ಸ್ನೇಹಿತರೊಬ್ಬರು ಫೇಸ್ಬುಕ್ಕಿನಲ್ಲಿ ಬರೆದಿದ್ದರು. “ನಾನಿರುವುದು ಬೆಂಗಳೂರಿನಲ್ಲಿ.ಒಂದು ದಿನ ಸಂಜೆ ನನ್ನ ಮೂರು ವರ್ಷದ ಮಗ ಬಂದು ನನ್ನ ಕೈ ಹಿಡಿದು ಎಳೆಯಲಾರಂಭಿಸಿದ.ಅಪ್ಪಾ ಬಾ ಪಾರ್ಕಿಗೆ ಹೋಗೋಣ ನನಗೆ ಆಟ ಆಡ್ಬೇಕು.ಮನೆಯಲ್ಲಿ ಆಡೋಕೆ ಜಾಗ ಇಲ್ಲ,ಹೊರಗಡೆ ಕರೆದುಕೊಂಡು ಹೋಗು ಅಂತ ಅಳಲಾರಂಭಿಸಿದ.ಅವನಿಗೆ ಲಾಕ್ಡೌನ್ ಶುರುವಾಗುವುದಕ್ಕೂ ಮುಂಚೆ ಹೊರಗಡೆ ಹೋಗಿ ಸಂಜೆ ಪಾರ್ಕಿನಲ್ಲಿ ಆಟ ಆಡುವುದು ಅಭ್ಯಾಸವಾಗಿಬಿಟ್ಟಿತ್ತು.ಎರಡನೇ ಅಲೆಯಲ್ಲಿ ಮತ್ತೆ ಲಾಕ್ಡೌನ್ ವಿಧಿಸಿದ್ದರಿಂದ ಅನಿವಾರ್ಯವಾಗಿ ಮನೆಯೊಳಗೇ ಕಾಲ ಕಳೆಯಬೇಕಾದ ಪರಿಸ್ಥಿತಿ ನನ್ನ ಮಗನದ್ದು.ಯಾರನ್ನೂ ಭೇಟಿಯಾಗದೇ,ಹೊರಗೆ ಹೋಗದೆ ನಾವು ದೊಡ್ಡವರು ಹೇಗೋ ಇದ್ದುಬಿಡುತ್ತೇವೆ.ಆದರೆ ಮಕ್ಕಳಿಗೆ ಅದು ಅಷ್ಟು ಸುಲಭವಲ್ಲ.ಮನೆಯೊಳಗೇ ಇದ್ದು ಅವರು ಅನುಭವಿಸುವ ಮಾನಸಿಕ ಯಾತನೆಯನ್ನು ನೋಡಿಯೂ ಏನೂ ಮಾಡಲಾಗದ ದಯನೀಯ ಸ್ಥಿತಿ ನಮ್ಮಂಥ ಪೋಷಕರದ್ದು.ಬೆಳೆಯುವ ವಯಸ್ಸಿನಲ್ಲಿ ಹೊರಗಡೆ ಹೋಗಿ ಆಡದಿದ್ದರೆ,ಇತರ ಮಕ್ಕಳೊಂದಿಗೆ ಬೆರೆಯದಿದ್ದರೆ ಅವರ ವ್ಯಕ್ತಿತ್ವ ಮತ್ತು ಮಾನಸಿಕತೆಯ ಮೇಲಾಗುವ ಪರಿಣಾಮ ಕೆಲವೊಮ್ಮೆ ಭೀಕರವಾಗಿರುತ್ತದೆ.ಈ ಕಾರಣಕ್ಕಾಗಿಯಾದರೂ ಆದಷ್ಟು ಬೇಗ ಲಾಕ್ಡೌನ್ ಮುಗಿಯಬೇಕು.” ಸಣ್ಣ ಮಕ್ಕಳಿರುವ ಎಲ್ಲ ಪೋಷಕರೂ ಬಹುತೇಕ ಈ ಮಾತುಗಳನ್ನು ಅನುಮೋದಿಸುತ್ತಾರೆ.

