ಲಕ್ಷಾಂತರ ವರ್ಷಗಳ ಹಿಂದೆ ಉಗಮವಾದ ಭೂಮಿಯಲ್ಲಿ ಕಾಲಚಕ್ರ ಉರುಳಿದಂತೆ ಬಹಳಷ್ಟು ಬದಲಾವಣೆಗಳಾಗಿವೆ.ಸಾವಿರಾರು ವರ್ಷಗಳ ಹಿಂದೆ ಇದ್ದಂತಹ ಒಂದಷ್ಟು ಜೀವಪ್ರಬೇಧಗಳು ನಶಿಸಿಹೋಗಿ,ಮತ್ತೊಂದಷ್ಟು ಜೀವಿಗಳು ವಿಕಾಸದ ಹಾದಿಯಲ್ಲಿ ಬಲು ಎತ್ತರಕ್ಕೆ ಸಾಗಿ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿವೆ.ಮಾನವ ರೂಪುಗೊಂಡಿದ್ದು ಮಂಗನಿಂದ ಎಂದು ಜೀವವಿಕಾಸದ ಸಿದ್ಧಾಂತ ಪ್ರತಿಪಾದಿಸುತ್ತದೆಯಾದರೂ ಇಂದಿನ ಆಧುನಿಕ ಯುಗದಲ್ಲಿ, ಮಂಗಗಳನ್ನೇ ಮಾನವರ ಬುದ್ಧಿಮತ್ತೆಗೆ ಸಮನಾಗುವಂತೆ ತರಬೇತು ನೀಡುವಷ್ಟು ಬುದ್ಧಿವಂತನಾಗಿ ಜಗತ್ತಿನ ಹಲವಾರು ಗ್ರಹಗಳಲ್ಲೊಂದಾದ ಭೂಮಿಯ ಅತ್ಯಂತ ಶಕ್ತಿಶಾಲಿ ಜೀವಿಯಾಗಿ ಬೆಳೆದಿದ್ದಾನೆ ಮನುಷ್ಯ.ಹಲವು ವಿಧದ ತಂತ್ರಜ್ಞಾನಗಳನ್ನು ಹುಟ್ಟುಹಾಕಿ ಪ್ರಾಕೃತಿಕ ಶಕ್ತಿಗಳ ಮೇಲೂ ನಿಯಂತ್ರಣ ಸಾಧಿಸುವ ಹಂತದಲ್ಲಿ ಸಾಗುತ್ತಿದ್ದಾನೆ.ಅತಿ ವೇಗದ ಇಂಟರ್ನೆಟ್,ಅದರಿಂದಾಗಿ ಸಾಧ್ಯವಾಗುತ್ತಿರುವ ಸಾವಿರಾರು ಮೈಲಿ ದೂರದ ವ್ಯಕ್ತಿಗಳ ಜೊತೆಗಿನ ವಿಡೀಯೋ ಸಂಭಾಷಣೆಯ ಸೌಲಭ್ಯ,ಕ್ಷಿಪ್ರಗತಿಯಲ್ಲಿ ಆಗುತ್ತಿರುವ ಎಲ್ಲ ರೀತಿಯ ಮಾಹಿತಿ ಹಂಚಿಕೆ ಇನ್ನೂ ಮುಂತಾದ ಸೌಲಭ್ಯಗಳಿಂದ ಪ್ರಗತಿಯ ಪಥದಲ್ಲಿ ಭೂಮಿ ಮಾನವನ ನೇತೃತ್ವದಲ್ಲಿ ದಾಪುಗಾಲಿಕ್ಕುತ್ತಿದೆ.ಈ ಶತಮಾನದಲ್ಲೇ ಇಷ್ಟೆಲ್ಲ ಸಾಧ್ಯವಾಗುತ್ತಿರುವಾಗ ಇನ್ನು ಒಂದು ಸಹಸ್ರಮಾನ ಕಳೆದ ಮೇಲೆ ಮಾನವನ,ಭೂಮಿಯ,ಅದರಲ್ಲಿರುವ ಬೇರೆ ಬೇರೆ ಜೀವಿಗಳ ಸ್ಥಿತಿ ಹೇಗಿದ್ದೀತು?ಹೊಸ ಹೊಸ ಆವಿಷ್ಕಾರಗಳ ಮೂಲಕ ಅವರೆಲ್ಲ ಎಷ್ಟು ಅಭಿವೃದ್ಧಿಯಾಗಬಹುದೆಂದು ಊಹಿಸುವುದು ತುಸು ಕಷ್ಟವಾಗುತ್ತದೆ.

