ಪ್ರಾತಃಕಾಲದ ಆರುಗಂಟೆಯ ಸಮಯ.ಆತ್ಮವನ್ನೇ ಶೀತಲೀಕರಣಗೊಳಿಸುವಷ್ಟು ಬಲಶಾಲಿಯಾಗಿತ್ತು ಧನುರ್ಮಾಸದ ಚಳಿ.ಪೂರ್ವದ ದಿಗಂತದಲ್ಲಿ ಭಾಸ್ಕರ ಉದಯಿಸಲು ಇನ್ನೂ ಸ್ವಲ್ಪ ಸಮಯವಿತ್ತು.ಗಾಢ ನಿದ್ರೆಯಿಂದ ಎಚ್ಚೆತ್ತಿದ್ದ ನನಗೆ ಇದ್ದಕ್ಕಿದ್ದಂತೆಯೇ ಮಯೂರಧ್ವಜ ನೆನಪಾಗಿದ್ದ.ಜಾಗೃತವೂ ಅಲ್ಲದ ಪೂರ್ಣ ನಿದ್ರಾವಸ್ಥೆಯೂ ಅಲ್ಲದ ಮಧ್ಯದ ಸ್ಥಿತಿಯಲ್ಲಿ ಬೀಳುವ ಕನಸೇ ಇದು ಅಂತ ಗೊಂದಲದಲ್ಲಿಯೇ ಕಣ್ಣು ಬಿಟ್ಟಿದ್ದೆ ನಾನು.ಆದರೆ ಈ ಬೆಳಗ್ಗಿನ ಸಮಯದಲ್ಲಿ ಮಯೂರಧ್ವಜ ನೆನಪಾಗಿದ್ದೇಕೆ ಅಂತ ನನಗೆ ಗೊತ್ತೇ ಆಗಲಿಲ್ಲ.ಮನಸ್ಸು ಸ್ವಲ್ಪ ಹಿಂದಕ್ಕೋಡಿ ಕೆಲವು ದಿನಗಳ ಹಿಂದೆ ಕಟೀಲಿನ ಆರೂ ಯಕ್ಷಗಾನ ಮೇಳಗಳ ಪ್ರಥಮ ಸೇವೆಯಾಟದಂದು ನಡೆದ ಪಾಂಡವಾಶ್ವಮೇಧ ಪ್ರಸಂಗದಲ್ಲಿ ಬಂದ ಮಯೂರಧ್ವಜನ ಕಥೆಯ ನೆನೆಪಾಯಿತು.ಅಂದಿನ ಯಕ್ಷಗಾನದಲ್ಲಿ ಬೆಳಿಗ್ಗೆ ಆರುಗಂಟೆಯ ಹೊತ್ತಿಗೆ ಮಯೂರಧ್ವಜನ ಕಥಾಭಾಗದ ಪ್ರಧಾನ ಹಂತ ಪ್ರದರ್ಶಿತವಾಗುತ್ತಿತ್ತು.ಹಿಮ್ಮೇಳದಲ್ಲಿ ಬೊಂದೇಲ್ ಸತೀಶ್ ಶೆಟ್ರು ಪದ್ಯ ಹೇಳುತ್ತಿದ್ದರು.ನನಗೆ ಬೆಳಿಗ್ಗೆ ಆರುಗಂಟೆಗೆ ಎಚ್ಚರವಾಗಿ ಮಯೂರಧ್ವಜನ ನೆನಪಾಗಿದ್ದಕ್ಕೂ ಅಂದು ಯಕ್ಷಗಾನದಲ್ಲಿ ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಕಥೆಯ ಪ್ರಮುಖ ಭಾಗ ರಂಗದ ಮೇಲೆ ಪ್ರದರ್ಶಿತವಾಗಿದ್ದಕ್ಕೂ ಏನೋ ಸಾಮ್ಯತೆಯಿತ್ತು. ಸೆಪ್ಟೆಂಬರ್ 27ನೇ ತಾರೀಖಿನಂದು ಅಲಂಗಾರು ಈಶ್ವರ ಭಟ್ ಅವರ ಮನೆಯಲ್ಲಿ ನಡೆದ ‘ಭಕ್ತ ಮಯೂರಧ್ವಜ’ ಯಕ್ಷಗಾನ ತಾಳಮದ್ದಲೆಯೂ ಅದೇ ಹೊತ್ತಿನಲ್ಲಿ ನೆನೆಪಾಯಿತು ನನಗೆ.ಅಂದಿನ ಪ್ರಸಂಗದಲ್ಲಿ ಮಯೂರಧ್ವಜನಾಗಿ ಹರಿಭಕ್ತಿ ಪಾರಮ್ಯವನ್ನು ಮೆರೆದವರು ವಿದ್ವಾನ್ ಉಮಾಕಾಂತ್ ಭಟ್ ಮೇಲುಕೋಟೆ.

