2020ರ ವರ್ಷಾರಂಭದಲ್ಲಿ ಜಗತ್ತಿಗೆ ಮುತ್ತಿಗೆ ಹಾಕಿದ ಕೋವಿಡ್ ಇನ್ನೂ ಅಟ್ಟಹಾಸಗೈಯುತ್ತ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಎರಡನೇ ಅಲೆಯ ರೂಪದಲ್ಲಿ ಭಯಂಕರವಾಗಿ  ಮನುಕುಲವನ್ನು ಕಾಡುತ್ತಿದೆ.ಮಹಾರಾಷ್ಟ್ರದಲ್ಲಿ ದಿನಕ್ಕೆ ಮೂವತ್ತು ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ.ಕೋವಿಡ್ ನಿಯಂತ್ರಣಕ್ಕೆ ಬೇಕಾಗಿ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಹಾಗೂ ಇನ್ನಿತರ ತಯಾರಿಗಳಿಗಾಗಿ ಸುಮಾರು ಒಂದುವರೆ ತಿಂಗಳು ಲಾಕ್ ಡೌನ್ ವಿಧಿಸಲಾಗಿತ್ತು.ಕೋವಿಡ್’ನಿಂದ ರಕ್ಷಣೆ ಪಡೆಯಲು ಜನರು ಮನೆಯೊಳಗೇ ಉಳಿದರು.ವೈರಸ್ ಗಾಳಿಯಲ್ಲಿ ಹರಡುವುದರಿಂದ ಎಲ್ಲ ಸಮಯದಲ್ಲೂ ಜನರು ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದರು.ಪದೇ ಪದೇ ಕೈಗಳನ್ನು ಸಾಬೂನಿನಿಂದ ತೊಳೆದು ಸ್ಯಾನಿಟೈಸರ್ ಬಳಸಲಾರಂಭಿಸಿದರು.ಈಗಂತೂ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು,ಸ್ಯಾನಿಟೈಸರ್ ಬಳಸುವತ್ತ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ.ಆ ಮೂಲಕ ಕೋವಿಡ್ ವೈರಾಣು ಹರಡುವುದನ್ನು ತಡೆಯುವ ಸರ್ವ ಪ್ರಯತ್ನ ಮಾಡಲಾಗುತ್ತಿದೆ.

ಪ್ರಾಣಾಪಾಯವನ್ನು ಉಂಟು ಮಾಡುವ ವೈರಾಣುವಿನ ಬಗ್ಗೆ ತುಂಬ ಎಚ್ಚರದಿಂದ ಇರಬೇಕಾದ್ದು ಅತೀ ಅವಶ್ಯ.ಅದಕ್ಕಾಗಿ ಎಲ್ಲ ಸಂದರ್ಭದಲ್ಲೂ ಮಾಸ್ಕ್ ಧರಿಸುವುದು,ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು,ಸ್ಯಾನಿಟೈಸರ್ ಬಳಸುವುದು ಎಲ್ಲವೂ ವೇದ್ಯವೇ.ಆದರೆ ಮನೆಯಲ್ಲಿ ಒಬ್ಬರೇ ಇರುವ ವೇಳೆ,ನಾಲ್ಕೈದು ಜನರಿರುವ ದೊಡ್ಡದಾದ ಮನೆಯಲ್ಲಿ,ಸೂಕ್ತ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವಂತೆ ಕಡಿಮೆ ಜನಸಂದಣಿಯಿರುವೆಡೆ ಸ್ಯಾನಿಟೈಸರ್ ಬಳಸಬೇಕಾದ್ದು ಅನಿವಾರ್ಯವೇ? ಇದರಿಂದ ಕೊರೋನಾ ವೈರಸ್ ಹರಡುವುದು ನಿಯಂತ್ರಣಕ್ಕೆ ಬಂದರೂ ಮುಂದೆ ಭವಿಷ್ಯದಲ್ಲಿ ಬೇರೇನಾದರೂ ಅಪಾಯ ಕಾದಿದೆಯೇ ಎಂಬ ಜಿಜ್ಞಾಸೆ ವೈದ್ಯಕೀಯ ಲೋಕದಲ್ಲಿ ಮೂಡಿಬರುತ್ತಿದೆ.

