ಹೆಲ್ಮೆಟ್ ಧರಿಸಿದ್ದರೆ ಬದುಕುಳಿಯುತ್ತಿದ್ದರು ಅಂತ ಹೇಗೆ ಹೇಳಬಹುದು? ಇಲ್ಲ ಆಗುವುದಿಲ್ಲ.ಹೆಲ್ಮೆಟ್ ಧರಿಸಿಯೂ,ಸಂಚಾರಿ ನಿಯಮಗಳನ್ನು ಪಾಲಿಸಿಯೂ ಅಫಘಾತಕ್ಕೆ ತುತ್ತಾದ ಎಷ್ಟು ಜನರಿಲ್ಲ.ಸಂಚಾರಿ ನಿಯಮಗಳನ್ನು ಪಾಲಿಸದಿರುವಷ್ಟು,ತಮ್ಮ ಸುರಕ್ಷತೆಯನ್ನು ನೋಡಿಕೊಳ್ಳದೆ ಇರುವಷ್ಟು ದಡ್ಡರಂತೂ ಅಲ್ಲ ವಿಜಯ್.ಯಾವ ತುರ್ತು ಕೆಲಸವಿತ್ತೋ ಏನೋ ಯಾರಿಗೆ ಗೊತ್ತು.ಬೇಕೆಂದೇ ಹೆಲ್ಮೆಟ್ ಹಾಕಿಕೊಳ್ಳದೆ ಬಂದಿರಲಿಕ್ಕಿಲ್ಲ.ಕೆಟ್ಟ ಘಳಿಗೆಯಷ್ಟೇ.ಸಾಯುವ ಕಾಲ ಬಂದಾಗ ತಪ್ಪಿಸಲು ಯಾರಿಂದ ಸಾಧ್ಯ?

ಲಾಕ್ಡೌನ್ ಸಮಯದಲ್ಲಿ ಹಲವಾರು ಜನರಿಗೆ ಸಹಾಯ ಮಾಡಿದವರು ವಿಜಯ್.ಮೊನ್ನೆ ಶನಿವಾರ ಅಪಘಾತವಾಗುವ ಮುನ್ನವೂ ಎಲ್ಲೋ ಹೋಗಿ ಕೋವಿಡ್ ಕಿಟ್ ಹಂಚಿ ವಾಪಸ್ ಬರುತ್ತಿದ್ದರಂತೆ.ಒಳ್ಳೆಯ ಕೆಲಸದಲ್ಲಿ ತೊಡಗಿಸಿಕೊಂಡಾಗಲೇ ದುರ್ಮರಣಕ್ಕೀಡುತ್ತೇನೆ ಅಂತ ವಿಜಯ್ ಅವರಿಗೆ ಕಲ್ಪನೆ ಇರಲಿಕ್ಕಿಲ್ಲ.(ಯಾರೂ ಅಂದುಕೊಂಡಿರಲಿಕ್ಕಿಲ್ಲ.) ಆದರೂ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದರು.ತಲೆಗೆ,ಮೆದುಳಿಗೆ ಗಂಭೀರ ಸ್ವರೂಪದ ಗಾಯವಾಯಿತು.ಚಿಂತಾಜನಕ ಸ್ಥಿತಿಯಲ್ಲೇ ಅಡ್ಮಿಟ್ ಆಗಿ ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಎಮರ್ಜೆನ್ಸಿ ಶಸ್ತ್ರಚಿಕಿತ್ಸೆಗೆ ಒಳಪಟ್ಟರುಆದರೂ ಉಳಿಸಿಕೊಳ್ಳುವ ಯೋಗ ಅಪೋಲೋ ಆಸ್ಪತ್ರೆಯ ವೈದ್ಯರಿಗೆ,ವಿಜಯ್ ಕುಟುಂಬದವರಿಗೆ ಇರಲಿಲ್ಲ.ಸಂಚಾರಿ ವಿಜಯ್ ಸಂಚಾರ ಮಾಡುತ್ತಿರುವಾಗಲೇ ದುರಾದೃಷ್ಟವಶಾತ್ ಅಪಘಾತವಾಗಿ ಜಗತ್ತನ್ನು ಬಿಟ್ಟು ಹೋದರು.