ನಾವು ಇಚ್ಛಿಸಿದ ರೀತಿಯಲ್ಲಿ ನಮ್ಮ ಮಕ್ಕಳ ಆಕಾರ,ರೂಪ,ಗುಣ,ಬುದ್ಧಿಸಾಮರ್ಥ್ಯ,ಆಯುಷ್ಯ ಎಲ್ಲವನ್ನು ಮೊದಲೇ ನಿರ್ಧರಿಸಿ ಮಕ್ಕಳನ್ನು ಡಿಸೈನ್ ಮಾಡಿ ಹುಟ್ಟಿಸುವುದು,ದೇಹದೊಳಗೆ ಕಂಪ್ಯೂಟರ್ ಚಿಪ್ ಅಳವಡಿಸಿಕೊಂಡು ಕಂಪ್ಯೂಟರ್ ವೇಗದಲ್ಲೇ ಕಾರ್ಯನಿರ್ವಹಿಸುವ ಮಾನವರು,ವಿಭಿನ್ನ ಜೀವಿ,ಜಾತಿಗಳ ಜೊತೆ ಮಾನವರ ವಂಶವಾಹಿಯನ್ನು ಬೆಸುಗೆ ಮಾಡಿದ್ದರಿಂದ ಉದ್ಭವಿಸುವ ಅಂತರ್ಜೀವಿಗಳು,ಎಲ್ಲ ರೀತಿಯಲ್ಲೂ ಒಬ್ಬ ವ್ಯಕ್ತಿಯನ್ನೇ ಹೋಲುವ ಕ್ಲೋನ್’ಗಳು,ಸಾವಿರಾರು ಮೈಲಿಗಳಷ್ಟು ದೂರವನ್ನು ಕೆಲವೇ ಸೆಕೆಂಡುಗಳಲ್ಲಿ ಕ್ರಮಿಸುವ ಸಾಮರ್ಥ್ಯವುಳ್ಳ ವ್ಯೂಮದ್ವಂಸಿಗಳು,ಯಾವುದೇ ಸಾಂಕ್ರಾಮಿಕ ರೋಗವೇ ಇಲ್ಲದ ಜಗತ್ತು,ಕ್ಷಿಪ್ರಗತಿಯಲ್ಲಿ ಪ್ರಪಂಚದ ಯಾವುದೇ ಅನ್ಯಗ್ರಹಜೀವಿಗಳೊಂದಿಗೂ ಸಾಧ್ಯವಾಗುವ ಸಂಪರ್ಕ,ಪ್ರಪಂಚದ ಸಾರ್ವಭೌಮತೆಗೆ ಜಗತ್ತಿನ,ಅಂತರಿಕ್ಷದ ವಿವಿಧ ಗ್ರಹಗಳ ನಡುವೆ ಸದಾ ನಡೆಯುವ ಪೈಪೋಟಿ,ಪೈಪೋಟಿಯಲ್ಲಿ ಭೂಮಿ ಸದಾ ಮುಂದಿರಬೇಕೆಂಬ ಕಾರಣಕ್ಕೆ ಇಲ್ಲಿನ ಎಲ್ಲ ಜೀವಿಗಳೂ ಶಕ್ತಿವಂತರಾಗಬೇಕೆಂಬ ಬಯಕೆ,ಆ ಕಾರಣಕ್ಕೆ ಅಂಗವಿಕಲರನ್ನು,ಬುದ್ಧಿಮಾಂದ್ಯರನ್ನು ವಿವಿಧ ಆರೋಗ್ಯ ತಂತ್ರಜ್ಞಾನಗಳ ಮೂಲಕ ಚಿಕಿತ್ಸೆಗೆ ಒಳಪಡಿಸಿ ಅವರನ್ನು ಯಾವ ರೂಪದಲ್ಲಾದರೂ ಸರಿ ಅತ್ಯಂತ ಶಕ್ತಿಶಾಲಿ ಜೀವಿಗಳಾಗಿ ಮಾರ್ಪಾಡು ಮಾಡುವುದು,ರೋಗವನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವ ರೋಬೋ ಹೀಲರ್’ಗಳು,ತಮಗೆ ಬೇಕಾದ ಸಮಯಕ್ಕೆ ಬಯಸಿದ ರೀತಿಯಲ್ಲಿ ಯಾವುದೇ ಥರದ ನೋವಾಗದಂತೆ ಪ್ರಾಣತ್ಯಾಗ ಮಾಡುವ ಅವಕಾಶ,ತಮ್ಮ ಆತ್ಮವನ್ನು ದೇಹದಿಂದ ಬೇರ್ಪಡಿಸಿ ಮುಂದಿನ ಜನ್ಮದಲ್ಲೂ ಅದೇ ಆತ್ಮವನ್ನು ತಮ್ಮ ದೇಹದೊಳಗೆ ಸಾಕ್ಷಾತ್ಕಾರಗೊಳಿಸಿಕೊಳ್ಳುವ ಯೋಗ,ಇನ್ನೊಬ್ಬರ ಮನಸ್ಸಿನೊಳಗೆ ಯಾವ ವಿಚಾರಗಳಿವೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿರುವ ಕಿವಿಯೋಲೆಯ ರೂಪದಲ್ಲಿರುವ ಯಂತ್ರ ಇವೆಲ್ಲ ಲಭ್ಯವಾದರೆ ಹೇಗಿರಬಹುದು? ಈಗಿನ ಶತಮಾನದಲ್ಲಿ ಜನಸಾಮಾನ್ಯರು ಊಹಿಸಲೇ ಆಗದಂಥ ಸಂಗತಿಗಳಿವು. ಇಂಥ ಎಲ್ಲ ವಿಷಯಗಳನ್ನಿಟ್ಟುಕೊಂಡು ಡಾ.ಶಾಂತಲ ಅವರು ಬರೆದಿರುವ ಸೈನ್ಸ್ ಫಿಕ್ಷನ್ ‘3019 AD’. ಮೈಲ್ಯಾಂಗ್ ಡಿಜಿಟಲ್ ಬುಕ್ಸ್ ಅವರು ಪ್ರಕಾಶಿಸಿರುವ ಈ ಪುಸ್ತಕ ಮುದ್ರಿತ ರೂಪ,ಇ-ಬುಕ್,ಆಡಿಯೋ ಬುಕ್ ರೂಪಗಳಲ್ಲಿ ಲಭ್ಯವಿದೆ.

ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕ ಕಥೆ,ಕಾದಂಬರಿಗಳು ಬಂದದ್ದು ಕಡಿಮೆ.ಅದರಲ್ಲೂ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸಿ,ಓದುಗನ ಎದೆಬಡಿತವನ್ನು ಹೆಚ್ಚಿಸುವ ಥ್ರಿಲ್ಲರ್’ಗಳು ಬಂದದ್ದು ತೀರಾ ವಿರಳ. ಡಾ.ಕೆ.ಎನ್.ಗಣೇಶಯ್ಯನವರು ವೈಜ್ಞಾನಿಕ ವಿಷಯಗಳನ್ನೊಳಗೊಂಡ ಐತಿಹಾಸಿಕ ಥ್ರಿಲ್ಲರ್ ಕಾದಂಬರಿಗಳನ್ನು ಬರೆದಿದ್ದರೂ Pure Scientific Thriller ಕನ್ನಡದಲ್ಲಿ ಬಂದದ್ದು ಬೆರಳೆಣಿಕೆಯಷ್ಟು ಮಾತ್ರ.ಇನ್ನು ಒಂದು ಸಹಸ್ರಮಾನಗಳ ನಂತರ ಅಂದರೆ ಸುಮಾರು 3019ನೇ ಇಸವಿಯ ಹೊತ್ತಿಗೆ ಪ್ರಪಂಚದ,ಭೂಮಿಯ ಸ್ಥಿತಿ ಹೇಗಿರಬಹುದು,ಯಾವೆಲ್ಲ ವಿದ್ಯಮಾನಗಳು ನಡೆಯಬಹುದು ಎಂಬ ಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಸೈಂಟಿಫಿಕ್ ಥ್ರಿಲ್ಲರ್ ಕಾದಂಬರಿ ‘3019 AD’.

