ಅಪ್ಪು ತೀರಿಕೊಂಡ ಸಂಜೆ ಬೆಂಗಳೂರಿನಲ್ಲಿದ್ದೆ.ಐದು ಗಂಟೆಯ ಹೊತ್ತಿಗೆ ಜೆಪಿ ನಗರ ಮೆಟ್ರೋ ಸ್ಟೇಶನ್’ನಿಂದ ನಾನು ಹೋಗಬೇಕಿದ್ದ ಡೆಸ್ಟಿನೇಶನ್’ಗೆ ತೆರಳಲು ಆಟೋ ಹಿಡಿಯುವಷ್ಟರಲ್ಲಿ ಎಲ್ಲವೂ ಸ್ತಭ್ದವಾಗಿತ್ತು.ಬಹುತೇಕ ಅಂಗಡಿಗಳೆಲ್ಲವೂ ಮುಚ್ಚಿ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿತ್ತು.ನಿಮಿಷಗಟ್ಟಲೆ ಕಾಯಿಸುತ್ತಿದ್ದ ಟ್ರಾಫಿಕ್ ಸಿಗ್ನಲ್’ಗಳೆಲ್ಲ ಆಲ್ಮೋಸ್ಟ್ Zero Trafficನಂತೆ ವಾಹನಗಳನ್ನು ಚಲಿಸಲು ಬಿಡುತ್ತಿದ್ದವು.

ಮಾತಿಗೆಳೆದಾಗ ನಾನು ಕುಳಿತಿದ್ದ ಆಟೋ ಚಾಲಕ ಹೇಳಲು ಶುರು ಮಾಡಿದ. “ರಾಜಕುಮಾರ್ ಕುಟುಂಬದವರು ಭಾಳ ದೊಡ್ಡೋವ್ರು ಸಾರ್,ಜನರಿಗೆ ಅವ್ರ ಮೇಲೆ ಭಾರೀ ಅಭಿಮಾನ.ಈಗ ನಮ್‌ ಅಪ್ಪು ಸರ್ ಇಷ್ಟ್ ಸಣ್ ವಯಸ್ಸಲ್ಲ್ ತೀರ್ಕೊಂಬುಟ್ರು ಪಾಪ.ಆದ್ರೆ ಕೆಲವು ಜನ ಇರ್ತಾರೆ ಸಾರ್.ಇಂಥ sensitive ವಾತಾವರಣದ ಲಾಭ ಪಡೆಯೋಕೆ ಅಂತಾನೆ ಕಾದ್ ಕೂತಿರ್ತಾರೆ.ಅಭಿಮಾನಿ ಸಂಘಗಳ್ ಹೆಸ್ರಲ್ಲಿ ಬಂದು ಗಲಾಟೆ ಮಾಡಿ ಅಂಗಡಿಗಳನ್ನ ಬಂದ್ ಮಾಡ್ಸೋದು,ವೆಹಿಕಲ್ ಹೋಗೋ ರೋಡಲ್ಲೆಲ್ಲ ಟಯರ್’ಗೆ ಬೆಂಕಿ ಹಚ್ಚಿ ಹೊಗೆ ಎಬ್ಸೋದು,ರಸ್ತೇಲ್ ಓಡಾಡೋ ಹೆಣ್ ಮಕ್ಳಿಗೆಲ್ಲ ಗದರಿಸುತ್ತ ಪುಂಡಾಟಿಕೆ ಮಾಡೋದು ಎಲ್ಲ ಮಾಡ್ತಾರೆ.ಹಿಂಗೆಲ್ಲ ಆಗ್ಬಾರ್ದು ಅಂತ ಈ ಸಲ ನಮ್‌ ಬೆಂಗ್ಳೂರ್ ಪೋಲೀಸ್ರು ಭಾರೀ protection ಮಾಡಿದಾರೆ.ಎಲ್ಲ್ ನೋಡಿದ್ರೂ ಪೋಲೀಸ್ರು ಕಾಣ್ತಿದಾರೆ ನೋಡಿ.ಹಂಗಾಗಿ ಈ ಸಲ ಯಾವ ಪುಂಡ್ರೂ ಬಾಲ ಬಿಚ್ತಿಲ್ಲ.ಇಲ್ಲಾ ಅಂದ್ರೆ ಅವ್ರುಗಳು ಮಾಡೋ ಹಾವಳಿಗೆ ಮಿತಿನೇ ಇರೋಲ್ಲ.