ದುರ್ಯೋಧನನ ಒತ್ತಾಯದ ಮೇರೆಗೆ ಸೇನಾಧಿಪತ್ಯ ವಹಿಸಿಕೊಂಡ ಭೀಷ್ಮ ಕುರುಕ್ಷೇತ್ರ ಯುದ್ಧದಲ್ಲಿ ದಿನವೊಂದಕ್ಕೆ ಹತ್ತುಸಾವಿರ ತಲೆ ಕತ್ತರಿಸುವುದಾಗಿ ಪ್ರತಿಜ್ಞೆ ಮಾಡುತ್ತಾನೆ.ತಾನು ಸೇನಾಧಿಪತಿಯಾಗಿರುವವರೆಗೆ ಪಂಚಪಾಂಡವರನ್ನು ಹೊರತುಪಡಿಸಿ ಪಾಂಡವರ ಪಾಳಯದ ಹತ್ತುಸಾವಿರ ಯೋಧರನ್ನು ಒಂದು ದಿನದಲ್ಲಿ ಕೊಂದೇ ಕೊಲ್ಲುತ್ತೇನೆ ಎನ್ನುತ್ತಾನೆ ಕೌರವನಿಗೆ.ಮೊದಲ ಎಂಟು ದಿನದ ಯುದ್ಧದಲ್ಲಿ ಗಾಂಗೇಯ ಪ್ರಚಂಡ ಪರಾಕ್ರಮ ಮೆರೆದು ತನ್ನ ಮಾತಿನಂತೆ ದಿನಕ್ಕೆ ಹತ್ತುಸಾವಿರ ವೈರಿಗಳನ್ನು ಕೊಲ್ಲುತ್ತಾನೆ.ಯುದ್ಧದ ವೇಳೆ ಮುಗಿಯದಿದ್ದರೆ ಹತ್ತು ಸಾವಿರಕ್ಕಿಂತ ಜಾಸ್ತಿಯಾದರೂ ಆದೀತು ಭೀಷ್ಮನಿಂದ ಹತವಾಗುವವರ ಸಂಖ್ಯೆ.

ಎಂಟನೇ ದಿನದ ಯುದ್ಧದಲ್ಲಿ ಹತ್ತು ಸಾವಿರ ಜನರನ್ನು ಕೊಂದು ಮುಗಿಸಿದ ಕೆಲವೇ ಕ್ಷಣಗಳಲ್ಲಿ ಕೃಷ್ಣಾರ್ಜುನರ ರಥ ಎದುರಾಗುತ್ತದೆ ಭೀಷ್ಮನಿಗೆ.ತನ್ನ ಯಾವ ಅಸ್ತ್ರಗಳೂ ಅರ್ಜುನನ್ನು ಏನೂ ಮಾಡದಿದ್ದಾಗ ರಥವನ್ನು ಮುನ್ನಡೆಸುತ್ತಿದ್ದ ಸಾರಥಿ ಶ್ರೀಕೃಷ್ಣನ ಮೇಲೆ ಬಾಣ ಪ್ರಯೋಗಕ್ಕೆ ಮುಂದಾದಾಗ ಶ್ರೀಹರಿಯ ಸುದರ್ಶನ ಚಕ್ರಕ್ಕೆ ಸಿಟ್ಟು ಬಂದು ಭೀಷ್ಮನ ಕೊರಳು ಕತ್ತರಿಸಲು ಮುನ್ನುಗ್ಗುತ್ತದೆ.ಸುದರ್ಶನವನ್ನು ತಡೆಯಲು ವಾಸುದೇವ ಹಿಂದೆಯೇ ಓಡಿಬರುತ್ತಾನೆ.ಆಗ ಶ್ರೀಹರಿಯ ವಿಶೇಷ ಅನುಗ್ರಹ ಭೀಷ್ಮನಿಗಾಗುವುದರಿಂದ ತನ್ನ ಭೀಷ್ಮತ್ವ ಈ ಕ್ಷಣದಿಂದ ಕಳೆಯಿತು,ಇನ್ನು ಮುಂದೆ ದೇವವೃತನಾಗಿ ಮೋಕ್ಷದ ನಿರೀಕ್ಷೆಯಲ್ಲಿರುತ್ತೇನೆ ಎನ್ನುತ್ತಾನೆ ಭೀಷ್ಮ.ನಂತರ ಶಿಖಂಡಿಯೊಂದಿಗಿನ ಯುದ್ಧದಲ್ಲಿ ಶಸ್ತ್ರತ್ಯಾಗ ಮಾಡಿ ಅರ್ಜುನ ನಿರ್ಮಿಸಿದ ಶರಶಯ್ಯೆಯಲ್ಲಿ ಮಲಗಿ ಪ್ರಾಣತ್ಯಾಗ ಮಾಡಲು ಉತ್ತರಾಯಣದ ನಿರೀಕ್ಷೆಯಲ್ಲಿರುತ್ತಾನೆ.ಆ ಭೀಷ್ಮ ಮತ್ತೆ ಬಾಣಗಳ ಹಾಸಿಗೆಯಿಂದ ಎದ್ದೇಳಲಿಲ್ಲ.

