ಮನುಷ್ಯ ಸ್ವಭಾವವೇ ಹಾಗೆ. ತಾನು ಹುಟ್ಟಿದ ಊರು,ಬೆಳೆದ ಪರಿಸರದ ಮೇಲೆ ಅವನಿಗೆ ತಿಳಿಯದಂತೆ ಒಂದು ವಿಶೇಷ ಆಕರ್ಷಣೆಯನ್ನು ಬೆಳೆಸಿಕೊಳ್ಳುತ್ತಾನೆ. ಮಾನವಯುಕ್ತವಾದ ಸಹಜಗುಣಗಳೊಂದಿಗೆ ಆ ಪರಿಸರದ ಸಂಸ್ಕಾರವೂ ಬೆರೆತು ಒಂದು ವ್ಯಕ್ತಿತ್ವವಾಗಿ ರೂಪುಗೊಳ್ಳುತ್ತಾನೆ.ಅರಿಯದ ಶೈಶವದಿಂದ ಮಾಗಿದ ವಾನಪ್ರಸ್ಥದವರೆಗಿನ ಮನುಷ್ಯನ ಗಮ್ಯದಲ್ಲಿ ಆತ ಬದುಕುವ ಪರಿಸರ ಮುಖ್ಯ ಪಾತ್ರವನ್ನು ವಹಿಸುತ್ತದೆ.ಅದಕ್ಕೇ ಇರಬೇಕು, ಇದು ತನ್ನದಲ್ಲ ಎಂದು ಹೇಳುವ ಅಲೌಕಿಕ ಜ್ಞಾನ ಒಳಗೆ ಪ್ರಕಾಶಿಸುತ್ತಿದ್ದರೂ ಹೊರಗಿನ ಲೌಕಿಕ ಬದುಕಿನಲ್ಲಿ ಇದು ನನ್ನದು ಎಂದು ಹೇಳುತ್ತ ಮನುಷ್ಯ ತನ್ನ ನೆಲವನ್ನು ಪ್ರೀತಿಸುತ್ತಾನೆ.ಆ ನೆಲವಿಲ್ಲದೆ ತನ್ನ ಬದುಕಿಲ್ಲ,ಆ ಪರಿಸರವೇ ತನ್ನ ಸರ್ವಸ್ವ ಎಂದುಕೊಳ್ಳುತ್ತಾನೆ.ಹಾಗೆ ಲಾಗಾಯ್ತಿನಿಂದಲೂ ಬದುಕಿ ಬಾಳಿದ ನೆಲವನ್ನು ಕಳೆದುಕೊಳ್ಳಬೇಕಾಗಿ ಬಂದರೆ,ತೊರೆದು ಹೋಗಬೇಕಾಗಿ ಬಂದರೆ ತನ್ನ ಆತ್ಮವೇ ನಾಶವಾದಂತಾಗುತ್ತದೆ.ಇನ್ನು ತನ್ನ ಬದುಕಿಗೆ ಅರ್ಥವಿಲ್ಲವೆಂದುಕೊಂಡು ಕಳೆದುಕೊಂಡ ನೆಲದ ಕನವರಿಕೆಯಲ್ಲಿ ದಿನವೂ ಸತ್ತು ಹುಟ್ಟುತ್ತಿರುತ್ತಾನೆ.ನೈಸರ್ಗಿಕ ವಿಕೋಪದಿಂದಾಗಿ,ಯುದ್ಧಗಳಿಂದ,ಇನ್ನೊಬ್ಬರ ಮೋಸ ದಬ್ಬಾಳಿಕೆಗಳಿಂದ,ರಾಷ್ಟ್ರಹಿತಕ್ಕಾಗಿ ಆಗಬೇಕಾದ ಮಹತ್ವದ ಕಾರ್ಯಯೊಂದಕ್ಕಾಗಿ ಇನ್ನೂ ಮುಂತಾದ ಕಾರಣಗಳಿಗಾಗಿ ತಮ್ಮ ನೆಲವನ್ನು ಕಳೆದುಕೊಳ್ಳುವ ಎಲ್ಲ ಜನರದ್ದೂ ಹೆಚ್ಚು ಕಡಿಮೆ ಇದೇ ಮನಸ್ಥಿತಿಯಾಗಿರುತ್ತದೆ.

