ಹಾಗೆ ನೋಡಿದರೆ ‘ದಯವಿಟ್ಟು ಗಮನಿಸಿ’ ಕನ್ನಡದ most underrated ಸಿನಿಮಾಗಳಲ್ಲಿ ಒಂದು.2017 ರಲ್ಲಿ ರೋಹಿತ್ ಪದಕಿ ತುಂಬ ಮಹತ್ವಾಕಾಂಕ್ಷೆಯಿಂದ ಚಿತ್ರವನ್ನು ಮಾಡಿದ್ದರೂ ಬಾಕ್ಸಾಫೀಸ್’ನಲ್ಲಿ ಗೆಲ್ಲಿಸುವ ಔದಾರ್ಯತೆಯನ್ನು ತೋರಲಿಲ್ಲ ಕನ್ನಡದ ಪ್ರೇಕ್ಷಕರು.ಬದುಕಿನ ಗೊಂದಲಗಳಿಗೆ ಅರ್ಥವನ್ನು ಹುಡುಕುತ್ತ ಪ್ರಯಾಣ ಹೋಗುವ ನಾಲ್ವರ ಕಥೆಯನ್ನು ಹೇಳುತ್ತ ಟ್ರಾವೆಲ್ ಥೀಮ್ ಇಟ್ಟುಕೊಂಡು ಬಂದಿತ್ತು ‘ದಯವಿಟ್ಟು ಗಮನಿಸಿ’.

Travel theme ಅನ್ನು ಮತ್ತೊಮ್ಮೆ ಅಪ್ಪಿಕೊಂಡು ರೋಹಿತ್ ‘ರತ್ನನ್ ಪ್ರಪಂಚ’ ಮಾಡಿ OTTಯಲ್ಲಿ ಬಿಡುಗಡೆ ಮಾಡುವ ಜಾಣತನ ತೋರಿದ್ದಾರೆ.ಹಿಮಪಾತವಾಗುವ ಕಾಶ್ಮೀರವನ್ನು,ಉರಿಬಿಸಿಲಿನ ಗದಗವನ್ನು,ಮತ್ಸ್ಯವಾಸನೆಯಿರುವ ಗೋಕರ್ಣವನ್ನೆಲ್ಲ ತೋರಿಸುತ್ತ ಕಥೆ ಹೇಳಿದ್ದಾರೆ. “ಫ್ಯಾಮಿಲಿ ಡ್ರಾಮಾ ಕಥೆಗಳ ಬಗ್ಗೆ ಕನ್ನಡದ ಪ್ರೇಕ್ಷಕರಿಗಿರುವ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ನನ್ನ ಸಿನಿಮಾ” ಅಂತ ಸಂದರ್ಶನವೊಂದರಲ್ಲಿ ಹೇಳಿದ್ದರು ಪದಕಿ.ಸಿನಿಮಾ ನೋಡಿದಾಗ ಅವರ ಮಾತು ನಿಜವೆನಿಸುತ್ತದೆ.ಸಾಹಿತ್ಯದ ಕುರಿತು ಗಂಭೀರವಾದ ಒಲವಿರುವ,ಪ್ರಕೃತಿಯ ವಿಸ್ಮಯವನ್ನು,ಆ ಮೂಲಕ ಭಿನ್ನ ಭಿನ್ನ ಪ್ರದೇಶದ ಜನರ ನಾಡಿ ಮಿಡಿತವನ್ನು ಅರಿಯುವ ಸಲುವಾಗಿ ಪ್ರವಾಸ ಮಾಡುವ,ಮಾನವ ಸಂಬಂಧಗಳ ತೀವ್ರತೆಯನ್ನು,ಭಾವನಾತ್ಮಕತೆಯನ್ನು ಅಕ್ಷರಗಳಲ್ಲಿ ಹಿಡಿದಿಡಬಲ್ಲ ಪ್ರತಿಭಾವಂತ ಕಲಾಕಾರನಷ್ಟೇ ನಿರ್ದೇಶಿಸಬಹುದಾದ ಗಟ್ಟಿ ಥೀಮ್ ಇರುವ ಸಿನಿಮಾ ‘ರತ್ನನ್‌ ಪ್ರಪಂಚ’. ಅದಕ್ಕಾಗಿ ರೋಹಿತ್ ಅಭಿನಂದನಾರ್ಹರು.