ಆದರೆ….

ಇಂದಿನ ಕಲಿಯುಗದಲ್ಲಿ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಮತ್ತೆ ಎದ್ದು ಅಸ್ತ್ರ ಕೈಗೆತ್ತಿಕೊಂಡನೇ ಎಂದು ಭೀತಿಯಾಗುತ್ತಿದೆ.

ಕೋವಿಡ್ ತನ್ನ ಆರ್ಭಟವನ್ನು ಅತೀ ಹೆಚ್ಚಾಗಿ ತೋರಿದ್ದು ಮಹಾರಾಷ್ಟ್ರದಲ್ಲಿ.ಕಳೆದ 2020ರ ಏಪ್ರಿಲ್ ತಿಂಗಳಿನಿಂದ ವರ್ಷಾಂತ್ಯದವರೆಗೂ ಸರಿಸುಮಾರು ಹತ್ತುಸಾವಿರ ಕೋವಿಡ್ ಕೇಸುಗಳು ದಿನವೊಂದಕ್ಕೆ ಮಹಾರಾಷ್ಟ್ರದಲ್ಲಿ ವರದಿಯಾಗುತ್ತಿದ್ದವು.ಅಂದು ಕುರುಕ್ಷೇತ್ರದಲ್ಲಿ ಭೀಷ್ಮ ದಿನಕ್ಕೆ ಹತ್ತುಸಾವಿರ ತಲೆ ಕತ್ತರಿಸುತ್ತಿದ್ದಂತೆ ಇಂದಿನ ಕೋವಿಡ್ ಕೂಡ ಮಹಾರಾಷ್ಟ್ರದಲ್ಲಿ ಭೀಷ್ಮಾವತಾರ ತಳೆದು ದಿನಕ್ಕೆ ಕನಿಷ್ಟ ಹತ್ತು ಸಾವಿರ ಜನರನ್ನು ಸೋಂಕಿತರನ್ನಾಗಿಸುತ್ತಿತ್ತು.

ಕಾಲಕ್ರಮೇಣ ಎಲ್ಲ ರಾಜ್ಯಗಳಲ್ಲಿ ನಿಯಂತ್ರಣಕ್ಕೆ ಬಂದಂತೆ ಮಹಾರಾಷ್ಟ್ರದಲ್ಲಿ ಕೂಡ ಕೋವಿಡ್ ನಿಯಂತ್ರಣಕ್ಕೆ ಬಂದು ಜನಜೀವನ ಸಾಮಾನ್ಯ ಮಟ್ಟಕ್ಕೆ ಬಂದಿತ್ತು.ಭೀಷ್ಮಾವತಾರಿ ಕೋವಿಡ್ ಶಸ್ತ್ರ ಸನ್ಯಾಸ ತೆಗೆದುಕೊಂಡು ಶರಶಯ್ಯೆಯಲ್ಲಿ ಮಲಗಿತು.ಕೆಲವು ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಒಂದು ಸಾವಿರಕ್ಕಿಂತಲೂ ಕಡಿಮೆ ಕೇಸುಗಳು ವರದಿಯಾಗಿದ್ದವು.

