ನನ್ನ ಭಾವ ರವೀಂದ್ರ ಭಟ್ (ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು) ಒಮ್ಮೆ ಗುಜಾರಾತಿಗೆ ಹೋಗಿದ್ದಾಗ ಸಾಬರ್ಮತಿ ಆಶ್ರಮಕ್ಕೆ ಭೇಟಿ ಕೊಟ್ಟಿದ್ದರಂತೆ.ಅಲ್ಲಿನ‌ ಮ್ಯೂಸಿಯಂನಲ್ಲಿ ಗಾಂಧಿಯವರು ಬಳಸುತ್ತಿದ್ದ ವಸ್ತುಗಳು, ಅವರ ಕುರಿತಾದ ಅನೇಕ ಬರಹಗಳು,ಅವರ ಕಾಲದಲ್ಲಿ ನಡೆದ ವಿದ್ಯಮಾನಗಳ ವಿವರಗಳೆಲ್ಲ ಕಾಣಸಿಗುತ್ತವಂತೆ.ಅಲ್ಲಿ ರವೀಂದ್ರ ಭಟ್ಟರ ಗಮನ ಸೆಳೆದ ಒಂದು ವಿಷಯವನ್ನು ಅವರು ತಾವು ಭಾಗವಹಿಸುವ ಭಾಷಣಗಳಲ್ಲಿ,ತಮ್ಮ ಪತ್ರಿಕಾ ಬರಹಗಳಲ್ಲಿ ಆಗಾಗ ಹೇಳುತ್ತಿರುತ್ತಾರೆ.

ಅದು ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಗಾಂಧಿಯವರ ನೇತೃತ್ವದಲ್ಲಿ ಅಸಹಕಾರ ಚಳುವಳಿ,ಸತ್ಯಾಗ್ರಹಗಳು ನಡೆಯುತ್ತಿದ್ದ ಕಾಲ.ಬಾಪೂವಿನ ಚಳುವಳಿಗೆ ಬೆಂಬಲ ಸೂಚಿಸಿ ಬಹಳಷ್ಟು ಜನರು ತಮ್ಮ ಕೈಲಾದ ಹಣವನ್ನು ತಂದು ಗಾಂಧೀಜಿಯವರಿಗೆ ಕೊಟ್ಟು ಸಹಾಯ ಮಾಡುತ್ತಿದ್ದರು. ಹೀಗೆ ಒಟ್ಟಾದ ಒಂದಷ್ಟು ದುಡ್ಡನ್ನು ಒಂದು ರಾತ್ರಿ ಗಾಂಧೀಜಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಕೊಟ್ಟು ಮರುದಿವಸ ಬೆಳಿಗ್ಗೆ ಬ್ಯಾಂಕಿಗೆ ಜಮಾ ಮಾಡಲು ಹೇಳುತ್ತಾರೆ.
ಸರ್ದಾರ್ ಪಟೇಲರು ಅದನ್ನು ತೆಗೆದುಕೊಂಡು ತಿಜೋರಿಯಲ್ಲಿ ಇಟ್ಟು ವಿಶ್ರಾಂತಿಗೆ ತೆರಳುವ ವೇಳೆಯಲ್ಲಿ ಅವರ ಪರಿಚಯಸ್ಥನೊಬ್ಬ ಬಂದು ತನಗೆ ಅಗತ್ಯವಾಗಿ ಒಂದಷ್ಟು ಹಣ ಬೇಕಾಗಿದೆ.ಈಗ ಸದ್ಯಕ್ಕೆ ನನ್ನ ಹತ್ತಿರ ಒಂದು ರೂಪಾಯಿಯೂ ಇಲ್ಲ‌.ಅನಿವಾರ್ಯವಾಗಿ ತುರ್ತು ಪರಿಸ್ಥಿತಿ ಬಂದಿದ್ದರಿಂದ ನಿಮ್ಮ‌ ಹತ್ತಿರ ಬಂದಿದ್ದೇನೆ. ಈಗ ಗಾಂಧೀಜಿಯವರು ನಾಳೆ ಬ್ಯಾಂಕಿಗೆ ಕಟ್ಟಲು‌ ಕೊಟ್ಟ ಹಣ ನಿಮ್ಮ ಹತ್ತಿರ ಇದೆ. ಅದರಲ್ಲಿ ನನಗೆ ಬೇಕಾದಷ್ಟು ಹಣವನ್ನು ದಯವಿಟ್ಟು ಕೊಡಿ. ಈಗ ತುರ್ತಿಗೆ ನನಗೆ ಬೇಕು.‌ನಾಳೆ ಬೆಳಿಗ್ಗೆ ನನಗೆ ಒಂದು ಕಡೆಯಿಂದ ಹಣ ಬರುವುದಿದೆ.ಅದು ಬಂದ ತಕ್ಷಣ ಬ್ಯಾಂಕ್ ಓಪನ್ ಆಗುವುದಕ್ಕೂ‌ ಮೊದಲೇ ನಿಮಗೆ ನಾನು ಹಣ‌ ಮರಳಿಸುತ್ತೇನೆ. ಈಗ ನೀವು ಹೇಗಿದ್ದರೂ ಆ ಹಣವನ್ನು ನಿಮ್ಮ‌ ತಿಜೋರಿಯಲ್ಲೇ ಇಡುತ್ತೀರಿ.‌ನಾಳೆ ಬೆಳಿಗ್ಗೆಯವರೆಗೂ ಅದರಿಂದ ಏನೂ ಉಪಯೋಗವಿಲ್ಲ. ಅದರ ಬದಲು ಅದನ್ನು ನನಗೆ ಕೊಟ್ಟರೆ ಬಹಳ ಸಹಾಯವಾಗುತ್ತದೆ.‌ಒಂದು ರಾತ್ರಿ ಹಣ ನಿಮ್ಮ ಹತ್ತಿರ ಇದ್ದರೇನು, ನನ್ನ ಬಳಿ‌ ಇದ್ದರೇನು ದಯವಿಟ್ಟು ನನಗೆ ಸಹಾಯ ಮಾಡಿ ಅನ್ನುತ್ತಾನೆ.