ಎಲ್ಲರಿಗೂ ತಿಳಿದಿರುವಂತೆ ಕೊರೋನಾ ವೈರಸ್ ಸಾಮಾನ್ಯವಾಗಿ ಗಾಳಿಯಲ್ಲಿ ಪಸರಿಸುವ ವೈರಸ್. ಅಂದರೆ Droplet spread. ವೈರಾಣುವಿನಿಂದ ಸೋಂಕಿಗೊಳಗಾದ ವ್ಯಕ್ತಿಯ ಕಫ,ಎಂಜಲು,ಆತ ಉಸಿರಾಡಿ ಹೊರಬಿಟ್ಟ ಗಾಳಿ ಬಾಹ್ಯ ಸಂಪರ್ಕಕ್ಕೆ ಬಂದರೆ ಅದರ ಜೊತೆ ವೈರಾಣುವೂ ಬರುತ್ತದೆ.ಇಂಥ ವೈರಾಣು ಯಾವ ವಸ್ತುಗಳ ಮೇಲೆ ಬೇಕಾದರೂ ಕುಳಿತುಕೊಳ್ಳಬಹುದು.ನಂತರ ಆ ವಸ್ತುಗಳನ್ನು ಮುಟ್ಟಿದ ವ್ಯಕ್ತಿಗಳ ಶ್ವಾಸಕೋಶಕ್ಕೆ ವೈರಾಣು ಹೋದರೆ ಆ ವ್ಯಕ್ತಿಗಳೂ ಕೋವಿಡ್’ಗೆ ತುತ್ತಾಗುವ ಸಾಧ್ಯತೆ ಇರುತ್ತದೆ.ಆದ್ದರಿಂದಲೇ ಗಾಳಿಯಲ್ಲಿ ಹರಡಿದ ವೈರಸ್ ನಮ್ಮೊಳಗೆ ಹೋಗದಂತೆ ತಡೆಯಲು ಮಾಸ್ಕ್,ನಾವು ಮುಟ್ಟುವ ವಸ್ತುಗಳ ಮೇಲಿರುವ ವೈರಾಣುವನ್ನು ನಾಶಪಡಿಸಲು ಸ್ಯಾನಿಟೈಸರ್,ಕೈಯಲ್ಲಿ ಸಿಕ್ಕಿಕೊಂಡ ಕೋವಿಡ್ ವೈರಸ್ಸನ್ನು ಕೊಲ್ಲಲು ಸಾಬೂನಿನಿಂದ ಕೈತೊಳೆಯುವುದೆಲ್ಲ ಕೊರೋನಾ ನಿಯಂತ್ರಣಕ್ಕೆ ಜನರು ಬಳಸುತ್ತಿರುವ ಮುನ್ನೆಚ್ಚರಿಕಾ ಕ್ರಮಗಳು.ಆದರೆ ಸ್ಯಾನಿಟೈಸರ್ ಬಳಸುವುದರಿಂದ,ಸಾಬೂನಿನಿಂದ ಪದೇ ಪದೇ ಕೈ ತೊಳೆಯುವುದರಿಂದ ಸಾಯುವುದು ಬರೀ ಕೊರೋನಾ ವೈರಸ್ ಮಾತ್ರವಲ್ಲ ಎಷ್ಟೋ ಸಂಖ್ಯೆಯಲ್ಲಿರುವ ಇತರ ಬ್ಯಾಕ್ಟೀರಿಯಾ,ಫಂಗಸ್ ಮುಂತಾದ ಸೂಕ್ಷ್ಮಾಣುಜೀವಿಗಳೂ ಕೂಡ ಎಂದು ಎಷ್ಟು ಜನರಿಗೆ ಗೊತ್ತಿದೆ?

ಪ್ರಪಂಚದಲ್ಲಿ ಲೆಕ್ಕಕ್ಕೆ ನಿಲುಕದಷ್ಟು ಸೂಕ್ಷ್ಮಾಣುಜೀವಿಗಳಿವೆ.ಬ್ಯಾಕ್ಟೀರಿಯಾ,ವೈರಸ್,ಫಂಗೈ ಎಲ್ಲ ಕಡೆಯೂ ಹಬ್ಬಿಕೊಂಡಿವೆ.ಇಂಥ ಅಸಂಖ್ಯಾತ ಸೂಕ್ಷ್ಮ ಜೀವಿಗಳಲ್ಲಿ ಮನುಷ್ಯರಿಗೆ ಹಾಗೂ ಇತರ ಪ್ರಾಣಿಗಳಿಗೆ ರೋಗವನ್ನುಂಟು ಮಾಡುವ ಜೀವಿಗಳು(Pathogenic organisms) ಕೆಲವೇ ಕೆಲವು ಮಾತ್ರ.ಉಳಿದ ಬಹಳಷ್ಟು ಸೂಕ್ಷ್ಮಾಣುಜೀವಿಗಳು ಯಾವುದೇ ರೋಗವನ್ನುಂಟು ಮಾಡದೇ ಬದುಕುವಂಥವು.(Nonpathogenic organisms).ಇವುಗಳಿಂದ ಮನುಷ್ಯರಿಗೆ ಹಾಗೂ ಬೇರೆ ಜೀವಿಗಳಿಗೆ ಯಾವುದೇ ಅಪಾಯವಿಲ್ಲ.ಹೆಚ್ಚಿನ ಕಡೆ ಇಂಥ ರೋಗವನ್ನುಂಟುಮಾಡದ ಜೀವಿಗಳ ಸಂಖ್ಯೆ ರೋಗ ತರುವ ಸೂಕ್ಷ್ಮಾಣುಗಳಿಗಿಂತ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತದೆ.ನಿಸರ್ಗದತ್ತವಾಗಿ ಬಂದಿರುವ ಜೀವನಿಯಮದಂತೆ ಈ ಹೆಚ್ಚಿನ ಸಂಖ್ಯೆಯಲ್ಲಿರುವ ಒಳ್ಳೆಯ ಸೂಕ್ಷ್ಮಾಣುಗಳು ಅಪಾಯಕಾರಿಯಾದ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಕುಂಠಿತಗೊಳಿಸಿ ರೋಗ ಬರದಂತೆ ತಡೆಯುತ್ತವೆ.