ಎಲ್ಲರೂ ನಿರೀಕ್ಷಿಸಿದ್ದ ಎರಡನೇ ಅಲೆ ಮಹಾರಾಷ್ಟ್ರವನ್ನೂ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಅಪ್ಪಳಿಸಿತು.ದಿನೇ ದಿನೇ ರಾಜ್ಯಾದ್ಯಂತ ಕೋವಿಡ್ ಕೇಸುಗಳು ಹೆಚ್ಚಾಗತೊಡಗಿದವು.ಶರಶಯ್ಯೆಯಲ್ಲಿ ಮಲಗಿದ್ದ ಕೋವಿಡ್ ಎದ್ದು ಮತ್ತೆ ಅಸ್ತ್ರ ಹಿಡಿದು ಜನರನ್ನು ಕಾಡಲಾರಂಭಿಸಿತು.ಅಂದಿನ ಕುರುಕ್ಷೇತ್ರದಲ್ಲಿ ಪಂಚಪಾಂಡವರನ್ನು ಮತ್ತವರ ಸಂತಾನವನ್ನು ಹರಣ ಮಾಡದೇ ಉಳಿಸಿದ್ದ ಭೀಷ್ಮನಂತೆ ಮೊದಲನೇ ಅಲೆಯಲ್ಲಿ ಕೋವಿಡ್ ಯುವಜನರನ್ನು ಅಷ್ಟಾಗಿ ಭಾದಿಸಿರಲಿಲ್ಲ.ಆದರೆ ಈ ಎರಡನೇ ಅಲೆಯ ಕಾಲಕ್ಕೆ ಮತ್ತೆ ಶಸ್ತ್ರ ಹಿಡಿದ ಭೀಷ್ಮರೂಪಿಯಾದ ಕೋವಿಡ್ ಯುವಕರು,ಮಕ್ಕಳನ್ನೂ ಬಿಡದೇ ಎಲ್ಲರನ್ನೂ ಅಟ್ಯಾಕ್ ಮಾಡುತ್ತಿದೆ.ಕಳೆದ ಒಂದು ವಾರದಿಂದ ಮಹಾರಾಷ್ಟ್ರದಲ್ಲಿ ಒಂದೇ ದಿನ ಹತ್ತು ಸಾವಿರಕ್ಕೂ ಅಧಿಕ ಕೋವಿಡ್ ಕೇಸುಗಳು ವರದಿಯಾಗಿವೆ.12-3-2021ರ ವರದಿಯ ಪ್ರಕಾರ 15817 ಹೊಸ ಕೋವಿಡ್ ಪ್ರಕರಣಗಳು ಒಂದೇ ದಿನ ದಾಖಲಾಗಿವೆ.ಸಾವಿನ ಪ್ರಮಾಣವೂ ಹೆಚ್ಚಾಗುತ್ತಿವೆ.

ಎರಡನೇ ಅಲೆಗಾಗಿ ಶರಶಯ್ಯೆಯಿಂದ ಮೇಲೆದ್ದ ಕೋವಿಡ್ ಮೊದಲಿಗಿಂತ ಬಲಶಾಲಿಯಾಗಿದೆ.Atypical presentation ಎಂದು ಕರೆಯಲಾಗುವ ಅಸಾಮಾನ್ಯ ರೋಗ ಲಕ್ಷಣಗಳು ಕೋವಿಡ್ ಸೋಂಕಿತರಲ್ಲಿ ಕಂಡು ಬರುತ್ತಿದೆ.ಮೊದಲು ದಿನಕ್ಕೆ ಸರಿಸುಮಾರು ಹತ್ತು ಸಾವಿರ ಗುರಿ ಇಟ್ಟುಕೊಂಡಿದ್ದ ಕೋವಿಡ್ ಈ ಬಾರಿ ಗುರಿಯೇ ಇಲ್ಲದಂತೆ ಭೀಕರವಾಗಿ ಮುನ್ನುಗ್ಗಿ ಹದಿನಾಲ್ಕು ಹದಿನೈದು ಸಾವಿರ ಜನರನ್ನು ಮಹಾರಾಷ್ಟ್ರದಲ್ಲಿ ಸೋಂಕಿತರನ್ನಾಗಿಸುತ್ತಿದೆ.

ಸತ್ವಹೀನವಾಗಿ ಮಲಗಿದ್ದ ಕೋವಿಡ್ ಮತ್ತೆ ಎದ್ದು ಬಲಶಾಲಿಯಾಗಿದ್ದೇಕೆ ಎಂದು ಯಾರಿಗೂ ಗೊತ್ತಿಲ್ಲ.ಅಂದು ಗಾಂಗೇಯ ಶಸ್ತ್ರ ತ್ಯಜಿಸುವಂತೆ ಮಾಡಿದ್ದ ಶಿಖಂಡಿ.ಆದರೆ ಇಂದು ಶರಶಯ್ಯೆದಿಂದ ಮತ್ತೆ ಮೇಲೆದ್ದು ಆರ್ಭಟಿಸುತ್ತಿರುವ ಭೀಷ್ಮಾವತಾರಿ ಕೋವಿಡ್’ಅನ್ನು ಮತ್ತೆ ಶಸ್ತ್ರತ್ಯಾಗ ಮಾಡುವಂತೆ ಮಾಡುವ ಶಿಖಂಡಿ ಯಾರು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ.

ಒಟ್ಟಿನಲ್ಲಿ ಭೀಷ್ಮ ಶರಶಯ್ಯೆಯಿಂದ ಎದ್ದಿದ್ದಾನಷ್ಟೇ..