2018 ರ ಫ್ರೆಬ್ರವರಿ ತಿಂಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸುಗಳ ಪ್ರವೇಶಕ್ಕಾಗಿ ನಡೆದ NEET PGಯ ಫಲಿತಾಂಶ ಬಂದಿತ್ತು.ನನ್ನ Rank ನಾನು ಅಂದುಕೊಂಡದ್ದಕ್ಕಿಂತ ತುಂಬಾ ಕೆಟ್ಟದಾಗಿ ಬಂದಿತ್ತು. ಕೌನ್ಸಿಲಿಂಗ್’ನ ಮೊದಲನೇ ರೌಂಡ್’ನಲ್ಲಿ ನನಗೆ ಯಾವ ಕಾಲೇಜಿನಲ್ಲೂ ಸೀಟು ಸಿಕ್ಕಿರಲಿಲ್ಲ.ಎರಡನೇ ರೌಂಡಿನಲ್ಲಿ ಮುಂಬೈನ ಲೋಕಮಾನ್ಯ ತಿಲಕ್ ಮುನಿಸಿಪಲ್ ಮೆಡಿಕಲ್ ಕಾಲೇಜಿನಲ್ಲಿ Diploma Anesthesia ಸೀಟು ಸಿಕ್ಕಿತ್ತು.ಮುಂಬೈನಲ್ಲಿ ಸೀಟು ಸಿಕ್ಕಿದ್ದಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕೆಂದೇ ಗೊತ್ತಾಗಲಿಲ್ಲ.ಅನಸ್ತೇಷಿಯಾವನ್ನು Not by choice but by chance ತೆಗೆದುಕೊಳ್ಳಬೇಕಾಗಿ ಬಂದರೂ ಒಳ್ಳೆಯ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಕ್ಕಿದ್ದಕ್ಕಾಗಿ ಸಂತೋಷವಾಗಿತ್ತು.

2018ರ ಮೇ ಎರಡನೇ ತಾರೀಖಿನಿಂದ ನನ್ನ ಮುಂಬೈ ಜೀವನ ಶುರುವಾಯಿತು.ಮುಂಬೈ ಮಹಾನಗರ ಪಾಲಿಕೆಯ ಆಡಳಿತ ವ್ಯಾಪ್ತಿಯೊಳಕ್ಕೆ ಬರುವ ನಮ್ಮ Sion ಆಸ್ಪತ್ರೆಗೆ ಸಾಕಷ್ಟು ಸಂಖ್ಯೆಯ ರೋಗಿಗಳು ಬರುತ್ತಿದ್ದರು.Sion hospital has one of the biggest trauma centers in Asia in terms of Number of patients.ಹಾಗಾಗಿ ಎಲ್ಲ ರೀತಿಯ ಸರ್ಜರಿಗಳೂ ನಮ್ಮ ಆಸ್ಪತ್ರೆಯಲ್ಲಿ ನಡೆಯುತ್ತಿದ್ದುದ್ದರಿಂದ ನಮ್ಮ ಕಲಿಕೆಗೆ ವಿಪುಲವಾದ ಅವಕಾಶವಿತ್ತು.ಆಸ್ಪತ್ರೆಯಲ್ಲಿ ತುಂಬ ಒತ್ತಡದ ಕೆಲಸವಿರುತ್ತಿತ್ತು.ವಾರಕ್ಕೆ ಎರಡರಿಂದ ಮೂರು ದಿನ ಸತತವಾಗಿ 30 ಗಂಟೆಗಳ ಕಾಲ ಕೆಲಸ ಮಾಡಬೇಕಿತ್ತು.ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊಡುವ ಗೌರವಧನ (Stipend) ಮುಂಬೈನಲ್ಲಿ ಉತ್ತಮವಾಗಿತ್ತು.ಅಲ್ಲದೇ ಆಸ್ಪತ್ರೆಯ ವತಿಯಿಂದಲೇ ಉಚಿತವಾದ ಹಾಸ್ಟೆಲ್’ನ ಸೌಲಭ್ಯವೂ ಇತ್ತು.ನಮ್ಮ ಊಟದ ಖರ್ಚನ್ನು ಮಾತ್ರ ನಾವೇ ನೋಡಿಕೊಳ್ಳಬೇಕಾಗಿತ್ತು.ಹಾಗಾಗಿ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯ ಅಧ್ಯಯನ ಮಾಡುತ್ತಿರುವವರಿಗೆ ಆರ್ಥಿಕವಾಗಿ ಅಷ್ಟೇನೂ ತೊಂದರೆಯಾಗುತ್ತಿರಲಿಲ್ಲ.

