ಅದು 2007ನೇ ಇಸವಿ‌. ಭಾರತೀಯ ಕ್ರಿಕೆಟ್ ಟೀಮ್ ಇನ್ನೂ ಧೋನಿ ನಾಯಕತ್ವದಲ್ಲಿ ಟ್ವೆಂಟಿ ಟ್ವೆಂಟಿ ವಿಶ್ವಕಪ್ ಗೆದ್ದ ಖುಷಿಯಲ್ಲಿ ತೇಲಾಡುತ್ತಿತ್ತು. ಆ ಸಮಯದಲ್ಲಿ ಪಾಂಟಿಂಗ್‌ ನೇತೃತ್ವದ ಆಸೀಸ್ ಪಡೆ ಭಾರತದಲ್ಲಿ ಸರಣಿಗಾಗಿ ಆಗಮಿಸಿತ್ತು. ಧೋನಿ ಅಷ್ಟು ಹೊತ್ತಿಗೆ ಸೀಮಿತ ಓವರ್‌ಗಳ ಪಂದ್ಯಗಳಿಗೆ ಭಾರತದ ಪೂರ್ಣಾವಧಿ ನಾಯಕರಾಗಿದ್ದರು.ಸಚಿನ್,ದ್ರಾವಿಡ್,ಸೆಹ್ವಾಗ್,ಜಹೀರ್,ಹರ್ಭಜನ್,ಯುವರಾಜ್ ಮುಂತಾದ ದಿಗ್ಗಜರಿಂದ ಭಾರತ ಬಲಿಷ್ಟ ತಂಡವಾಗಿತ್ತು. ಅಲ್ಲದೇ ಭಾರತಕ್ಕೆ ಹೋಮ್ ಗ್ರೌಂಡಿನ ಅಡ್ವಾಂಟೇಜ್ ಕೂಡ ಇತ್ತು‌. ಆಸೀಸ್ ಸಹ ಪೂರ್ಣ ಸಾಮರ್ಥ್ಯದ ತಂಡದೊಂದಿಗೆ ಆಗಮಿಸಿದ್ದರೂ ಏಕದಿನ ಸರಣಿಯ ಒಂದೆರಡು ಪಂದ್ಯಗಳು ಮುಗಿಯುವಷ್ಟರಲ್ಲೇ ಆಸ್ಟ್ರೇಲಿಯಾ ತಂಡಕ್ಕೆ ಗಾಯಾಳುಗಳ ಕಾಟ ಶುರುವಾಗಿತ್ತು‌. ಸರಣಿ ಅರ್ಧ ಮುಗಿಯುವಷ್ಟರಲ್ಲಿ ಆಸೀಸ್’ನ ಅರ್ಧದಷ್ಟು ಪ್ರಮುಖ ಆಟಗಾರರು ಗಾಯಾಳುಗಳಾಗಿ ತವರಿಗೆ ವಾಪಸ್ಸಾಗಿದ್ದರು. ಆಲ್ಮೋಸ್ಟ್ ಪ್ರಥಮದರ್ಜೆಯ ತಂಡದಂತಿದ್ದ ಆಸೀಸ್ ಪಾಂಟಿಂಗ್‌ ನಾಯಕತ್ವದಲ್ಲಿ ಭಾರತಕ್ಕೆ ಭಾರತದಲ್ಲೇ ನೀರು ಕುಡಿಸಿ ಏಕದಿನ ಸರಣಿಯನ್ನು 4-2 ರಿಂದ ಗೆದ್ದಿತ್ತು. ಗೆದ್ದ ಎರಡು ಪಂದ್ಯಗಳನ್ನೂ ನಮ್ಮವರು ಹರಸಾಹಸ ಪಟ್ಟು ಗೆದ್ದಿದ್ದರು. ಪೂರ್ಣಪ್ರಮಾಣದ ಬಲಿಷ್ಟ ತಂಡವಿದ್ದೂ ಭಾರತಕ್ಕೆ ಏನೂ ಮಾಡಲಾಗಲಿಲ್ಲ. ಧೋನಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು..