ರತ್ನಾಖ್ಯಪುರಿಯ ಅರಸ ಮಯೂರಧ್ವಜ.ಹೃದಯದಲ್ಲಿ ಹರಿಯನ್ನೇ ತುಂಬಿಕೊಂಡು ಒಳಗಿನ ಕಣ್ಣಿಂದ ನಾರಾಯಣನನ್ನು ಸದಾ ನೋಡುತ್ತಿದ್ದರೂ ಹೊರಗಿನ ಕಣ್ಣಿಗೂ ಹರಿದರ್ಶನವಾಗಬೇಕೆಂಬ ಆಸೆಯಿಂದ ಏಳು ಅಶ್ವಮೇಧಯಾಗಗಳನ್ನು ಮಾಡಿ ಮುಗಿಸಿ ಎಂಟನೇ ಯಾಗಕ್ಕೆ ದೀಕ್ಷಾಬದ್ಧನಾಗಿ ಯಾಗದ ಕುದುರೆಯ ರಕ್ಷಣೆಗಾಗಿ ಮಗ ತಾಮ್ರಧ್ವಜನನ್ನು ಕಳಿಸಿರುತ್ತಾನೆ.ತಾಮ್ರಧ್ವಜನಿಗೆ ಪಾಂಡವರು ಹಸ್ತಿನಾವತಿಯಿಂದ ಬಿಟ್ಟ ಅಶ್ವಮೇಧದ ಕುದುರೆ ಎದುರಾಗುತ್ತದೆ.ಪಾಂಡವರ ತುರಗವನ್ನು ತಾಮ್ರಧ್ವಜ ಕಟ್ಟಿಹಾಕಲಾಗಿ ಕೃಷ್ಣಾರ್ಜುನರು ಕಾಳಗಕ್ಕೆ ಎದುರಾಗುತ್ತಾರೆ.ಮಹಾಪರಾಕ್ರಮಿ ತಾಮ್ರಧ್ವಜ ಅರ್ಜುನ ಮತ್ತು ಕೃಷ್ಣ ಇಬ್ಬರನ್ನೂ ಯುದ್ಧದಲ್ಲಿ ಸೋಲಿಸಿ ತನ್ನ ಯಾಗದ ಕುದುರೆಯ ಜೊತೆ ಪಾಂಡವರ ಕುದುರೆಯನ್ನೂ ಎಳೆದುಕೊಂಡು ಅಪ್ಪನ ಬಳಿ ಹೋಗುತ್ತಾನೆ.

ಯಾವ ಹರಿಯ ದರ್ಶನಕ್ಕಾಗಿ ಹಂಬಲಿಸಿ ಯಾಗ ಕೈಗೊಂಡೆನೋ ಅದೇ ಶ್ರೀಹರಿಯನ್ನು ಮಗ ಸೋಲಿಸಿ ಯುದ್ಧಭೂಮಿಯಲ್ಲೇ ಬಿಟ್ಟು ಬಂದಿದ್ದಾನೆಂದು ಮಯೂರಧ್ವಜ ವಿಹ್ವಲನಾಗಿ ಕುಳಿತಿರುವಾಗ ಬ್ರಾಹ್ಮಣರ ವೇಷದಲ್ಲಿ ಕೃಷ್ಣಾರ್ಜುನರು ಬರುತ್ತಾರೆ.ಶಕ್ತಿಯಿಂದ ತಾಮ್ರಧ್ವಜನನ್ನು,ಮಯೂರಧ್ವಜನನ್ನು ಗೆಲ್ಲಲು ಸಾಧ್ಯವಿಲ್ಲವೆಂದು ಕೃಷ್ಣನಿಗೆ ಗೊತ್ತಾಗುತ್ತದೆ.