‘ನಾನು ಅವನಲ್ಲ ಅವಳು’ ಚಿತ್ರದ ಅವರ ಮನೋಜ್ಞ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದರೂ‌ ನನಗೆ ವಿಜಯ್ ತುಂಬ ಇಷ್ಟವಾಗಿದ್ದು ಹರಿವು ಚಿತ್ರದ ಅಸಹಾಯಕ ತಂದೆಯ ಪಾತ್ರಕ್ಕೆ.ರೋಗಿಷ್ಟ ಮಗನನ್ನು ಬಹಳ ಕಷ್ಟಪಟ್ಟು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಉಳಿಸಿಕೊಳ್ಳಲು ಹೆಣಗಾಡುವುದು,ಅಲ್ಲಿನ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡಲಾಗದ ಅಸಹಾಯಕತೆ,ಮಗ ಸಾವನ್ನಪ್ಪಿದಾಗ ಹೆಣವನ್ನು ಊರಿಗೆ ಸಾಗಿಸಲೂ ಹಣವಿಲ್ಲದೆ ಟ್ರಂಕೊಂದರಲ್ಲಿ ಮಗನನ್ನು ಎತ್ತಿಕೊಂಡೇ ತಿರುಗುವ ಸನ್ನಿವೇಶಗಳೆಲ್ಲ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.ಕನ್ನಡ ಭಾಷೆಯ ಮೇಲಿನ ಹಿಡಿತ,ಸಾಹಿತ್ಯದ ಮೇಲಿನ ಒಲವು,ಶುದ್ಧ ರಂಗಭೂಮಿಯ ಹಿನ್ನಲೆ,ಸ್ಪಷ್ಟವಾದ ಉಚ್ಚಾರ ಈ ಎಲ್ಲ ಕಾರಣಗಳಿಂದ ನಟನೆಗೂ ನೈಜತೆಯ ಟಚ್ ಕೊಟ್ಟವರು ವಿಜಯ್.ಕನ್ನಡ ಚಿತ್ರರಂಗದಲ್ಲಿ ಉಜ್ವಲ ಭವಿಷ್ಯವಿತ್ತು.ಅವರ ಒಳ್ಳೊಳ್ಳೆ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರು ನೋಡುತ್ತಿದ್ದರು.ಈಗ ಏನೂ ಇಲ್ಲ.ಭವಿತವ್ಯದ ಕಲ್ಪನೆಗಳ ಕನವರಿಕೆಯಷ್ಟೇ.

ಬದುಕಿರುವಾಗ ತನ್ನ ಮಿತಿಯೊಳಗೆ ಹಲವು ಜನರಿಗೆ ಬೇರೆ ಬೇರೆ ರೀತಿಯ ಸಹಾಯ ಮಾಡಿದ್ದರು.ಈಗ ಬ್ರೈನ್ ಡೆಡ್ ಆದ ಮೇಲೆ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ ವಿಜಯ್ ಕುಟುಂಬದವರು.ಎರಡು ಕಣ್ಣು,ಎರಡು ಕಿಡ್ನಿಗಳನ್ನು ತೆಗೆದರೂ ಅದರಿಂದಾಗಿ ಬದುಕಿನ ಭರವಸೆಯನ್ನು ಕಳೆದುಕೊಂಡ ನಾಲ್ಕು ಜನರು ಬದುಕುತ್ತಾರೆ.ಸತ್ತ ಮೇಲೂ ವಿಜಯ್ ಆ ನಾಲ್ಕು ಜನರಿಗೆ ಪ್ರಾತಃಸ್ಮರಣೀಯರಾಗುತ್ತಾರೆ.ತಮ್ಮ ಅಂಗಾಂಗಳ ಮೂಲಕ ನಾಲ್ಕು ಜನರ ಬಾಳನ್ನು ಬೆಳಗಿಸಿ ವಿಜಯ್ ನಮ್ಮ ನಡುವೆ ಜೀವಂತವಾಗಿರುತ್ತಾರೆ. ‘ಪರೋಪಕಾರಾರ್ಥಂ ಇದಂ ಶರೀರಂ’ ಎಂಬ ಸಂಸ್ಕೃತ ನುಡಿಗೆ ಬದುಕಿರುವಾಗಲೂ,ಸತ್ತಮೇಲೂ ಅನ್ವರ್ಥವಾದ ಸಂಚಾರಿ ವಿಜಯ್ ನಿಜವಾದ ಮಹಾತ್ಮರು.ಅಂಗಾಂಗ ದಾನಕ್ಕೆ ಸಮ್ಮತಿ ನೀಡಿದ ವಿಜಯ್ ಕುಟುಂಬದವರೂ ಅಭಿನಂದನಾರ್ಹರು.ನೋವನ್ನು ತಡೆದುಕೊಳ್ಳುವ ಶಕ್ತಿ ಅವರಲ್ಲಿ ಸರ್ವಕಾಲಕ್ಕೂ ಇರಲಿ.