ಆಸ್ಪತ್ರೆಯ ಜೊತೆಗೆ ಮುಂಬೈ ಎಂಬ ಮಹಾನಗರಿ ಕೂಡ ನನ್ನನ್ನು ಬಹುವಾಗಿ ಆಕರ್ಷಿಸಿತ್ತು.ನಾನು ಎಂಬಿಬಿಎಸ್ ಓದಿದ್ದು ಕರ್ನಾಟಕದ ಹೆಸರಾಂತ ಮೆಡಿಕಲ್ ಕಾಲೇಜುಗಳಲ್ಲಿ ಒಂದಾದ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ.ಮೈಸೂರನ್ನು ನಾನು ಬಹಳ ಹಚ್ಚಿಕೊಂಡುಬಿಟ್ಟಿದ್ದೆ.ಆ ಸುಂದರ ನಗರವನ್ನು ಪ್ರೀತಿಸಿದ್ದೆ.ಮೈಸೂರಿಗೆ ಬಹುವಾಗಿ ಹೊಂದಿಕೊಂಡಿದ್ದ ನನ್ನನ್ನು ಬೇರೆ ಯಾವ ನಗರವೂ ಆಕರ್ಷಿಸಲಾರದು ಎಂಬ ನನ್ನ ಊಹೆ ತಪ್ಪಾಗಿತ್ತು. ಬಾಂಬೆ ಎಂಬ ಮಾಯಾನಗರಿ ನನ್ನನ್ನು ಮೋಹಕತಾರೆಯಂತೆ ಸೆಳೆದಿತ್ತು.

A city that never sleeps… City of Dreams…  ಎಂದೆಲ್ಲ ಕರೆಯುತ್ತಾರೆ ಮುಂಬೈಗೆ.ಈ ವಾಕ್ಯಗಳೆಲ್ಲ ಅಕ್ಷರಷಃ ಸತ್ಯ.ಈ ನಗರ ನಿದ್ರಿಸುವುದೇ ಇಲ್ಲ.ದಿನದ ಇಪ್ಪತ್ತನಾಲ್ಕು ಗಂಟೆಯೂ ಒಂದಲ್ಲ ಒಂದು ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ.ನಗರದ ಎಲ್ಲಾ ಭಾಗಗಳಲ್ಲೂ ರಾತ್ರಿವೇಳೆಯಲ್ಲೂ ಒಂದಲ್ಲ ಒಂದು ಚಹಾ ಅಂಗಡಿ,ವಡಾಪಾವ್ ಮಾರುವ ಅಂಗಡಿಗಳು ತೆರೆದೇ ಇರುತ್ತವೆ.ನಗರದ ಜೀವನಾಡಿಯಾದ ಲೋಕಲ್ ರೈಲುಗಳು ತಡರಾತ್ರಿಯವರೆಗೂ ಸಂಚರಿಸಿ ಮತ್ತೆ ಬೆಳಗಿನ ಜಾವದಲ್ಲೇ ಓಡಾಟ ಶುರುಮಾಡುತ್ತವೆ.ಬಾಡಿಗೆ ಟ್ಯಾಕ್ಸಿಗಳೂ ಆಟೋರಿಕ್ಷಾದ ದರದಲ್ಲೇ ಹಗಲು ರಾತ್ರಿಯೆನ್ನದೆ ಸಂಚರಿಸುತ್ತವೆ.ದಿನದ ಇಪ್ಪತ್ತನಾಲ್ಕು ಗಂಟೆಯೂ Swiggy,Zomato ಗಳ ಹುಡುಗರು ಹಸಿದವರ ಹೊಟ್ಟೆ ತಣಿಸುತ್ತಾರೆ.