“ಸ್ವಾಮಿ ನಾವು ಕಾಡುದಾರಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ನನ್ನ ಮಗನನ್ನು ಸಿಂಹವೊಂದು ಹಿಡಿಯಿತು.ಪರಮಧಾರ್ಮಿಕನಾದ,ಭಕ್ತಶ್ರೇಷ್ಠನಾದ,ದಾನಶೂರನಾದ,ಬಲಿಷ್ಟವಾದ ದೇಹವುಳ್ಳ ಮಯೂರಧ್ವಜನ ದೇಹದ ಬಲ ಅರ್ಧವನ್ನು ಕೊಟ್ಟರೆ ನನ್ನ ಮಗನನ್ನು ಬಿಡುವುದಾಗಿ ಹೇಳಿತು ಆ ಹರಿ.ಹಾಗಾಗಿ ನನ್ನ ಮಗನ ಪ್ರಾಣದ ಹೊಣೆ ನಿನ್ನದು.ದೇಹದ ಅರ್ಧಭಾಗವನ್ನು ಕೊಡುವಾಗ ಯಾವುದೇ ಮೋಹ ಇಲ್ಲದೆ,ಕಣ್ಣೀರು ಹಾಕದೇ,ಯಾವುದೇ ಬೇಸರವಿಲ್ಲದೆ ನಿರ್ಮಮ ಭಾವದಿಂದ ಕೊಟ್ಟರೆ ಮಾತ್ರ ಆ ಸಿಂಹ ತೆಗೆದುಕೊಳ್ಳುತ್ತದಂತೆ” ಎನ್ನುತ್ತಾನೆ ಬ್ರಾಹ್ಮಣವೇಷದ ಶ್ರೀಹರಿ.

ವೈಕುಂಠವಾಸಿಯಾದ ಶ್ರೀಹರಿಯ ದರ್ಶನಭಾಗ್ಯವನ್ನು ಪಡೆಯಬೇಕೆಂಬ ಹಂಬಲದಿಂದ ಮಾಡುತ್ತಿದ್ದ ಅಶ್ವಮೇಧ ಯಾಗ ಮಗನಿಂದಾಗಿ ನಿಂತುಹೋಗಿದೆ.ಯಾವ ಕೃಷ್ಣನ ಪಾದಪೂಜೆ ಮಾಡಿ ಪಾದೋದಕವನ್ನು ನಾವು ಸೇವಿಸಬೇಕಿತ್ತೋ ಆ ಕೃಷ್ಣನನ್ನೇ ತಾಮ್ರಧ್ವಜ ಯುದ್ಧಭೂಮಿಯಲ್ಲಿ ಬಿಟ್ಟು ಬಂದಿದ್ದಾನೆ.ಆ ಹರಿಯನ್ನು ಕಾಣುವ ಯೋಗವಿಲ್ಲ ಈ ಜನ್ಮದಲ್ಲಿ. ಸಿಂಹರೂಪದ ಹರಿಗಾದರೂ ನನ್ನ ದೇಹ ಸಮರ್ಪಿತವಾಗಲಿ ಎಂದು ಮಯೂರಧ್ವಜ ತನ್ನ ಹೆಂಡತಿ ಮತ್ತು ಮಗನನ್ನು ಕರೆದು “ನನ್ನ ಮೇಲೆ ಯಾವುದೇ ಮೋಹವಿಲ್ಲದೆ,ಕಣ್ಣಿರು ಹಾಕದೆ ನಿರ್ಮಮಕಾರದಿಂದ ನನ್ನ ದೇಹವನ್ನು ಅರ್ಧ ಸೀಳಬೇಕು.ನಾನೂ ನನ್ನ ದೇಹದ ಮೇಲೆ,ರತ್ನಾಖ್ಯಪುರಿಯ ಜನರ ಮೇಲೆ ಮೋಹಪರವಶನಾಗದೆ ನಿರ್ಮಮಕಾರದಿಂದ ದೇಹವನ್ನು ಅರ್ಪಿಸುತ್ತೇನೆ” ಎನ್ನುತ್ತಾನೆ.