ಅಭಿವೃದ್ಧಿ ಕಾರ್ಯಗಳಿಗಾಗಿ,ವಿದ್ಯುತ್ ಉತ್ಪಾದನೆಗಾಗಿ ಅಣೆಕಟ್ಟುಗಳನ್ನು ನಿರ್ಮಿಸಿದ ಕಾರಣದಿಂದ ಮುಳುಗಡೆಯಿಂದಾಗಿ ತಮ್ಮ ನೆಲ ಕಳೆದುಕೊಂಡವರದ್ದೂ ಇದೇ ಭಾವ.ತಾವು ಹುಟ್ಟಿದ ಊರು,ಬಾಲ್ಯದಲ್ಲಿ ನಲಿದ ಸ್ಥಳಗಳು,ಉತ್ತು ಬೆಳಿಸಿದ ಗದ್ದೆ ತೋಟಗಳು,ಬೆವರನ್ನಷ್ಟೇ ಅಲ್ಲದೆ ರಕ್ತವನ್ನೇ ಬಸಿದು ಕಷ್ಟದಿಂದ ಕಟ್ಟಿದ ಮನೆ,ಆರಾಧಿಸುತ್ತಿದ್ದ ದೈವೀನೆಲೆಯ ಪ್ರದೇಶಗಳು ಎಲ್ಲವೂ ಜಲಸಮಾಧಿಯಾದರೆ ಅವರ ಪರಿಸ್ಥಿತಿ ಹೇಗಾಗಬಹುದೆಂದು ಊಹಿಸಿದರೇ ಸಂಕಟವಾಗುತ್ತದೆ.ಮುಳುಗಡೆಯ ಬಗ್ಗೆ ಕನ್ನಡದಲ್ಲಿ ಕೆಲವು ಪುಸ್ತಕಗಳು ಬಂದಿವೆ. ನಾ.ಡಿಸೋಜ ಅವರು ಮುಳುಗಡೆಯ ಕಥನಗಳ ಬಗ್ಗೆಯೇ ಪ್ರಸಿದ್ಧ ಕಥೆ,ಕಾದಂಬರಿಗಳನ್ನು ಬರೆದಿದ್ದಾರೆ.ಅದರ ಪಾಲಿಗೆ ಇನ್ನೊಂದು ಸೇರ್ಪಡೆ ‘ಪುನರ್ವಸು’ ಕಾದಂಬರಿ.ಜೋಗ ಜಲಪಾತದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಯಿಂದಾಗಿ ಊರು ಮುಳುಗಡೆಯಾಗಿ ಬದುಕನ್ನೂ ಮುಳುಗಿಸಿಕೊಂಡ ಹತಭಾಗ್ಯರ ಕಥನ ‘ಪುನರ್ವಸು’.ಕರ್ನಾಟಕ ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದು ನಿವೃತರಾಗಿರುವ ಡಾ.ಗಜಾನನ ಶರ್ಮ ಅವರ ಕಾದಂಬರಿಯಿದು.ನನ್ನಪ್ಪನ ಮೂಲ ಊರು ಜೋಗದ ಹತ್ತಿರದ ಹಳ್ಳಿಯಾಗಿದ್ದರಿಂದ ಲಿಂಗನಮಕ್ಕಿ ಡ್ಯಾಮ್’ನಿಂದಾಗಿ ಶರಾವತಿ ಮುಳುಗಡೆಯ ಕಥೆಯನ್ನು ಅಷ್ಟಿಷ್ಟು ಕೇಳಿ ತಿಳಿದಿದ್ದೆ.ನನ್ನ ಪೂರ್ವಜರ ಬದುಕಿನ ಕಥೆಯೂ ಇದರಲ್ಲಿ ಇರಬಹುದೇನೋ ಎಂಬ ಸಹಜ ಕುತೂಹಲದಿಂದ ಓದಲು ಎತ್ತಿಕೊಂಡಿದ್ದೆ.

ಕಾದಂಬರಿಯಲ್ಲಿರುವುದು ಸ್ವಾತಂತ್ರ್ಯಪೂರ್ವದ ಕಥೆ.ದತ್ತಪ್ಪ ಹೆಗಡೆಯವರ ‘ಭಾರಂಗಿ ಮನೆ’ ಕಾದಂಬರಿಯ ಮೂಲವಸ್ತು.ಹೆಗಡೆಯವರು ತಮ್ಮ ವಿಧವೆ ಅಕ್ಕ ತುಂಗಕ್ಕಯ್ಯ ಅವಳ ಮಾತು ಬಾರದ, ಕಿವಿ ಕೇಳದ ಮಗಳು ಶರಾವತಿ ಮತ್ತು ತಮ್ಮ ಮಗ ಗಣೇಶ ಹೆಗಡೆಯ ಸಂಸಾರದೊಂದಿಗೆ ಭಾರಂಗಿ ಮನೆಯಲ್ಲಿ ನೆಮ್ಮದಿಯಿಂದ ಬಾಳುತ್ತಿರುತ್ತಾರೆ.ರಾಜ್ಯಕ್ಕೆ ಬೇಕಾದ ವಿದ್ಯುತ್ ಉತ್ಪಾದಿಸಲು ಜೋಗದಲ್ಲಿ ಹರಿಯುವ ಶರಾವತಿ ನದಿಗೆ ಅಣೆಕಟ್ಟು ಕಟ್ಟಲು ಮುಂದಾಗುತ್ತದೆ ಅಂದಿನ ಮೈಸೂರು ಸರ್ಕಾರ.ಪ್ರತಿಭಾವಂತ ಇಂಜಿನಿಯರ್ ಕೃಷ್ಣರಾವ್ ಅವರನ್ನು ಈ ಯೋಜನೆಯ ಮುಖ್ಯಸ್ಥರನ್ನಾಗಿಸಿ ಜೋಗಕ್ಕೆ ಕಳಿಸುತ್ತದೆ.ಅಲ್ಲಿ ಅವರಿಗೆ ಅಣೆಕಟ್ಟು ನಿರ್ಮಿಸುವಲ್ಲಿ ಎದುರಾದ ಸವಾಲುಗಳು ಅದನ್ನು ಅವರು ಎದುರಿಸಿದ ರೀತಿ,ಜೋಗದ ಸುತ್ತಮುತ್ತಲಿನ ಊರಿನ ಜನಜೀವನ, ಅಲ್ಲಿನ ಸುಂದರ ಪರಿಸರ,ಯೋಜನೆಯಿಂದಾಗಿ ಬದುಕು ಕಳೆದುಕೊಂಡ ಜನರ ದುರಂತವನ್ನು ಸಾದ್ಯಂತವಾಗಿ ವಿವರಿಸುತ್ತದೆ ಕಾದಂಬರಿ.ಆ ದುರಂತ ಕಥನವನ್ನು ಓದಿಯೇ ಆಸ್ವಾದಿಸಬೇಕು. ಕಥೆಯ ಬಗ್ಗೆ ಇದಕ್ಕಿಂತ ಹೆಚ್ಚು ಹೇಳಲಾರೆ.

