂರ್ಣವಾಗಿ ಸುಶಾಂತ್ ಸಿಂಗ್ ಕೇಸ್ ಹಿಂದೆ ಬಿದ್ದಿತು ರಿಪಬ್ಲಿಕ್ ಟಿವಿ.ಮೊನ್ನೆ ಮೊನ್ನೆಯಷ್ಟೇ ರಿಪಬ್ಲಿಕ್ ಟಿವಿಗೆ ರಾಜೀನಾಮೆ ನೀಡಿ ಹೊರಬಂದ ಪತ್ರಕರ್ತೆಯೊಬ್ಬರು ,ಇನ್ವೆಸ್ಟಿಗೇಟಿವ್ ಜರ್ನಲಿಸಂ ಹೆಸರಲ್ಲಿ ರಿಪಬ್ಲಿಕ್ ಟಿವಿ ಹೇಗೆ ಪತ್ರಿಕಾಧರ್ಮದ ನಿಯಮಗಳನ್ನೆಲ್ಲ ಮೀರಿ ಅಸಹ್ಯವಾಗಿ ವರ್ತಿಸಿತು,ತಮಗೆ ಬೇಕಾದ ಮಾಹಿತಿಗಳನ್ನು ಪಡೆಯಲು ಒಂದಷ್ಟು ಜನರ ಮೇಲೆ ಯಾವ ರೀತಿ ಒತ್ತಡ ಹಾಕಲಾಯಿತು,ಪಡೆದ ಮಾಹಿತಿಗಳನ್ನು ತಮ್ಮ ಸಿದ್ಧಾಂತಕ್ಕೆ ಬೇಕಾದ ಹಾಗೆ ರಿಪಬ್ಲಿಕ್ ಟಿವಿಯ ಸಂಪಾದಕೀಯ ಮಂಡಳಿ ತಿರುಚಿ ಪ್ರಸಾರ ಮಾಡಿತು ಎಂಬುದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.ಬಹುಕಾಲದಿಂದ ಅರ್ನಬ್ ಗೋಸ್ವಾಮಿಯವರನ್ನು ಗಮನಿಸುತ್ತಾ ಬಂದ ಒಂದಷ್ಟು ವೀಕ್ಷಕರಿಗೆ ತನಿಖಾ ಪತ್ರಿಕೋದ್ಯಮದ ಹೆಸರಲ್ಲಿ ರಿಪಬ್ಲಿಕ್ ಟಿವಿ ಮತ್ತು ಅರ್ನಬ್ ಅಗತ್ಯಕ್ಕಿಂತ ಹೆಚ್ಚು ಒರಟಾದರೇನೋ ಅಂತ ಅನ್ನಿಸಿದ್ದೂ ಸುಳ್ಳಲ್ಲ.

ಮಾಧ್ಯಮ ಲೋಕದಲ್ಲಿ ಈ ಇನ್ವೆಸ್ಟಿಗೇಟಿವ್ ಜರ್ನಲಿಸಂಗೆ ಬಹಳ ದೀರ್ಘ ಇತಿಹಾಸವಿದೆ.ಭೋಪೋರ್ಸ್,ತೆಹೆಲ್ಕಾ ಹಗರಣಗಳು,ನೀರಾ ರಾಡಿಯಾ ಟೇಪ್ ಮುಂತಾದ ದೊಡ್ಡ ದೊಡ್ಡ ಪ್ರಕರಣಗಳನ್ನು ಹೊರಗೆಳೆಯುವಲ್ಲಿ ತನಿಖಾ ಪತ್ರಿಕೋದ್ಯಮ ಮಹತ್ವದ ಪಾತ್ರ ವಹಿಸಿತ್ತು.ಕನ್ನಡದ ಪತ್ರಿಕೆ,ನ್ಯೂಸ್ ಚಾನೆಲ್’ಗಳೂ ಇದಕ್ಕೆ ಹೊರತಲ್ಲ.ಬಿಡದಿಯ ನಿತ್ಯಾನಂದ ಸ್ವಾಮಿಯ ಆಶ್ರಮದಲ್ಲಿ ನಡೆಯುತ್ತಿದ್ದ ಅನಾಚಾರಗಳನ್ನು ವಿಶೇಷ ವರದಿ,ತನಿಖೆ,ಸ್ಟಿಂಗ್ ಆಪರೇಷನ್’ಗಳ ಮೂಲಕ ಸುವರ್ಣ ನ್ಯೂಸ್ ಬಯಲು ಮಾಡಿತ್ತು.