ಪುಕ್ಸಟ್ಟೆ ಲೈಫು ಅಂತ ಒಂದು ಸಿನಿಮಾ ಬಿಡುಗಡೆ ಆಯ್ತು ಇತ್ತೀಚೆಗೆ.ಹೆಚ್ಚಾಗಿ ಮಲ್ಟಿಪ್ಲೆಕ್ಸ್’ಗಳಲ್ಲಷ್ಟೇ ಬಂದಿತ್ತು.ಅರವಿಂದ ಕುಪ್ಳಿಕರ್ ಬಹು ಮಹತ್ವಾಕಾಂಕ್ಷೆಯಿಂದ ಮಾಡಿದ ಸಿನಿಮಾವದು.ದುರ್ಮರಣಕ್ಕೀಡಾದ ಸಂಚಾರಿ ವಿಜಯ್ ಪ್ರಧಾನ ಭೂಮಿಕೆಯಲ್ಲಿದ್ದರು.ಬಿಡುಗಡೆಯಾದ ಒಂದು ವಾರದ ನಂತರ ಎಲ್ಲ ಮಲ್ಟಿಪ್ಲೆಕ್ಸ್’ಗಳಿಂದಲೂ ಚಿತ್ರ ಎತ್ತಂಗಡಿಯಾಗಿತ್ತು.ಅಷ್ಟರೊಳಗೇ ಚಿತ್ರ ನೋಡಿದ್ದವರೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೊಳ್ಳೆ ಮಾತುಗಳನ್ನು ಬರೆದರು.ಆದಷ್ಟು ಬೇಗ ಸಿನಿಮಾವನ್ನು ನೋಡಿ,ಇಲ್ಲವಾದರೆ ಒಂದು ಒಳ್ಳೆಯ ಕತೆಯನ್ನು ಮಿಸ್ ಮಾಡಿಕೊಳ್ಳುತ್ತೀರಿ ಎಂದರು.ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರದ ಕಾರಣ ಉತ್ತಮ ಸದಭಿರುಚಿಯ ಸಿನಿಮಾವೊಂದು ಬಾಕ್ಸ್ ಆಫೀಸಿನಲ್ಲಿ ಒಂದು ವಾರಕ್ಕಿಂತ ಜಾಸ್ತಿ ಓಡಲಿಲ್ಲ.ಕಾರಣ ಸುಸ್ಪಷ್ಟ.ನಿರ್ದೇಶಕರು ದೊಡ್ಡ ದೊಡ್ಡ ಸ್ಟಾರ್ ನಟ ನಟಿಯರ ಚಿತ್ರಗಳನ್ನು ನಿರ್ದೇಶಿಸಿ ಹೆಸರು ಮಾಡಿದವರಲ್ಲ.ಪುಕ್ಸಟ್ಟೆ ಲೈಫು ಸಿನಿಮಾದ ನಾಯಕನೂ ಕೂಡ ಭಾರೀ ಸಂಖ್ಯೆಯ ಅಭಿಮಾನಿ ವರ್ಗವಿರುವ ಸೂಪರ್ ಸ್ಟಾರ್ ಅಲ್ಲ.ಹೀಗಿರುವಾಗ ಸಿನಿಮಾ ನೋಡಲು,ಗೆಲ್ಲಿಸಲು ಕನ್ನಡದ ಬಹುಸಂಖ್ಯೆಯ ಮಾಸ್ ಪ್ರೇಕ್ಷಕವರ್ಗಕ್ಕೆ ಯಾವ ಕಾರಣಗಳೂ ಇರಲಿಲ್ಲ.ಇದೇ ಸಿನಿಮಾದಲ್ಲಿ ಸುದೀಪ್,ಪುನೀತ್,ದರ್ಶನ್,ಯಶ್ ಅಥವಾ ಇನ್ಯಾರೋ ಸೂಪರ್ ಸ್ಟಾರ್ ನಟಿಸಿದ್ದರೆ,ಬಿಡುಗಡೆಯ ದಿನ ಚಿತ್ರಮಂದಿರದ ಹೊರಗೆ ನಿಲ್ಲಿಸಿರುವ ಭಾರೀ ಗಾತ್ರದ ಕಟೌಟ್’ಗೆ ಅಭಿಮಾನಿಗಳಿಂದ ಕ್ಷೀರಾಭಿಷೇಕವಾಗಿದ್ದಿದ್ದರೆ ಪುಕ್ಸಟ್ಟೆ ಲೈಫು ಒಂದೇ ವಾರದಲ್ಲಿ ಚಿತ್ರಮಂದಿರದಿಂದ ನಿರ್ಗಮಿಸುತ್ತಿರಲಿಲ್ಲ.ಸದಭಿರುಚಿಯ,ಸೃಜನಶೀಲ ಸಿನಿಮಾಗಳಿಗೆ ಹಂಬಲಿಸುವ ನನ್ನಂಥ ಚಿತ್ರಪ್ರೇಮಿಗಳು ಸಿನಿಮಾ ನೊಡಲಾಗದೇ ಹಳಹಳಿಸಿಕೊಳ್ಳಬೇಕಾಗಿರಲಿಲ್ಲ.