ಬರಿಗಣ್ಣಿಗೆ ಕಾಣದ ಸೂಕ್ಷ್ಮಜೀವಿಯೊಂದು ಇಡೀ ಜಗತ್ತನ್ನು ಇಷ್ಟರ ಮಟ್ಟಿಗೆ ಅಲುಗಾಡಿಸಿ ಆರೋಗ್ಯ ವ್ಯವಸ್ಥೆ ಕುಸಿಯುವಂತೆ ಮಾಡಿ ಜನರನ್ನು ನಾಲ್ಕು ಗೋಡೆಗಳೊಳಗೆ ಲಾಕ್ಡೌನ್ ಹೆಸರಿನಲ್ಲಿ ತಿಂಗಳುಗಟ್ಟಲೆ ಹೆದರಿಕೊಂಡು ಕುಳಿತುಕೊಳ್ಳುವಂತೆ ಮಾಡಿದೆ ಎನ್ನುವುದನ್ನು ಈ ಕ್ಷಣಕ್ಕೂ ಒಪ್ಪಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತಿದೆ.ಬರಿಯ ಮನುಷ್ಯನಿಗೇಕೆ ಈ ರೀತಿಯ ಶಿಕ್ಷೆ? ಉಳಿದ ಪ್ರಾಣಿ ಪಕ್ಷಿಗಳು,ಮರ ಗಿಡಗಳು ಏನೂ ಆಗಿಲ್ಲವೆಂಬಂತೆ ಸ್ವಚ್ಛಂದವಾಗಿ ಬದುಕುತ್ತಿವೆ.ಯಾವುದೇ ತಪ್ಪು ಮಾಡದಿದ್ದರೂ ಗೃಹಬಂಧನದಲ್ಲಿರುವ ಸ್ಥಿತಿ ಮಾನವರದ್ದು.

ಲಾಕ್ಡೌನ್’ನಿಂದಾಗಿ ನೆಲಕಚ್ಚಿದ ಉದ್ಯಮಗಳಿಗೆ ಲೆಕ್ಕವೇ ಇಲ್ಲ.ದೊಡ್ಡ ದೊಡ್ಡ ನಗರಗಳಲ್ಲಿ ತಿಂಗಳಿಗೆ ಲಕ್ಷಗಟ್ಟಲೆ ಎಣಿಸುತ್ತ ಬದುಕುತ್ತಿದ್ದವರೆಲ್ಲ ತಮ್ಮ ಹುಟ್ಟೂರಿಗೆ,ಹಳ್ಳಿಗೆ ಬಂದು ತಾವು ಇಲ್ಲಿಯತನಕ ಒಮ್ಮೆಯೂ ಮಾಡದ,ಹಿಂದೆ ಒಂದು ಸಲ ಬೇಡ ಎಂದು ಧಿಕ್ಕರಿಸಿ ಹೋದ ಕೆಲಸ ಮಾಡಲಾರಂಭಿಸಿದ್ದಾರೆ.ಬೆಳ್ಳಿ ಪರದೆಯಲ್ಲಿ ರಾರಾಜಿಸಬೇಕು ಎಂದು ಕಂಗಳ ತುಂಬ ಕನಸು ತುಂಬಿಕೊಂಡು ನಗರಕ್ಕೆ ಹೋದ ಯುವ ನಟ ನಟಿಯರು ವಾಪಾಸ್ ಊರಿಗೆ ಬಂದು ಹೊಟ್ಟೆ ತುಂಬಿಸಿಕೊಳ್ಳಲು ಸಣ್ಣ ಪುಟ್ಟ ಉದ್ಯೋಗ ಹಿಡಿದಿದ್ದಾರೆ.ಕೋಟಿಗಟ್ಟಲೆ ಸಾಲ ತೆಗೆದು ಕಷ್ಟದಿಂದ ಶುರು ಮಾಡಿದ್ದ ಸ್ಟಾರ್ಟ್ ಅಪ್ ಸಂಸ್ಥೆಗಳು ಲಾಕ್ಡೌನ್’ನ ಹೊಡೆತಕ್ಕೆ ಸಿಕ್ಕಿ ಚೇತರಿಸಿಕೊಳ್ಳಲಾರದ ಹಂತ ತಲುಪಿವೆ.