ತನಿಖೆ ಸರ್ಕಾರದ ಮಟ್ಟದಲ್ಲಿ ಮುಂದುವರೆದು ನಿತ್ಯಾನಂದ ಸ್ವಾಮಿ ಜೈಲಿಗೆ ಹೋಗಿದ್ದರು.ತನಿಖಾ ಪತ್ರಿಕೋದ್ಯಮ ಒಳ್ಳೆಯದೇ.ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಎಂದು ಕರೆಯಲ್ಪಡುವ ಮಾಧ್ಯಮಗಳು ಜನರಿಗೆ,ಸಮಾಜಕ್ಕೆ ಅನ್ಯಾಯವಾದಾಗ ಅದನ್ನು ಹೊರಗೆಳೆದು ಪೋಲೀಸರಿಗೆ ಮಾಹಿತಿ ನೀಡುವಲ್ಲಿ,ತನಿಖೆ ಸರಿಯಾದ ಹಾದಿಯಲ್ಲಿ ಸಾಗದೇ ಇದ್ದರೆ ವಿಶೇಷ ವರದಿಗಳ ಮೂಲಕ ಸರ್ಕಾರವನ್ನು ಎಚ್ಚರಿಸಲು ಇನ್ವೆಸ್ಟಿಗೇಟಿವ್ ಜರ್ನಲಿಸಂ ತುಂಬಾ ಅಗತ್ಯ.ಆದರೆ ತನಿಖೆಯೇ ಪತ್ರಿಕೋದ್ಯಮವಾಗಬಾರದಲ್ಲ.ಸುಶಾಂತ್ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿಗೆ ತನಿಖೆಯೇ ಪತ್ರಿಕೋದ್ಯಮವಾಯಿತು.ತಮ್ಮ ಸ್ಟಿಂಗ್ ಆಪರೇಷನ್’ಗಳ ಮುಂದೆ ಕೋವಿಡ್ ಬಗ್ಗೆ,ಭಾರತ-ಚೀನಾ ಗಲಾಟೆಯ ಬಗ್ಗೆ ಸುದ್ದಿಗಳು ಪ್ರಸಾರವಾಗಲೇ ಇಲ್ಲ.ಹತ್ತಿರ ಹತ್ತಿರ ಎರಡು ತಿಂಗಳು ಬರೀ ರಿಯಾ ಚಕ್ರವರ್ತಿ ಹಾಗೂ ಇತರ ಆಪಾದಿತರ ಬಗೆಗಿನ ಸುದ್ದಿಯೇ ಪ್ರಸಾರವಾಯಿತು ರಿಪಬ್ಲಿಕ್ ಟಿವಿಯಲ್ಲಿ.ಇದೇ ಪ್ರಕರಣವನ್ನು ನೆಪವಾಗಿಸಿಕೊಂಡು ಮುಂಬೈ ಪೋಲೀಸರ ಮೇಲೆ ಶಿವಸೇನಾ ಸರ್ಕಾರದ ಮೇಲೆ ತಮಗಿದ್ದ ಹಳೆಯ ಸಿಟ್ಟನ್ನೆಲ್ಲ ತೀರಿಸಿಕೊಂಡರು ಅರ್ನಬ್. ಎಂದಿನಂತೆ ಮಿತಿಮೀರಿದ ಕಿರುಚಾಟ,ತಮ್ಮ ಪ್ರತಿಸ್ಪರ್ಧಿ ಚಾನೆಲ್ ಮತ್ತು ಪತ್ರಕರ್ತರಿಗೆ ಟಾಂಟ್ ಕೊಡುವುದು,ತಮ್ಮ ತನಿಖೆಗೆ ಪೂರಕವಾಗಿ ಮಾತನಾಡುವವರ ಮಾತನ್ನಷ್ಟೇ ಆಲಿಸುವುದು,ಉಳಿದವರ ಪ್ರತಿಕ್ರಿಯೆಗೆ ಬೆಲೆಕೊಡದಿರುವುದು,ಇನ್ನೂ ಮುಂದುವರೆದು ಶಿವಸೇನೆಯ ಸಚಿವರ ಮೇಲೆ ಲೈವ್ ಚರ್ಚೆಯಲ್ಲಿ ಏಕವಚನ ಪ್ರಯೋಗವನ್ನೂ ಮಾಡಿದರು ಅರ್ನಬ್ ಗೋಸ್ವಾಮಿ.