ಪುನರ್ವಸುವಿನ ಮುಖ್ಯ ಶಕ್ತಿಯೆಂದರೆ ಅದರಲ್ಲಿ ಬರುವ ಗಟ್ಟಿ ಪಾತ್ರಗಳು.ನಗರ ಜೀವನದ ಸೋಂಕಿಲ್ಲದೆ,ಹೊರಜಗತ್ತಿನ ಸಂಪರ್ಕವೇ ಇಲ್ಲದೆ ಬದುಕಿದ ಹಳ್ಳಿಯ ಜೀವಗಳೆಲ್ಲ ತಮ್ಮ ಜೀವನೋತ್ಸಾಹದಿಂದ,ಹೆಜ್ಜೆ ಹಜ್ಜೆಗೂ ಸಂಕಷ್ಟಗಳನ್ನೆದುರಿಸಿ ಕಟ್ಟಿಕೊಂಡ ಬದುಕಿನಿಂದ,ತಮ್ಮ ಔದಾರ್ಯಗುಣಗಳಿಂದ,ಮನುಷ್ಯ,ಪಶುಪಕ್ಷಿಗಳು ಮತ್ತು ಪರಿಸರದ ಮೇಲೆ ಅವರು ತೋರುವ ಪ್ರೀತಿಯಿಂದ ಓದುಗರನ್ನು ಆಕರ್ಷಿಸಿ ಕಾದಂಬರಿಯೊಳಗೆ ಹಿಡಿದಿಡುತ್ತವೆ.

ಮಲೆನಾಡಿನ ಮಧ್ಯಮ ವರ್ಗದ ಹವ್ಯಕ ಬ್ರಾಹ್ಮಣರ ಜೀವನದ ಮೇಲ್ನೋಟವನ್ನು ಭಾರಂಗಿ ಮನೆ ಕಟ್ಟಿಕೊಡುತ್ತದೆ.ದತ್ತಪ್ಪ ಹೆಗಡೆಯವರು ತಮ್ಮ ಹಿರಿತನ,ಔದಾರ್ಯದಿಂದಾಗಿ ಭಾರಂಗಿ ಮನೆಗಷ್ಟೇ ಅಲ್ಲದೆ ಊರಿನ ಜನರ ಮನಗಳ ಯಜಮಾನರೂ ಆಗಿದ್ದರು.ಹೊನ್ನೆಮರಡು ಎಂಬಲ್ಲಿ ಸರ್ಕಾರದ ಅಧಿಕಾರಿಗಳು ಸರ್ವೆ ನಡೆಸುತ್ತಿರುವ ವಿಷಯ ತಿಳಿದು ಅಲ್ಲಿಗೆ ಹೋಗಿ ಕೃಷ್ಣರಾವ್ ಅವರನ್ನು ಕಂಡು ಯೋಜನೆಯ ಬಗ್ಗೆ ವಿಚಾರಿಸಿ ಒತ್ತಾಯದಿಂದ ತಮ್ಮ ಮನೆಗೆ ಕರೆದುಕೊಂಡು ಬಂದು ಮನೆ ಮಗನೇನೋ ಎಂಬಂತೆ ಉಪಚರಿಸುತ್ತಾರೆ.ಬಂಧುವಲ್ಲ,ಸ್ನೇಹಿತನಲ್ಲ,ಕಷ್ಟಕಾಲಕ್ಕೆ ಒದಗಿ ಬಂದವನಲ್ಲ ಆದರೂ ತಮ್ಮವನೇ ಈತ ಎನ್ನುವಂತೆ ಆತಿಥ್ಯ ತೋರುವ ದತ್ತಪ್ಪ ಹೆಗಡೆಯವರ ಗುಣಕ್ಕೆ ಬೆರಗಾಗಿಬಿಡುತ್ತಾರೆ ಕೃಷ್ಣರಾವ್. ಅಕ್ಷರ ಜ್ಞಾನವಿಲ್ಲದ ಹಳ್ಳಿಯ ಜನರಿಗೆ ಯೋಜನೆಯ ಬಗ್ಗೆ ತಿಳಿಸಿಕೊಡುವ,ಅದರಿಂದಾಗಿ ತಮ್ಮ ಊರಿಗಾಗುವ ನಷ್ಟದ ಕುರಿತು ಅರಿವು ಮೂಡಿಸಿ ಅದಕ್ಕೆ ತಕ್ಕಂತೆ ಯಾವ ರೀತಿ ಕಾರ್ಯಪ್ರವರ್ತರಾಗಬೇಕೆನ್ನುವುದನ್ನು ವಿವರಿಸಬಲ್ಲ ನಾಯಕರಾಗುತ್ತಾರೆ ದತ್ತಪ್ಪ ಹೆಗಡೆಯವರು.