ಪ್ರತ್ಯೇಕ ರಾಜ್ಯಕ್ಕೆ ಪ್ರತ್ಯೇಕ ಅರಸ ಎಂಬ ವ್ಯವಸ್ಥೆ ನಶಿಸಿ ಒಂದೇ ದೇಶ ಎಂಬ ಪದ್ಧತಿ ಈಗ ಇರುವಂತೆ 3019 ರಲ್ಲಿ ದೇಶ ಎಂಬ ವ್ಯವಸ್ಥೆಯೂ ಇಲ್ಲವಾಗಿ ಇಡೀ ಭೂಮಿಗೆ ಒಂದೇ ಭೂ ಸರ್ಕಾರ ಇರುತ್ತದೆ.ಆ ಭೂಸರ್ಕಾರ ಅಂತರಿಕ್ಷದ ಇತರ ಗ್ರಹಗಳನ್ನು ಹಿಮ್ಮೆಟ್ಟಿಸಿ ಬ್ರಹ್ಮಾಂಡದಲ್ಲಿ ಭೂಮಿಯೇ ಸಾರ್ವಭೌಮತ್ವವನ್ನು ಪಡೆಯಬೇಕೆಂದು ಭೂಮಿಯ,ಅಲ್ಲಿನ ಜೀವಿಗಳ ಶಕ್ತಿವರ್ಧನೆಯ ಕೆಲಸಗಳನ್ನು ಸದಾ ಮಾಡುತ್ತಿರುತ್ತದೆ.ಹಾಗಾಗಿಯೇ ಜನರು ಸಾಧ್ಯವಾದಷ್ಟು ಮಟ್ಟಿಗೆ ಮೊದಲೇ ಯೋಚಿಸಿದ ರೀತಿಯಲ್ಲಿ ವಿನ್ಯಾಸ ಮಾಡಿಸಿ ಡಿಸೈನರ್ ಮಕ್ಕಳನ್ನು ಪಡೆಯಬೇಕೆಂದೂ,ಇಲ್ಲವಾದರೆ ಮನುಷ್ಯರ ದೇಹದೊಳಗೆ ಕಂಪ್ಯೂಟರ್ ಚಿಪ್ ಇಡಿಸಿ,ಕಂಪ್ಯೂಟರ್’ಗಿಂತಲೂ ವೇಗವಾಗಿ ಕಾರ್ಯನಿರ್ವಹಿಸುವ,ದಣಿವೇ ಆಗದ ಅಂತರ್ಜಾಲ ಜೀವಿಗಳಾಗಬೇಕೆಂದೂ,ಅದೂ ಅಲ್ಲವಾದರೆ ಅಶಕ್ತರಾದ ಮಾನವರ ವಂಶವಾಹಿಗೆ ಬೇರೆ ಬೇರೆ ಶಕ್ತಿಯುಳ್ಳ ಪ್ರಾಣಿಗಳ ವಂಶವಾಹಿಗಳನ್ನು ಜೋಡಿಸಿ ಅಂತರ್ಜೀವಿಗಳನ್ನು ಸೃಷ್ಟಿಸಬೇಕೆಂದು ಸದಾಕಾಲ ಭೂಮಿಯ ಜನರನ್ನು ಪ್ರೋತ್ಸಾಹಿಸುತ್ತದೆ.ಬಹುತೇಕ ಜನರೂ ತಮಗೆ ಬೇಕಾದ ರೂಪ,ಆಕಾರ,ಶಕ್ತಿಗಳನ್ನು ಪಡೆದು ಶಕ್ತಿಶಾಲಿಗಳಾಗಿ ಬದುಕಬಹುದೆಂದು ಸರ್ಕಾರದ ಮಾತನ್ನೇ ಅನುಮೋದಿಸಿ ಡಿಸೈನರ್ ಜೀವಿಗಳೋ,ಅಂತರ್ಜಾಲಿಗಳೋ,ಕ್ಲೋನ್’ಗಳೋ ಆಗಿ ಬದುಕುತ್ತಿರುತ್ತಾರೆ.