ನಿದ್ರೆಗೆಟ್ಟು ಕೆಲಸ ಮಾಡುವ ಡಾಕ್ಟರ್,ಇಂಜಿನಿಯರ್,ಪೋಲೀಸರಿದ್ದಾರೆ ಇಲ್ಲಿ.ಹಾಗಾಗಿ ಮುಂಬೈ ಸದಾ ಜಾಗೃತ ಸ್ಥಿತಿಯಲ್ಲೇ ಇರುತ್ತದೆ.ಇಲ್ಲಿನ ಮೂಲ ಮರಾಠಿಗರು ಒಂದೆಡೆಯಾದರೆ ಬೇರೆ ಬೇರೆ ಊರುಗಳಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡ ಜನರು ಇನ್ನೊಂದೆಡೆ.ಇಲ್ಲಿ ದಿನಕ್ಕೆ ನೂರು ರೂಪಾಯಿ ಸಂಪಾದನೆ ಮಾಡುವವನೂ ಬದುಕುತ್ತಾನೆ.ದಿನಕ್ಕೆ ಒಂದು ಲಕ್ಷ ಸಂಪಾದನೆ ಮಾಡುವವನೂ ಅವನದೇ ರೀತಿಯಲ್ಲಿ ಬದುಕುತ್ತಿದ್ದಾನೆ.ಧಾರಾವಿಯಂಥ ಕೊಳಗೇರಿಗಳಲ್ಲಿ ಸಣ್ಣಸಣ್ಣ ಜೋಪಡಿಗಳಲ್ಲಿ ವಾಸ ಮಾಡುವವರು ಆರ್ಥಿಕವಾಗಿ ಬಡವರಾಗಿರಬಹುದು.ಆದರೆ ದೊಡ್ಡ ಹೃದಯ ಶ್ರೀಮಂತಿಕೆ ಉಳ್ಳವರು.ಭಾರತದ ಅಷ್ಟೇ ಏಕೆ ಜಗತ್ತಿನ ಬೇರೆ ಬೇರೆ ಕಡೆಗಳಿಂದ ಉದ್ಯೋಗ ಅರಸಿಕೊಂಡು ಬಂದವರನ್ನು ಈ ಮಹಾನಗರ ಎಂದೂ ಕೈಬಿಟ್ಟಿಲ್ಲ.ಸಣ್ಣ ಪುಟ್ಟ ಉದ್ಯೋಗ ಹಿಡಿದು ನಂತರ ತಮ್ಮ ಸಾಮರ್ಥ್ಯ,ಕಠಿಣ ಪರಿಶ್ರಮ,ಚಾಣಾಕ್ಷತನಗಳಿಂದ ತುಂಬ ದೊಡ್ಡ ಮಟ್ಟಕ್ಕೆ ಬೆಳೆದು ಹೆಸರು ಮಾಡಿದವರಿದ್ದಾರೆ.ತಮ್ಮ ಊರಿನಲ್ಲಿ ತಮ್ಮಲ್ಲಿರುವ ಪ್ರತಿಭೆಗೆ ಹೆಚ್ಚು ಅವಕಾಶಗಳಿಲ್ಲ ಎಂದು ಕಣ್ಣ ತುಂಬ ಸಾವಿರಾರು ಕನಸು ಹೊತ್ತು ಈ ಕನಸಿನ ನಗರಿಗೆ ಬಂದು ತಮ್ಮ ಕನಸನ್ನು ನನಸು ಮಾಡಿಕೊಂಡವರಿದ್ದಾರೆ.ಹೀಗೆ ಬಂದವರನ್ನೆಲ್ಲ ತನ್ನ ಮಡಿಲಿಗೆ ಹಾಕಿಕೊಂಡು ತಾಯಿಯ ಮಮತೆ ತೋರಿಸುವ ನಗರ ಮುಂಬೈ.