ಕೋವಿಡ್ ಪಿಡುಗಿನ ನಂತರ ಭಾರತ ಮೊದಲ ಬಾರಿ ಕ್ರಿಕೆಟ್ ಆಡಲು ಆಸ್ಟ್ರೇಲಿಯಾಕ್ಕೆ ತೆರಳಿತ್ತು. ಬಹಳ ದಿನಗಳ ನಂತರ ಸುದೀರ್ಘ ಕ್ರಿಕೆಟ್ ಸರಣಿಯೊಂದು ನಡೆಯುತ್ತಿದ್ದುದ್ದರಿಂದ ಕ್ರಿಕೆಟ್ ಪ್ರೇಮಿಗಳು ಸಹಜವಾಗಿ ಕುತೂಹಲಿಗಳಾಗಿದ್ದರು. ಮೊದಲು ನಡೆದ ಏಕದಿನ ಸರಣಿಯಲ್ಲಿ ಆಸೀಸ್ ಬ್ಯಾಟ್ಸ್‌ಮನ್’ಗಳದ್ದೇ ಪ್ರಾಬಲ್ಯ.ಎಲ್ಲ ಪಂದ್ಯಗಳಲ್ಲೂ ಬೃಹತ್ ಮೊತ್ತವೇ. ತಕ್ಕ ಮಟ್ಟಿಗೆ ನಮ್ಮವರು ಪೈಪೋಟಿ ಕೊಟ್ಟರೂ ಸರಣಿ ಆತಿಥೇಯರ ಪಾಲಾಯಿತು‌.ನಂತರದ ಟಿ-ಟ್ವೆಂಟಿ ಸರಣಿಯಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿ ಭಾರತ ಸರಣಿ ಗೆದ್ದಿತು.

ನಿಜವಾದ ಅಗ್ನಿಪರೀಕ್ಷೆ ಇದ್ದದ್ದು ನಂತರದ ಟೆಸ್ಟ್ ಸರಣಿಯಲ್ಲಿ. ಟೆಸ್ಟ್ ಕ್ರಿಕೆಟ್ಟಿನ ವಿಷಯಕ್ಕೆ ಬಂದರೆ ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ಯಾವತ್ತೂ ಬಲಿಷ್ಠವೇ. ನಮ್ಮ ನಾಯಕ ಕೊಹ್ಲಿ ಕೂಡ ಬರೀ ಮೊದಲ ಪಂದ್ಯಕ್ಕಷ್ಟೇ ಲಭ್ಯವಿದ್ದರು. ಮೊದಲ ಪಂದ್ಯದ ಎರಡನೇ ಇನ್ನಿಂಗ್ಸಿನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಭಾರತ ಮುಗ್ಗರಿಸಿದಾಗ ಈ ಸರಣಿಯ ಕಥೆ ಗೋವಿಂದ ಎಂದೇ ಎಲ್ಲರೂ ಅಂದುಕೊಂಡಿದ್ದರು. ಸಾಲದ್ದಕ್ಕೆ paternity leave ತೆಗೆದುಕೊಂಡು ಕೊಹ್ಲಿ ವಾಪಾಸ್ಸಾಗಿದ್ದರಿಂದ ಭಾರತೀಯರ ನೈತಿಕ ಸ್ಥೈರ್ಯ ಕುಸಿದಿತ್ತು. ನಿಧಾನಕ್ಕೆ ಕೆಲವು ಆಟಗಾರರು ಗಾಯಾಳುಗಳಾಗುತ್ತಿದ್ದರು.