ಏನೇನೋ ಮಾಡಬಾರದ್ದು ಮಾಡೋಕೆ ಹೋಗಿ ಅರೆಸ್ಟ್ ಆಗಿ ಕೇಸ್ ಜಡಿಸಿಕೊಳ್ಳುತ್ತಾರೆ.ನನ್ ಅನುಭವದ್ ಮೇಲೆ ಹೇಳ್ತಾ ಇದೀನಿ,ಹಂಗ್ ಅರೆಸ್ಟ್ ಆಗೋವ್ರಲ್ಲಿ ಕೋಟ್ಯಾಧೀಶ್ವರರ ಮಕ್ಳು ಯಾರೂ ಇರಲ್ಲ ಸಾರ್.ಭಾರೀ ಕಷ್ಟದಲ್ ಜೀವ್ನ ಮಾಡೋ ಲೋವರ್ ಮಿಡ್ಲ್ ಕ್ಲಾಸ್ ಅವ್ರ ಮನೆ ಮಕ್ಳೇ ಯಾರ್ಯಾರ್ದೋ ಮಾತ್ ಕೇಳ್ಕಂಡ್ ಕೆಟ್ ಕೆಲಸ ಮಾಡಕ್‌ ಹೋಗಿ ಜೈಲು ಪಾಲಾಗೋದು.ಅವ್ರು ಮಾಡಿದ್ದಕ್ಕೆ ಅನುಭವಿಸೋದು ಮಾತ್ರ ಅವರ ಮನೆಯವ್ರು,ಪೇರೆಂಟ್ಸು ಎಲ್ಲ.ಅಂಥ ಪುಂಡರನ್ನ ಜೈಲಿನಿಂದ ಬಿಡ್ಸೋಕೆ ತಮ್ಮ ಜೀವಮಾನದ ಸೇವಿಂಗ್ಸ್ ಎಲ್ಲ ಖರ್ಚು ಮಾಡ್ತಾರೆ ಪಾಪ ಮನೆಯವ್ರು.ಇಂಥ ಮಕ್ಳನ್ನು ಯಾಕಾದ್ರೂ ಹೆತ್ವೋ ಅಂತ ಅವ್ರಿಗೆ ಒಂದ್ ಸಲ ಆದ್ರೂ ಅನ್ಸೇ ಅನ್ಸುತ್ತೆ ಅಲ್ವಾ.ಸಿನಿಮಾ ಸ್ಟಾರ್’ಗಳು ಎಷ್ಟೋ ಫಿಲಮ್’ಗಳನ್ನ ಮಾಡ್ತಾರೆ,ಅದ್ರಲ್ಲಿ ಬೇರೆ ಬೇರೆ ಥರದ ಸ್ಟೋರಿ ಇರುತ್ವೆ,ಮೆಸೇಜ್ ಇರುತ್ವೆ.ಎಷ್ಟಂದ್ರೂ ಅದು ಸಿನಿಮಾ.ಹಾಗ್ ಬರೋ ಫಿಲಂಗಳಲ್ಲಿ‌ ಒಳ್ಳೇದು ಏನಿದ್ಯೋ ಅದನ್ನಷ್ಟೇ ನಾವು ಲೈಫಲ್ಲಿ ಫಾಲೋ ಮಾಡ್ಕೊಂಡ್ ಮುಂದೆ ಹೋಗ್ತಾ ಇರ್ಬೇಕು.ಅದು ಬಿಟ್ಟು ತಮ್ಮ ಸ್ಟಾರ್’ನ ಸಿನಿಮಾ ಫ್ಲಾಪ್ ಆಯ್ತು,ಅಥವಾ ಅವನಿಗ್ ಏನೋ ಆಯ್ತು ಅಂತ ಊರ್ ತುಂಬಾ ಗಲಾಟೆ ಮಾಡೋದು,ಜನಸಾಮಾನ್ಯರಿಗೆ ತೊಂದ್ರೆ ಕೊಡೋದೆಲ್ಲ ಎಷ್ಟ್ ಸರಿ? ಯಾವ ಸ್ಟಾರ್ ಆದ್ರೂ ತನ್ನ ಫ್ಯಾನ್ಸ್’ಗೆ ಹಿಂಗೆಲ್ಲ ಮಾಡಿ ಅಂತಾನ? ಮಾಡೋರ್ನ ಸಪೋರ್ಟ್ ಮಾಡ್ತಾನಾ? ಅಭಿಮಾನಿಗಳು ಅಂತ ಹೇಳ್ಕೊಂಡು ಪುಂಡಾಟಿಕೆ ಮಾಡೋ ಹುಡುಗ್ರಿಗೆ ಯಾವಾಗ್ ಬುದ್ಧಿ ಬರುತ್ತೋ ಗೊತ್ತಿಲ್ಲ.