ಗಿಜಿಗುಡುವ ಹೋಟೆಲ್’ಗಳಲ್ಲಿ ಬಗೆಬಗೆಯ ಸ್ವಾದಿಷ್ಟವಾದ ಖಾದ್ಯಗಳನ್ನು ತಯಾರಿಸುತ್ತಿದ್ದ ನುರಿತ ಬಾಣಸಿಗರೆಲ್ಲ ಮನೆಯಲ್ಲಿ ಗಂಜಿ ಬೇಯಿಸುತ್ತ ತಾವು ಕಲಿತ ಅಡುಗೆ ಮರೆತು ಹೋಗದಿರಲಿ ಎಂದು ಆಶಿಸುತ್ತಿದ್ದಾರೆ.ಸಾವಿರಾರು ಭಕ್ತಾದಿಗಳಿಂದ ನಾನಾ ಬಗೆಯ ಧಾರ್ಮಿಕ ಸೇವೆ ಮಾಡಿಸಿಕೊಳ್ಳುತ್ತಿದ್ದ ದೇವಸ್ಥಾನದ ದೇವರದ್ದೂ ಪ್ರತಿದಿನ ಬರಿ ಅರ್ಚಕರನ್ನಷ್ಟೇ ನೋಡುವ ಸ್ಥಿತಿ.

ಕಳೆದ ಒಂದುವರೆ ವರ್ಷಗಳಲ್ಲಿ ಅತೀ ಹೆಚ್ಚು ಹಾನಿಗೊಳಗಾಗಿದ್ದು ಶಿಕ್ಷಣ ವ್ಯವಸ್ಥೆ.ಎಲ್ಲಿ ನೋಡಿದರೂ ಆನ್ಲೈನ್ ಕ್ಲಾಸುಗಳು.ಇನ್ನೇನು ಲಾಕ್ಡೌನ್ ಮುಗಿದು ಕ್ರಮೇಣವಾಗಿ ಶಾಲೆ,ಕಾಲೇಜುಗಳು ಆರಂಭವಾಗುವಷ್ಟರಲ್ಲಿ ಎರಡನೇ ಅಲೆ ಬಂದು ಭೀಕರವಾಗಿ ಅಪ್ಪಳಿಸಿ ಮತ್ತೆ ವಿದ್ಯಾಲಯಗಳ ಬಾಗಿಲು ಮುಚ್ಚಿಸಿತು.ಹತ್ತನೆ ತರಗತಿಯ ಪರೀಕ್ಷೆಗಳು ಕೆಲವು ರಾಜ್ಯಗಳಲ್ಲಿ ರದ್ದಾದರೆ ನಮ್ಮ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಯಿತು.ಒಳ್ಳೆಯ ಅಂಕ ಗಳಿಸಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಕನಸು ಹೊತ್ತಿದ್ದವರಿಗೆಲ್ಲ ಹೃದಯಕ್ಕೆ ಚೂರಿ ಇರಿದಂತಾಯಿತು.ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿದ್ದಕ್ಕೆ ಖಿನ್ನತೆಗೊಳಗಾಗಿ ನೊಂದು ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳಂತೆ.ಇದಕ್ಕೆ ಯಾರು ಕಾರಣ? ಸರ್ಕಾರವನ್ನಾಗಲೀ ವ್ಯವಸ್ಥೆಯನ್ನಾಗಲೀ ದೂರುವಂತಿಲ್ಲ.ಎಲ್ಲರೂ ಅಸಹಾಯಕರು.ಅದ್ಧೂರಿಯಾಗಿ ನಡೆಯುತ್ತಿದ್ದ ಐಪಿಎಲ್ ಕ್ರೀಡಾಕೂಟ ಎರಡನೇ ಅಲೆಯ ಕಾರಣದಿಂದ ಇದ್ದಕ್ಕಿದ್ದಂತೆಯೇ ರದ್ದಾಯಿತು.