ಕಣ್ಣಲ್ಲೇ ಕೊಲ್ಲುವುದು ಅನ್ನುವುದಕ್ಕೆ ಅನ್ವರ್ಥವಾಗುವಂಥ ನಟನೆಯನ್ನು ‘ವಾಲಿ’ ಸಿನಿಮಾದಲ್ಲಿ,ತನ್ನ ಅಭಿಮಾನಿಗಳು ಅಷ್ಟಾಗಿ ಇಷ್ಟಪಡದ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲೂ ಸಮರ್ಥವಾಗಿ ನಟಿಸಬಲ್ಲೆ ಎನ್ನುವುದನ್ನು ತೆಲುಗಿನ ‘ಈಗ’ ಸಿನಿಮಾದಲ್ಲಿ ಸುದೀಪ್ ತೋರಿಸಿದ್ದರು.ಸ್ಟಾರ್ ಇಮೇಜಿನಿಂದ ಹೊರಗೆ ಬಂದು ಸಾಮಾನ್ಯ ನಟನಾಗಿ ಸಪೋರ್ಟಿವ್ ರೋಲ್’ನಲ್ಲೂ ಕಾಣಿಸಿಕೊಳ್ಳಬಲ್ಲೆ ಅಂತ ಪುನೀತ್ ರಾಜಕುಮಾರ್ ‘ಮೈತ್ರಿ’ ಸಿನಿಮಾದಲ್ಲಿ ಸಾಬೀತು ಪಡಿಸಿದ್ದರು.ಹೇಳುತ್ತ ಹೋದರೆ ರಕ್ಷಿತ್ ಶೆಟ್ಟಿ,ಧನಂಜಯ ಅವರ ಉದಾಹರಣೆಗಳನ್ನೂ ಕೊಡಬಹುದು.ಅಂದರೆ ತಮ್ಮೊಳಗಿನ ನಟನಾ ಸಾಮರ್ಥ್ಯವನ್ನು ಸಂಪೂರ್ಣವಾಗಿ ಹೊರಗೆ ತೆಗೆಯಬಲ್ಲ ನಿರ್ದೇಶಕರ ಕೈಗೆ ಸಿಕ್ಕಿದರೆ ನಮ್ಮ ಕನ್ನಡದ ಸ್ಟಾರ್ ನಟರು ಎಂಥ ಮನೋಜ್ಞ ಅಭಿನಯವನ್ನೂ ಮಾಡಬಲ್ಲರು.ಆದರೆ ನಟ ನಟಿಯರ ಪೂರ್ಣ ಸಾಮರ್ಥ್ಯವನ್ನು ಹೊರಗೆಳೆಯುವಂಥ ಕಥೆಗಳನ್ನು ಬರೆಯುವತ್ತ,ಸೃಜನಶೀಲ ಚಿತ್ರಗಳನ್ನು ನಿರ್ಮಿಸುವತ್ತ ಕನ್ನಡ ಚಿತ್ರನಿರ್ದೇಶಕರು ಮನಮಾಡುತ್ತಿಲ್ಲ.ಒಬ್ಬ ನಾಯಕನಟ ಸರ್ವಸಾಮರ್ಥ್ಯ ಉಳ್ಳವನು,ಎಂಥ ಬಲಿಷ್ಟ ಎದುರಾಳಿಯನ್ನಾದರೂ ಏಕಾಂಗಿಯಾಗಿ ಎದುರಿಸಿ ಗೆಲ್ಲುವ ಶಕ್ತಿಯುಳ್ಳವನು,ಕಥೆಗೆ ಅಗತ್ಯವೇ ಇಲ್ಲದಿದ್ದರೂ ಅವನಿಗೊಬ್ಬ ಪ್ರೇಯಸಿಯಿರಬೇಕು ಎಂಬ ಹಳೆಯ ಸೂತ್ರಗಳಿಗೆ ಕಟ್ಟುಬಿದ್ದು ಇನ್ನೂ ಸಿನಿಮಾ ಮಾಡುತ್ತಿದ್ದಾರೆ.ಯಾವುದೇ ರೀತಿಯ ಹೊಸತನವಿಲ್ಲ.ಇಪ್ಪತ್ತು ಮೂವತ್ತು ವರ್ಷಗಳಿಂದ ನೋಡುತ್ತ ಬಂದಿರುವ ಇಂಥ ಕಥೆಗಳನ್ನೇ ನೋಡಲು ಚಿತ್ರಮಂದಿರಕ್ಕೆ ಹಣ ಕೊಟ್ಟು ಹೋಗಲು ನನಗಂತೂ ಮನಸ್ಸಾಗುವುದಿಲ್ಲ.