ಹೊರಗಿನ ಪರಿಸರಕ್ಕೆ,ನಮ್ಮ ಮನೆಗಳಲ್ಲಿ ಈ ನಿಯಮವಾದರೆ ಆಸ್ಪತ್ರೆಗಳಲ್ಲಿ ಹಾಗೂ ದವಾಖಾನೆಯ ಸುತ್ತಮುತ್ತ ರೋಗವನ್ನುಂಟು ಮಾಡುವ ಅಪಾಯಕಾರಿ ಸೂಕ್ಷ್ಮಜೀವಿಗಳು ಜಾಸ್ತಿ ಸಂಖ್ಯೆಯಲ್ಲಿದ್ದು ನಿರುಪದ್ರವಿ ಸೂಕ್ಷ್ಮಜೀವಿಗಳು ಕಡಿಮೆ ಸಂಖ್ಯೆಯಲ್ಲಿರುತ್ತವೆ.ಇಲ್ಲಿ Pathogenic organisms ಜಾಸ್ತಿಯಾಗಿ Nonpathogenic organismsಗಳನ್ನು ಕುಂಠಿತಗೊಳಿಸುತ್ತವೆ.ಇಂಥ ಕಡೆಗಳಲ್ಲಿ ಶುಚಿತ್ವ ಕಾಪಾಡಬೇಕಾದ್ದು,ಸ್ಯಾನಿಟೈಸರ್ ಬಳಸಬೇಕಾದ್ದು ಅನಿವಾರ್ಯ.ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿರುವ ಅಪಾಯಕಾರಿ ಸೂಕ್ಷ್ಮಜೀವಿಗಳು ಸಾಯಲ್ಪಟ್ಟು ರೋಗ ಹರಡುವುದು ಕಡಿಮೆಯಾಗುತ್ತದೆ.Nonpathogenic organisms ಜಾಸ್ತಿಯಿರುವ ಕಡೆಗಳಲ್ಲಿ ಅಂದರೆ ನಮ್ಮ ಮನೆ ಹಾಗೂ ಇತರ ಶುದ್ಧವಾಗಿರುವ ಸ್ಥಳಗಳಲ್ಲೂ ಪದೇ ಪದೇ ಸ್ಯಾನಿಟೈಸರ್ ಬಳಸಿದರೆ ರೋಗವನ್ನುಂಟು ಮಾಡದ ಸೂಕ್ಷ್ಮಜೀವಿಗಳು ಸಾಯುತ್ತವೆ.ಇದರಿಂದ ರೋಗವನ್ನುಂಟು ಮಾಡುವ pathogenic organisms ಮೇಲಿನ ಅವುಗಳ ನಿಯಂತ್ರಣ ತಪ್ಪಿ ಹೋಗಿ ರೋಗಾಣುಗಳು ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಯಾಗುವ ಸಾಧ್ಯತೆಯಿದೆ.ಅಷ್ಟೇ ಆದರೆ ಪರವಾಗಿಲ್ಲ.ಆದರೆ…

ಮನುಷ್ಯನ ಬಾಯಿ,ಮೂಗು,ಗಂಟಲು,ಶ್ವಾಸನಾಳ,ಜಠರ,ಕರುಳಿನಲ್ಲಿ ಬಹಳಷ್ಟು ಬ್ಯಾಕ್ಟೀರಿಯಾಗಳಿವೆ.ಅವು ಯಾವುವೂ ಆರೋಗ್ಯವಂತ ಮನುಷ್ಯನಿಗೆ ಯಾವ ತೊಂದರೆಯನ್ನೂ ಉಂಟು ಮಾಡುವುದಿಲ್ಲ.ಇವುಗಳಿಗೆ Commensal Organisms ಎನ್ನುತ್ತಾರೆ.ದೇಹದೊಳಗಿರುವ ಜೀವಕೋಶಗಳಿಂದಲೇ ಇವು ತಮಗೆ ಬೇಕಾದ ಆಹಾರವನ್ನು,ಶಕ್ತಿಯನ್ನು ಹೀರಿಕೊಂಡು ಬದುಕುತ್ತವೆ. ಯಾವುದಾದರೂ ಕಾರಣದಿಂದ ಮನುಷ್ಯನ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಕೆಲವು ಬ್ಯಾಕ್ಟೀರಿಯಾಗಳು ರೋಗವನ್ನುಂಟು ಮಾಡಿದರೆ ಇನ್ನು ಕೆಲವು Commensal Organismಗಳು ರೋಗನಿರೋಧಕ ಶಕ್ತಿ ಕುಂಠಿತವಾದವರಲ್ಲೂ ಯಾವುದೇ ರೋಗವನ್ನುಂಟು ಮಾಡುವುದಿಲ್ಲ.ನಮ್ಮ ದೇಹದೊಳಗಿರುವ ಇಂಥ ಅನೇಕ ಸೂಕ್ಷ್ಮಾಣುಜೀವಿಗಳು ಕೆಲವೇ ಸಂಖ್ಯೆಯಲ್ಲಿರುವ  ರೋಗವನ್ನುಂಟು ಮಾಡುವ ಸೂಕ್ಷ್ಮಜೀವಿಗಳನ್ನು ನಿಯಂತ್ರಿಸುತ್ತವೆ.ಎರಡು ಜೀವಿಗಳು ಹತ್ತಿರ ಬಂದಾಗ ನಡೆಯುವ ಸಂಪರ್ಕಕ್ಕೆ,Interactionಗೆ ಜೀವಶಾಸ್ತ್ರದಲ್ಲಿ ‘ಸಿಂಬಯಾಸಿಸ್’(Symbiosis) ಎನ್ನುತ್ತಾರೆ.ಅಪಾಯಕಾರಿಯಲ್ಲದ ಸೂಕ್ಷ್ಮಜೀವಿಗಳು ಹಾಗೂ ರೋಗಾಣುಗಳ ನಡುವೆ ಒಂದು ರೀತಿಯ ಸಮತೋಲನ ಏರ್ಪಟ್ಟು ಆರೋಗ್ಯವಂತ ಸ್ಥಿತಿಯನ್ನು ಕಾಪಾಡಲು ಈ Symbiosis ಅನಿವಾರ್ಯ.