ತಮ್ಮ ಜನರನ್ನು ಅತಿಯಾಗಿ ಪ್ರೀತಿಸುವ,ಆಪ್ತರಾದ ದೋಣಿಗಣಪ,ಮುರಾರಿ ಭಟ್ಟ,ಮಾಣೀ ಚಿಕ್ಕಯ್ಯ ಇವರಿಗೆಲ್ಲ ಸದಾ ಬೆಂಬಲವಾಗಿ ನಿಲ್ಲುವ,ದೇವರ ನಿಧಿ ಕೀಳಲು ವಾಮಾಚಾರ ನಡೆಸಿದ ಸುಳಿವು ಸಿಕ್ಕಿದಾಗ ಸಂಶಯಾಸ್ಪದ ವ್ಯಕ್ತಿಗಳನ್ನು ನೇರವಾಗಿ ಹೋಗಿ ವಿಚಾರಿಸುವ ಧಾಡಸೀತನ ಹೊಂದಿದ ಶ್ರೇಷ್ಟ ವ್ಯಕ್ತಿತ್ವವಾಗಿ ಚಿತ್ರಿತವಾಗಿದ್ದಾರೆ ದತ್ತಪ್ಪ ಹೆಗಡೆಯವರು.ಮಲೆನಾಡಿನ ಜನಜೀವನವನ್ನು ಹಿತ್ತಿರದಿಂದ ನೋಡಿ ಅನುಭವವಿರುವರೆಲ್ಲ ಹೆಗಡೆಯಂಥ ವ್ಯಕ್ತಿತ್ವದವರನ್ನು ತಮ್ಮ ನಿಜಜೀವನದಲ್ಲಿಯೂ ನೋಡಿರುತ್ತಾರೆ.

ವಿಧವೆಯಾಗಿ ಮಗಳೊಂದಿಗೆ ಬಂದು ಭಾರಂಗಿಮನೆಯಲ್ಲಿ ತಮ್ಮನೊಂದಿಗೆ ಇರುವ ತುಂಗಕ್ಕಯ್ಯನದ್ದು ಇನ್ನೊಂದು ಥರದ ಗಟ್ಟಿ ವ್ಯಕ್ತಿತ್ವ.ದತ್ತಪ್ಪ ಹೆಗಡೆಯವರ ಹೆಂಡತಿ ತೀರಿಹೋದ ನಂತರ ಮನೆಗೆ ‘ಹೆಣ್ಣುದಿಕ್ಕಾಗಿ’ ಮನೆಯೊಳಗನ್ನೂ ಹೊರಗನ್ನೂ ಸಂಭಾಳಿಸುವವಳು ತುಂಗಕ್ಕಯ್ಯ.ಮನೆಗೆ ಕೃಷ್ಣರಾವ್ ತಮ್ಮ ಹೆಂಡತಿ ವಸುಧಾಳ ಜೊತೆ ಬಂದಾಗ ಅವರಿಗೆ ಮಗಳು ಅಳಿಯನ ಪ್ರೀತಿತೋರಿಸುವವಳು.ಹಲವಾರು ಸಲ ಗರ್ಭಪಾತವಾಗಿ ಇನ್ನು ಗರ್ಭಿಣಿಯಾದರೆ ವಸುಧಾಳ ಜೀವಕ್ಕೆ ಅಪಾಯವಿದೆಯೆಂದು ಬೆಂಗಳೂರಿನ ವೈದ್ಯರು ಹೇಳಿದ್ದರೂ ,ಗರ್ಭಕೋಶಕ್ಕೆ ಬಸಿರನ್ನು ಹೊರುವ ಸಾಮರ್ಥ್ಯವಿಲ್ಲ ಅಂತ ಯಾರಾದ್ರೂ ಹೇಗೆ ಹೇಳಲು ಸಾಧ್ಯ? ನಮ್ಮಲ್ಲಿ ಗರ್ಭಪಾತವಾಗದಂತೆ ತಡೆಯಬಲ್ಲ ಔಷಧಿ ಕೊಡುವ ಗಣೇಶಯ್ಯನಿದ್ದಾನೆ.ನೀನು ಅವನ ಔಷಧಿ ತೆಗೆದುಕೊಳ್ಳಲೇಬೇಕು ಅಂತ ವಸುಧಾಳನ್ನು ಒತ್ತಾಯಿಸುತ್ತಾಳೆ ತುಂಗಕ್ಕಯ್ಯ.ಮಡಿಲಲ್ಲಿ ತಲೆಯಿಟ್ಟು ಕಣ್ಣೀರ್ಗರೆದ ವಸುಧಾಳನ್ನು ಮಗಳಂತೆ ಸಮಾಧಾನಿಸುತ್ತಾಳೆ.ಮೈಗೆಲ್ಲ ಎಣ್ಣೆ ಹಚ್ಚಿ ಅಭ್ಯಂಗ ಸ್ನಾನ ಮಾಡಿಸುತ್ತಾಳೆ.ವಿಶೇಷ ಅಡುಗೆ ಮಾಡಿ ಬಡಿಸುತ್ತಾಳೆ.ತಮ್ಮೂರನ್ನು ಮುಳುಗಿಸುವ ಯೋಜನೆಯ ಮುಖ್ಯಸ್ಥರೆಂದು ಗೊತ್ತಿದ್ದರೂ ತಮ್ಮ ಸಮೀಪಬಂಧುವಿನಂತೆ ಕೃಷ್ಣರಾವ್ ಅವರಿಗೂ ಔದಾರ್ಯ ತೋರಿಸುತ್ತಾಳೆ.