ಸತ್ತ ಸುಶಾಂತ್ ಬಾಲಿವುಡ್ ನಟ.ಆಪಾದಿತರ ಪಟ್ಟಿಯಲ್ಲಿರುವವರೆಲ್ಲ ಪ್ರಭಾವಿ ವ್ಯಕ್ತಿಗಳು. ಹಾಗಾಗಿ ತನಿಖಾ ಪತ್ರಿಕೋದ್ಯಮ ನಡೆಸಲಾಯಿತು.ಯಾರೋ ಒಬ್ಬ ಸಾಮಾನ್ಯ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರೆ,ಅಥವಾ ಯಾವುದೋ ಕಾರಣದಿಂದ ಹತ್ಯೆಯಾಗಿದ್ದರೆ ನ್ಯೂಸ್ ಚಾನೆಲ್’ಗಳು ಇನ್ವೆಸ್ಟಿಗೇಟಿವ್ ಜರ್ನಲಿಸಂ ಹೆಸರಲ್ಲಿ ಇದೇ ಉತ್ಸಾಹವನ್ನು ತೋರಿಸುತ್ತಿದ್ದವೇ ಎನ್ನುವುದನ್ನು ನಾವು ಆಲೋಚಿಸಬೇಕು.ಲಾಕ್ ಡೌನ್ ಸಮಯದಲ್ಲಿ ಗುಜರಾತ್’ಗೆ ಕಾರಿನಲ್ಲಿ ತೆರಳುತ್ತಿದ್ದ ಹಿಂದೂ ಸಾಧುಗಳನ್ನು ಕಳ್ಳರೆಂದು ತಪ್ಪಾಗಿ ಭಾವಿಸಿ ಮಹಾರಾಷ್ಟ್ರದ ಪಾಲ್ಗಾರ್’ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಯಿತು.ತನಿಖೆ ಎತ್ತ ಸಾಗಿದೆ ಎಂದು ಯಾರಿಗೂ ಗೊತ್ತಿಲ್ಲ.ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಯಾವ ಸುದ್ದಿವಾಹಿನಿಯೂ ಆಗ್ರಹಿಸಲಿಲ್ಲ.ಸುಶಾಂತ್ ಸಿಂಗ್ ಪ್ರಕರಣದಲ್ಲಿ ಮಾಡಲಾದ ಇನ್ವೆಸ್ಟಿಗೇಟಿವ್ ಜರ್ನಲಿಸಂ ಅನ್ನು ಇಲ್ಲೇಕೆ ಮಾಡಲಾಗಲಿಲ್ಲ?

ಜನರಿಗೆ ಸುದ್ದಿ ಮಾಡಲಿಕ್ಕೆ ಏನಾದರೂ ಒಂದು ಗಾಸಿಪ್ ಬೇಕು ಅಷ್ಟೇ.ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡಿಂಗ್ ಮಾಡಲು,ಸಿದ್ಧಾಂತದ ಹೆಸರಲ್ಲಿ ಚರ್ಚೆಮಾಡಿ ಕೆಸರೆರಚಾಟ ಮಾಡಲು ಏನಾದರೂ ಸಿಗುತ್ತಿರಲೇಬೇಕು.