ಯಾವುದೇ ಕಾರಣದಿಂದ Symbiosis ಹಾಳಾದರೆ ಮನುಷ್ಯ ರೋಗಿಯಾಗುವ ಸಾಧ್ಯತೆಯಿದೆ.ಇದನ್ನು ಇನ್ನೂ ಸುಲಭವಾಗಿ ವಿವರಿಸುವುದಾದರೆ ಬಹಳಷ್ಟು ರೋಗಗಳಿಗೆ ನಾವು ತೆಗೆದುಕೊಳ್ಳುವ Antibioticsಗಳಿಂದ ನಮ್ಮ ಕರುಳಿನಲ್ಲಿರುವ ಕೆಲವು ಒಳ್ಳೆಯ ಬ್ಯಾಕ್ಟೀರಿಯಾಗಳೂ ನಾಶವಾಗಿ Symbiosis disturb ಆಗುತ್ತದೆ.ಆಗ ಕರುಳಿನಲ್ಲಿರುವ ರೋಗವನ್ನುಂಟುಮಾಡುವ ಬ್ಯಾಕ್ಟೀರಿಯಾಗಳು ವೃದ್ಧಿಸಿ ಹೊಟ್ಟೆನೋವು,ವಾಂತಿ,ಭೇದಿ ಉಂಟಾಗಬಹುದು.ಆಗ ವೈದ್ಯರು Antibiotic ನಿಲ್ಲಿಸಿ ಒಳ್ಳೆಯ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾಗಲು ಅವುಗಳ ಬೆಳವಣಿಗೆಗೆ ಪೂರಕವಾದ Probiotics ಎಂಬ ಔಷಧಿಯನ್ನು ಕೊಡುತ್ತಾರೆ.ಈ Probioticsಗಳಿಂದ ಒಳ್ಳೆಯ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಮತ್ತೆ Symbiosis ಸಮತೋಲನಕ್ಕೆ ಬರುತ್ತದೆ.

ಹೊರಗಿನ ಪರಿಸರದಲ್ಲಿ,ನಮ್ಮೆಲ್ಲರ ಮನೆಗಳಲ್ಲಿ ಲೆಕ್ಕವಿಲ್ಲದಷ್ಟು ಬ್ಯಾಕ್ಟೀರಿಯಾಗಳು,ವೈರಸ್,ಫಂಗಸ್’ಗಳು ಇವೆ.ಇವುಗಳಲ್ಲಿ ರೋಗವನ್ನುಂಟು ಮಾಡುವ ಸೂಕ್ಷ್ಮಾಣುಜೀವಿಗಳು ಕೆಲವೇ ಕೆಲವಾದರೆ ರೋಗಾಣುಗಳನ್ನು ನಿಯಂತ್ರಿಸಿ Symbiosis ಅನ್ನು ಸಮತೋಲನದಲ್ಲಿಡುವ ಒಳ್ಳೆಯ ಸೂಕ್ಷ್ಮಾಣುಜೀವಿಗಳ ಸಂಖ್ಯೆ ಹಲವು.ನಾವು ಸ್ಯಾನಿಟೈಸರ್ ಬಳಸಿದಾಗ ರೋಗಾಣುಗಳ ಜೊತೆ ಒಳ್ಳೆಯ ಸೂಕ್ಷ್ಮಜೀವಿಗಳೂ ಸಾಯಲ್ಪಟ್ಟು Symbiosis disturb ಆದರೆ ನಮಗೇ ನಷ್ಟ.ಜೀವವಿಕಾಸದ ನಿಯಮದಂತೆ ಯಾವುದೇ ಜೀವಿಯ ಮೇಲೆ ಪದೇ ಪದೇ ದಾಳಿ,ಪ್ರಹಾರ ಉಂಟಾದಾಗ ಹಲವು ವರ್ಷಗಳ ನಂತರ ಜೀವಿಯ ವಂಶವಾಹಿಯಲ್ಲಾಗುವ ಬದಲಾವಣೆಯಿಂದ ದಾಳಿಯನ್ನು,ಪ್ರಹಾರವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಜೀವಿ ಕ್ರಮೇಣ ಪಡೆದುಕೊಳ್ಳಬಹುದು.ಅದರ ರೂಪದಲ್ಲಿ,ಜೈವಿಕ ಗುಣಲಕ್ಷ್ಮಣಗಳಲ್ಲಿ ಯಾವುದಾದರೂ ಮಾರ್ಪಾಡಾಗಬಹುದು.ಜೀವಿಯ ವಂಶವಾಹಿಯಲ್ಲಿ ಅಂದರೆ DNAಯಲ್ಲಿ ಆಗುವ ಬದಲಾವಣೆಯಿಂದ ಸಂಭವಿಸುವ ಈ ವಿದ್ಯಮಾನಕ್ಕೆ ಮ್ಯುಟೇಷನ್ (Mutation) ಎಂದು ಹೆಸರು.Mutations ಉಂಟಾಗಲು ಕಾರಣವಾಗುವ ಜೀವಿಗಳು,ವಸ್ತುಗಳಿಗೆ Mutagens ಎಂದು ಕರೆಯುತ್ತಾರೆ.ಈ ರೀತಿಯ ಮ್ಯುಟೇಷನ್’ನಿಂದಾಗಿ ರೋಗಾಣು ಬ್ಯಾಕ್ಟೀರಿಯಾಗಳ ವಂಶವಾಹಿಯಲ್ಲಿ ಬದಲಾವಣೆಯಾಗಿ ವೈದ್ಯರು ಕೊಡುವ Antibiotics ಅನ್ನು ಅವುಗಳು ತಡೆದುಕೊಂಡು ಬದುಕಿದರೆ ಅದನ್ನು Bacterial Resistance ಎಂದೂ ಅಂಥ ಬ್ಯಾಕ್ಟೀರಿಯಾವನ್ನು ಸೂಪರ್ ಬ್ಯಾಕ್ಟೀರಿಯಾ ಅಥವಾ Super Bug ಎನ್ನುತ್ತಾರೆ.