ಒಳ್ಳೆಯ ಕೆಲಸಗಳನ್ನು ಮಾಡಿದವರಿಗೇ ಹೀಗೇಕಾಗುತ್ತದೆ,ಏಕೆ ಅಕಾಲ ಮರಣಕ್ಕೆ ತುತ್ತಾಗುತ್ತಾರೆ ಎಂದು ನಮ್ಮನ್ನು ನಿಯಂತ್ರಿಸುತ್ತಿರುವ ಶಕ್ತಿಯನ್ನು ನಾವು ಮತ್ತೊಮ್ಮೆ ಪ್ರಶ್ನಿಸಬಹುದಷ್ಟೇ.ಭಾವನೆಗಳನ್ನು ತಡೆಹಿಡಿಯದೆ ಕಣ್ಣೀರು ಸುರಿಸಬಹುದಷ್ಟೇ.ಯಾವುದೋ ಪವಾಡ ನಡೆದು ವಿಜಯ್ ಮೇಲೆದ್ದು ಬರುತ್ತಾರೆ ಎಂಬ ಆಸೆ ನಿಜವಾಗುವುದಿಲ್ಲವಲ್ಲ.

ವ್ಯಕ್ತಿಗಳು ಮೃತರಾದಾಗ ‘ತುಂಬಲಾರದ ನಷ್ಟ’ ಅಂತ ಹೇಳುವುದು ವಾಡಿಕೆ.ಆದರೆ ಅನೇಕ ಸಂದರ್ಭಗಳಲ್ಲಿ ವ್ಯಕ್ತಿಯ ಸಾವಿನಿಂದ ನಿಜವಾಗಿಯೂ ತುಂಬಲಾರದ ನಷ್ಟವಾಗುತ್ತದೆಯೇ ಎಂಬುದು ಪ್ರಶ್ನಾರ್ಹವಾಗುತ್ತದೆ.ವಿಜಯ್ ವಿಷಯದಲ್ಲಿ ಹಾಗಲ್ಲ.ಒಳ್ಳೆಯ ಕಲಾವಿದ,ಸಹೃದಯಿ,ಪರೋಪಕಾರಿಯಾದ ಸಂಚಾರಿ ವಿಜಯ್ ನಿಧನರಾಗಿದ್ದು ಕನ್ನಡ ಚಿತ್ರರಂಗಕ್ಕೆ,ಸಮಾಜಕ್ಕೆ ನಿಜಕ್ಕೂ ತುಂಬಲಾರದ ನಷ್ಟವೇ ಸರಿ.

ಏನು ಹೇಳಬೇಕೋ ಗೊತ್ತಾಗುತ್ತಿಲ್ಲ.ಇನ್ನೂ ಅನೇಕ ಸಿನಿಮಾಗಳನ್ನು ಕೊಡಬಹುದಿತ್ತು.ಸಾವಿರಾರು ಒಳ್ಳೊಳ್ಳೆ ಕಾರ್ಯಗಳನ್ನು ಮಾಡಬಹುದಿತ್ತು.ಆದರೂ ತುಂಬ ಬೇಗ ಹೊರಟು ಹೋದಿರಿ ವಿಜಯ್.ಅರಗಿಸಿಕೊಳ್ಳಲಾಗದ ವೇದನೆಯೊಂದಿಗೆ ನಿಮ್ಮ‌ ಆತ್ಮಕ್ಕೆ ಸದ್ಗತಿ ಸಿಗಲೆಂದು ಆಶಿಸುತ್ತೇನೆ..