ಎರಡನೇ ಪಂದ್ಯ ಬಾಕ್ಸಿಂಗ್ ಡೇ ಟೆಸ್ಟ್. ಬಾಕ್ಸಿಂಗ್ ಡೇ ಮ್ಯಾಚ್ ಆಸೀಸ್ ಪಾಲಿಗೆ ಯಾವತ್ತೂ ವಿಶೇಷವೇ. ಅಂಥ ಪಂದ್ಯವನ್ನು ಗೆಲ್ಲಲು ಅವರು ಶತಾಯಗತಾಯ ಪ್ರಯತ್ನ ಪಡುತ್ತಾರೆ. ಮೊದಲ ಟೆಸ್ಟಿನಲ್ಲಿ 36 ರನ್ನಿಗೆ ಆಲೌಟಾದ ಕಹಿನೆನಪು,ಮೊದಲ ಪಂದ್ಯ ಸೋತಿದ್ದರಿಂದ ಆದ ಮಾನಸಿಕ ಆಘಾತ,ಕೊಹ್ಲಿ ಇಲ್ಲ,ರೋಹಿತ್ ಇಲ್ಲ.ಅಲ್ಲಿಯ ಬೌನ್ಸಿ ಟ್ರ್ಯಾಕ್’ಗಳು ಈ ಎಲ್ಲ ಕಾರಣಗಳಿಂದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಮೇಲೆ ಸಹಜವಾಗಿಯೇ ಒತ್ತಡ ಜಾಸ್ತಿಯಿತ್ತು.ಎಲ್ಲ ಒತ್ತಡವನ್ನು ತಮ್ಮ Cool captaincyಇಂದ ನಾಜೂಕಾಗಿ ನಿಭಾಯಿಸಿ ನಾಯಕನ ಆಟವಾಡಿ ಎರಡನೇ ಪಂದ್ಯವನ್ನು ಗೆಲ್ಲುವಂತೆ ಮಾಡಿದರು ರಹಾನೆ.

ಪೆಟ್ಟು ತಿಂದ ಹುಲಿಯಂತಾದ ಆಸೀಸ್ ಸಿಟ್ಟಿನಿಂದ ಮೂರನೇ ಪಂದ್ಯದಲ್ಲಿ ತನ್ನ ಹಳೆಯ ಚಾಳಿಯಾದ ಸ್ಲೆಡ್ಜಿಂಗ್ ಅನ್ನು ಮೈದಾನದಲ್ಲಿ ತೋರಿಸಿತು. ಭಾರತದಲ್ಲಿ ಅರ್ಧ ಆಟಗಾರರು ಗಾಯಾಳುಗಳಾಗಿದ್ದರು.ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲ್ಲಲು ಬೃಹತ್ ಗುರಿ ಪಡೆದಾಗ ಭಾರತ ಪಕ್ಕಾ ಸೋಲುತ್ತದೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ನಾಲ್ಕನೇ ಇನ್ನಿಂಗ್ಸಿನಲ್ಲಿ ಆಸೀಸ್’ನ ವೇಗದ ದಾಳಿಯನ್ನು ಎದುರಿಸುವುದು ಬಹಳ ಕಷ್ಟ. ಆದರೆ ಹನುಮ ವಿಹಾರಿ& ಅಶ್ವಿನ್ ಗಾಯಾಳುಗಳಾಗಿದ್ದರೂ ಗ್ರೇಟ್ ಇಂಡಿಯನ್ ಬ್ಲಾಕಥಾನ್ ನಡೆಸಿ ಅನೂಹ್ಯ ರೀತಿಯಲ್ಲಿ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಡ್ರಾ ಯಾವುದೇ ಗೆಲುವಿಗೂ ಕಮ್ಮಿಯಿರಲಿಲ್ಲ.