ಜೋಗ ವಿದ್ಯುತ್ ಯೋಜನೆಯ ರೂವಾರಿ ಕೃಷ್ಣರಾವ್ ಒಂದು ಥರದ ದ್ವಂದ್ವದಲ್ಲೇ ಬದುಕುವ ಪಾತ್ರ.ಯೋಜನೆಯ ಮುಖ್ಯ ಇಂಜಿನಿಯರ್ ಆಗಿ ಸರ್ ಎಂ.ವಿಶ್ವೇಶ್ವರಯ್ಯನವರಿಂದಲೇ ನಿಯೋಜಿತನಾಗಿದ್ದೇನೆ ಎನ್ನುವ ಸಂತಸ ಒಂದೆಡೆಯಾದರೆ ,ಬೆಂಗಳೂರಲ್ಲಿರುವ ಒಳ್ಳೆಯ ಮನೆ,ಮಡದಿ ವಸುಧಾ,ಅಪ್ಪ ಅಮ್ಮನನ್ನು ಬಿಟ್ಟು ಹಳ್ಳಿಗೆ ಹೋಗಿ ಕಷ್ಟಪಡಬೇಕೇ ಎಂಬ ಆತಂಕ ಇನ್ನೊಂದೆಡೆ.ದೇಶವನ್ನೇ ಬೆಳಗಿಸುವ ಮಹತ್ವದ ಯೋಜನೆಯೊಂದರ ಪ್ರಧಾನ ವ್ಯಕ್ತಿ ತಾನು ಎಂಬ ಹೆಮ್ಮೆಯ ಸ್ಥಾಯಿಭಾವ ಮನದ ಒಂದು ಮೂಲೆಯಲ್ಲಾದರೆ,ಸಂಬಂಧವೇ ಇಲ್ಲದಿದ್ದ ತನ್ನನ್ನು ವಸುಧಾಳನ್ನು ಮನೆ ಮಗಳು-ಅಳಿಯನಂತೆ ಪ್ರೀತಿ ತೋರಿ ಉಪಚರಿಸುವ ಭಾರಂಗಿ ಮನೆಯೂ ಮುಳುಗಡೆಯಾಗಲಿದೆಯಲ್ಲ ಎಂಬ ಕಟುಸತ್ಯ ಮಸ್ತಿಷ್ಕದ ಇನ್ನೊಂದು ಮೂಲೆಯಲ್ಲಿ. ಸರ್ ಎಂವಿ, ಪ್ರೂ.ಫೋರ್ಬ್ಸ್ ಅವರಂಥ ಹಿರಿಯ ನಿಷ್ಠಾವಂತ ಅಧಿಕಾರಿಗಳೇ ಬಿಟ್ಟು ಹೋದ ಮೇಲೆ ತಾನೂ ಮೈಸೂರು ಸರ್ಕಾರದ ಭಾಗವಾಗಿ ಉಳಿಯಲಾರೆ ಎಂಬ ಭಾವ ಒಂದೆಡೆಯಾದರೆ, ತನ್ನ ನೇತೃತ್ವದಲ್ಲಿ ಶುರುವಾದ ಜೋಗದ ವಿದ್ಯುತ್ ಯೋಜನೆಯನ್ನು ಬಿಟ್ಟು ಹೋಗಲಾರೆ ಎಂಬ ಭಾವ ಇನ್ನೊಂದೆಡೆ.ಇಂಥ ದ್ವಂದ್ವಮೂರ್ತಿಯಾಗಿದ್ದುಕೊಂಡೇ ವಿದ್ಯುತ್ ಯೋಜನೆಯನ್ನು ಪೂರ್ಣಗೊಳಿಸುತ್ತಾರೆ ಕೃಷ್ಣರಾವ್.