ವ್ಯಕ್ತಿ ನಂಬಿಕಸ್ಥನಾದ್ದರಿಂದ ಸರ್ದಾರ್ ಪಟೇಲರಿಗೂ ಅದು ಸರಿ ಅನ್ನಿಸುತ್ತದೆ.‌ಪಾಪ ಅವನಿಗೆ ಯಾವ ತೊಂದರೆ ಬಂದಿದೆಯೋ ಏನೋ.ಹಣವನ್ನು ನನ್ನ ತಿಜೋರಿಯಲ್ಲಿ ಇಡುವ ಬದಲು ಅವನಿಗೆ ಕೊಟ್ಟರೆ ಅವನ ಮರ್ಯಾದಿ ಉಳಿಯುತ್ತದೆಯೋ ಏನೋ ಎಂದು ಅವನಿಗೆ ಹಣ ಕೊಟ್ಟು ಕಳಿಸುತ್ತಾರೆ.‌ಮಾತು ಕೊಟ್ಟಂತೆ ಮರುದಿವಸ ಹಣ ಪಡೆದವ ಬ್ಯಾಂಕಿನ ಸಮಯಕ್ಕಿಂತಲೂ ಮೊದಲೆ ಸರ್ದಾರ್ ಪಟೇಲರಿಗೆ ಹಣ ವಾಪಾಸ್ ಕೊಡುತ್ತಾನೆ.‌ಪಟೇಲರು ಬ್ಯಾಂಕಿಗೆ ಹಾಕುತ್ತಾರೆ.