ನೂರಾರು ವರ್ಷ ಬದುಕಿ ಬಾಳಿ,ತನ್ನ ಪರಿವಾರವನ್ನು,ಪ್ರಜಾವರ್ಗವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅರಸ ತನ್ನ ದೇಹದ ಮೇಲೆ,ತನ್ನವರ ಮೇಲೆ,ತನ್ನ ನೆಲದ ಮೇಲೆ ಯಾವುದೇ ಮೋಹವಿಲ್ಲದೆ,ಭಾವನಾತ್ಮಕವಾಗಿ ದುರ್ಬಲನಾಗದೆ ದೇಹದ ಅರ್ಧಭಾಗವನ್ನು ಹರಿಗೆ(ಸಿಂಹಕ್ಕೆ) ಸಮರ್ಪಿಸುತ್ತಿದ್ದಾನೆ.ಯುಕ್ತಿಯಿಂದ ಗೆಲ್ಲಲು ವೇಷ ಬದಲಿಸಿಕೊಂಡು ಬಂದ ಶ್ರೀಹರಿ ಮಯೂರಧ್ವಜನ ನಿರ್ಮಮಭಾವಕ್ಕೆ,ಭಕ್ತಿಗೆ ಸೋತ.ತನ್ನ ನಿಜರೂಪವನ್ನು ಕಾಣಿಸಿ ಮಯೂರಧ್ವಜನನ್ನು ಪರಮಭಾಗವತನನ್ನಾಗಿಸಿದ.

ಈ ಕಥೆಯಲ್ಲಿ ನನ್ನನ್ನು ಕಾಡಿದ್ದು ಮಯೂರಧ್ವಜನ ನಿರ್ಮೋಹ.ಮೋಹವನ್ನು ಬಿಡಬೇಕು ಎಂದು ಹೇಳುವುದು ಸುಲಭ. ಸನ್ಯಾಸಿಗಳಾದರೆ ಹಲವು ವರ್ಷಗಳ ಸಾಧನೆಯಿಂದ ಮೋಹವನ್ನು ಬಿಡಬಲ್ಲರು.ಆದರೆ ಮಯೂರಧ್ವಜ ಸನ್ಯಾಸಿಯಲ್ಲ.ಎಲ್ಲ ಸುಖಲೋಲುಪತೆಗಳ ನಡುವೆಯೇ ಬದುಕುತ್ತಿದ್ದ ಒಬ್ಬ ಸದ್ಗೃಹಸ್ಥ.ಸಂಸಾರಿಯಾದ ವ್ಯಕ್ತಿಯೊಬ್ಬ ತನ್ನ ದೇಹದ ಮೇಲೆ,ತನ್ನವರ ಮೇಲೆ,ಜಗತ್ತಿನ ಮೇಲೆ ತನಗಿರುವ ಮೋಹವನ್ನು ಇದ್ದಕ್ಕಿದ್ದ೦ತೆ ಬಿಟ್ಟುಬಿಡಬೇಕು ಎಂದರೆ ಹೇಗೆ ಸಾಧ್ಯ? ಸಾಯುವ ಸಮಯದಲ್ಲೂ ಕಣ್ಣೀರು ಹಾಕಬಾರದು ಅಂತ ಹೇಳಬಹುದೇ?ಆದರೂ ಸ್ಥಿತಪ್ರಜ್ಞನಾದ ಮಯೂರಧ್ವಜನಿಗೆ ಅಂಥ ನಿರ್ಮಮ ಭಾವವನ್ನು ಸಿದ್ಧಿಸಿಕೊಳ್ಳಲು ಸಾಧ್ಯವಾಯಿತು.

ಕೋವಿಡ್ ವೈರಸ್ ವಿಶ್ವದಾದ್ಯಂತ ಹಲವು ಜನರನ್ನು ಬಲಿತೆಗೆದುಕೊಂಡಿದೆ.ವ್ಯಾಕ್ಸೀನ್ ಲಭ್ಯವಾಗುತ್ತಿರುವ ಸಮಯದಲ್ಲೇ ರೂಪಾಂತರಿ ಕೋವಿಡ್ (Mutated Strain) ಹರಡಲಾರಂಭಿಸಿದೆ.ತಮ್ಮ ಜೀವಮಾನದಲ್ಲೇ ಆಸ್ಪತ್ರೆಯ ಮೆಟ್ಟಿಲು ಹತ್ತದವರೆಲ್ಲ ಕೋವಿಡ್ ಐಸಿಯುಗಳಲ್ಲಿ ನರಳಿ ಸತ್ತಿದ್ದಾರೆ.ಈ ಭಯಾನಕ ಯುದ್ಧದಲ್ಲಿ ಹೋರಾಡುತ್ತಿರುವ ರೋಗಾರಿ ವೈದ್ಯರಲ್ಲಿ ನಾನೂ ಒಬ್ಬ.