ಇಂಥವರ ನಡುವೆಯೇ ಈ ಎಲ್ಲ ತಂತ್ರಜ್ಞಾನಗಳನ್ನು ವಿರೋಧಿಸುವ,ನೈಸರ್ಗಿಕವಾಗಿ ತಾವು ಪಡೆದ ಶರೀರವನ್ನು ಯಾವುದೇ ಬದಲಾವಣೆಗೊಳಪಡಿಸದೇ,ಸಾಂಪ್ರದಾಯಿಕವಾಗಿ ಮಕ್ಕಳನ್ನು ಪಡೆದು,ಸಾಮಾನ್ಯ ಮನುಷ್ಯರಂತೆ ಸಹಜವಾಗಿ ಬದುಕಿ ಕೊನೆಗೆ ಸ್ವಾಭಾವಿಕವಾಗಿ ಬರುವ ಸಾವನ್ನು ಗೌರವಿಸುವ ಒಂದು ವರ್ಗವಿರುತ್ತದೆ.ಅವರನ್ನು ಗಾಂಪರು ಎಂದು ಕರೆಯಲಾಗುತ್ತದೆ.

ಡಾ.ಅಮರ್ತ್ಯ ಆದಿಪಂತಿ ಅಂಥ ಒಬ್ಬ ಗಾಂಪರ ಗುಂಪಿನವ.ವೃತ್ತಿಯಲ್ಲಿ ಮಾನಸಿಕ ತಜ್ಞ.ಗಾಂಪರಿಗಷ್ಟೇ ಅಲ್ಲದೆ ಡಿಸೈನರ್,ಅಂತರ್ಜಾಲಜೀವಿಗಳು(ಸೈಬಾರ್ಗ್’ಗಳು)ಕ್ಲೋನ್’ಗಳಿಗೂ ಮಾನಸಿಕ ಚಿಕಿತ್ಸೆ ನೀಡುವ ವೈದ್ಯ.ಅವನ ಅಪ್ಪ ಅಮ್ಮ (ಹೂಮಾನ್ ಆದಿಪಂತಿ ಮತ್ತು ಮಿಹಿರಾ ಆದಿಪಂತಿ) ಅಮರ್ತ್ಯ ಸಣ್ಣವನಿರುವಾಗಲೇ ನಿಗೂಢವಾಗಿ ಸಾವನ್ನಪ್ಪಿರುತ್ತಾರೆ.ಅವರ ಸಾವಿನ ರಹಸ್ಯವನ್ನು ಹುಡುಕಲು ಯಾವ ದಾರಿಯೂ ಸಿಗದೆ,ಅದಕ್ಕೆ ಅಷ್ಟೇನೂ ತಲೆಕೆಡಿಸಿಕೊಳ್ಳದೆ ನೆಮ್ಮದಿಯಿಂದ ಬದುಕುತ್ತಿರುತ್ತಾನೆ.ಹೀಗಿರುವಾಗ ಅವನ ಆತ್ಮೀಯ ಮಿತ್ರನಾದ ಸೈಬಾರ್ಗ್ ಆಗಿರುವ ರೋದಾಸ್ ಯಾವುದೋ ಒಂದು ಅಪರೂಪದ ರೋಗಕ್ಕೆ ತುತ್ತಾಗಿ,ಯಾವ ರೋಗ ಎಂದು ಗೊತ್ತಾಗುವ ಮೊದಲೇ ನಿಗೂಢವಾಗಿ ಸಾಯುತ್ತಾನೆ.ಅವನ ಸಾವಿಗೆ ಕಾರಣವಾಗುವ ರೋಗ ಯಾವುದು?ಸಾಂಕ್ರಾಮಿಕ ರೋಗಗಳೇ ಇಲ್ಲದ,ರೋಬೋಟ್’ಗಳೂ ರೋಗವನ್ನು ಡೈಯಾಗ್ನೋಸ್ ಮಾಡಿ ಚಿಕಿತ್ಸೆ ನೀಡುವಷ್ಟು ವೈದ್ಯವಿಜ್ಞಾನ,ತಂತ್ರಜ್ಞಾನ ಮುಂದುವರೆದ ಕಾಲದಲ್ಲೂ ಭಯಾನಕವಾಗಿ ಮನುಷ್ಯರನ್ನುಆ ರೋಗ ಆಕ್ರಮಿಸುವುದೇಕೆ? ಅದಕ್ಕೆ ಚಿಕಿತ್ಸೆ ಇದೆಯೇ? ಅದರಿಂದ ಯಾರೆಲ್ಲ ಬದುಕುಳಿಯುತ್ತಾರೆ ಎಂಬುದನ್ನು ತಿಳಿಯಲು ಪುಸ್ತಕ ಓದಬೇಕಷ್ಟೇ.