ಇಲ್ಲದಿದ್ದರೆ ಬೋರ್ ಆಗುತ್ತಾರೆ ಜನರು.ಸುಶಾಂತ್ ಪ್ರಕರಣ,ನೆಪೋಟಿಸಂ ಸುದ್ದಿಯಾಗಿದ್ದೇ ತಡ ಒಂದಷ್ಟು ಜನರು ಯೂಟ್ಯೂಬ್’ನಲ್ಲಿ ಸಾಲುಸಾಲಾಗಿ ವೀಡೀಯೋ ಮಾಡಿ ಬಿಡತೊಡಗಿದರು.ಅವುಗಳನ್ನು ಎಷ್ಟು ಜನ ನೋಡಿದ್ದಾರೆ ಎಂಬ ಆಧಾರದಲ್ಲಿ ಒಂದಷ್ಟು ಹಣ ಸಂಪಾದನೆ ಮಾಡತೊಡಗಿದರು.ಸುಶಾಂತ್ ಸಿಂಗ್’ಗೆ ನ್ಯಾಯ ಸಿಗದಿದ್ದರೂ ಅಡ್ಡಿಯಿಲ್ಲ ಈ ಟ್ರೆಂಡಿಂಗ್ ವಿಷಯವನ್ನು ಹಿಡಿದುಕೊಂಡು ತಾವೊಂದಿಷ್ಟು ಪ್ರಸಿದ್ಧರಾಗಬೇಕು,ಹಣ ಮಾಡಬೇಕು ಎಂಬುದು ಇವರ ವೀಡೀಯೋಗಳನ್ನು ನೋಡಿದರೆ ನಮಗೆ ಸುಲಭವಾಗಿ ಗೊತ್ತಾಗುತ್ತದೆ.ಕೋವಿಡ್ ಕಾರಣದಿಂದ ಶೂಟಿಂಗ್ ಇಲ್ಲದೇ ಖಾಲಿ ಬಿದ್ದಿರುವ ಒಂದಷ್ಟು ನಟ ನಟಿಯರು ಯೂಟ್ಯೂಬ್ ಚಾನೆಲ್ ತೆರೆದು ಅದರಲ್ಲಿ ನ್ಯೂಸ್ ಚಾನೆಲ್’ಗಳು ಇನ್ವೆಸ್ಟಿಗೇಟಿವ್ ಜರ್ನಲಿಸಂ ಮೂಲಕ ಹೊರಹಾಕಿದ ವಿವರಗಳನ್ನೇ ಆಧಾರವಾಗಿಟ್ಟುಕೊಂಡು ತಮಗೆ ತೋಚಿದಂತೆ ಮಾತಾಡತೊಡಗಿದರು.ಆ ಕಾಲದಲ್ಲಿ ಅವರಿಗೆ ಹಾಗಾಗಿತ್ತು.ಇಂಥವರ ಇತಿಹಾಸ ಹೀಗೆ,ಅವರು ಇವರನ್ನು ಮೇಲೆ ಬರಲು ಬಿಡದೆ ತುಳಿದರು ಎಂದೆಲ್ಲಾ ಹೇಳಿದರು.ಇವರೆಲ್ಲರ ಉದ್ದೇಶ ಪ್ರಾಮಾಣಿಕವಾಗಿದ್ದರೆ ಅಂಥ ರಹಸ್ಯಗಳನ್ನು ಇಷ್ಟು ದಿನ ಹೇಳದೇ ಸುಮ್ಮನ್ನೆ ಇದ್ದದ್ದೇಕ್ಕೇ?ಈಗ ಸುಶಾಂತ್ ಸಾವಿಗೆ ನೆಪೋಟಿಸಂ ಕಾರಣ ಎಂದು ಗೊತ್ತಾದಾಗಷ್ಟೇ ಇವರು ಬಾಯಿಬಿಡಲು ಆರಂಭಿಸಿದ್ದೇಕೆ? ಹಿಂದೆಲ್ಲ ಅದರ ವಿರುದ್ಧ ಮಾತಾನಾಡದ ಇವರೂ ನೆಪೋಟಿಸಂನ ಭಾಗವೇ ತಾನೆ?