ಯಾವ ರೋಗಲಕ್ಷಣಗಳೂ ಇಲ್ಲದೆ ಅಡ್ಮಿಟ್ ಆಗುವ ರೋಗಿಗಳು ಒಂದೆಡೆಯಾದರೆ ಏದುಸಿರು ಬಿಡುತ್ತಾ ಆಕ್ಸಿಜನ್’ಗಾಗಿ ಹಂಬಲಿಸಿ ನೇರವಾಗಿ ಐಸಿಯುಗೆ ಬಂದು ಮರಣದ ವಿರುದ್ಧ ಸೆಣೆಸುವವರು ಇನ್ನೊಂದೆಡೆ.ಐಸಿಯುನಲ್ಲಿ ಅಡ್ಮಿಟ್ ಆದ ಕೆಲವು ರೋಗಿಗಳಿಗೆ ಕೋವಿಡ್ ರೋಗದ ತೀವ್ರತೆ ಹೆಚ್ಚಾಗಿ ಉಸಿರಾಡಲು ತೊಂದರೆಯಾದರೆ ವೆಂಟಿಲೇಟರ್’ನಿಂದ ಅರೆಕಾಲಿಕ ಕೃತಕ ಉಸಿರಾಟದ ವ್ಯವಸ್ಥೆ (Non Invasive Ventilation) ಮಾಡಬೇಕಾಗುತ್ತದೆ.ಖಾಯಿಲೆ ಇನ್ನೂ ತೀವ್ರ ಸ್ವರೂಪಕ್ಕೆ ಹೋಗಿ ಅರೆಪ್ರಜ್ಞಾವಸ್ಥೆಗೆ ಅಥವಾ ಪ್ರಜ್ಞಾಹೀನ ಸ್ಥಿತಿಗೆ ತಲುಪುವ ರೋಗಿಗಳಿಗೆ ಸಂಪೂರ್ಣವಾಗಿ ಕೃತಕ ಉಸಿರಾಟದ ವ್ಯವಸ್ಥೆ (Endotracheal Intubation With Invasive Ventilation) ಮಾಡಬೇಕಾಗುತ್ತದೆ.ನನ್ನಂಥ Anesthetistಗಳ ಪಾತ್ರ ಬರುವುದು ಈ ಸಂದರ್ಭದಲ್ಲಿ.Poilyvinyl chlorideನಿಂದ ಮಾಡಲಾದ ಅರ್ಧಚಂದ್ರಾಕೃತಿಯಲ್ಲಿ ಬಾಗಿದ ಟ್ಯೂಬ್ ಒಂದನ್ನು ರೋಗಿಯ ಶ್ವಾಸನಾಳದೊಳಕ್ಕೆ ಹಾಕಿ ಅದನ್ನು ವೆಂಟಿಲೇಟರ್’ಗೆ ಜೋಡಿಸಿ ಸಂಪೂರ್ಣವಾಗಿ ಕೃತಕ ಉಸಿರಾಟದ ವ್ಯವಸ್ಥೆ ಒದಗಿಸುವುದು ನನ್ನಂಥ ಅರಿವಳಿಕೆ ತಜ್ಞರ ಕೆಲಸ.ಆದರೆ ಹಾಗೆ ಮಾಡುವುದಕ್ಕೂ ಮೊದಲು ಸಂಬಂಧಿಕರಿಗೆ ರೋಗಿಯ ದೇಹಸ್ಥಿತಿಯ ಬಗ್ಗೆ ವಿವರಿಸಿ ಅವರ ಒಪ್ಪಿಗೆ ಪಡೆಯುವುದು ಅನಿವಾರ್ಯ.