ಮುರಾರಿ ಭಟ್ಟನೆಂಬ ವಿಲಕ್ಷಣ ವ್ಯಕ್ತಿತ್ವ ಪುನರ್ವಸುವಿನ ಓದುಗರನ್ನು ರಂಜಿಸುತ್ತದೆ.ದೇವಸ್ಥಾನವೊಂದರಲ್ಲಿ ಪೂಜೆ ಮಾಡಿಕೊಂಡು ಬಿಡುವಿನ ಸಮಯದಲ್ಲಿ ಊರು ಅಲೆಯುವನು ಮುರಾರಿ ಭಟ್ಟ.ಅವನಿಗೆ ಊರಿನ ಆಗು ಹೋಗುಗಳೆಲ್ಲ ಗೊತ್ತಿರುತ್ತದೆ.ಮುಂದೆಂದೋ ಆಗಬಹುದಾದ ವಿದ್ಯಮಾನವನ್ನು ಕಣ್ಣಾರೆ ಕಂಡವನಂತೆ ವಿವರಿಸುತ್ತಾನೆ.ವಿದ್ಯುತ್ ಯೋಜನೆ ಶುರುವಾಗುವುದಕ್ಕೂ ಮೊದಲೇ “ಜೋಗ ಪಟ್ಟಣ ಆತು.ಗಾವುದಕ್ಕೆ ಒಂದಲ್ಲ ನೂರು ದೀಪ ಆತು.ಆಕಾಶದ ತುಂಬೆಲ್ಲ ವಿಷದ ಬಳ್ಳಿ ಹಬ್ಬಿತು” ಎಂದು ಆಗಾಗ ಜೋರು ಸ್ವರದಲ್ಲಿ ಹೇಳುತ್ತಿರುತ್ತಾನೆ.ಜನರು ಅವನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲವೆಂಬ ಕೋಪ ಅವನಿಗೆ.ದೇವರ ನಿಧಿ ಕದ್ದವರು ಯಾರು ಎಂದು ಗೊತ್ತಿರುತ್ತದೆ ಅವನಿಗೆ.ದೊಡ್ಡವರಿಂದ ಆಳಿಗೆ ಹನ್ನೆರಡಾಣೆಯಂತೆ ಪಡೆದು ತಾನು ಕೆಲಸಕ್ಕೆ ಕಳಿಸುವ ಆಳುಗಳಿಗೆ ಎಂಟಾಣೆ ಮಾತ್ರ ಕೊಡುವ ಪಟೇಲನ ಅವ್ಯವಹಾರವೂ ಗೊತ್ತಿರುತ್ತದೆ ಮುರಾರಿಗೆ. ಊರಲ್ಲಿ ಯಾರಿಗೂ ತಿಳಿಯದ್ದು ಅವನಿಗೆ ತಿಳಿಯುತ್ತದೆ.ಅನೂಹ್ಯವಾದ್ದನ್ನು ಊಹಿಸಿ ಅಸಂಭವವಾದದ್ದು ಸಂಭವಿಸುತ್ತದೆ ಎಂಬ ನಂಬಿಕೆಯಲ್ಲಿ ಬದುಕುವವ ಅವನು. ಗೋಪಾಲಕೃಷ್ಣ ಪೈಯವರ ಸ್ವಪ್ನ ಸಾರಸ್ವತ ಓದಿದವರಿಗೆ ಅಲ್ಲಿನ ನಾಗ್ಡೋಬೇತಾಳನಂತೆಯೇ ಪುನರ್ವಸುವಿನ ಮುರಾರಿ ಭಟ್ಟ ಅಂತನ್ನಿಸಿದರೆ ಆಶ್ವರ್ಯವಿಲ್ಲ.

ತಲೆಮಾರಿನಿಂದ ತಲೆಮಾರಿಗೆ ಮುಗ್ಧತೆ ಮರೆಯಾಗಿ ವ್ಯಾಕಹಾರಿಕತೆಯೇ ಮೈದಳೆದು ತಣ್ಣಗಿನ ಕ್ರೌರ್ಯ ಮನುಷ್ಯನನ್ನು ಹೇಗೆ ಆವರಿಸಿಕೊಳ್ಳುತ್ತದೆ ಎಂಬುದಕ್ಕೆ ಉದಾಹರಣೆ ದತ್ತಪ್ಪ ಹೆಗಡೆಯವರ ಮಗ ಗಣೇಶ.ಮುಳುಗಡೆ ಪರಿಹಾರ ಕೊಡುವುದಕ್ಕಾಗಿ ಮನೆ ಜಮೀನನ್ನು ನೋಡಲು ಬರುವ ಅಧಿಕಾರಿಗಳಿಗೆ ತಮ್ಮ ಮನೆಯ ಕೊಟ್ಟಿಗೆಯನ್ನು ಕೆಲಸದ ಭೀಮಣ್ಣನ ಮನೆಯೆಂದು ತೋರಿಸಿ ಹೆಚ್ಚು ಹಣ ಪಡೆಯುವ ತಂತ್ರ ಹೂಡುವ ಮನಸ್ಥಿತಿ ಆತನದ್ದು.ತಾನು ಕಟ್ಟಿಸುತ್ತಿರುವ ಹೊಸ ಮನೆಗೆ ಬೇಕು ಅಂತ ದತ್ತಪ್ಪ ಹೆಗಡೆಯವರು ಮನೆಯಲ್ಲಿರುವಾಗಲೇ ಭಾರಂಗಿ ಮನೆಯ ವಾಸ್ತು ಬಾಗಿಲನ್ನು ಕೀಳಲು ಮುಂದಾಗುವ ಗಣೇಶನಿಗೆ ತಾನು ಒಡೆಯುತ್ತಿರುವುದು ವಾಸ್ತು ಬಾಗಿಲಷ್ಟೇ ಅಲ್ಲ,ಭಾರಂಗಿ ಮನೆಯನ್ನೂ ಅಲ್ಲಿ ಬದುಕುತ್ತಿರುವ ಜನರ ಮನವನ್ನೂ ಅನ್ನುವುದು ಅರಿವಾಗುವುದೇ ಇಲ್ಲ.ವಾಸ್ತು ಬಾಗಿಲನ್ನು ಕಿತ್ತರೆ ಬಿರುಕು ಬಿಡುವುದು ಅದಕ್ಕೆ ಆಧಾರವಾಗಿದ್ದ ಗೋಡೆಯಷ್ಟೇ ಅಲ್ಲ, ಅಪ್ಪ ಮಗನ, ಸೋದರತ್ತೆ ಅಳಿಯನ ಸಂಬಂಧವೂ ಕೂಡ ಎಂಬುದನ್ನು ಅರಿಯದ ಅಜ್ಞಾನಿಯಾಗುತ್ತಾನೆ ದತ್ತಪ್ಪ ಹೆಗಡೆಯಂಥ ದತ್ತಪ ಹೆಗಡೆಯ ಮಗ.ಇಂಥ ಹಲವು ಸನ್ನಿವೇಶಗಳು ಓದುಗರನ್ನು ಭಾವುಕರನ್ನಾಗಿಸುತ್ತವೆ.