ಸ್ಟ್ಯಾಫೈಲೋಕಾಕಸ್ ಆರಿಯಸ್ (Staphylococcus aureus) ಎಂಬ ಬ್ಯಾಕ್ಟೀರಿಯಾದ ಉದಾಹರಣೆಯ ಮೂಲಕ ಈ ಮ್ಯುಟೇಷನ್,ಬ್ಯಾಕ್ಟೀರಿಯಲ್ ರೆಸಿಸ್ಟೆನ್ಸ್ ಎಲ್ಲವನ್ನೂ ಸ್ವಲ್ಪ ಸುಲಭವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.ಸ್ಟ್ಯಾಫೈಲೋಕಾಕಸ್ ಆರಿಯಸ್ ಎಂಬುದು ಎಲ್ಲ ಕಡೆ ಇರುವ ಸಾಮಾನ್ಯವಾದ ರೋಗಾಣು ಬ್ಯಾಕ್ಟೀರಿಯಾವಾಗಿದ್ದು ಕೆಲವೊಂದಿಷ್ಟು ಚರ್ಮದ ಖಾಯಿಲೆಗಳನ್ನು,ಶ್ವಾಸಕೋಶದ ಸೋಂಕನ್ನು,ಸ್ತ್ರೀಯರಲ್ಲಿ ಜನನಾಂಗದ ಸೋಂಕನ್ನು ಉಂಟು ಮಾಡುತ್ತದೆ. ಸರ್ ಅಲೆಕ್ಸಾಂಡರ್ ಫ್ಲೆಮಿಂಗ್ ಎನ್ನುವ ವಿಜ್ಞಾನಿ ಕಂಡುಹಿಡಿದ ಜಗತ್ತಿನ ಮೊಟ್ಟಮೊದಲ Antibiotic ಪೆನ್ಸಿಲಿನ್ ಹಾಗೂ ಬೀಟಾ ಲ್ಯಾಕ್ಟಮ್ಸ್ (Beta lactams) ಎಂಬ ಔಷಧಗಳ ಗುಂಪಿಗೆ ಸೇರಿದ ಸುಮಾರು ಆಂಟಿಬಯಾಟಿಕ್ಸ್’ಗಳಿಂದ ಸ್ಟ್ಯಾಫೈಲೋಕಾಕಸ್ ಆರಿಯಸ್’ನಿಂದಾಗಿ ಬರುವ ಬಹಳಷ್ಟು ರೋಗಗಳನ್ನು ಗುಣಪಡಿಸಬಹುದು.1960ರಲ್ಲಿ ಒಮ್ಮೆ ಬೀಟಾ ಲ್ಯಾಕ್ಟಮ್ ಗುಂಪಿಗೆ ಸೇರಿದ ಮೆಥಿಸಿಲಿನ್ ಎಂಬ ಆಂಟಿಬಯಾಟಿಕ್ ಕೊಟ್ಟರೂ ಈ ಸ್ಟ್ಯಾಫೈಲೋಕಾಕಸ್ ಆರಿಯಸ್ ಗುಂಪಿನ ಕೆಲವು ಬ್ಯಾಕ್ಟೀರಿಯಾಗಳು ಸಾಯಲಿಲ್ಲ.ಅಂಥ ಬ್ಯಾಕ್ಟೀರಿಯಾಗಳ ವಂಶವಾಹಿಯನ್ನು ಅಧ್ಯಯನ ಮಾಡಿದಾಗ ಅವುಗಳ DNAಯಲ್ಲಿ ಆದ ಬದಲಾವಣೆ ಅಂದರೆ ಮ್ಯುಟೇಷನ್’ನಿಂದಾಗಿ ಸ್ಟ್ಯಾಫೈಲೋಕಾಕಸ್ ಆರಿಯಸ್ ಗುಂಪಿನ ಕೆಲವು ಬ್ಯಾಕ್ಟೀರಿಯಾಗಳು ಮೆಥಿಸಿಲಿನ್ ಎಂಬ ಆಂಟಿಬಯಾಟಿಕ್ ಅನ್ನು ತಡೆದುಕೊಂಡು ಬದುಕುವ ಸಾಮರ್ಥ್ಯವನ್ನು ಪಡೆದಿದ್ದವು.ಇವುಗಳಿಗೆ Methicillin Resistant Staphylococcus Aureus (MRSA) ಎಂದು ಕರೆಯಲಾಯಿತು.ಎಲ್ಲ ಬ್ಯಾಕ್ಟೀರಿಯಾಗಳೂ ಮೆಥಿಸಿಲಿನ್’ನಿಂದ ಸಾಯದೇ ಬದುಕುಳಿಯುತ್ತವೆ ಅಂತಲ್ಲ.