ಕೊರೋನಾದಿಂದಾಗಿ ಚಿತ್ರಮಂದಿರಗಳು ತಿಂಗಳುಗಟ್ಟಲೆ ಬಾಗಿಲು ಹಾಕಿದ್ದ ಕಾಲದಲ್ಲೂ ಒಳ್ಳೊಳ್ಳೆ ಸಿನಿಮಾಗಳನ್ನು ಮಾಡಿ ಲಾಭ ಮಾಡಿಕೊಂಡಿದ್ದು ಮಲಯಾಳಂ ಚಿತ್ರರಂಗ.ಅಲ್ಲಿನ ನಿರ್ದೇಶಕರು,ಸ್ಟಾರ್ ನಟರು,ಮುಖ್ಯವಾಗಿ ಪ್ರೇಕ್ಷಕರು ಈ ಕಾಲಕ್ಕೆ ಬೇಕಾದಂತೆ ಬಹಳ ಬೇಗ ಅಪ್ದೇಟ್ ಆಗಿಬಿಟ್ಟರು.OTTಯಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ತಮ್ಮ ಘನತೆಗೆ ಕುಂದುಂಟಾಗುತ್ತದೆಂದು ಯಾವ ನಟ,ನಿರ್ದೇಶಕರೂ ಆಲೋಚಿಸಲಿಲ್ಲ.ಫಹಾದ್ ಫಾಸಿಲ್,ಪೃಥ್ವಿರಾಜ್’ರಂಥ ಸೂಪರ್ ಸ್ಟಾರ್’ಗಳು OTTಯಲ್ಲಿ ಸಾಲು ಸಾಲು ಚಿತ್ರಗಳನ್ನು ಬಿಡುಗಡೆ ಮಾಡಿದರು.ಕಥೆಯ ಮೂಲ ಆಶಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಸಿನಿಮಾ ಗೆಲ್ಲಿಸುವ ಕಲೆಯನ್ನು ಅಲ್ಲಿನ ನಿರ್ದೇಶಕರು ಅರ್ಥ ಮಾಡಿಕೊಂಡಿದ್ದಾರೆ.ಹಾಗಾಗಿಯೇ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳ ನಡುವೆ ನಡೆಯುವ ಸಂಗರ್ಷದ ಕಥೆಯನ್ನು Malik ಸಿನಿಮಾದಲ್ಲಿಸೂಕ್ಷ್ಮವಾಗಿ ತೋರಿಸಿಬಿಟ್ಟರು ಮಹೇಶ್ ನಾರಾಯಣನ್.ಸಮುದಾಯವೊಂದಕ್ಕೆ ಸೇರಿದ ಜನರು ತಮ್ಮನ್ನು ಆಕ್ಷೇಪಿಸಬಹುದು,ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆಯುವ ರೇಸ್’ನಲ್ಲಿ ಹಿನ್ನಡೆಯುಂಟಾಗಬಹುದು ಎಂಬುದೆಲ್ಲ ಅಷ್ಟೆಲ್ಲ ಮುಖ್ಯವಾಗುವುದಿಲ್ಲ ಮಲಯಾಳಂ ನಿರ್ದೇಶಕರಿಗೆ.ಬರೀ ಏಳೆಂಟೇ ಪಾತ್ರಗಳಿರುವ,ಯಾವ ಪಾತ್ರವೂ ಸಿನಿಮಾದ ನಾಯಕ,ನಾಯಕಿ ಅಂತ ಹೇಳಲು ಸಾಧ್ಯವಿಲ್ಲದ,ಬರೀ ಒಂದು ರಾತ್ರಿಯಲ್ಲಿ ನಡೆಯುವ ಕಥೆ ಇರುವ Kuruthiಯಂಥ ಸಿನಿಮಾದಲ್ಲಿ ನಟಿಸಲು,ಹಾಗೂ ಅದನ್ನು ನೇರವಾಗಿ OTTಯಲ್ಲಿ ಬಿಡುಗಡೆ ಮಾಡಲು ಪೃಥ್ವಿರಾಜ್’ನಂಥ ಸೂಪರ್ ಸ್ಟಾರ್ ಹಿಂದು ಮುಂದು ನೋಡುವುದಿಲ್ಲ.