ನಾನು ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡುತ್ತಿರುವ ಮುಂಬೈನ Sion ಆಸ್ಪತ್ರೆಗೆ ಸೆಪ್ಟೆಂಬರ್ ಎಂಟನೇ ತಾರೀಖಿಗೆ ಪೋಲೀಸರು ನಟಿ ರಿಯಾ ಚಕ್ರವರ್ತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕರೆತಂದಿದ್ದರು.ಆ ಸಮಯದಲ್ಲಿ ಆಸ್ಪತ್ರೆಯ ಆವರಣದಲ್ಲಿ ಸಾವಿರಾರು ಜನ ಜಮಾಯಿಸಿಬಿಟ್ಟಿದ್ದರು.ಸುಮ್ಮನೇ ರಿಯಾ ಚಕ್ರವರ್ತಿಯನ್ನು ನೋಡುವ ಕುತೂಹಲ.ಇದರಿಂದಾಗಿ ರೋಗಿಗಳಿಗೆ,ಕರ್ತ್ಯವ್ಯನಿರತ ವೈದ್ಯರಿಗೆ ತೊಂದರೆಯಾಗುತ್ತದೆ ಅಂತ ಗೊತ್ತಿದ್ದೂ ಜನ ಗುಂಪಾಗಿ ಸೇರಿದ್ದರು.ಯಾವುದೋ ಮಹತ್ತರವಾದ ಸಾಧನೆ ಮಾಡಿ ಹೆಸರು ಮಾಡಿದ ವ್ಯಕ್ತಿಯೊಬ್ಬನನ್ನು ನೋಡುವಂತೆ ಡಗ್ಸ್ ಡೀಲಿಂಗ್ ಮತ್ತು ಸುಶಾಂತ್ ಪ್ರಕರಣದ ಆಪಾದಿತೆ ರಿಯಾ ಚಕ್ರವರ್ತಿಯ ದರ್ಶನಕ್ಕಾಗಿ ಮುಗಿಬಿದ್ದಿದ್ದರು ಜನ.ಬಾಲಿವುಡ್ ಸೆಲೆಬ್ರೆಟಿ ಅಂದರೆ ಮುಗಿಯಿತು.ಅವರು ಆರೋಪಿಗಳಾದರೂ ಜನ ಅವರನ್ನು ಫಾಲೋ ಮಾಡುವುದನ್ನು ಬಿಡುವುದಿಲ್ಲ.ಜನ ಮರುಳೋ ಜಾತ್ರೆ ಮರುಳೋ ಅಂತ ಹೇಳುವುದು ಇದನ್ನೇ.

ನೆಪೋಟಿಸಂ ಬಹಳ ಚರ್ಚೆಯಾಗಿ ದೊಡ್ಡ ದೊಡ್ಡ ಕಲಾವಿದರ ಹೆಸರೆಲ್ಲ ಹೊರಗೆ ಬಂದ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಜನ ರೊಚ್ಚಿಗೆದ್ದುಬಿಟ್ಟರು.ಇನ್ನು ಮುಂದೆ ಅವರ ಚಿತ್ರಗಳನ್ನು ನೋಡುವುದಿಲ್ಲ,ಅವರನ್ನು ಬಹಿಷ್ಕರಿಸುತ್ತೇವೆ ಎಂದೆಲ್ಲ ಅಬ್ಬರಿಸತೊಡಗಿದರು.ಅಸಹ್ಯವಾಗಿ ಫೋಟೋಶಾಪ್ ಮಾಡಿದ ಚಿತ್ರಗಳನ್ನೆಲ್ಲ ಫೇಸ್ಬುಕ್,ಟ್ವಿಟ್ಟರ್,ಇನ್ಸ್ಟಾಗ್ರಾಮ್’ಗಳಲ್ಲಿ ಶೇರ್ ಮಾಡಿ ವಿಕೃತಿ ಮೆರೆದರು.Public memory is short ಎಂಬ ಮಾತಿದೆ.ನೆಪೋಟಿಸಂನ ಭಾಗವಾಗಿರುವ ನಟನಟಿಯರ ಸಿನಿಮಾಗಳನ್ನು ಬಹಿಷ್ಕರಿಸುತ್ತೇವೆ ಎಂದ ಜನರೇ ಮುಂದೆ ಚಿತ್ರ ಬಿಡುಗಡೆಯಾದಾಗ ಪೈರಸಿ ಕಾಪಿಗಳನ್ನು ಡೌನ್ಲೋಡ್ ಮಾಡಿಕೊಂಡಾದರೂ ಸಿನಿಮಾ ನೋಡುತ್ತಾರೆ.ಕೇಳಿದರೆ, ಅದು ಎಷ್ಟು ಕೆಟ್ಟದಾಗಿದೆ ಅಂತ ನಿರ್ಧರಿಸಲು ಸಿನಿಮಾ ನೋಡಿದೆವು ಎನ್ನುವ ಜನರೂ ಇದ್ದಾರೆ.ನೆಪೋಟಿಸಂ ಬೆಂಬಲಿಸುತ್ತಾಳೆ ಎಂದು ಜನರಿಂದ ಸೋಷಿಯಲ್ ಮೀಡಿಯಾಗಳಲ್ಲಿ ಬೈಸಿಕೊಳ್ಳುತ್ತಿದ್ದ ಪ್ರಸಿದ್ಧ ಬಾಲಿವುಡ್ ನಟಿಯೊಬ್ಬಳು ಕೊರೋನಾ ವಿರುದ್ಧ ಹೋರಾಡುತ್ತಿರುವ ಮುಂಬೈನ ಕೋವಿಡ್ ವಾರಿಯರ್ಸ್’ಗಳಿಗೆ ತನ್ನ ಹೆಸರಿರುವ ಟೀಶರ್ಟ್ ಅನ್ನು ಉಡುಗೊರೆಯಾಗಿ ಕೊಟ್ಟಳು.ನೆಪೋಟಿಸಂ ಅನ್ನು ವಿರೋಧಿಸಿ ಬೈಯುತ್ತಿದ್ದವರೇ ಆ ಟೀಶರ್ಟ್ ಧರಿಸಿ “ಥಾಂಕ್ಯೂ ಮೇಡಂ” ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಸ್ಟೇಟಸ್ ಹಾಕಿದರು.ಇದು ಜನರ ಇಬ್ಬಂದಿತನವಲ್ಲವೇ?