ಮಲಯಾಳಂ ಚಿತ್ರಗಳನ್ನು ಆಸ್ವಾದಿಸುವ ಹವ್ಯಾಸವುಳ್ಳವರಿಗೆ ಈ ಸಿನಿಮಾದಲ್ಲಿ ಫಹಾದ್’ನ ‘ಒರು ಇಂಡಿಯನ್ ಪ್ರಣಯಕಥಾ’ ಅಥವಾ ದುಲ್ಕಾರ್’ನ ‘ನೀಲಾಕಾಶಂ ಪಚ್ಚಕಡಲ್ ಚುವನ್ನ ಭೂಮಿ’ ಚಿತ್ರಗಳ ಛಾಯೆಯಿದೆ ಅಂತ ಮೇಲ್ನೋಟಕ್ಕೆ ಅನ್ನಿಸಬಹುದೇನೋ.ಕನ್ನಡದ ನಿರ್ದೇಶಕರು ಮಲಯಾಳದವರಷ್ಟು ಚೆನ್ನಾಗಿ ಕಥೆ ಹೇಳಲ್ಲ ಅಂತ ಗೊಣಗುವ ನನ್ನಂಥವರಿಗೆ ಉತ್ತರವಾಗಿ ರತ್ನನ್ ಪ್ರಪಂಚ ಬಂದಿದೆ.

ಮೊದಲಾರ್ಧದಲ್ಲಿ ನವಿರಾದ,ಪ್ರತ್ಯುತ್ಪನ್ನಮತಿತ್ವವುಳ್ಳ ಸಂಭಾಷಣೆಯಿರುವ ಹಾಸ್ಯದ ಹೊದಿಕೆ ಇದೆ.ಹೊದಿಕೆಯನ್ನು ಎತ್ತಿ ಉತ್ತರಾರ್ಧಕ್ಕೆ ಹೋದಾಗ ಗಂಭೀರವಾದ ಕಥೆಯನ್ನು ಅಚ್ಚುಕಟ್ಟಾಗಿ ಹಾಸಿ ಮಾಡಿದ ಮೃದುವಾದ ಹಾಸಿಗೆಯಿದೆ.ಪ್ರೇಕ್ಷಕ ಕಲಾಸ್ವಾದನೆ ಮಾಡುತ್ತ ಪವಡಿಸಿದಾಗ ಕನಸಿನ ಲೋಕಕ್ಕೆ ಕೊಂಡೊಯ್ಯಲು,ಕಾಶ್ಮೀರದ ಸೌಂದರ್ಯವನ್ನು ಢಾಳಾಗಿ ತೋರಿಸುತ್ತ ಬರುವ ‘ಅಲೆಮಾರಿ’ ಹಾಡಿದೆ.ನೂರ ನಲವತ್ತೇಳು ನಿಮಿಷಗಳ ಕಾಲ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವ ತಾಜಾತನದ ಜೀವಂತಿಕೆಯಿದೆ ರತ್ನನ ಪ್ರಪಂಚದಲ್ಲಿ.

ಸಿನಿಮಾದ ಮುಖ್ಯ ಪಾತ್ರಧಾರಿ ತಾನೊಬ್ಬನೇ ಅಲ್ಲ,ಹೀರೋ ಇದ್ದರಷ್ಟೇ ಸಿನಿಮಾ ಗೆಲ್ಲುವುದಿಲ್ಲ ಅಂತ ಇವತ್ತಿನ ಅನೇಕ ನಾಯಕ ನಟರು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ.ಇಂಥ ಕಾಲಘಟ್ಟದಲ್ಲಿ ಕನ್ನಡ ಚಿತ್ರರಂಗವಿರುವಾಗ, ಪ್ರಧಾನ ಭೂಮಿಕೆಯಲ್ಲಿದ್ದರೂ ತನ್ನ ಸುತ್ತಮುತ್ತಲಿನ ಪಾತ್ರಗಳಿಗೂ ಅಷ್ಟೇ ಸ್ಪೇಸ್ ಕೊಡುತ್ತ ಸಿನಿಮಾ ಗೆಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಧನಂಜಯ.ಬಹಳ ಕಾಲದ ನಂತರ ತನ್ನ ನಟನಾ ಸಾಮರ್ಥ್ಯದ ಮೂಲ ಬಂಡವಾಳವನ್ನು ಹೊರಹಾಕಲು ಅವಕಾಶವಿರುವ ಗಟ್ಟಿ ಪಾತ್ರ ಸಿಕ್ಕಿದೆ ಉಮಾಶ್ರೀಯವರಿಗೆ.ಪರಭಾಷಾ ನಟಿಯಾದರೂ ಗಂಭೀರ ಪಾತ್ರಕ್ಕೆ ಲೀಲಾಜಾಲವಾಗಿ ಒಗ್ಗಿಕೊಂಡು ನಟಿಸಿದ್ದಾರೆ ರೇಬಾ ಜಾನ್.’ಅಲೆಮಾರಿ’ ಹಾಡನ್ನು ಇಂಪಾಗಿಸಿ ‘ದಯವಿಟ್ಟು ಗಮನಿಸಿ’ಯ ‘ಸಂಚಾರಿ’ ಹಾಡನ್ನು ನೆನಪು ಮಾಡಿಸುವಲ್ಲಿ ಅಜನೀಶ್ ಲೋಕನಾಥರ ಮ್ಯೂಸಿಕ್ ಡಿಪಾರ್ಟ್‌ಮೆಂಟ್ ಯಶಸ್ಸನ್ನು ಕಂಡಿದೆ.ಕಾಶ್ಮೀರವನ್ನು,ಗೋಕರ್ಣವನ್ನು ನವನವೋನ್ಮೇಷಶಾಲಿಯಾಗಿ cinematographyಯ ಕೌಶಲದೊಂದಿಗೆ ತೋರಿಸಿದವರು ಶ್ರೀಶ ಕುಡುವಳ್ಳಿ.ಗಂಭೀರ ಕಥೆಯ ಓಘಕ್ಕೆ ಶೃತಿಯವರ ನಟನೆ ಅಷ್ಟಾಗಿ  ಮ್ಯಾಚ್ ಆದಂತೆ ಕಂಡು ಬರುವುದಿಲ್ಲ.ಅಚ್ಯುತ ಕುಮಾರ್,ರಾಜೇಶ್ ನಟರಂಗ,ವೈಜನಾಥ್ ಬಿರಾದಾರ್ ಅವರಿಗೆಲ್ಲ ಹೆಚ್ಚು ಕೆಲಸವಿಲ್ಲ.