ಕೋವಿಡ್ ಒಂದು ಭಯಾನಕ ರೋಗ.ಹಾಗೆ ಶ್ವಾಸನಾಳದೊಳಕ್ಕೆ ಟ್ಯೂಬ್ ಹಾಕಿಸಿಕೊಂಡು Intubate ಆಗಿ ವೆಂಟಿಲೇಟರ್’ನ ಕೃತಕ ಉಸಿರಾಟದ ವ್ಯವಸ್ಥೆಯ ಮೇಲೆ ಅವಲಂಬಿತವಾದ ರೋಗಿಗಳನ್ನು ವೆಂಟಿಲೇಟರ್’ನಿಂದ ಹೊರತರುವುದು ಬಹುಕಷ್ಟದ ಕೆಲಸ.ಉಳಿಸಿಕೊಳ್ಳುವ ಸರ್ವಪ್ರಯತ್ನಗಳ ನಂತರವೂ Intubate ಆದ ಕೋವಿಡ್ ರೋಗಿಗಳಲ್ಲಿ ಭಾರತದಲ್ಲಿ 20-30% ರೋಗಿಗಳಷ್ಟೇ ಬದುಕುತ್ತಾರೆ.ಅದೂ ಕೂಡ ಎಲ್ಲ ಸೌಲಭ್ಯಗಳಿರುವ ಸುಸಜ್ಜಿತವಾದ ಆಸ್ಪತ್ರೆಗಳ ಐಸಿಯುಗಳಲ್ಲಿ ಮಾತ್ರ.ಉಳಿದ ಕಡೆಗಳಲ್ಲಿ Intubate ಆದ ಕೋವಿಡ್ ರೋಗಿಗಳ ಮರಣ ಪ್ರಮಾಣ 90%.

ಕೋವಿಡ್ ಐಸಿಯುಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ದಿನವೂ ಇಂಥ ರೋಗಿಗಳನ್ನು ನೋಡಿ,ಸಾವನ್ನು ನೋಡಿ ಒಂದು ಹಂತದಲ್ಲಿ ಅವರೊಳಗೆ ಭಾವನೆಗಳೇ ಸತ್ತು ಹೋಗಬಹುದು.ಇವನು ನನ್ನ ರೋಗಿ,ಇವನನ್ನು ಗುಣಪಡಿಸಲೇಬೇಕು ಎಂಬ ಭಾವನೆ ವೈದ್ಯರಲ್ಲಿಯೂ,ಇವರು ನನಗೆ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್.ನಾನು ಇವರನ್ನು ನಂಬಿ ಸಹಕರಿಸಬೇಕು ಎಂಬ ಭಾವನೆ ರೋಗಿಯಲ್ಲಿಯೂ ಇದ್ದರೆ ಚಿಕಿತ್ಸೆ ಇನ್ನಷ್ಟು ಫಲಕಾರಿಯಾಗುವ ಸಾಧ್ಯತೆ ಇದೆ.ಆದರೆ ತಮ್ಮೆಲ್ಲ ಪ್ರಯತ್ನಗಳ ನಂತರವೂ ರೋಗಿಗಳು ಸಾವಿನ ಮನೆಯತ್ತ ಪಯಣಿಸುವುದನ್ನು ನೋಡಿ ನೋಡಿ ಕೊನೆಗೆ ವೈದ್ಯರು ಭಾವನೆಗಳನ್ನೇ ಕಳೆದುಕೊಂಡು ಕೆಲಸ ಮಾಡುವ ಸ್ಥಿತಿ ಬರಬಹುದು.ತಾನು ಚಿಕಿತ್ಸೆ ಕೊಡುತ್ತಿರುವ ರೋಗಿಯ ಮೇಲೆ ಯಾವ ಆಶಾಭಾವನೆಯನ್ನೂ ಇಟ್ಟುಕೊಳ್ಳದ ನಿರ್ಮಮ ಸ್ಥಿತಿ ಉಂಟಾಗಬಹುದು. ‘ಕರ್ಮಣ್ಯೇವಾದಿಕಾರಸ್ತೆ ಮಾಫಲೇಶು ಕದಾಚನ.ಮಾ ಕರ್ಮಫಲ ಹೇತುರ್ಭೂಮಾ ತೇ ಸಂಗೋಸ್ತ್ವ ಕರ್ಮಣಿ’ ಎಂಬ ಗೀತವಾಣಿಯಂತೆ ಪ್ರತಿಫಲದ ಬಗ್ಗೆ ತಲೆಕೆಡಿಸಿಕೊಳ್ಳದೆ ನಿರ್ಮೋಹಿಗಳಾಗಿ ಕೆಲಸ ಮಾಡಬೇಕಾದ ಸ್ಥಿತಿ ಕೋವಿಡ್ ಐಸಿಯುಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರದ್ದು.