ಮನುಷ್ಯರ ಜನ್ಮ ಜಾತಕ ಇದ್ದಂತೆಯೇ ನಮ್ಮ ದೇಹದ ವಂಶವಾಹಿಗಳಿಗೆ(Genes) ಜಾತಕವಿದೆಯಂತೆ.ಅವುಗಳ ಜಾತಕವನ್ನೂ ನಮಗೆ ಬೇಕಾದಂತೆ ಬದಲಾಯಿಸಬಹುದಂತೆ.ಆತ್ಮಕ್ಕೆ ಜೀವಚೈತನ್ಯವೆಂದು ಹೆಸರಿಟ್ಟು,ಅದರ ಸಂಪೂರ್ಣ ಶಕ್ತಿಯನ್ನು ಅಭ್ಯಸಿಸಿ ಬದುಕು ಸಾಕೆನಿಸಿದ ಕಾಲಕ್ಕೆ ಜೀವಚೈತನ್ಯವನ್ನು ನಮ್ಮ ದೇಹದಿಂದ ಬೇರ್ಪಡಿಸಿ ಸಾಯುವಂತೆ ಮಾಡಿ,ಆತ್ಮವನ್ನು ಸಂರಕ್ಷಿಸಿಟ್ಟು ಮುಂದೆ ಆ ವ್ಯಕ್ತಿ ಬಯಸಿದ ಕಾಲಕ್ಕೆ ಅದೇ ಜೀವಚೈತನ್ಯವನ್ನು ಪುನರುಜ್ಜೀವನಗೊಳಿಸಿ ಬಯಸಿದ ವಿನ್ಯಾಸದ ರೂಪದಲ್ಲಿ ಮರುಹುಟ್ಟುವಂತೆ ಮಾಡುವ ಅಂದರೆ ಮನುಷ್ಯನನ್ನು ಅಮರನನ್ನಾಗಿಸುವ ಅಸಾಮಾನ್ಯ ಕಲ್ಪನೆಗಳೆಲ್ಲ 3019 ADಯಲ್ಲಿ ಕಾಣಸಿಗುತ್ತದೆ.