ಮುಂಬೈ ಅಂದರೆ ಒಂದು ಮಿನಿ ಭಾರತ ಇದ್ದ ಹಾಗೆ.ಇಲ್ಲಿ ನಿಮ್ಮ ಮನೆಕೆಲಸದ ಹೆಂಗಸು ಪಕ್ಕದ ಗಲ್ಲಿಯ ಮರಾಠಿಯವಳಾದರೆ,ಮನೆಗೆ ಹಾಲು ಹಾಕುವವನು ಬಿಹಾರಿಯಾಗಿರುತ್ತಾನೆ.ನಿಮ್ಮ ಆಫೀಸಿನ ಕ್ಯಾಂಟೀನಿಗೆ ಹೋದರೆ ಅಲ್ಲಿ ಚೈನೀಸ್ ತಿಂಡಿಗಳನ್ನು ಮಾಡುವ ಸ್ಪೆಷಲ್ ಬಾಣಸಿಗ ನೇಪಾಳಿಯಾಗಿರುತ್ತಾನೆ.ಊರು ಸುತ್ತಲು ಟ್ಯಾಕ್ಸಿ ಹಿಡಿದರೆ ಡ್ರೈವರ್ ಉತ್ತರಭಾರತದವನಾಗಿರಬಹುದು.ನಿಮ್ಮ ಪಕ್ಕದ ಮನೆ ಪಂಜಾಬಿಗಳ ಅಡುಗೆ ಮನೆಯಿಂದ ಬರುವ ಬಟರ್ ಚಿಕನ್  ಮತ್ತು ಆಲೂಪರೋಟಾದ ಸುವಾಸನೆಯನ್ನು ಆಸ್ವಾದಿಸುವಷ್ಟರಲ್ಲಿ ನವರಾತ್ರಿಯ ದಾಂಡಿಯಾ ಉತ್ಸವಕ್ಕೆ ಕರೆಯಲು ಗುಜರಾತಿಯೊಬ್ಬ ನಿಮ್ಮ ಹತ್ತಿರ ಬಂದಿರುತ್ತಾನೆ.ಬಂಗಾಳಿ ಸಹೋದ್ಯೋಗಿಯ ಆಮಂತ್ರಣವನ್ನು ಮನ್ನಿಸಿ ಅವರ ದುರ್ಗಾಪೂಜೆಗೆ ಹೋಗುವುದೋ ಅಥವಾ ದಾಂಡಿಯಾ ಉತ್ಸವಕ್ಕೆ ಹೋಗುವುದೋ ಎಂಬ ಗೊಂದಲ ನಿಮ್ಮದಾಗುತ್ತದೆ.

ಗಣೇಶೋತ್ಸವವನ್ನು ಮುಂಬೈನಷ್ಟು ವಿಜೃಂಭಣೆಯಿಂದ ಬೇರೆ ಯಾವುದೇ ನಗರವೂ ಆಚರಿಸುವುದಿಲ್ಲ.ಸಣ್ಣ ಪೆಂಡಾಲುಗಳಲ್ಲಿರುವ ಪುಟ್ಟ ಗಣಪ,ಕೋಟಿಗಟ್ಟಲೆ ಬೆಲೆಬಾಳುವ ಮತ್ತು ಲಕ್ಷಗಟ್ಟಲೆ ರೂಪಾಯಿ ವಿಮೆ ಇರುವ ಪ್ರಸಿದ್ಧ ಕಿಂಗ್ಸ್ ಸರ್ಕಲ್ ಗಣಪತಿ ಮತ್ತು ಮನೆಮನೆಗಳಲ್ಲಿ ಇಡುವ ಬಾಲಗಣಪ ಎಲ್ಲರೂ ಏಕಪ್ರಕಾರವಾಗಿ ಭಕ್ತರಿಂದ ಪೂಜಿಸಲ್ಪಡುತ್ತಾರೆ.ಹಾಗೆಯೇ ಶ್ರೀಕೃಷ್ಣ ಜನ್ಮಾಷ್ಠಮಿಯೂ ಅಷ್ಟೇ ಪ್ರಸಿದ್ಧ ಇಲ್ಲಿ.ಬೀದಿ ಬೀದಿಗಳಲ್ಲಿ ನಡೆಯುವ ಮೊಸರುಕುಡಿಕೆ ಉತ್ಸವ,ಅದರಲ್ಲಿ ಭಾಗವಹಿಸುವ ಕಟ್ಟುಮಸ್ತಾದ ಯುವಕರು,ಅದನ್ನು ನೋಡಲು ನೆರೆಯುವ ನೂರಾರು ಜನರು ಎಲ್ಲವೂ ಕಣ್ಣಿಗೆ ಹಬ್ಬ.

