ದೇವತೆಗಳಿಗೆ ಬೃಹಸ್ಪತಿ ಗುರುವಾಗಿರುವಂತೆ  ಶುಕ್ರಾಚಾರ್ಯರು ರಾಕ್ಷಸರ ಗುರುಗಳು. ಅಸುರಕುಲದ ಅಭ್ಯುದಯಕ್ಕಾಗಿ ಪಣತೊಟ್ಟು ಯೋಗ್ಯವಾದ ಗುರುವಿನ ಮುಖೇನ ರಕ್ಕಸಕುಲ ಔನ್ನತ್ಯವನ್ನು ಸಾಧಿಸಬೇಕೆಂದು ಅಸುರರ ಬೆನ್ನೆಲುಬಾಗಿ ನಿಂತವರು ಶುಕ್ರಾಚಾರ್ಯರು. ಶುಕ್ರಾಚಾರ್ಯರ ಹೆಸರು ಅನೇಕರಿಗೆ ತಿಳಿದಿದೆ ಬಿಟ್ಟರೆ ಅವರ ಸಂಪೂರ್ಣ ಜೀವನದ ಕಥೆ ಗೊತ್ತಿರುವವರು ಕೆಲವೇ ಮಂದಿ ಮಾತ್ರ. ಹಾಗಾಗಿ ಜನಸಾಮಾನ್ಯರಿಗೂ ಒಬ್ಬ ಮಹೋನ್ನತ ಗುರುವಿನ ಜೀವನಗಾಥೆ ತಿಳಿಯಬೇಕೆಂದು ಹಿರಿಯ ಯಕ್ಷಗಾನ ಪ್ರಸಂಗಕರ್ತ,ವಿಮರ್ಶಕ ಶ್ರೀಧರ ಡಿ.ಎಸ್. ಅವರು ‘ಅಸುರಗುರು ಶುಕ್ರಾಚಾರ್ಯ’ ಎಂಬ ಕಾದಂಬರಿಯನ್ನು ರಚಿಸಿದ್ದಾರೆ. ಶುಕ್ರಾಚಾರ್ಯರ ಜೀವನವನ್ನು ಸಂಪೂರ್ಣವಾಗಿ ಕಟ್ಟಿಕೊಡುವ ಅದ್ಭುತ ಕಾದಂಬರಿಯಿದು.

ಭೃಗು ಮಹರ್ಷಿ ಮತ್ತು ಖ್ಯಾತಿದೇವಿಯರ ಮಗನಾಗಿ ಜನಿಸಿ, ಉಶನ ನಾಮಾಂಕಿತನಾದವನು ಶುಕ್ರಾಚಾರ್ಯನಾಗಿ ಬೆಳೆದ ಬಗೆ ರೋಮಾಂಚನ ಹುಟ್ಟಿಸುತ್ತದೆ. ಜಯಂತಿ,ಅರಜೆ,ಗುರುಶಾಪ,ಭೃಗುಶಾಪ,ದೇವಯಾನಿ,ಶರ್ಮಿಷ್ಠೆ,ಪ್ರಹ್ಲಾದ,ಮಹಾಬಲಿ,ತ್ರಿವಿಕ್ರಮ ಇನ್ನೂ ಮುಂತಾದ ಅಧ್ಯಾಯಗಳಲ್ಲಿ ಕಾದಂಬರಿ ಚಿತ್ರಿತವಾಗಿದೆ. ಆಂಗೀರಸ ಮಹರ್ಷಿಗಳಲ್ಲಿ ಉಶನ ಹಾಗೂ ಬೃಹಸ್ಪತಿ ಇಬ್ಬರೂ ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ.ನೀನು ಮುಂದೆ ಅಸುರಕುಲಕ್ಕೆ ಗುರುವಾಗು ಎಂದು ಕಾರಣಾಂತರಗಳಿಂದಾಗಿ ಆಂಗೀರಸರಿಂದ ಶಾಪಕ್ಕೆ ತುತ್ತಾಗುತ್ತಾನೆ ಉಶನ. ಮುಂದೆ ಆತ ಶುಕ್ರಾಚಾರ್ಯನೆಂದು ಕರೆಯಲ್ಪಟ್ಟದ್ದು ಹೇಗೆ ಎಂದು ತಿಳಿಯಲು ಕಾದಂಬರಿ ಓದಬೇಕು.