ಗೆದ್ದೇಬಿಡುತ್ತೇವೆ ಅಂದುಕೊಂಡಿದ್ದ ಮೂರನೇ  ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿದ್ದರಿಂದ ಕಾಂಗರೂಗಳ ಹತಾಶೆ ಎಲ್ಲೆ ಮೀರೀತ್ತು.ಇಂಥ ಸ್ಥಿತಿಯಲ್ಲೇ ಸ್ವಲ್ಪ ಜಾಸ್ತಿ ಒತ್ತಡದಿಂದ ಇತ್ತಂಡಗಳೂ ನಾಲ್ಕನೆ ಟೆಸ್ಟ್ ಆಡಲು ಬ್ರಿಸ್ಬೇನ್’ಗೆ ಬಂದಿದ್ದವು. ಅಲ್ಲಿನ ‘ಗಾಬಾ’ ಪಿಚ್ ವೇಗಿಗಳ ಸ್ವರ್ಗ. ಎಲ್ಲ ಚೆಂಡುಗಳೂ ಎದೆಯ ಎತ್ತರಕ್ಕೆ ಪುಟಿದು ಬರುತ್ತವೆ. ಮೊದಲೇ ಭಾರತೀಯರದ್ದು ಬೌನ್ಸಿ ಪಿಚ್’ಗಳಲ್ಲಿ ಪ್ರದರ್ಶನ ಅಷ್ಟಕಷ್ಟೇ.ತ್ರಿವಳಿ ವೇಗಿಗಳಾದ ಸ್ಟಾರ್ಕ್,ಹೇಝಲ್ವುಡ್,ಕಮಿನ್ಸ್ ಬೆಂಕಿಯುಂಡೆ ಉಗುಳುವಂತ ತಮ್ಮ ಬೌನ್ಸರ್’ಗಳಿಂದ ಭಾರತೀಯ ಬ್ಯಾಟ್ಸ್‌ಮನ್’ಗಳನ್ನು ಕಾಡಲು ತಯಾರಾಗಿ ನಿಂತಿದ್ದರು.ರೋಹಿತ್ ಶರ್ಮ ಫಾರ್ಮ್’ನಲ್ಲಿ ಇಲ್ಲ.ಕೊಹ್ಲಿ,ರಾಹುಲ್,ಬುಮ್ರಾ,ಜಡೇಜ,ಹನುಮ ವಿಹಾರಿ,ಸಾಹಾ,ಅಶ್ವಿನ್  ತಂಡದಲ್ಲಿ ಇಲ್ಲ. ನಾಲ್ಕನೇ ಟೆಸ್ಟ್’ಗೆ ಭಾರತದ್ದು ಸಂಪೂರ್ಣ ಹೊಸ ತಂಡ. ಹೆಚ್ಚಿನವರು ಅನನುಭವಿಗಳು. ರಣಜಿ ಕ್ರಿಕೆಟ್ಟಿನ ಕರ್ನಾಟಕ ತಂಡದ್ದಕ್ಕಿಂತಲೂ ದುರ್ಬಲ ತಂಡದೊಂದಿಗೆ ಭಾರತ ಗಾಬಾದಲ್ಲಿ ಆಡಲು ಬಂದಿತ್ತು. ಆದರೆ ನಿರೀಕ್ಷೆಗೂ ಮೀರಿ ಚಾಂಪಿಯನ್ಸ್ ಆಟವಾಡಿದ ನಮ್ಮವರು ಕಾಂಗರೂಗಳನ್ನು ಬೇಟೆಯಾಡಲಿಳಿದರು.ಆಸ್ಟ್ರೇಲಿಯಾದ ಯಾವ ದಾಂಡಿಗನಿಗೂ ಮೂರಂಕೆಯ ಮೊತ್ತ ದಾಟಲು ಬಿಡಲಿಲ್ಲ. ಆರ್ಸೀಬಿ ತಂಡದಲ್ಲಿ ಘೋರ ವೈಫಲ್ಯ ಅನುಭವಿಸಿದ್ದ ಸಿರಾಜ್ ಐದು ವಿಕೆಟ್’ಗಳ ಗೊಂಚಲಿನ ಸಿಹಿ ಅನುಭವಿಸಿದರು.ಶಾರ್ದೂಲ್ ಠಾಕೂರ್ ಮತ್ತು ಸುಂದರ್ ಪರಿಪೂರ್ಣ ಟೆಸ್ಟ್ ಬ್ಯಾಟ್ಸ್‌ಮನ್’ಗಳಂತೆ ಆಡಿ ಆಸೀಸ್ ಬೌಲರ್’ಗಳನ್ನು ದಣಿಸಿದರು‌.ಎರಡನೇ ಇನ್ನಿಂಗ್ಸ್‌ನಲ್ಲಿ ಅವರಿಗೆ ಬೃಹತ್ ಮೊತ್ತ ಪೇರಿಸಲು ಬಿಡದಿದ್ದರೂ ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲ್ಲಲು ಮುನ್ನೂರಕ್ಕೂ ಹೆಚ್ಚು ರನ್ ಮಾಡಬೇಕಾದ ಸ್ಥಿತಿ ಬಂತು ನಮ್ಮವರಿಗೆ. ಆಸೀಸ್’ನ ಮೊನಚಾದ ವೇಗದ ಬೌಲಿಂಗ್,ಗಾಬಾದ ಬೌನ್ಸಿ ಪಿಚ್,ನಾಲ್ಕನೇ ಇನ್ನಿಂಗ್ಸ್,ತವರಿನ ಅಂಗಳದ ಪ್ರಯೋಜನ ಹೀಗೆ ಎಲ್ಲ ಅಂಶಗಳೂ ಆಸೀಸ್ ಗೆಲುವಿಗೆ ಪೂರಕವಾಗಿದ್ದವು‌.ಚೇಸ್ ಮಾಡಲಿಕ್ಕೆ ಬಂದ ಭಾರತಕ್ಕೆ ರೋಹಿತ್ ಶರ್ಮ ಬಹಳ ಬೇಗ ಔಟಾಗಿದ್ದು ಸೋಲಿನ ನಡುಕ ಹುಟ್ಟಿಸಿತ್ತು‌‌.‌ಯಾವತ್ತೂ ಆಸೀಸ್ ಮೇಲೆ ಮುನ್ನುಗಿ ಬಾರಿಸಿ ಉತ್ತಮ ಪ್ರದರ್ಶನ ನೀಡುವ ರೋಹಿತ್ ಈ ಸರಣಿಯಲ್ಲಿ ಸಂಪೂರ್ಣ ವಿಫಲರಾಗಿಬಿಟ್ಟಿದ್ದರು. ನಂತರ ಬಂದ ಚೇತೇಶ್ವರ್ ಪೂಜಾರ ಹತ್ತಕ್ಕೂ ಹೆಚ್ಚು ಬಾರಿ ಬೌನ್ಸರ್’ಗಳನ್ನು ತಮ್ಮ ದೇಹದ ವಿವಿಧ ಭಾಗಗಳಿಗೆ ಹೊಡೆಸಿಕೊಂಡರು. ಶುಭಮನ್ ಗಿಲ್ ಮತ್ತು ಪಂತ್ ಅವರ ಆಕ್ರಮಣ,ಪೂಜಾರ ಅವರ ತಾಳ್ಮೆಯ ಬ್ಯಾಟಿಂಗ್’ನಿಂದ ಭಾರತ ಊಹಿಸಲಾಗದ ರೀತಿಯಲ್ಲಿ ನಾಲ್ಕನೇ ಪಂದ್ಯ ಗೆದ್ದಿತು.ಭರ್ತಿ ಮೂವತ್ತೆರಡು ವರ್ಷಗಳ‌ ನಂತರ ಆಸೀಸ್ ಗಾಬಾ ಮೈದಾನದಲ್ಲಿ ಸೋಲು ಕಂಡಿತು.