ಲಾಕ್ಡೌನ್ ಶುರುವಾಗಿದ್ದೂ ಗೊತ್ತಿಲ್ಲದ ಬಿಗ್ ಬಾಸ್ ಮನೆಯ ಸ್ಪರ್ಧಿಗಳನ್ನು ಇದ್ದಕ್ಕಿದ್ದಂತೆ ರಿಯಾಲಿಟಿ ಶೋ ನಿಲ್ಲಿಸಿ ಸುರಕ್ಷಿತವಾಗಿ ಮನೆಗೆ ಕಳಿಸಿಲಾಯಿತು.ಅಲ್ಲಿ ಬಿಗ್ ಬಾಸ್ ಮನೆಯೊಳಗೆ ಬಂಧಿಯಾಗಿದ್ದವರು ತಮ್ಮ ತಮ್ಮ ಸೂರಿನೊಳಗೆ ಲಾಕ್ಡೌನ್ ಕಾರಣದಿಂದ ಬಂಧಿಯಾದರು.ಲಾಕ್ಡೌನ್ ಕಾರಣದಿಂದಾಗಿ ಭೇಟಿಯಾಗಲು ಸಾಧ್ಯವಾಗದೆ ಸಂಬಂಧ ಹಳಸಿಕೊಂಡ ಯುವ ಪ್ರೇಮಿಗಳು ಒಂದೆಡೆ,ಬಂಧು ಮಿತ್ರರನ್ನು,ಆತ್ಮೀಯರನ್ನು ಯಾರನ್ನೂ ಕರೆಯಲಾಗದೆ ಐದು ಹತ್ತು ಜನರ ಮಧ್ಯೆ ಮದುವೆಯಾದವರು ಇನ್ನೊಂದೆಡೆ.

ಲಾಕ್ಡೌನ್ ಎಂಬ ಬಂಧನದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಖಿನ್ನತೆಗೊಳಗಾದವರಿದ್ದಾರೆ.ಮಾಡಲು ಕೆಲಸವಿಲ್ಲದೆ ದುಶ್ಚಟಗಳ,ಮಾದಕವಸ್ತುಗಳ ವ್ಯಸನಕ್ಕೆ ತುತ್ತಾದವರಿದ್ದಾರೆ.ಇಂಥವರ ಮಾನಸಿಕ ಸ್ಥಿತಿಯನ್ನು ಸ್ಥಿರವಾಗಿಡುವುದು ಹೇಗೆ? ಹದಿಹರೆಯದವರ,ಮಕ್ಕಳ ಮನಸ್ಸು ತುಂಬ ಸೂಕ್ಷ್ಮ.ಮನೆಯೊಳಗಿದ್ದೂ,ತಮ್ಮ ಜೊತೆಯೇ ಇದ್ದರೂ ಮಕ್ಕಳು ನಾರ್ಮಲ್ ಆಗಿ ಇಲ್ಲ ಎಂಬ ಸಣ್ಣ ಸುಳಿವು ಸಿಕ್ಕಿದರೂ ಪೋಷಕರು ನಿರ್ಲಕ್ಷಿಸಬಾರದು.ಅವರ ಹತ್ತಿರ ಕುಳಿತು,ಮೃದುವಾಗಿ ಮಾತನಾಡುತ್ತ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯನ್ನು ಕೇಳಬೇಕು.ಎಲ್ಲ ಸಮಯದಲ್ಲೂ ಸಂಪೂರ್ಣವಾಗಿ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಅಷ್ಟೊಂದು ಸುಲಭವಲ್ಲ,ಒಮ್ಮೊಮ್ಮೆ ಖಿನ್ನತೆಗೆ ಅಥವಾ ಇತರೆ ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗುವುದು ಮನುಷ್ಯರ ಸಹಜ ಸ್ವಭಾವವೆಂದು ಮಕ್ಕಳಿಗೆ,ಟೀನೇಜರ್’ಗಳಿಗೆ,ಯುವಕರಿಗೆ ಅರ್ಥ ಮಾಡಿಸಬೇಕು.