ನೆಪೋಟಿಸಂ ಮೊದಲೂ ಇತ್ತು.ಈಗಲೂ ಇದೆ.ಮುಂದೆಯೂ ಇರುತ್ತದೆ.ಇದು ನಮಗೆ ಗೊತ್ತಿದೆ.ಆದರೂ ಎಲ್ಲರ ಜೊತೆಗೆ ನಮ್ಮದೂ ಒಂದಷ್ಟು ಇರಲಿ ಅಂತ ಅದರ ಬಗ್ಗೆ ಆಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ನಾವೂ ಸುದ್ದಿಯಲ್ಲಿರಲು ಬಯಸುತ್ತೇವೆ.ತನಿಖಾ ಪತ್ರಿಕೋದ್ಯಮವನ್ನು ಪ್ರಭಾವಿ ವ್ಯಕ್ತಿಗಳು,ರಾಜಕಾರಣಿಗಳು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಲೂ ಇರುತ್ತಾರೆ.ಒಂದಷ್ಟು ಜನ ಇನ್ವೆಸ್ಟಿಗೇಟಿವ್ ಜರ್ನಲಿಸಂ ಹಾದಿತಪ್ಪುತ್ತಿರುವ ಬಗ್ಗೆ ಎಚ್ಚರಿಸುವ ಕೆಲಸ ಮಾಡಿದರೂ ಬಹಳಷ್ಟು ಜನರು ಆ ಏಕಪಕ್ಷೀಯವಾದ ಮಾಹಿತಿಗಳನ್ನೇ ತಮಗೆ ಬೇಕಾದ ಹಾಗೆ ತಿರುಚಿ ಲಾಭ ಮತ್ತು ಪ್ರಚಾರ ಪಡೆಯುತ್ತಿದ್ದಾರೆ.ಎಷ್ಟೇ ತನಿಖಾ ಪತ್ರಿಕೋದ್ಯಮ ಮಾಡಿದರೂ ಕೊನೆಗೆ ಆರೋಪ ಸಾಬೀತಾಗಿ ಅಪರಾಧಿಗೆ ಶಿಕ್ಷೆ ಘೋಷಣೆಯಾಗಬೇಕಾದ್ದು ನ್ಯಾಯಾಲಯದಲ್ಲೇ ಅಲ್ಲವೇ?

ನಾವೂ ಕೂಡ ದಿನನಿತ್ಯದ ಬದುಕಿನಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನೆಪೋಟಿಸಂನ ಭಾಗವಾಗಿರುತ್ತೇವೆ.ಹಾಗಾಗಿ ಅದನ್ನು ದೊಡ್ಡ ಸುದ್ದಿಯಾಗಿಸಿ ಟ್ರೆಂಡ್ ಮಾಡುವುದರಲ್ಲಿ ಹೆಚ್ಚು ಅರ್ಥವಿಲ್ಲ.ಸುಶಾಂತ್ ಸಿಂಗ್ ಸಾವಿಗೆ ನ್ಯಾಯ ದೊರೆತು ಅಪರಾಧಿಗಳಿಗೆ ಶಿಕ್ಷೆಯಾಗಲಿ.ಸೆಲೆಬ್ರೆಟಿಗಳ ಮಾದಕ ದ್ರವ್ಯಗಳ ಹುಚ್ಚಿಗೆ ಅಮಾಯಕ ಜೀವಗಳು ಬಲಿಯಾಗದಿರಲಿ ಎಂಬುದೇ ನಮ್ಮ ಸದಾಶಯವಾಗಬೇಕು.