ತಾವು ಚಿಕಿತ್ಸೆ ಕೊಡುವ ರೋಗಿಗಳ ಮೇಲೆ ಒಂಥರಾ Emotional Attachment  ಬೆಳಿಸಿಕೊಂಡರೆ ಮುಂದೆ ಆ ರೋಗಿಯ ಸ್ಥಿತಿ ಉಲ್ಬಣಿಸಿದರೆ ಅಥವಾ ರೋಗಿ ಮೃತನಾದರೆ ವೈದ್ಯರಿಗೂ ಮಾನಸಿಕ ಆಘಾತವಾಗಬಹುದು.ಹಾಗಾಗಿ ಐಸಿಯುಗಳಲ್ಲಿ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತರಿಗೆ ಎಲ್ಲ ಭಾವನೆಗಳನ್ನೂ ಬದಿಗಿಟ್ಟು ರೋಗಿಗಳ ಸೇವೆ ಮಾಡಬೇಕಾದ್ದು ಅನಿವಾರ್ಯ.

ಕೋವಿಡ್ ರೋಗಿಗಳನ್ನು Intubate ಮಾಡಿ ವೆಂಟಿಲೇಟರ್’ಗೆ ಅಳವಡಿಸುವ ಸಮಯದಲ್ಲಿ ರೋಗಿಯ ಸಂಬಂಧಿಕರ ಜೊತೆ ಮಾತನಾಡುವುದು ಅತ್ಯಂತ ಸವಾಲಿನ ವಿಷಯ.ಸಂಪೂರ್ಣವಾಗಿ ಕೃತಕ ಉಸಿರಾಟದ ವ್ಯವಸ್ಥೆಗೆ ಒಳಪಟ್ಟ ರೋಗಿ ಮೊದಲಿನಂತೆಯೇ ಗುಣವಾಗುತ್ತಾರೆಯೇ?ಎಷ್ಟು ದಿನ ಬೇಕಾಗಬಹುದು ಎಂಬೆಲ್ಲ ಪ್ರಶ್ನೆಗಳಿಗೆ ಅನಿವಾರ್ಯವಾಗಿ ವಾಸ್ತವ ಸ್ಥಿತಿಯನ್ನೇ ಉತ್ತರಿಸಬೇಕಾಗುತ್ತದೆ.ಒಮ್ಮೆ Intubate ಆದ ಮೇಲೆ ಕೋವಿಡ್ ರೋಗಿ ವೆಂಟಿಲೇಟರ್’ನಿಂದ ಹೊರಬರುವ ಸಾಧ್ಯತೆ 50%ಗಿಂತಲೂ ಕಡಿಮೆ.ಆದರೂ ಈಗಿನ ಸ್ಥಿತಿಯಲ್ಲಿ ಕೃತಕ ಉಸಿರಾಟದ ಸೌಲಭ್ಯವನ್ನು ಅಳವಡಿಸದೇ ಬೇರೆ ದಾರಿಯಿಲ್ಲ ಎಂದೆಲ್ಲ Anesthetist ಅಥವಾ Intensivist ರೋಗಿಯ ಸಂಬಂಧಿಕರನ್ನು ಕೌನ್ಸಿಲ್ ಮಾಡಬೇಕಾಗುತ್ತದೆ.ಆಗ ರೋಗಿಗಳ ಕಡೆಯವರು ಭಾವುಕರಾಗಬಹುದು.ನಮ್ಮ ರೋಗಿಯನ್ನು ಬದುಕಿಸಿ ಎಂದು ಗೋಗರೆಯಬಹುದು. ಆದರೆ “ವೆಂಟಿಲೇಟರ್ ಅಳವಡಿಸುತ್ತಿದ್ದೇವೆ.ಬದುಕುವ ಸಾಧ್ಯತೆ 50%ಗಿಂತಲೂ ಕಡಿಮೆ.ನಿಮ್ಮ ರೋಗಿಯ ಮೇಲಿನ ಆಸೆಯನ್ನು ಬಿಟ್ಟು ನಿರ್ಮೋಹಿಗಳಾಗಿ.ನಾವು ಉಳಿಸಲು ಮಾಡುವ ಪ್ರಯತ್ನಕ್ಕೆ ನಿರ್ಮಮ ಭಾವದಿಂದ ಸಹಕರಿಸಿ” ಎಂದು ವೈದ್ಯರು ಹೇಳಲು ಸಾಧ್ಯವೇ?