ವಂಶವಾಹಿಯಲ್ಲಿ ಬದಲಾವಣೆಯಾಗಿ Resistance ಪಡೆದುಕೊಂಡ ಕೆಲವು ಬ್ಯಾಕ್ಟೀರಿಯಾಗಳು ಈ ಆಂಟಿಬಯಾಟಿಕ್’ನಿಂದ ಸಾಯುವುದಿಲ್ಲ.MRSA ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ನಂತರ ವ್ಯಾಂಕೋಮೈಸಿನ್(Vancomycin) ಎಂಬ ಮತ್ತೊಂದು ಆಂಟಿಬಯಾಟಿಕ್ ಅನ್ನು ಬಳಸಲಾಯಿತು.ಕಾಲಕ್ರಮೇಣ ಕೆಲವು MRSAಗಳು ಮತ್ತೊಂದು ಬಲವಾದ ಮ್ಯುಟೇಷನ್’ಗೆ ಒಳಗಾಗಿ ವ್ಯಾಂಕೋಮೈಸಿನ್ ಅನ್ನು ಕೂಡ ತಡೆದುಕೊಂಡು ಬದುಕುವ ಶಕ್ತಿಯನ್ನು ಪಡೆದವು.ಅವುಗಳಿಗೆ Vancomycin Resistant Staphylococcus Aureus(VRSA) ಎಂದು ಕರೆಯಲಾಯಿತು.ಈ VRSA ಗುಂಪಿಗೆ ಸೇರಿದ ಸೂಪರ್ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸಲು ಸದ್ಯಕ್ಕೆ ನಮ್ಮಲ್ಲಿರುವುದು ಬೆರಳೆಣಿಕೆಯ ಆಂಟಿಬಯಾಟಿಕ್’ಗಳು ಮಾತ್ರ.ಹಾಗಂತ ಈ MRSA,VRSA ಬ್ಯಾಕ್ಟೀರಿಯಾಗಳು ಎಲ್ಲ ಕಡೆಗಳಲ್ಲಿ,ಎಲ್ಲ ಆಸ್ಪತ್ರೆಗಳಲ್ಲಿ ಇಲ್ಲ.ಆದರೆ ಇರುವ ಕಡೆ ಅವು ಬಹು ಅಪಾಯಕಾರಿ.

ಮೇಲಿನ ಉದಾಹರಣೆಯಲ್ಲಿ ಹೇಳಲಾದ ಮ್ಯುಟೇಷನ್’ನಲ್ಲಿ Mutagen ಆಗಿ ವರ್ತಿಸಿದ್ದು ಮೆಥಿಸಿಲೀನ್ ಮತ್ತು ವ್ಯಾಂಕೋಮೈಸಿನ್ ಎಂಬ ಆಂಟಿಬಯಾಟಿಕ್’ಗಳು.ಅದೇ ರೀತಿ ನಾವು ಬಳಸುವ ಸ್ಯಾನಿಟೈಸರ್’ನಿಂದಾಗಿ ಬರೀ ಕೊರೋನಾ ವೈರಸ್ ಮಾತ್ರವಲ್ಲದೆ,ರೋಗವನ್ನುಂಟು ಮಾಡುವ,ಮಾಡದ ಎಷ್ಟೋ ಬ್ಯಾಕ್ಟೀರಿಯಾ,ಫಂಗಸ್’ಗಳು ಕೂಡಾ ಸಾಯುತ್ತವೆ.ಆಂಟಿಬಯಾಟಿಕ್’ಗಳಿಗೆ resistance ಪಡೆದುಕೊಳ್ಳುವ ಬ್ಯಾಕ್ಟಿರೀಯಾಗಳಂತೆ ಕ್ರಮೇಣವಾಗಿ ಹಲವು ವರ್ಷಗಳ ನಂತರ ದೀರ್ಘಕಾಲೀನ ಸ್ಯಾನಿಟೈಸರ್ ಬಳಕೆಯಿಂದಾಗಿ ಬ್ಯಾಕ್ಟೀರಿಯಾಗಳಲ್ಲಿ ಹಾಗೂ ಇತರ ರೋಗಾಣುಗಳಲ್ಲಿ ಮ್ಯುಟೇಷನ್ ಉಂಟಾಗಿ ಅವುಗಳ ವಂಶವಾಹಿಯಲ್ಲಿ ಬದಲಾವಣೆಯಾದರೆ ಕಷ್ಟ.ನಿರುಪದ್ರವಿಯಾದ ಸೂಕ್ಷ್ಮಜೀವಿಗಳಲ್ಲಿ ಇಂಥ ಮ್ಯುಟೇಷನ್ ಉಂಟಾದರೆ ಅಷ್ಟು ತೊಂದರೆಯಿಲ್ಲ.