ನನಗೆ ಓದಲು ಬರುವುದಿಲ್ಲ.ಈ ಚೀಟಿಯಲ್ಲಿ ಯಾರ ಹೆಸರು ಬರೆದಿದೆಯೋ ಅವರಿಗೆಲ್ಲ ನೀನು ಒಳ್ಳೆಯದನ್ನೇ ಮಾಡು ಎನ್ನುತ್ತ ದೇವಪೂಜೆಯ ಮಂತ್ರ ಬರದಿದ್ದರೂ ‘ನಾಗೇಂದ್ರಹಾರಯ ತ್ರಿಲೋಚನಾಯ..’ ಎಂದು ಹೇಳುತ್ತ ಗುಡಿಯ ದೇವರಿಗೆ ನೀರಿನ ಅಭಿಷೇಕ ಮಾಡುವ ಮಾಣಿ ಚಿಕ್ಕಯ್ಯನ ಮುಗ್ಧತೆಯಿದೆ.ಜೀವನ ನಿರ್ವಹಣೆಗೆ ಬೇರೆ ದಾರಿಯಿದ್ದರೂ ಕುಲಕಸುಬನ್ನು ಬಿಡಬಾರದು,ಜನರಿಗೆ ನದಿ ದಾಟಲು ತೊಂದರೆಯಗಬಾರದೆಂದು ದೋಣಿ ನಡೆಸುವ ಗಣಪನ ನಿಷ್ಠೆಯಿದೆ. ಗಂಡನನ್ನು ಕಳೆದುಕೊಂಡ ಹೆಂಗಸಿಗೆ ಸಹಾಯ ಮಾಡುವ ನೆಪದಲ್ಲಿ ಮುರಾರಿ ಭಟ್ಟನ ಅಮ್ಮನ ಮೇಲೆ ಕಣ್ಣು ಹಾಕುವ ಕೀಚಕರ ಕ್ರೌರ್ಯವಿದೆ ಅಲ್ಲಿ.

ಪುನರ್ವಸು ಕಾದಂಬರಿಯ ಮೂಲಬಲವೆಂದರೆ ಅದರ ಗಟ್ಟಿ ಪಾತ್ರಗಳಾಡುವ ಚಿಂತನಾರ್ಹವಾದ ಗಂಭೀರ ಮಾತುಗಳು. “ಮನುಷ್ಯನಿಗೆ ಮುಪ್ಪು ಬಂದರೆ ಸಹಜವೆಂದು ಒಪ್ಕೋಬೋದು.ಆದರೆ ಊರಿಗೇ ಮುಪ್ಪು ಬಂದರೆ ಅರಗಿಸಿಕೊಳ್ಳೋಕೆ ಕಷ್ಟವಾಗುತ್ತೆ.” “ಹಳ್ಳಿಗಳಲ್ಲಿ ಸಂಬಂಧಗಳನ್ನು ಕತ್ತರಿಸಿಕೊಳ್ಳೋದು ಪಟ್ಟಣದಲ್ಲಿ ಕಡಿದುಕೊಂಡಷ್ಟು ಸುಲಭವಲ್ಲ.ನಗರಗಳಲ್ಲಿ ಸಂಬಂಧಗಳು ಇಂದು ಹುಟ್ಟಿ ನಾಳೆ ಸಾಯುತ್ತವೆ.ಅಲ್ಲಿಯ ಸಂಬಂಧಗಳಿಗೆ ಅಂತಸ್ತು ಮತ್ತು ಸಂಖ್ಯೆ ಮುಖ್ಯವಾದಷ್ಟು ಅದರ ನಿರಂತರತೆ ಮುಖ್ಯವಾಗುವುದಿಲ್ಲ.ಆದರೆ ಹಳ್ಳಿಗಳಲ್ಲಿ ಸಂಬಂಧಗಳ ಶಾಶ್ವತತೆಗೆ ಹೆಚ್ಚು ಮಹತ್ವ.ನಮ್ಮ ಹಳ್ಳಿಗರಿಗೆ ಇರುವುದು ಶಾಶ್ವತ ವಿಳಾಸ ಮಾತ್ರ.ಆದರೆ ಬಹುತೇಕ ಪಟ್ಟಣಿಗರಿಗೆ ಶಾಶ್ವತ ಮತ್ತು ತಾತ್ಕಾಲಿಕವೆಂಬ ಎರಡೆರಡು ವಿಳಾಸಗಳಿರುತ್ತವೆ.ಹಾಗಾಗಿ ನಿಮಗೆ ಬೇರಿನಿಂದ ಬೇರ್ಪಡುವುದು ನಮಗಿಂತ ಸುಲಭ.” ಎನ್ನುವ ದತ್ತಪ್ಪ ಹೆಗಡೆಯವರ ಅನುಭವದ ಮಾತುಗಳಿವೆ. “ಮೈಗೆ ಪೆಟ್ಟುಬಿದ್ರೆ ಸಹಿಸಿಕೊಳ್ಳಲಕ್ಕು.ಮನಸ್ಸಿಗೆ ಪೆಟ್ಟು ಬಿದ್ದರೂ ಮತ್ತೆ ಚೇತರಿಸಿಕೊಳ್ಳಲಕ್ಕು.ಆದರೆ ನಂಬಿಕೆಗೇ ಪೆಟ್ಟು ಬಿದ್ದರೆ…?” ಎಂಬ ತುಂಗಕ್ಕಯ್ಯನ ಹತಾಶೆಯ ನಿಟ್ಟುಸಿರಿದೆ. ಇಂಥ ವಾಕ್ಯಗಳು ಸ್ಮೃತಿಪಟಲದಾಳಕ್ಕೆ ಹೊಕ್ಕು ನಮ್ಮ ಬದುಕಿನ ಬಗ್ಗೆ ನಾವೇ ಪ್ರಶ್ನೆ ಕೇಳಿಕೊಳ್ಳುವಂತೆ ಮಾಡುತ್ತವೆ.