ಅಂಥ ಸೃಜನಶೀಲ ಕಥೆಯನ್ನಿಂಟುಕೊಂಡು ಸ್ಟಾರ್ ನಟನ ಜೊತೆ ಸಿನಿಮಾ ಮಾಡಲು ಕನ್ನಡದ ನಿರ್ದೇಶಕರು ಇವತ್ತಿಗೂ ಮುಂದಾಗುತ್ತಿಲ್ಲ.ನೇರವಾಗಿ OTTಯಲ್ಲಿ ಬಿಡುಗಡೆ ಮಾಡಲು ಕನ್ನಡದ ಸೂಪರ್ ಸ್ಟಾರ್’ಗಳು ಹಿಂದೇಟು ಹಾಕುತ್ತಾರೆ.ಹೀಗೆಲ್ಲ ಆದರೆ ಚಿತ್ರರಂಗ ಯಾವುದೇ ಬೆಳವಣಿಗೆ ಇಲ್ಲದೆ ನಿಂತ ನೀರಾಗಿಬಿಡುತ್ತದೆ.ಹಾಗಂತ ಕನ್ನಡದಲ್ಲಿ ಸದಭಿರುಚಿಯ ಸೃಜನಶೀಲ ಸಿನಿಮಾಗಳು ಬರುವುದೇ ಇಲ್ಲ ಅಂತೇನಿಲ್ಲ.ವರ್ಷಕ್ಕೆ ನಾಲ್ಕೈದಾದರೂ ಬರುತ್ತವೆ.ಆದರೆ ಅವುಗಳಲ್ಲಿ ವರ್ಕ್ ಮಾಡಿರುವವರು ಇನ್ನೂ ಚಿತ್ರರಂಗದಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುತ್ತಿರುವ ನಟ,ನಿರ್ದೇಶಕರುಗಳು.ಮೊದಲೇ ಕಟ್ಟಿಕೊಂಡಿರುವ ಮಾಸ್ ಇಮೇಜಿನಿಂದ ಹೊರಬಂದು ತಮಗೆ ಸ್ವಲ್ಪ Unusual  ಅನ್ನಿಸಬಹುದಾದ ಪಾತ್ರಗಳನ್ನು ನಮ್ಮ ಸೂಪರ್ ಸ್ಟಾರ್’ಗಳು ಒಪ್ಪಿಕೊಳ್ಳುವುದಿಲ್ಲ.ಒಂದೊಮ್ಮೆ ಒಪ್ಪಿಕೊಂಡರೂ ಅವರೊಳಗಿನ ನಟನಾ ಸಾಮರ್ಥ್ಯವನ್ನು ಸಂಪೂರ್ಣವಾಗಿ ಹೊರಗೆ ತರಬಲ್ಲ ನುರಿತ ನಿರ್ದೇಶಕ ಸಿಗುವುದಿಲ್ಲ.ಕನ್ನಡದ ಹೆಚ್ಚಿನ ನಿರ್ದೇಶಕರು ಸ್ಟಾರ್ ನಟ ನಟಿಯರು ಹೇಳಿದಂತೆ ಕೇಳುವ,ಚಿತ್ರಕಥೆಯನ್ನು ಬದಲಿಸುವ ಕೆಟ್ಟ ಅಭ್ಯಾಸವುಳ್ಳವರೇನೋ ಅನ್ನಿಸುತ್ತದೆ ಅನೇಕ ಸಲ.ಹಳೆ ಪುಸ್ತಕಕ್ಕೆ ಹೊಸ ಬೈಂಡ್ ಹಾಕಿ ಓದಲು ಕೊಡುವಂತೆ ಸಿನಿಮಾಗಳನ್ನು ಮಾಡಿದರೆ ಯಾವ ನಟ-ನಟಿಯರ ಅಭಿಮಾನಿಗಳಲ್ಲದ ಸದಭಿರುಚಿಯ ಚಿತ್ರಪ್ರೇಕ್ಷಕರು ಕನ್ನಡ ಸಿನಿಮಾಗಳನ್ನು ನೋಡುವುದನ್ನು ಕ್ರಮೇಣ ನಿಲ್ಲಿಸಬಹುದು.