ಒಳ್ಳೆಯ ಜೀವನಶೈಲಿ,ಸಮತೋಲಿತ ಆಹಾರ,ಅಗತ್ಯವಿರುವಷ್ಟು ವ್ಯಾಯಾಮ ಮತ್ತು ವಿಶ್ರಾಂತಿ ಇವೆಲ್ಲ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ಅಗತ್ಯ.ಖಾಲಿ ಮನಸ್ಸು ದುಷ್ಟ ಶಕ್ತಿಯ ವಾಸಸ್ಥಾನ ಎಂದುಮನಶಾಸ್ತ್ರಜ್ಞರು ಹೇಳುತ್ತಾರೆ.ಹಾಗಾಗಿ ಮಕ್ಕಳು,ಯುವಕರು ಸಾಧ್ಯವಾದಷ್ಟು ಚಟುವಟಿಕೆಯಿಂದಿರಲು ಸದಾ ಒಂದಿಲ್ಲೊಂದು ಕೆಲಸದಲ್ಲಿ ಅವರು ತೊಡಗಿಸಿಕೊಳ್ಳುವಂತೆ ಮಾಡಬೇಕು.ಅಮ್ಮಂದಿರು ಅಡುಗೆ ಹೇಳಿಕೊಡಬಹುದು,ಅಣ್ಣ ಅಕ್ಕಂದಿರು ತಮಗೆ ಬರುವ ಕರಕುಶಲ ಕಲೆಗಳನ್ನೋ,ಹೊಲಿಗೆಯನ್ನೋ ಜ್ಯೂನಿಯರ್’ಗಳಿಗೆ ಹೇಳಿಕೊಡಬಹುದು.ತಾವು ಹಿಂದೊಮ್ಮೆ ಮಾನಸಿಕ ಒತ್ತಡಕ್ಕೋ,ಖಿನ್ನತೆಗೋ ಒಳಗಾದಾಗ ತಮ್ಮ ಸ್ಥಿತಿ ಹೇಗಿತ್ತು,ಅದನ್ನು ಎದುರಿಸಿ ಹೊರಬಂದದ್ದು ಹೇಗೆ ಎಂಬ ಸ್ಪೂರ್ಥಿಯ ಕಥೆಗಳನ್ನು ಹೇಳುತ್ತ ಸದಾ ಒಳ್ಳೆಯ ವಿಚಾರಗಳ ಬಗ್ಗೆಯಷ್ಟೇ ಚಿಂತನೆ ಮಾಡುವಂತಾಗಬೇಕು.ಒಂದು ಮೃದುವಾದ ಸ್ಪರ್ಶ,ಪ್ರೀತಿ ತುಂಬಿದ ನಾಲ್ಕು ಮಾತುಗಳು,ನಿಮ್ಮ ಜೊತೆ ನಾವಿದ್ದೇವೆ ಎಂಬ ಭರವಸೆ ಪವಾಡಗಳನ್ನೇ ಮಾಡಬಹುದು.

ಮನೆಯೊಳಗೆ ಇದ್ದವರದ್ದು ಒಂದು ರೀತಿಯ ಬಂಧನವಾದರೆ ಲಾಕ್ಡೌನ್ ಸಮಯದಲ್ಲೂ ಯಾವುದನ್ನೂ ಲೆಕ್ಕಿಸದೇ ಆಸ್ಪತ್ರೆಗಳಲ್ಲಿ ಕೋವಿಡ್ ಡ್ಯೂಟಿ ಮಾಡಿದ್ದ ವೈದ್ಯರದ್ದು,ಇತರ ಆರೋಗ್ಯ ಕಾರ್ಯಕರ್ತರದ್ದು ಇನ್ನೊಂದು ರೀತಿಯ ಬಂಧನ.ಸಾಮಾನ್ಯ ಜನರು ಬಂಧನವನ್ನೂ ಎಂಜಾಯ್ ಮಾಡುತ್ತ ಬಗೆಬಗೆಯ ಅಡುಗೆ ಪ್ರಯೋಗಗಳನ್ನು ಮಾಡುತ್ತ,ಮನೆಯೊಳಗೇ ಆಟ ಆಡುತ್ತ,ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರೆ ಆರೋಗ್ಯ ಕಾರ್ಯಕರ್ತರು ಈ ಯಾವ ರಸಘಳಿಗೆಗಳನ್ನೂ ಅನುಭವಿಸಲು ಸಮಯ ಇಲ್ಲದಂತೆ ಕೋವಿಡ್ ಐಸಿಯುಗಳಲ್ಲಿ,ವಾರ್ಡಿನಲ್ಲಿ ರೋಗಿಗಳ ಪ್ರಾಣ ಉಳಿಸುವ ಕೈಂಕರ್ಯದಲ್ಲಿ ನಿರತರಾಗಿದ್ದರು.