ಆದರೆ ರೋಗವನ್ನುಂಟು ಮಾಡುವ ಸಾಮರ್ಥ್ಯವುಳ್ಳ Pathogenic organisms ಮ್ಯುಟೇಷನ್’ಗೆ ಒಳಗಾಗಿ ಅವುಗಳ ವಂಶವಾಹಿಯಲ್ಲಾಗುವ ಬದಲಾವಣೆಯಿಂದ  ಯಾವಾಗಲೂ ಅವುಗಳ ವಿರುದ್ಧ ಕೆಲಸ ಮಾಡುವ ಆಂಟಿಬಯಾಟಿಕ್’ಗಳು ಹಾಗೂ ಇತರ ಔಷಧಿಗಳು ನಿರುಪಯುಕ್ತವಾದರೆ ಅಪಾಯ ಕಟ್ಟಿಟ್ಟ ಬುತ್ತಿ.ಇಂಥ ರೋಗಾಣುಗಳನ್ನು ನಿಯಂತ್ರಿಸುವ ಸಾಮರ್ಥ್ಯವುಳ್ಳ ಒಳ್ಳೆ ಬ್ಯಾಕ್ಟೀರಿಯಾಗಳೂ ಕೂಡಾ ಮ್ಯುಟೇಷನ್’ಗೆ ಒಳಗಾಗಿ ರೋಗಾಣುಗಳ ಮೇಲೆ ತಮ್ಮ ನಿಯಂತ್ರಣವನ್ನು ಕಳೆದುಕೊಂಡು Symbiosis ಎನ್ನುವುದು ಇಲ್ಲವಾದರೆ ಮನುಕುಲ ಹಲವಾರು ಹೊಸ ಹೊಸ ರೀತಿಯ ಗಂಭೀರ ಖಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ.ಈಗ ಎಗ್ಗಿಲ್ಲದಂತೆ ನಾವೆಲ್ಲರೂ ಬಳಸುತ್ತಿರುವ ಆಂಟಿಬಯಾಟಿಕ್’ಗಳನ್ನು ಕಂಡುಹಿಡಿಯಲು ವಿಜ್ಞಾನಿಗಳು ಹಿಂದೆ ಹತ್ತು ಹಲವು ವರ್ಷ ಪ್ರಯತ್ನಿಸಿದ್ದಾರೆ.ಬರಿಗಣ್ಣಿಗೆ ಕಾಣದ ಸೂಕ್ಷ್ಮಜೀವಿಯನ್ನು ಕೊಲ್ಲಲು ಬೇಕಾಗುವ ಹೊಸ ಔಷಧಿಗಳನ್ನು ಕಂಡುಹಿಡಿಯಲು ಆಗುವ ವೆಚ್ಚ ಬಲು ದುಬಾರಿಯಾದದ್ದು.

ಈ ಹಿನ್ನಲೆಯಲ್ಲಿ ರೋಗವನ್ನು ಹರಡುವ ಸೂಕ್ಷ್ಮಾಣುಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರದ ಸ್ಥಳಗಳಲ್ಲೆಲ್ಲ ಅಂದರೆ ನಮ್ಮ ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಸ್ಯಾನಿಟೈಸರ್ ಬಳಸುವುದರಿಂದ ಆ ಸ್ಯಾನಿಟೈಸರ್ ಮ್ಯೂಟಾಜೆನ್ ಆಗಿ ಸೂಕ್ಷ್ಮಾಣುಜೀವಿಗಳಲ್ಲಿ ಮ್ಯುಟೇಷನ್ ಉಂಟು ಮಾಡಿ ವಂಶವಾಹಿಯಲ್ಲಾಗುವ ಬದಲಾವಣೆಯಿಂದ ಈಗಿರುವ ಔಷಧಿಗಳು ರೋಗಾಣುಗಳ ಮೇಲೆ ಕೆಲಸ ಮಾಡದ ಸ್ಥಿತಿ ಉಂಟಾದರೆ ಸೂಪರ್ ಬ್ಯಾಕ್ಟೀರಿಯಾಗಳು  ಹೊಸ ಹೊಸ ರೋಗಗಳ ಮೂಲಕ ಜಗತ್ತನ್ನು ಆಳುತ್ತವೆ.ಅವುಗಳನ್ನು ತಡೆಯಲು ನಮ್ಮ ಬಳಿ ಔಷಧಿಗಳು ಇಲ್ಲವಾಗಬಹುದು.ಸಂಶೋಧನೆ ನಡೆದು ಸೂಪರ್ ಬ್ಯಾಕ್ಟೀರಿಯಾಗಳನ್ನೂ ಕೊಲ್ಲುವ ಆಂಟಿಬಯಾಟಿಕ್ಸ್’ಗಳನ್ನು ತಯಾರಿಸುವ ಹೊತ್ತಿಗೆ ಸಾಕಷ್ಟು ಪ್ರಾಣಹಾನಿಯಾಗುವ ಸಾಧ್ಯತೆಯಿರುತ್ತದೆ.