 Intubate ಆಗುವ ಕೋವಿಡ್ ರೋಗಿಗಳ End Resultನ ಸ್ಪಷ್ಟ ಅರಿವಿರುವುದರಿಂದಲೇ ತಾವು ಚಿಕಿತ್ಸೆ ಕೊಡುವ ರೋಗಿಗಳ ಬಗ್ಗೆ ನಿರ್ಮಮಕಾರ ತಳೆಯಬೇಕಾದ್ದು ವೈದ್ಯರಿಗೆ ಕೆಲವೊಂದು ಸಂದರ್ಭದಲ್ಲಿ ಅನಿವಾರ್ಯವಾಗಬಹುದೇನೋ.ಆದರೆ “ನಿಮ್ಮ ಪೇಷಂಟಿನ ಬಗ್ಗೆ ನೀವೂ ಯಾವುದೇ ಮೋಹವನ್ನೂ,ಭಾವನೆಗಳನ್ನೂ ಇಟ್ಟುಕೊಳ್ಳಬೇಡಿ ಎಂದು ರೋಗಿಯ ಕಡೆಯವರಿಗೆ ಹೇಳಲಾಗುವುದಿಲ್ಲವಲ್ಲ.ಹೇಳಿದರೆ ಕೇಳಲಿಕ್ಕೆ ಅವರು ತನ್ನ ದೇಹದ ಅರ್ಧಭಾಗವನ್ನು ನಿರ್ಮಮ ಭಾವದಿಂದ ಕತ್ತರಿಸಲು ಮುಂದಾದ ಮಯೂರಧ್ವಜನೋ,ಗಿಡುಗನಿಗೆ ಆಹಾರವಾಗುತ್ತಿದ್ದ ಪಾರಿವಾಳವನ್ನು ರಕ್ಷಿಸಲು ತನ್ನ ತೊಡೆಯ ಮಾಂಸವನ್ನು ಕತ್ತರಿಸಿ ಕೊಟ್ಟ ಶಿಬಿ ಚಕ್ರವರ್ತಿಯೋ ಅಲ್ಲವಲ್ಲ.

ನಿರ್ಮೋಹ, ನಿರ್ಮಮ ಭಾವ ಇದೆಲ್ಲ ಹೇಳಲಿಕ್ಕೆ,ಬರೆಯಲಿಕ್ಕೆ ಸುಲಭ.ಮೋಹವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಈ ಯುಗದಲ್ಲಿ.ಆದರೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ಎಲ್ಲ ಕಾಲದಲ್ಲಿಯೂ ಮನಸ್ಸನ್ನು ಸ್ಥಿರವಾಗಿರಿಸಬಲ್ಲ ಸ್ಥಿತಪ್ರಜ್ಞತೆ ವೈದ್ಯರಿಗೂ,ರೋಗಿಗಳಿಗೂ,ರೋಗಿಯ ಸಂಬಂಧಿಕರಿಗೂ ಬಂದರೆ ಒಳ್ಳೆಯದು.ಮಯೂರಧ್ವಜನ ನಿರ್ಮಮ ಭಾವ ಮೂಡದಿದ್ದರೂ ಪರವಾಗಿಲ್ಲ ಸಾವಿನಲ್ಲಿಯೂ ಸ್ಥಿರವಾಗಿ ನಿಲ್ಲಬಲ್ಲ ಯುಧಿಷ್ಠಿರನ ಸ್ಥಿತಪ್ರಜ್ಞತೆಯಾದರೂ ನಮಗೆ ಲಭಿಸಲಿ ಎನ್ನುವುದಷ್ಟೇ ಈ ಕ್ಷಣದ ಪ್ರಾರ್ಥನೆ.