ತಮ್ಮ ಮನೆಯ ಸದಸ್ಯರೊಂದಿಗೆ ಕಾಲ ಕಳೆಯಲು ಸಾಧ್ಯವಿಲ್ಲ ಎಂಬ ಕಟು ಸತ್ಯವನ್ನು ಅರಗಿಸಿಕೊಂಡು ವಾರಗಟ್ಟಲೆ ಮನೆಯಿಂದ ದೂರವಿರುವ ರೋಗಿಗಳನ್ನು ತಮ್ಮ ಮನೆಯವರೇನೋ ಎಂಬಂತೆ ಅಕ್ಕರೆಯಿಂದ ಚಿಕಿತ್ಸೆ ನೀಡಿದ್ದಾರೆ.ಒಮ್ಮೆಯೂ ವೇದಿಕೆ ಹತ್ತದ ಆರೋಗ್ಯ ಕಾರ್ಯಕರ್ತರು ರೋಗಿಗಳ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಸಿನಿಮಾ ಹಾಡಿಗೆ ಹೆಜ್ಜೆಹಾಕಿ ಕೋವಿಡ್ ಕೇರ್ ಸೆಂಟರ್,ಐಸಿಯುಗಳಲ್ಲಿ ಡ್ಯಾನ್ಸ್ ಮಾಡಿದ್ದಾರೆ.ಬಾತ್ರೂಮಿಗಷ್ಟೇ ಸೀಮಿತವಾಗಿದ್ದ ಹಾಡುವ ಕೌಶಲ ಕೋವಿಡ್ ವಾರ್ಡಿನಲ್ಲೂ ಹೊರಗೆ ಬಂದು ರೋಗಿಗಳ ಮುಖದಲ್ಲಿ ಮಂದಹಾಸ ತಂದಿದೆ.ಎಲ್ಲೋ ಅಪರೂಪಕ್ಕೊಮ್ಮೆ ಅಡ್ಮಿಟ್ ಆಗುವ ಮಕ್ಕಳ ಜೊತೆ ಮಕ್ಕಳಾಗಿ ಆಟ ಆಡಿದವರಿದ್ದಾರೆ.ಹೆತ್ತವರನ್ನು ಮಿಸ್ ಮಾಡಿಕೊಂಡು ಅಳುತ್ತಿದ್ದ ಹದಿಯರೆಯದ ಹುಡುಗಿಗೆ ಅಮ್ಮನ ಪ್ರೀತಿ ತೋರಿಸಿ ಎಣ್ಣೆ ಹಾಕಿ ಜಡೆ ಹೆಣೆದು,ಕೈತುತ್ತು ತಿನ್ನಿಸಿದ ದಾದಿಯರಿದ್ದಾರೆ.ವೃದ್ಧರನ್ನು ಮಕ್ಕಳಂತೆ ನೋಡಿಕೊಳ್ಳುತ್ತ ಕೈ ಹಿಡಿದು ಅವರ ಹಲ್ಲುಜ್ಜಿಸಿದ ವಾರ್ಡ್ ಬಾಯ್’ಗಳಿದ್ದಾರೆ.ಕೋವಿಡ್ ಡ್ಯೂಟಿ ಮುಗಿಸಿಕೊಂಡು ಮನೆಗೆ ಹೋಗಿ ಸ್ವಲ್ಪ ವಿಶ್ರಾಂತಿ ಪಡೆದು ಬದಲಾವಣೆಯನ್ನು ಬಯಸುತ್ತ ಪರಿಸರದ ಗಾಳಿ ಸೇವಿಸಲು ಹೊರಗೆ ಸುತ್ತಾಡಲು ಹೋಗೋಣವೆಂದರೆ ಅದೂ ಸಾದ್ಯವಿಲ್ಲ ಲಾಕ್ಡೌನ್ ಕಾರಣದಿಂದಾಗಿ.ಮನೆ ಬಿಟ್ಟರೆ ಕೋವಿಡ್ ವಾರ್ಡ್,ಐಸಿಯುಗಳು.