ಈ ಸರಣಿಯ ಗೆಲುವು ಕ್ರಿಕೆಟ್ ಪ್ರೇಮಿಗಳಿಗಷ್ಟೇ ಅಲ್ಲದೇ ಸ್ವತಃ ಭಾರತೀಯ ಆಟಗಾರರಿಗೂ unexpected. ನಾಲ್ಕನೇ ಪಂದ್ಯದಲ್ಲಿ ಸೋತರೂ ಭಾರತ ಕಳೆದುಕೊಳ್ಳುವುದಕ್ಕೆ ಏನೂ ಇರಲಿಲ್ಲ.ಏಕೆಂದರೆ ಇನ್ನೇನು ಸೋತೇ ಬಿಡುತ್ತೇವೆ ಅಂದುಕೊಂಡಿದ್ದ ಮೂರನೇ ಪಂದ್ಯವನ್ನು ಡ್ರಾ ಮಾಡಿಕೊಂಡದ್ದು ಇಡೀ ಸರಣಿಯಲ್ಲಿ ಭಾರತದ ಪಾಲಿಗೆ ಅತ್ಯಂತ ಮಹತ್ವದ ಸಂಗತಿಯಾಗಿತ್ತು. ಆದರೂ ನಾಲ್ಕನೇ ಪಂದ್ಯವನ್ನು ಗೆದ್ದು ಕಾಂಗರೂಗಳನ್ನು ನಖಶಿಖಾಂತ ಉರಿಸಿಬಿಟ್ಟರು ಭಾರತೀಯರು.