ಮರೀನ್ ಡ್ರೈವ್.ಇದರ ಬಗ್ಗೆ ಎಷ್ಟು ಬರೆದರೂ ಸಾಲದು.ಏನು ಬರೆಯಲೂ ತೋಚದು.ರಸ್ತೆಗೆ ತಾಗಿಕೊಂಡೇ ಇರುವ ಸಮುದ್ರ,ತೀರದಲ್ಲಿರುವ ದೊಡ್ಡ ದೊಡ್ಡ ಬಂಡೆಗಳು,ಭೋರ್ಗರೆಯುತ್ತಾ ಅಪ್ಪಳಿಸುವ ತೆರೆಗಳು,ದೂರದಲ್ಲಿ ನೀರಿನೊಳಗೆ ಮುಳುಗಿದಂತೆ ಅಸ್ತಮಿಸುವ ಸೂರ್ಯ.ನಮ್ಮೆಲ್ಲ ಜೀವನದ ಜಂಜಡಗಳನ್ನು ಮರೆತು ಏಕಾಂತದಲ್ಲಿ ತಂಗಾಳಿಗೆ ಮೈಯೊಡ್ಡಿ ವಿಹರಿಸಲು ಯೋಗ್ಯವಾದ ಸುಂದರವಾದ ಮುಂಬೈನ ಏಕಮಾತ್ರ ತಾಣ ಮರೀನ್ ಡ್ರೈವ್.ಸೂರ್ಯಾಸ್ತವಾಗಿ ರಾತ್ರಿಯಾದಂತೆ ಇದರ ಆಕರ್ಷಣೆ ಮತ್ತು ಚೆಲುವು ಮತ್ತಷ್ಟು ಹೆಚ್ಚಾಗುತ್ತದೆ.ದೊಡ್ಡ ದೊಡ್ಡ ಕಟ್ಟಡಗಳ ಬಣ್ಣಬಣ್ಣದ ಬೆಳಕುಗಳು ನೀರಿನಲ್ಲಿ ಪ್ರತಿಫಲನಗೊಂಡು ನಯನಮನೋಹರವಾಗಿ ಕಾಣುತ್ತದೆ.ಮನೆಯಲ್ಲಿ ಜಗಳ ಮಾಡಿಕೊಂಡು ಮುನಿಸು ದೂರಮಾಡಿಕೊಳ್ಳಲು ಬರುವ ಗಂಡಹೆಂಡತಿ,ಪರಸ್ಪರರ ಬೆರಳುಗಳನ್ನು ಬೆಸೆದುಕೊಂಡು ಕುಳಿತು ಸುಂದರ ಭವಿತವ್ಯದ ಕನಸು ಕಾಣುವ ಪ್ರೇಮಿಗಳು,ಲೋಕವನ್ನೇ ಮರೆತು ಆಟವಾಡುವ ಪುಟ್ಟ ಮಕ್ಕಳು,ಜಾಗಿಂಗ್ ಮಾಡುವ ತರುಣ ತರುಣಿಯರು ಎಲ್ಲರೂ ಕಾಣಸಿಗುತ್ತಾರೆ ಮರೀನ್ ಡ್ರೈವ್’ನಲ್ಲಿ.