ಇವೆರಡರ ಹೊರತಾಗಿ ಬೇರೆ ಬದುಕಿಲ್ಲದಂತಾಗಿದೆ ಆರೋಗ್ಯ ಕಾರ್ಯಕರ್ತರಿಗೆ.ಇವರೆಲ್ಲ ಪಿಪಿಇ ಕಿಟ್,ಡಬಲ್ ಮಾಸ್ಕ್’ನೊಳಗೆ ಬಂಧಿಯಾಗಿ ಸುಮಾರು ಒಂದುವರೆ ವರ್ಷಗಳಾಗಿವೆ.ಕೋವಿಡ್ ಆದಷ್ಟು ಬೇಗ ಕಡಿಮೆಯಾಗಿ,ಬದುಕು ಮೊದಲಿನಂತಾಗಲಿ,ಮತ್ತೊಮ್ಮೆ ಪಿಪಿಇ ಕಿಟ್ ಧರಿಸುವಂತಾಗದಿರಲಿ ಅಂತ ಇವರೆಲ್ಲ ದಿನವೂ ಆಶಿಸುತ್ತಿದ್ದಾರೆ.

ಎರಡೂ ಅಲೆಗಳಲ್ಲಿ ಭೀಕರ ಸ್ಥಿತಿಯನ್ನು ಅನುಭವಿಸಿದ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ದಿಲ್ಲಿಗಳಲ್ಲಿ ಹಂತಹಂತವಾಗಿ ಲಾಕ್ಡೌನ್ ತೆರವುಗೊಳಿಸಲಾಗಿದೆ.ಕೆಲವು ಕನಿಷ್ಟ ನಿರ್ಬಂಧಗಳೊಂದಿಗೆ ಎಲ್ಲ ಸಾರ್ವಜನಿಕ ಚಟುವಟಿಕೆಗಳಿಗೆ ಕ್ರಮೇಣ ಅವಕಾಶ ಕಲ್ಪಿಸಲಾಗುವುದೆಂದು ಆಡಳಿತಗಾರರು ಹೇಳಿದ್ದಾರೆ.ಮನೆಯೊಳಗೇ ಬಂಧಿಯಾಗಿದ್ದ ಜನರು ಹೊರಗಿನ ಪರಿಸರದ ಗಾಳಿಯನ್ನೂ ಉಸಿರಾಡುವಂತಾಗಿದೆ.ಮಕ್ಕಳು ಮತ್ತೆ ಮೈದಾನಗಳಿಗೆ ತೆರಳಿ ಮನಸೋ ಇಚ್ಛೆ ಆಡುವ ದಿನಗಳು ದೂರವಿಲ್ಲ.ತಿಂಗಳುಗಟ್ಟಲೆ ಮನೆಯಲ್ಲಿ ಕೂತಿದ್ದ ಪ್ರಸಿದ್ಧ ಹೋಟೆಲ್’ಗಳ ಬಾಣಸಿಗರು ಬಗೆಬಗೆಯ ಅಡುಗೆ ತಯಾರಿಸಲು ಸಿದ್ಧವಾಗಿದ್ದಾರೆ.ಕರ್ನಾಟಕದಲ್ಲೂ ಹಂತ ಹಂತವಾಗಿ ಅನ್ ಲಾಕ್ಡೌನ್ ಮಾಡಲಾಗುವುದೆಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಸಾಕಿನ್ನು.ಈಗ ಸಡಿಲವಾಗುತ್ತಿರುವ ಲಾಕ್ಡೌನ್ ಮತ್ತೆಂದೂ ಬಾರದಿರಲಿ.ಜನಜೀವನ ಸಹಜ ಸ್ಥಿತಿಗೆ ಮರಳಲಿ,ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ಆದಷ್ಟು ಬೇಗ ಶುರುವಾಗಿ ಅವರು ಕ್ರಿಯಾಶೀಲರಾಗಲಿ.