ಜೀವ ಚೈತನ್ಯವನ್ನು ಸಂರಕ್ಷಿಸಿ ಬಯಸಿದ ಸಮಯಕ್ಕೆ ಸಾವನ್ನು,ಹುಟ್ಟನ್ನು ಪಡೆಯುವ ಆದರೆ ವಿನ್ಯಾಸಿಗ ಮಕ್ಕಳನ್ನೇ ಸೃಷ್ಟಿಸಬೇಕಾದ ಅನಿವಾರ್ಯತೆಯಿರುವ ‘ಚೈತನ್ಯ ಪ್ರೋದ್ದಾವನಾ ಮಸೂದೆ’ಯ ಪರ ವಿರೋಧಗಳ ಬಗ್ಗೆ ನಡೆಯುವ ಚರ್ಚೆ ಓದುಗನಲ್ಲಿ ಹೊಸ ಜಿಜ್ಞಾಸೆಯನ್ನು ಹುಟ್ಟುಹಾಕುತ್ತದೆ.ಕಾಲುಗಳಲ್ಲಿ ಶಕ್ತಿಯಿಲ್ಲದ ಅಂಗವಿಕಲಳು ಎಂಬ ಕಾರಣಕ್ಕೆ ಅಸಾಮಾನ್ಯ ಬುದ್ಧಿಶಕ್ತಿಯಿರುವ ದೇವಾಹುತಿ ಎಂಬ ಹೆಣ್ಣು ಮಗಳನ್ನು ಭೂಸರ್ಕಾರ ಅಂತರ್ಜೀವಿಯನ್ನಾಗಿ ಮಾಡಿ ಜಿರಳೆಯನ್ನಾಗಿ ಪರಿವರ್ತಿಸುವ ಸನ್ನಿವೇಶವನ್ನು ಓದುವಾಗ ಮನಸ್ಸಿನ ಮೂಲೆಯಲ್ಲೊಂದು ನೋವಿನ,ಹತಾಶೆಯ ಕಿಡಿಯೇಳುತ್ತದೆ.ಚಿಂತಿಸಿ ಚರ್ಚಿಸುವಂತೆ ಮಾಡುವ,ಮನಸ್ಸಿಗೆ ಆಪ್ತವಾಗುವ ಅನೇಕ ಸನ್ನಿವೇಶಗಳಿವೆ ಕಾದಂಬರಿಯಲ್ಲಿ.

ಇನ್ನು ಒಂದು ಸಾವಿರ ವರ್ಷಗಳ ನಂತರ ಭೂಮಿ ಹೇಗಿರಬಹುದೆಂಬ ತಮ್ಮ ಕಲ್ಪನೆಗೆ ಅಕ್ಷರರೂಪಕೊಟ್ಟು 3019 ADಯನ್ನು ಒಂದು ಅತ್ಯದ್ಭುತ ಸೈಂಟಿಫಿಕ್ ಥ್ರಿಲ್ಲರ್ ಕಾದಂಬರಿಯಾಗಿಸಿದ್ದಕ್ಕೆ,ಓದುಗರಿಗೆ ಸ್ವಲ್ಪವೂ ಬೋರಾಗದಂತೆ ಕಟ್ಟಿದ ಕಥನ ಶೈಲಿಗೆ,ಕ್ಲಿಷ್ಟವಾದ ವೈಜ್ಞಾನಿಕ ಪದಗಳನ್ನೂ ಸಾಮಾನ್ಯರಿಗೆ ಅರ್ಥವಾಗುವಂತೆ ಬರೆದದ್ದಕ್ಕೆ ವೃತ್ತಿಯಿಂದ ಸ್ತ್ರೀರೋಗ ತಜ್ಞೆಯಾಗಿರುವ ಡಾ.ಶಾಂತಲ ಅಭಿನಂದನಾರ್ಹರು.ಕಲ್ಪಿಸಿಕೊಳ್ಳಲು ಭಯವಾಗುವ ಕಲ್ಪಿಸಿಕೊಂಡರೂ ಗಾಬರಿಯಾಗುವ ಭೂಮಿಯ,ಮಾನವರ ಅತ್ಯಂತ ಮುಂದುವರೆದ ರೂಪವನ್ನು ಕಲ್ಪನೆಯಲ್ಲೇ ಕಣ್ತುಂಬಿಕೊಳ್ಳಲು ವೈಜ್ಞಾನಿಕ ಸಾಹಿತ್ಯವನ್ನು ಇಷ್ಟಪಡುವವರೆಲ್ಲರೂ ತಪ್ಪದೇ ಓದಬೇಕಾದ ಪುಸ್ತಕ 3019 AD.

ಪುಸ್ತಕವನ್ನು ಖರೀದಿಸಲು ಲಿಂಕ್ ಇಲ್ಲಿದೆ. 3019 AD (ಪ್ರಿಂಟ್ ಪುಸ್ತಕ)