ಯಾವುದೋ ತೊಂದರೆಗೆ ಸಿಕ್ಕಿ ಬದುಕೇ ಮುಗಿಯಿತು ಅಂತ ಬಂದವನೊಬ್ಬನಿಗೆ ಮತ್ತೆ ಬದುಕಿ ಬಾಳಬೇಕು ಅಂತ ಪ್ರೇರಣೆ ನೀಡುವ ಸ್ಥಳವೂ ಹೌದು.ಎಲ್ಲ ಸಕಲ ಸುಖ ಸೌಭಾಗ್ಯವನ್ನು ಅನುಭವಿಸಿದ ಶ್ರೀಮಂತನೊಬ್ಬನಿಗೆ ಇನ್ನು ಈ ಸಂಸಾರವನ್ನು ಬಿಟ್ಟು ವಾನಪ್ರಸ್ಥಕ್ಕೆ ಹೋಗಿಬಿಡೋಣ ಎಂಬ ಧಾರ್ಮಿಕ ಪ್ರೇರಣೆಯನ್ನು ನೀಡುವ ಸ್ಥಳವೂ ಹೌದು ನಮ್ಮ ಮರೀನ್ ಡ್ರೈವ್.ವಿಮಾನದಲ್ಲಿ ಹೋಗುವಾಗ ಆಗಸದಿಂದ ಇದನ್ನು ನೋಡುವ ಚಂದವೇ ಬೇರೆ.ಈ ಎಲ್ಲ ಕಾರಣಗಳಿಂದ ಮುಂಬೈನ ಆಕರ್ಷಣೆಯ ಕೇಂದ್ರಬಿಂದು ಮರೀನ್ ಡ್ರೈವ್.

ಬೋಟಿಂಗ್ ಮಾಡಲು ‘ಗೇಟ್ ವೇ ಆಫ್ ಇಂಡಿಯಾ’ ಪ್ರಕೃತಿ ಸೌಂದರ್ಯವನ್ನು ಸವಿಯಲು ಲೋನಾವಾಲ,ಸಮುದ್ರದಲ್ಲಿ ಸಾಹಸಕ್ರೀಡೆಗಳನ್ನು ಮಾಡುವುದಾದರೆ ಆಲಿಬಾಗ್,ಮಾಂಡ್ವಾದ ಸಮುದ್ರಗಳು,ವಿವಿಧಬಗೆಯ ಚಾಟ್ಸ್,ಸಿಹಿತಿಂಡಿಗಳಿಗೆ ಹೆಸರಾದ ಮೊಹಮ್ಮದ್ ಅಲಿ ರೋಡ್,ಕಿವಿಗಡಚಿಕ್ಕುವ ಸಂಗೀತದೊಂದಿಗೆ ನಳನಳಿಸುವ ಬಣ್ಣ ಬಣ್ಣದ ಬೆಳಕಿನ ಪಬ್’ಗಳು,ರೆಡ್ ಲೈಟ್ ಏರಿಯಾದ ಲಲನೆಯರು,ಬಾಲಿವುಡ್ ನಟನಟಿಯರು,ಭೂಗತಜಗತ್ತಿನ ಡಾನ್’ಗಳು…. List is endless… ಈ ಕನಸಿನ ನಗರಿಯ ಬಗ್ಗೆ ಬರೆದು ಮುಗಿಸಲು ಸಾಧ್ಯವಿಲ್ಲ.