ಕಾದಂಬರಿಯಲ್ಲಿ ಇಂಜಿನಿಯರಿಂಗ್’ಗೆ ಸಂಬಂಧಪಟ್ಟ ಟೆಕ್ನಿಕಲ್ ಸಂಗತಿಗಳೂ ದಂಢಿಯಾಗಿವೆ.ಪುಟಗಟ್ಟಲೆ ವಿಸ್ತಾರವಾಗಿರುವ ಈ ತಾಂತ್ರಿಕ ವಿವರಗಳು ಕಾದಂಬರಿಯ ಓಘಕ್ಕೆ ತಡೆಯನ್ನೊಡ್ಡುತ್ತವೆ. ವಿದ್ಯುತ್ ಯೋಜನೆಯಿಂದಾಗಿ ಊರು ಕಳೆದುಕೊಳ್ಳುವ ಜನರ ಬದುಕಿನಲ್ಲಾದ ಬದಲಾವಣೆಗಳು,ಆ ಸಮಯದ ಅವರ ಮನಸ್ಥಿತಿ, ಅಂದಿನ ಜನಜೀವನವನ್ನು ಚರ್ಚಿಸಿ ವಿವರಿಸುವುದು ಪುನರ್ವಸುವಿನ ಮೂಲ ಉದ್ದೇಶವಾದ್ದರಿಂದ ಕಾದಂಬರಿಯಲ್ಲಿ ತಾಂತ್ರಿಕ ವಿವರಗಳು ಅಷ್ಟಾಗಿ ಬೇಕಾಗಿರಲಿಲ್ಲ.ಇದರಿಂದಾಗಿಯೇ ಪುಸ್ತಕದ ಗಾತ್ರ 537 ಪುಟಗಳಷ್ಟು ವಿಸ್ತಾರವಾಗಿ ಹರಡಿಕೊಳ್ಳುವಂತಾಯಿತೇನೋ?

“ಮುಳುಗಿದ್ದು ಭಾರಂಗಿಯೇ? ಭರವಸೆಯೇ? ಬದುಕೇ?” ಎಂಬ ಅಡಿಬರಹ ಇದೆ ಪುನರ್ವಸುವಿಗೆ. ಮುಳುಗಿದ್ದು ಬದುಕೇ ಅಂತ ಎಲ್ಲರಿಗೂ ಗೊತ್ತಿದ್ದರೂ ಅರಗಿಸಿಕೊಳ್ಳಲಾರದ ಕಹಿ ಸತ್ಯದಂತೆ, ದೇಶದ ಹಿತಕ್ಕಾಗಿ ಬದುಕು ಕಳೆದುಕೊಂಡು ಅದಕ್ಕೆ ತ್ಯಾಗವೆಂದು ಕರೆಯುವುದೋ, ಬಲಿದಾನವೆಂದು ಕರೆಯುವುದೋ ಅಂತ ಗೊತ್ತಾಗದ ಸ್ಥಿತಿ ಜೋಗ,ಹೊನ್ನೆಮರಡು,ಭಾರಂಗಿ,ಹೀರೇಭಾಸ್ಕರದಂಥ ಊರಿನ ಜನರದ್ದು. ಮಲೆನಾಡಿನ ಜನರಿಗೆ,ಅವರ ಬದುಕನ್ನು ಹತ್ತಿರದಿಂದ ನೋಡಿದವರಿಗೆ, ಮುಳುಗಡೆಗೊಳಗಾಗಿ ನೆಲೆ ಕಳೆದುಕೊಂಡು ಎಲ್ಲೆಲ್ಲೋ ಹೋಗಿ ಬದುಕು ಕಟ್ಟಿಕೊಂಡಿರುವವರಿಗೆಲ್ಲ ಪುನರ್ವಸು ಕಾಡುವುದಂತೂ ಸುಳ್ಳಲ್ಲ.

ಪುಸ್ತಕವನ್ನು ಸ್ವಪ್ನ ಬುಕ್ ಹೌಸ್’ನಿಂದ ಖರೀದಿಸಬಹುದು.