“ಮಕ್ಕಳು ಮಲಗಿದ ಮೇಲೆ ಅವರ ಉಸಿರಿನ ಏರಿಳಿತವನ್ನು ನೋಡೋದೇ ತಾಯಿಗೆ ಸ್ವರ್ಗ.ಆ ಸುಖ ಮಕ್ಕಳು ದೊಡ್ಡವರಾದ ಮೇಲೆ ಸಿಗೋಲ್ಲ..”

“ಬದುಕು ಒಂದು ಹಬ್ಬ ಆಗ್ಬೇಕು,ಪಶ್ಚಾತ್ತಾಪ ಪಡೋ ಹಾಗೆ ಆಗ್ಬಾರ್ದು..”

“ಎಲ್ಲ ಮುಗಿಸಿ,ನೀ ಎಲ್ಲಿಗೆ ಹೋಗಬೇಕು ಅಂತ ಯಾರಾದ್ರೂ ಕೇಳಿದರೆ ನಿನ್ನ ಗರ್ಭದಲ್ಲಿ ಅವಿತು ಕೂತು ಬಿಡುತ್ತೇನೆ.ನೀನೇ ನನ್ನ ಪ್ರಪಂಚ..”

ಸಿನಿಮಾ ಮುಗಿದ ಮೇಲೂ ಕಿವಿಯೊಳಗೆ ಕೊರೆಯುವ ಇಂಥ ಹಲವು ಸಂಭಾಷಣೆಗಳ ಶಕ್ತಿಯಿದೆ ‘ರತ್ನನ್ ಪ್ರಪಂಚ’ಕ್ಕೆ.

“ನಿನ್ನಲ್ಲಿರೋ ಉತ್ತರ ಇನ್ನೆಲ್ಲೋ ನೀ ಬೇಡುತ ತಿರುಗಿದೆ ವಿಳಾಸವಿಲ್ಲದೆ” .. ಎಂಬ ‘ಅಲೆಮಾರಿ’ ಹಾಡಿನ ಸಾಲುಗಳು ಕಾಡುತ್ತವೆ.

ಬರೆದ ವಿಷಯ ಪೂರ್ತಿ ಸರಿ ಇದ್ದರೂ ಬರವಣಿಗೆ ಅಂದವಾಗಿಲ್ಲ ಅಂತ ಕನ್ನಡ ಅಧ್ಯಾಪಕರು ಪ್ರತಿಭಾವಂತ ವಿದ್ಯಾರ್ಥಿಯ ಒಂದು ಅಂಕವನ್ನು ಕಡಿಮೆ ಮಾಡುತ್ತಾರಲ್ಲ ಹಾಗೆ,ಬೈಗುಳದ ಪದಗಳನ್ನು ಬಳಸುವಾಗ ಚಿತ್ರತಂಡ ಸ್ವಲ್ಪ ಎಚ್ಚರ ತಪ್ಪಿದ್ದಕ್ಕೆ ಪ್ರೀತಿಯಿಂದ ಗದರಿ  Out of Out marks ಕೊಡುವುದನ್ನು ನಿರಾಕರಿಸಬೇಕಾಗುತ್ತದೆ.

ಸದಭಿರುಚಿಯ,ಸೃಜನಶೀಲ ಕಥೆಯುಳ್ಳ ಸುಂದರ ಸಿನಿಮಾ ಅಮೆಝಾನ್ ಪ್ರೈಮಲ್ಲಿ ಬಂದಿದೆ.ನೋಡಿ ಆಸ್ವಾದಿಸಿ.ಇನ್ನೊಬ್ಬರು ನೋಡುವಂತೆ ಪ್ರೋತ್ಸಾಹಿಸಿ.

ಅಂದ ಹಾಗೆ ವಿಶೇಷ ವ್ಯಕ್ತಿಯೊಬ್ಬರು ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ ‘ರತ್ನನ್ ಪ್ರಪಂಚ’ದಲ್ಲಿ.