2020ರ ಆಗಸ್ಟ್-ಸೆಪ್ಟೆಂಬರ್’ನಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯೊಂದಿಗೆ ಪಾಸಾಗಿ Diploma Anesthesia ಕೋರ್ಸನ್ನು ಮುಗಿಸಿದ್ದೇನೆ.ಈಗ ಉದ್ಯೋಗ ನಿಮಿತ್ತ ಬೇರೆ ಊರಿಗೆ ತೆರಳುವ ಅನಿವಾರ್ಯತೆ.ಕನಸಿನ ನಗರಿಗೆ ವಿದಾಯ ಹೇಳುವ ಸಮಯ.ಜೀವಕ್ಕೆ ಹತ್ತಿರವಾದ ಗೆಳೆಯರನ್ನು ಕೊಟ್ಟಿದೆ. ಶ್ರಮಜೀವಿಗಳನ್ನು,ಸ್ವಾಭಿಮಾನಿಗಳನ್ನು,ಸಜ್ಜನರನ್ನು ಪರಿಚಯಿಸಿದೆ ಈ ನಗರ.ಎಲ್ಲ ಊರುಗಳಲ್ಲಿರುವಂತೆ ಇಲ್ಲಿಯೂ ಒಂದಷ್ಟು ನೆಗೆಟಿವ್ ಅಂಶಗಳಿವೆ.ಹಂಸಕ್ಷೀರ ನ್ಯಾಯದಂತೆ ಇಲ್ಲಿರುವ ಒಳ್ಳೆ ವಿಷಯಗಳನ್ನಷ್ಟೇ ಹೀರಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ನಾನಂತೂ ಮಾಡಿದ್ದೇನೆ.ಈ ನಗರ ನನ್ನನ್ನು ಮತ್ತಷ್ಟು ಸ್ವಾವಲಂಬಿಯಾಗಿಸಿದೆ.ಆಂತರಿಕವಾಗಿ ಬಲಿಷ್ಟನಾಗಿದ್ದೇನೆ.

ಸೆಲ್ಫಿಗೆ ನನ್ನ ಜೊತೆ ಪೋಸು ಕೊಟ್ಟವರು ಗೆಳೆಯರಾದ ಮುಖೇಶ್ ಎಂ ಮತ್ತು ಮಂಜುನಾಥ್

ಹಲವು ಸುಮಧುರ ನೆನಪುಗಳನ್ನು ಕೊಟ್ಟಿದ್ದಕ್ಕಾಗಿ ಈ ಕನಸಿನ ನಗರಿ ಸದಾ ಸ್ಮರಣೀಯವಾಗಿರುತ್ತದೆ.ಎಂದೂ ವಿಶ್ರಾಂತಿ ಬಯಸದ ಈ ನಗರವನ್ನು,ಇಲ್ಲಿನ ಪ್ರಾಮಾಣಿಕ ಜನರನ್ನು,ನೆಚ್ಚಿನ ಗೆಳೆಯರನ್ನು,ಮರೀನ್ ಡ್ರೈವ್ ಅನ್ನು ಮಿಸ್ ಮಾಡಿಕೊಳ್ಳುತ್ತೇನೆ.ನನ್ನ ಪಾಲಿಗೆ ಮೈಸೂರೆಂದರೆ ಸದಾ ಜೊತೆಗಿರಬೇಕೆಂದು ಬಯಸುವ ಪ್ರೇಮಿಯಾದರೆ,ಮುಂಬೈ ಕ್ಷಣದ ಆಕರ್ಷಣೆ ನೀಡಿ ನಂತರ ಆಗಾಗ ನೆನಪಾಗಿ ಕಾಡುವ ಕ್ರಷ್ ಇದ್ದಂತೆ.ಸುಂದರ ಬದುಕಿಗೆ ಜೀವನದುದ್ದಕ್ಕೂ ಸಂಗಾತಿಯಾಗಿರುವ ಪ್ರೇಮಿಯೂ ಬೇಕು,ಆಗಾಗ ನೆನಪಾಗಿ ಮನಸ್ಸಿಗೆ ಆಹ್ಲಾದ ನೀಡುವ ಕ್ರಷ್ ಕೂಡ ಇರಬೇಕು.

Sayonara Mumbai. ಗುಡ್ ಬೈ ಸಿಟಿ ಆಫ್ ಡ್ರೀಮ್ಸ್.

ಚಿತ್ರಕೃಪೆ:ಮುಖೇಶ್ ಎಂ