ಕಾದಂಬರಿಯ ಎಲ್ಲ ಅಧ್ಯಾಯಗಳೂ ನಮ್ಮನ್ನು ಹಿಡಿದಿಟ್ಟು ಓದಿಸಿಕೊಂಡು ಹೋಗುತ್ತವೆ.ಕುಬೇರನ ನವನಿಧಿಯನ್ನು ಅಪಹರಿಸಿದ್ದಕ್ಕಾಗಿ ಶಿವನ ಕೋಪಕ್ಕೆ ತುತ್ತಾಗಿ ರುದ್ರನ ಹೊಟ್ಟೆಯೊಳಗೆ ಹೋಗಿ ನಂತರ ಉಶನ ಹೊರಬರುವ ಕಥೆ,ದೇವಯಾನಿ ಮತ್ತು ಶರ್ಮಿಷ್ಠೆಯರ ಗೆಳೆತನ ನಂತರ ಅವರಿಬ್ಬರ ಈರ್ಷ್ಯೆ, ಇಂದ್ರಸೇನನಾಗಿದ್ದವನು ಗುರುಬಲದಿಂದ ಹಾಗೂ ಹರಿಭಕ್ತಿಯಿಂದಾಗಿ ವಿಶ್ವಜಿತ್ ಯಾಗ ಮಾಡಿ ಬಲಿಚಕ್ರವರ್ತಿಯಾಗಿ ಬೆಳೆದ ಬಗೆ, ಮುಂದೆ ಬಲಿಯನ್ನು ದಮನಿಸಲು ಶ್ರೀಹರಿ ವಾಮನಾವತಾರ ತಾಳುವ ಸನ್ನಿವೇಶಗಳೆಲ್ಲ ತುಂಬ ಭಾವುಕವಾಗಿ ಚಿತ್ರಿಸಲ್ಪಟ್ಟಿವೆ.

ಕಾದಂಬರಿಯಲ್ಲಿ ನನಗೆ ತುಂಬ ಹಿಡಿಸಿದ ಭಾಗ ಬಾಲಕ ವಾಮನನ ಉಪನಯನದ ಸನ್ನಿವೇಶ. ಕಶ್ಯಪ ಮಹರ್ಷಿಗಳು ಮತ್ತು ಅದಿತಿದೇವಿಯರ ಮಗನಾಗಿ ಜನಿಸುತ್ತಾನೆ ಜಗನ್ನಿಯಾಮಕನಾದ ಶ್ರೀಹರಿ.ಆತನ ಉಪನಯನದ ಕಾಲಕ್ಕೆ ಇಂದ್ರಾದಿ ಸುಮನಸರೆಲ್ಲರೂ ಬರುತ್ತಾರೆ.ಬೃಹ್ಮದೇವ ಕಮಂಡಲವನ್ನು,ಚಂದ್ರದೇವ ದಂಡವೊಂದನ್ನು ಕೊಡುತ್ತಾನೆ ವಾಮನನಿಗೆ.ಗಾಯತ್ರಿ ಮಂತ್ರವನ್ನು ಸ್ವತಃ ಅದರ ಅಧಿದೇವತೆಯಾದ ಸೂರ್ಯದೇವನೇ ಉಪದೇಶಿಸುತ್ತಾನೆ. ಎಲ್ಲ ದೈವೀಶಕ್ತಿಗಳೂ ವಟುವನ್ನು ಆಶೀರ್ವದಿಸುತ್ತಾರೆ. ಇಂಥ ಉಪನಯನ ಸಂಸ್ಕಾರವನ್ನು ಕಲ್ಪಿಸಿಕೊಂಡರೇ ಖುಷಿಯಾಗುತ್ತದೆ.

ಕನ್ನಡದ ಓದುಗರಿಗೆ ಅಷ್ಟೇನೂ ಪರಿಚಿತವಿರದ ಶುಕ್ರಾಚಾರ್ಯರ ಬದುಕನ್ನು ಬೃಹತ್ ಕಾದಂಬರಿಯಾಗಿಸಿದ್ದಾರೆ ಶ್ರೀಧರ ಡಿ.ಎಸ್. ಅವರು. ಕಾವ್ಯಾತ್ಮಕವಾದ ಮತ್ತು ಶಾಸ್ತ್ರೋಕ್ತವಾದ ಪದಪುಂಜಗಳು,ಬೇರೆ ಬೇರೆ ಪಾತ್ರಗಳ ಅಂತರಂಗದ ಚಿತ್ರಣ ಕಾದಂಬರಿಯನ್ನು ಶ್ರೀಮಂತವಾಗಿಸಿವೆ. ಶುಕ್ರಾಚಾರ್ಯರ ಬದುಕನ್ನು,ಭಾರತೀಯ ಗುರುಪರಂಪರೆಯ ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ತಿಳಿಯುವ ಆಸಕ್ತಿಯಿದ್ದವರೆಲ್ಲ ಅವಶ್ಯವಾಗಿ ಓದಬೇಕಾದ ಪುಸ್ತಕ ‘ಅಸುರಗುರು ಶುಕ್ರಾಚಾರ್ಯ’.

ಪುಸ್ತಕವನ್ನು ನವಕರ್ನಾಟಕದಿಂದ ಮನೆಬಾಗಿಲಿಗೇ ತರಿಸಿಕೊಳ್ಳಬಹುದು.