ಆರೋಗ್ಯ ಕಾರ್ಯಕರ್ತರಿಗೆ ಭಾರದ ಪಿಪಿಇ ಕಿಟ್’ಗಳಿಂದ ಮುಕ್ತಿ ಸಿಗಲಿ.ಇನ್ನೊಂದು ಲಾಕ್ಡೌನನ್ನು ತಡೆದುಕೊಳ್ಳುವ ಸಾಮರ್ಥ್ಯ ಯಾರಿಗೂ ಇಲ್ಲ.ಮನೆಯೊಳಗೆ ಬಂಧಿಯಾಗಿ ಚಟುವಟಿಕೆಯೇ ಇಲ್ಲದೆ ದೇಹವನ್ನೂ,ಮನಸ್ಸನ್ನೂ ನಿಷ್ಕ್ರಿಯಗೊಳಿಸಿಕೊಂಡಿದ್ದವರೆಲ್ಲ ಆದಷ್ಟು ಬೇಗ ಪುಟಿದೇಳಲಿ.ಮುಗಿದು ಹೋಗಲಿ ಈ ಬಂಧನದ ಬದುಕು.

ಒಂದು ವಿಷಯವನ್ನು ನಾವೆಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು.ಲಾಕ್ಡೌನ್ ತೆರವಾಗುತ್ತಿದೆ ಅಂದರೆ ಘಾಸಿಕೊಂಡು ಐಸಿಯುನಲ್ಲಿ ಅಡ್ಮಿಟ್ ಆಗಿದ್ದ ಜನಜೀವನ ಚೇತರಿಸಿಕೊಂಡು ಐಸಿಯುನಿಂದ ಸಾಮಾನ್ಯ ವಾರ್ಡಿಗೆ ಶಿಫ್ಟ್ ಆಗಿದೆ ಅಂತ ಅರ್ಥವಷ್ಟೇ.ಅದಿನ್ನೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿಲ್ಲ.ಕೋವಿಡ್’ಗೆ ಸಂಬಂಧಿಸಿದಂತೆ ಸೂಕ್ತ ಎಚ್ಚರಿಕೆ ವಹಿಸದಿದ್ದರೆ ಜನಜೀವನ ಮತ್ತೆ ಹೊಡೆತ ತಿಂದು ವಾರ್ಡಿನಿಂದ ಐಸಿಯುಗೆ ಶಿಫ್ಟ್ ಆಗಿ ಲಾಕ್ಡೌನ್ ದಿನಗಳು ಮರುಕಳಿಸುವುದರಲ್ಲಿ ಅನುಮಾನವಿಲ್ಲ.

ಮೂರನೆ ಅಲೆಯಲ್ಲಿ ಕೋವಿಡ್ ಮಕ್ಕಳನ್ನು ಟಾರ್ಗೆಟ್ ಮಾಡಲಿದೆಯೆಂದೂ,ಅದಕ್ಕೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಈಗಿನಿಂದಲೇ ಚಿಂತಿಸಬೇಕೆಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ.ಕೋವಿಡ್ ಮೂರನೇ ಅಲೆ ಬಾರದೇ ಇರಲಿ.ಬಂದರೂ ಗಂಭೀರ ಪ್ರಮಾಣದ ರೋಗವನ್ನುಂಟು ಮಾಡಿ ಲಾಕ್ಡೌನ್ ವಿಧಿಸುವಂತೆ ಆಗದಿರಲಿ ಎನ್ನುವುದಷ್ಟೇ ಈ ಕ್ಷಣದ ಪ್ರಾರ್ಥನೆ.

ಈ ಲೇಖನದ ಪರಿಷ್ಕೃತ ಭಾಗ TV9 ಕನ್ನಡ ವೆಬ್ ಪೋರ್ಟಲ್’ನಲ್ಲಿ 9-6-2021ರಂದು ಪ್ರಕಟವಾಗಿದೆ.