ಸದ್ಯಕ್ಕೆ ನಮ್ಮನ್ನು ಕಾಡುತ್ತಿರುವುದು ಕೊರೋನಾ ವೈರಸ್ ಮಾತ್ರ.ಅದರ ವಿರುದ್ಧ ರಕ್ಷಣೆ ಪಡೆಯಬೇಕಾಗಿರುವುದೂ ಅನಿವಾರ್ಯ.ಆದರೆ ವೈರಾಣು ಹರಡುವುದನ್ನು ನಿಯಂತ್ರಿಸಲು ಎಲ್ಲಿ ಅಗತ್ಯವಿದೆಯೋ ಅಲ್ಲಿ ಮಾತ್ರ ಸ್ಯಾನಿಟೈಸರ್ ಬಳಸುವ ಬುದ್ಧಿವಂತಿಕೆಯನ್ನು ತೋರಿಸೋಣ.ವೈರಾಣುಗಳ ಸಂಖ್ಯೆ ಜಾಸ್ತಿ ಇರುವ ಆಸ್ಪತ್ರೆ,ಅದರ ಸುತ್ತಮುತ್ತಲಿನ ಪ್ರದೇಶ,ಜನಸಂದಣಿ ಹೆಚ್ಚಾಗಿರುವ ಸ್ಥಳಗಳಲ್ಲಿ ಅಗತ್ಯವಾಗಿ ಸ್ಯಾನಿಟೈಸರ್ ಬಳಸಿ ಉತ್ಕೃಷ್ಟ ಮಟ್ಟದ ಶುಚಿತ್ವವನ್ನು ಕಾಪಾಡೋಣ.ವೈರಾಣುಗಳು ಹೆಚ್ಚಾಗಿ ಇಲ್ಲದ,ರೋಗಾಣುಗಳ ಮೇಲೆ ನಿಯಂತ್ರಣ ಹೊಂದಿರುವ ಒಳ್ಳೆಯ ಸೂಕ್ಷ್ಮಾಣುಜೀವಿಗಳು ಹೆಚ್ಚಾಗಿರುವ ನಮ್ಮ ಮನೆಗಳಲ್ಲಿ ಅಗತ್ಯ ಮೀರಿ ಸ್ಯಾನಿಟೈಸರ್ ಬಳಸುವುದನ್ನು ಸ್ವಲ್ಪ ನಿಯಂತ್ರಿಸೋಣ.ಆಸ್ಪತ್ರೆಗಳಲ್ಲಿ ರೋಗಾಣುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ರೋಗವನ್ನುಂಟು ಮಾಡದ ಸೂಕ್ಷ್ಮಾಣುಗಳು ಕಡಿಮೆ ಸಂಖ್ಯೆಯಲ್ಲಿರುತ್ತವೆ.ಹಾಗಾಗಿ ಅಲ್ಲಿ ಹೆಚ್ಚಿನ ಶುಚಿತ್ವ ಕಾಪಾಡುವುದರಿಂದ ನಮಗೇ ಲಾಭ.ಆದರೆ ವೈರಾಣುಗಳ,ರೋಗಾಣುಗಳ ಸಂಖ್ಯೆ ಕಡಿಮೆಯಿರುವ ಕಡೆಯೆಲ್ಲ ಮಿತಿಮೀರಿ ಸ್ಯಾನಿಟೈಸರ್ ಬಳಸಿ ಒಳ್ಳೆಯ ಸೂಕ್ಷ್ಮಜೀವಿಗಳ ನಾಶಕ್ಕೆ ಕಾರಣರಾಗಿ,ಮುಂದೊಮ್ಮೆ ಆ ಸೂಕ್ಷ್ಮಜೀವಿಗಳಲ್ಲಿ ಮ್ಯುಟೇಷನ್ ಉಂಟಾಗಲು ನಾವು ಕಾರಣರಾಗದಿರೋಣ.

ಈಗ ಬರೀ ಕೊರೋನಾ ವಿರುದ್ಧ ಮಾತ್ರ ಸೆಣೆಸುತ್ತಿದ್ದೇವೆ.ಆದರೆ ಅದನ್ನು ಹಿಮ್ಮೆಟ್ಟಿಸುವ ಭರದಲ್ಲಿ ಮ್ಯುಟೇಷನ್ ಆದ ಹೊಸ ಹೊಸ ಶಕ್ತಿಶಾಲಿ ಬ್ಯಾಕ್ಟೀರಿಯಾಗಳ,ವೈರಾಣುಗಳ ಸೃಷ್ಟಿಗೆ ಕಾರಣವಾಗದಿರೋಣ.ಅತಿಯಾದರೆ ಅಮೃತವೂ ವಿಷ ಎಂಬಂತೆ ನಾವು ಇಂದು ಎಗ್ಗಿಲ್ಲದೆ ಸ್ಯಾನಿಟೈಸರ್ ಬಳಸಿ ಅದು ಒಂದು ವೇಳೆ ರೋಗಾಣುಗಳ ಮ್ಯುಟೇಷನ್’ಗೆ ಕಾರಣವಾದರೆ ಹಲವಾರು ವರ್ಷಗಳ ನಂತರ ನಮ್ಮ ಮುಂದಿನ ಪೀಳಿಗೆ ಹತ್ತು ಹಲವು ಹೊಸ ಭಯಂಕರ ರೋಗಗಳಿಂದ ನಲುಗಬೇಕಾಗಬಹುದು.ಈ ಕುರಿತಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆದು ಇದಮಿತ್ಥಂ ಎಂಬ ಅಭಿಪ್ರಾಯ ಆದಷ್ಟು ಬೇಗ ಬಂದರೆ ಒಳ್ಳೆಯದು.ಉಳಿದಂತೆ ಸದ್ಯಕ್ಕೆ ಕೋವಿಡ್’ನಿಂದ ಬಚಾವಾಗಲು ಸದಾ ಮಾಸ್ಕ್ ಧರಿಸೋಣ.ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ.

ಪೂರಕ ಮಾಹಿತಿ: ಡಾ. ಮುಕೇಶ್ ಎಂ

ಗೆಳೆಯ ಮುಕೇಶ್ ಐಡಿಯಾ ಕೊಟ್ಟು ಒತ್ತಾಯ ಮಾಡಿ ಬರೆಸಿದ ಈ ಲೇಖನ ಎರಡು ಭಾಗಗಳಲ್ಲಿ TV9 ಕನ್ನಡ ವೆಬ್ ಪೋರ್ಟಲ್’ನಲ್ಲಿ1-4-2021 ಮತ್ತು 2-4-2021ರಂದು ಪ್ರಕಟವಾಗಿದೆ.

ಮೊದಲ ಭಾಗ

ಎರಡನೇ ಭಾಗವನ್ನು ಓದಲು ಲಿಂಕ್