ಆದರೆ ಗಾಂಧೀಜಿಯವರಿಗೆ ಈ ಘಟನೆ ಗೊತ್ತಾದಾಗ ಅವರು ಬಹಳ ಬೇಜಾರು ಮಾಡಿಕೊಳ್ಳುತ್ತಾರೆ.ಸರ್ದಾರ್ ಪಟೇಲರನ್ನು ಕರೆದು, “ಸರ್ದಾರ್ ನೀನು‌‌ ಮಾಡಿದ್ದು ಸ್ವಲ್ಪವೂ ಸರಿಯಿಲ್ಲ.ಅವನು ನಿನಗೂ ನನಗೂ ನಂಬಿಕಸ್ಥನೇ ಇರಬಹುದು, ಹೇಳಿದಂತೆ ಹಣವನ್ನು ವಾಪಸ್ ಕೊಟ್ಟಿರಲೂ ಬಹುದು. ಆದರೆ ನೀನು ಅವನಿಗೆ ಕೊಟ್ಟ ಹಣ ನನ್ನದಲ್ಲ‌.ನಿನ್ನದೂ ಅಲ್ಲ. ಜನರು ಕಷ್ಟಪಟ್ಟು ದುಡಿದ ಹಣವನ್ನು ನನ್ನ ಮೇಲೆ ನಂಬಿಕೆ ಇಟ್ಟು ದೇಶಸೇವೆಗಾಗಿ ಕೊಟ್ಟಿದ್ದಾರೆ‌.‌ಅದನ್ನು ಎಂಥ ಅನಿವಾರ್ಯ ಸಂದರ್ಭದಲ್ಲಿಯೂ ನಮ್ಮ‌ ವೈಯಕ್ತಿಕ ಕೆಲಸಕ್ಕೆ ಬಳಸಿಕೊಳ್ಳುವುದು ಸರಿ ಅಲ್ಲವೇ ಅಲ್ಲ.‌ಹೌದು,ಒಂದು ರಾತ್ರಿ ನಿನ್ನ ತಿಜೋರಿಯಲ್ಲಿ ಇರುವ ಹಣ ಅವನ ಕೈಗೆ ಸಿಕ್ಕಿ ಅವನ ತೊಂದರೆ ಪರಿಹಾರವಾಗಿದೆ.‌ಆದರೆ ಜನರ ಹಣವನ್ನು ಆತ ಯಾವ ಕೆಲಸಕ್ಕೆ ಬಳಸಿಕೊಂಡಿದ್ದಾನೆ ಎಂದು ನಮಗೆ ಗೊತ್ತಿಲ್ಲ.ಇದು ಜನರ ನಂಬಿಕೆಗೆ ನಾವು ಮಾಡಿದ ದ್ರೋಹ.ನೀನು‌ ಮಾಡಿದ್ದು ಜನರಿಗೆ ಗೊತ್ತಾಗದೇ ಇರಬಹುದು.‌ಅಲ್ಲದೇ ಆತ ಹೇಳಿದಂತೆ ದುಡ್ಡು ವಾಪಸ್ ಕೊಟ್ಟಿದ್ದರಿಂದ ಹಣದ ಕೊರತೆಯೂ ಉಂಟಾಗಿಲ್ಲ.ಆದರೆ ಆತ ವಾಪಸ್ ಕೊಟ್ಟ ಹಣವನ್ನು ಆತ ಸಂಪಾದಿಸಿದ ಮಾರ್ಗ ಯಾವುದು ಅಂತ ನಮಗೆ ಗೊತ್ತಿಲ್ಲ.ನಮ್ಮ‌ ದೇಶಸೇವೆಗೆ ಬೇಕಿರುವುದು ಜನಸಾಮಾನ್ಯರು ನ್ಯಾಯಮಾರ್ಗದಿಂದ ಸಂಪಾದಿಸಿ ನನ್ನ ಮೇಲೆ ನಂಬಿಕೆ ಇಟ್ಟು ಕೊಟ್ಟ ಹಣ ಮಾತ್ರ.ನೀನು ಮಾಡಿರುವ ಕೃತ್ಯದಿಂದ ಜನರ ನಂಬಿಕೆಗೆ ನಾನು ಪೆಟ್ಟು ಕೊಟ್ಟಂತಾಗಿದೆ.ಅವರು ಯಾವ ಉದ್ದೇಶ ಇಟ್ಟುಕೊಂಡು ನನ್ನನ್ನು ನಂಬಿ‌ ಹಣಸಹಾಯ ಮಾಡಿದ್ದಾರೋ ಅದಕ್ಕಷ್ಟೇ ಆ ದುಡ್ಡನ್ನು ಬಳಸಬೇಕಿತ್ತು.ನೀನು ತಪ್ಪು ಮಾಡಿದೆ ಸರ್ದಾರ್” ಅಂತ ಬೇಸರದಿಂದ ನುಡಿದರಂತೆ ಗಾಂಧೀಜಿ.

ಕೋಟ್ಯಂತರ ಜನರನ್ನು ನಂಬಿಸಿ ಜನನಾಯಕರಾಗುವುದು ಸುಲಭ. ಆದರೆ ಆ ನಂಬಿಕೆಯನ್ನು‌‌ ಕೊನೆಯವರೆಗೂ ಉಳಿಸಿಕೊಂಡು ಹೋಗುವುದು ಬಲು ಕಷ್ಟ ಹಾಗೂ ಎಲ್ಲರಿಂದಲೂ ಆಗುವ ಕೆಲಸವಲ್ಲ.ಇದನ್ನು ಸಾಧ್ಯವಾಗಿಸಿದ ಬೆರಳೆಣಿಕೆಯ ಜನರಷ್ಟೇ ಮಹಾತ್ಮ ಅನ್ನಿಸಿಕೊಳ್ಳುತ್ತಾರೆ.

ಚಿತ್ರಕೃಪೆ: ಅಂತರ್ಜಾಲ