ಹೊಸ ರೀತಿಯ ಕಥೆಗಳಿಗೆ,ಸದಭಿರುಚಿಯ ಕಂಟೆಂಟ್’ಗಳಿಗೆ ಕನ್ನಡದಲ್ಲಿ ಕೊರತೆಯೇನೂ ಇಲ್ಲ.ಹುಡುಕಿ ತೆರೆಯ ಮೇಲೆ ತರುವ ಬುದ್ಧಿವಂತಿಕೆ ನಿರ್ದೇಶಕರಿಗೆ ಇರಬೇಕು ಅಷ್ಟೇ.ಪೂರ್ಣಚಂದ್ರ ತೇಜಸ್ವಿಯವರ ‘ಜುಗಾರಿ ಕ್ರಾಸ್’ ಕಾದಂಬರಿಯನ್ನು ಸ್ಟಾರ್ ನಟನನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಒಂದೊಳ್ಳೆ ಥ್ರಿಲ್ಲರ್ ಆಗಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಅನುಮಾನವಿಲ್ಲ.ಅದನ್ನು ವೆಬ್ ಸಿರೀಸ್ ಮಾಡಿ OTTಯಲ್ಲಿ ಬಿಟ್ಟರಂತೂ ಇನ್ನೂ ಒಳ್ಳೆಯದು.ಸರಿಯಾದ ಚಿತ್ರಕಥೆಯೊಂದಿಗೆ,ನಟ-ನಟಿಯರ ಪೂರ್ಣ ಸಾಮರ್ಥ್ಯವನ್ನು ಹೊರಗೆಳೆಯಬಲ್ಲ ನಿರ್ದೇಶಕರ ಕೈಗೆ ಸಿಕ್ಕಿದರೆ ಭೈರಪ್ಪನವರ ‘ಯಾನ’ ಕಾದಂಬರಿ ಅದ್ಭುತ ಸ್ಪೇಸ್ ಮೂವಿ ಆಗಬಹುದೇನೋ.ಕನ್ನಡದ ಸದಭಿರುಚಿಯ ಪ್ರೇಕ್ಷಕರಿಗೆ ಬೇಕಾದಂಥ ಕಥೆ ಬರೆಯಬಲ್ಲ ಬಹಳಷ್ಟು ಬರಹಗಾರರು ನಮ್ಮಲ್ಲೂ ಇದ್ದಾರೆ.ಗುರುತಿಸುವ ಔದಾರ್ಯವನ್ನು ನಿರ್ದೇಶಕರು ತೋರಬೇಕಷ್ಟೇ.‘ಗೇಮ್ ಆಫ್ ಥ್ರೋನ್ಸ್’ನಂಥ ಸರಣಿಯನ್ನು ಎಂಜಾಯ್ ಮಾಡುವ ಕನ್ನಡಿಗರು ಲೇಖಕ ವಸುದೇಂಧ್ರರ ‘ತೇಜೋತುಂಗಭದ್ರಾ’,ಡಾ.ಕೆ.ಎನ್ ಗಣೇಶಯ್ಯನವರ ‘ಮೂಕಧಾತು’,‘ಚಿತಾದಂತ’ ಅಥವಾ ಗಜಾನನ ಶರ್ಮರ ‘ಚೆನ್ನಾಭೈರಾದೇವಿ’ಯಂಥ ಕಾದಂಬರಿಗಳು ಸಿನಿಮಾ ಆಗಿಯೋ,ವೆಬ್ ಸೀರೀಸ್ ಆಗಿಯೋ OTTಯಲ್ಲಿ ಬಂದರೆ ನೋಡಿ ಪ್ರೋತ್ಸಾಹಿಸದೇ ಇರುತ್ತಾರೆಯೇ? ಸ್ಟಾರ್ ಇಮೇಜಿನಿಂದ ಹೊರಬಂದು ಇಂಥ ಕಥೆಗಳನ್ನು ಕನ್ನಡದ ನಟನಟಿಯರು ಒಪ್ಪಿಕೊಳ್ಳುವ ಮನಸ್ಸು ಮಾಡಿದರೆ ಒಳ್ಳೆಯದು. 