ಕೋವಿಡ್ ನಂತರ ನಡೆದ ಮೊದಲ ಸರಣಿಯೇ ಐತಿಹಾಸಿಕ ಬಾರ್ಡರ್-ಗಾವಸ್ಕರ್ ಟ್ರೋಫಿ.ಅದೂ ಆಸ್ಟ್ರೇಲಿಯಾದಲ್ಲಿ. ಆಡಿದ್ದು ಅರ್ಧದಷ್ಟು ಅನನುಭವಿ ಆಟಗಾರರನ್ನು ಹೊಂದಿದ unusual ಕ್ರಿಕೆಟ್ ಟೀಮ್.ಪೂರ್ಣಕಾಲಿಕ ನಾಯಕನ ಮಾರ್ಗದರ್ಶನವೂ ಇಲ್ಲ.‌ಈ ಎಲ್ಲ ಕಾರಣಕ್ಕೆ ಭಾರತದ ಸರಣಿ ಗೆಲುವು ಅತ್ಯಂತ ವಿಶೇಷದ್ದು.

ಕೊಹ್ಲಿಯ ಅನುಪಸ್ಥಿತಿಯಲ್ಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದು ಹಂಗಾಮಿ ನಾಯಕ ರಹಾನೆ.ಯಾವುದೇ ರೀತಿಯಲ್ಲಿ ಒತ್ತಡಕ್ಕೆ ಒಳಗಾಗದೇ,ಪ್ರಮುಖ ಆಟಗಾರರೆಲ್ಲ ಗಾಯಾಳುಗಳಾದರೂ ಸ್ಥೈರ್ಯ ಕಳೆದುಕೊಳ್ಳದೆ, ಅನುಭವವಿಲ್ಲದ ಹುಡುಗರನ್ನು ಸ್ಥಿತಪ್ರಜ್ಞತೆಯಿಂದ ಮುನ್ನಡೆಸಿದ್ದಕ್ಕಾಗಿ ಅಜಿಂಕ್ಯ ಅಭಿನಂದನಾರ್ಹರು.

ಕೊರೋನಾ ಭೀತಿಯಿಂದಾಗಿ ಸ್ಥಗಿತವಾಗಿದ್ದ ಭಾರತೀಯ ಕ್ರಿಕೆಟ್ ನಮ್ಮವರ ಆಸೀಸ್ ಪ್ರವಾಸದೊಂದಿಗೆ ಶುಭಾರಂಭಗೊಂಡಿದೆ. ಟಿ-ಟ್ವೆಂಟಿ ಮತ್ತು ಬಹು ಮುಖ್ಯವಾದ ಮತ್ತು ಐತಿಹಾಸಿಕವಾದ ಬಾರ್ಡರ್-ಗಾವಸ್ಕರ್ ಸರಣಿಯನ್ನು ಊಹಿಸಲಾಗದ ರೀತಿ ಗೆದ್ದಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು.ಕ್ರಿಕೆಟ್’ನ ನಿಜವಾದ ಬ್ಯೂಟಿ ಇರುವುದು ಟೆಸ್ಟ್’ನಲ್ಲಿ ಎನ್ನುವುದನ್ನು ಈ ಸರಣಿ ಮತ್ತೊಮ್ಮೆ ಸಾಬೀತು ಮಾಡಿದೆ.ಮುಖ್ಯವಾದ ಸರಣಿಯೊಂದನ್ನು ಜಯಿಸುವುದರ ಮೂಲಕ ಶುರುವಾದ ಭಾರತದ ಗೆಲುವಿನ ಯಾತ್ರೆ ಇನ್ನು ಮುಂಬರುವ ಸರಣಿಗಳಲ್ಲೂ ಮುಂದುವರೆಯಲಿ ಎಂಬುದೇ ಕ್ರಿಕೆಟ್ ಪ್ರೇಮಿಗಳೆಲ್ಲರ ಹಾರೈಕೆ.

TV9 ಕನ್ನಡ ವೆಬ್ ಪೋರ್ಟಲ್’ಗೆ ಬರೆದ ಲೇಖನ.


ಚೆಂದದ ಶೀರ್ಷಿಕೆ ಕೊಟ್ಟು ಅಲ್ಲಿ ಪ್ರಕಟಿಸಿದವನು ಗೆಳೆಯ ಸ್ಕಂದ ಕೆ.ಎನ್.