‘ದಯವಿಟ್ಟು ಗಮನಿಸಿ’ ಎಂಬ ಸೃಜನಶೀಲ ಸಿನಿಮಾ ಮಾಡಿದ್ದ ನಿರ್ದೇಶಕ ರೋಹಿತ್ ಪದಕಿ ತಮ್ಮ ಹೊಸ ಸಿನಿಮಾವನ್ನು OTTಯಲ್ಲಿ ಬಿಡುಗಡೆ ಮಾಡುವ ಜಾಣ ನಿರ್ಧಾರ ತೆಗೆದುಕೊಂಡಿದ್ದಾರೆ.ಅಕ್ಟೋಬರ್ 22ರಿಂದ ‘ರತ್ನನ್ ಪ್ರಪಂಚ’ ಅಮೆಝಾನ್ ಪ್ರೈಮ್’ನಲ್ಲಿ ಲಭ್ಯವಾಗಲಿದೆ.ಕನ್ನಡ ಚಿತ್ರೋದ್ಯಮದ ಮಟ್ಟಿಗೆ ಇದೊಂದು ಒಳ್ಳೆಯ ಬೆಳವಣಿಗೆ.ಹೋಗಿ ಬರುವ ಸಮಯವನ್ನೂ ಸೇರಿ ಸುಮಾರು ಮೂರರಿಂದ ಮೂರುವರೆ ತಾಸುಗಳಷ್ಟು ಅಮೂಲ್ಯ ಸಮಯವನ್ನು ಚಿತ್ರಮಂದಿರಕ್ಕೆ ಹೋಗಿ ಸ್ಟಾರ್ ನಟನ ವೈಭವೀಕರಣವಿರುವ,ಕಥೆಯಲ್ಲಿ ಹೊಸತನವಿಲ್ಲದ ಸಿನಿಮಾಗಳನ್ನು ನೋಡುವುದರ ಮೂಲಕ ಹಾಳು ಮಾಡಿಕೊಳ್ಳಲು ಅನೇಕ ಪ್ರೇಕ್ಷಕರು ತಯಾರಿಲ್ಲ.ಹಾಗಾಗಿ ಸ್ವಲ್ಪ ತಮ್ಮ ಕಂಫರ್ಟ್ ಝೋನ್’ನಿಂದ ಹೊರಬಂದು ಬೇರೆ ಬೇರೆ ರೀತಿಯ ಸಿನಿಮಾಗಳನ್ನು ಮಾಡುವತ್ತ ಸ್ಯಾಂಡಲ್ವುಡ್’ನ ನಟರು ನಿರ್ದೇಶಕರು ಕಾರ್ಯೋನ್ಮುಖವಾದರೆ,ಅವರ ಸಿನಿಮಾಗಳು ವರ್ಷದಲ್ಲಿ ಒಂದೆರಡಾದರೂ ನೇರವಾಗಿ OTTಯಲ್ಲಿ ಬಿಡುಗಡೆಯಾಗುವಂತಾದರೆ ಒಳ್ಳೆಯದು.ಸೂಪರ್ ಸ್ಟಾರ್’ಗಳ ಮಾಸ್ ಇಮೇಜ್ ಹೆಚ್ಚಿಸುವ ಸಿನಿಮಾಗಳನ್ನೇ ಮಾಡುತ್ತಿದ್ದರೆ,ಕೈಗೆಟಕುವ ದರದಲ್ಲಿ ಸಿಗುವ OTTಗಳಿಂದಾಗಿ ಬೇರೆ ಬೇರೆ ಭಾಷೆಯ ಒಳ್ಳೊಳ್ಳೆ ಸಿನಿಮಾಗಳ ರುಚಿ ಹತ್ತಿರುವ ಹೊಸ ಅಭಿರುಚಿಯ ಪ್ರೇಕ್ಷಕರಿಗೆ ಬೇಕಾದಂತೆ ನಮ್ಮ ನಿರ್ದೇಶಕರು ಅಪ್ದೇಟ್ ಆಗದೇ ಹೋದರೆ ಕೆಲವೇ ವರ್ಷಗಳಲ್ಲಿ ಕನ್ನಡ ಚಿತ್ರರಂಗ ಅಪ್ರಸ್ತುತವಾಗುವ ಅಪಾಯ ದಟ್ಟವಾಗಿ ಗೋಚರವಾಗುತ್ತಿದೆ.