ಸದ್ಯ ಇವತ್ ಅಪ್ಪು ಸರ್ ತೀರ್ಕೊಂಡಾಗ ಅಂಥದ್ದೇನೂ ಆಗ್ಲಿಲ್ಲ.ಜನಕ್ಕೇ ಬುದ್ಧಿ ಬಂತೋ, ಅಲ್ಲ ಎಲ್ಲ ಕಡೆ ನಿಂತಿರೋ ಪೋಲೀಸೋರ್ನ ನೋಡಿ ಹೆದ್ರಿಕೊಂಡಿದಾರೋ ಏನೋ,ಒಟ್ನಲ್ ಏನೂ ಗಲಾಟೆ ಇಲ್ದೇ ಶಾಂತವಾಗಿದೆ ನಮ್ ಬೆಂಗ್ಳೂರು ಈ ಸಲ.ಲಾಸ್ಟ್ ಟೈಮ್ ಅಣ್ಣಾವ್ರು ತೀರ್ಕೊಂಡಾಗ ಏನ್ ಸಾರ್ ಅದು,ಬೆಂಗ್ಳೂರಲ್ ಎಲ್ಲ್ ನೋಡಿದ್ರೂ ಗಲಾಟೆ.ದೊಡ್ಮನೆ ಮಕ್ಳಿಗೇ ಸರಿಯಾಗಿ ತೀರಿಹೋದ ಅಪ್ಪನ ಮುಖ ನೋಡೋಕ್ ಬಿಡ್ಲಿಲ್ಲ ನಮ್ ಅಭಿಮಾನಿಗಳು.ಅವತ್ ಎಷ್ಟ್ ಜನ ಅಮಾಯಕ ಜನಸಾಮಾನ್ಯರಿಗೆ ತೊಂದ್ರೆ ಆಗ್ಲಿಲ್ಲ ಹೇಳಿ.ಎಂತೆಂಥಾ ಫಿಲಂಗಳನ್ನ್ ಕೊಟ್ಟವ್ರೆ ಅಣ್ಣಾವ್ರು,ಅವ್ರ್ ಫಿಲ್ಮ್ ನೋಡ್ಕೊಂಡ್ ಹಿಂಗಾ ಮಾಡೋದು ಜನ್ರು. ಇನ್ನೊಂದಷ್ಟ್ ಜನ ಹುಚ್ಚ್ ಅಭಿಮಾನಿಗಳ್ ಇರ್ತಾರೆ ಸಾರ್.ತಾವ್ ಫಾಲೋ ಮಾಡೋ ಸ್ಟಾರ್’ಗಳಿಗೆ ಏನಾದ್ರೂ ಆಯ್ತು ಅಂದ್ರೆ ಸೂಸೈಡ್ ಮಾಡ್ಕೋಳೋ ಅಂಥ ಕೆಟ್ಟ್ ಕೆಲ್ಸ ಮಾಡೋರು.ಅವ್ರ್ ಹಿಂಗೆಲ್ಲ ಮಾಡ್ಕೊಂಡ್ರೆ ಅವ್ರ್ ಮನೆಯವ್ರ ಕಥೆ ಏನ್ ಸಾರ್?ಅಭಿಮಾನದ ಹೆಸರಲ್ಲಿ ಇವ್ರು ಮಾಡೋ ಹುಚ್ಚಾಟಕ್ಕೆ ತಮ್ಮ ಹಣ,ಶಕ್ತಿ ಎಲ್ಲನೂ ಖರ್ಚು ಮಾಡ್ಕೊಂಡು ಅನುಭವಿಸೋದು ಮಾತ್ರ ತಮ್ಮ ಪೇರೆಂಟ್ಸು,ಹೆಂಡ್ತಿ,ಮಕ್ಳು ಅಂತ ಗೊತ್ತಾಗಲ್ವಾ ಸಾರ್ ಅವ್ರಿಗೆಲ್ಲ.ಈ ಸಲ ಅಪ್ಪು ತೀರ್ಕೊಂಡ್ರು ಅಂತ ಯಾರೂ ಆತ್ಮಹತ್ಯೆ ಮಾಡ್ಕೊಳ್ದೇ ಇದ್ರೆ ಸಾಕು.” ಆಟೋ ಡ್ರೈವರ್ ಹೇಳಿದ್ದಕ್ಕೆಲ್ಲ ನಾ ಹೌದು ಹೌದು ಅಂತ ಹೇಳುತ್ತಾ ಸಾಗಿದೆ.

ಪುನೀತ್ ತೀರಿಕೊಂಡು ಒಂದು ವಾರವಾಗುತ್ತ ಬಂತು.ಇಲ್ಲಿಯವರೆಗೆ 13 ಜನ ಅಭಿಮಾನಿಗಳು ಸಾವನ್ನಪ್ಪಿದ್ದಾರೆ ಅಂತ ವರದಿಯಾಗಿದೆ.ಅವರಲ್ಲಿ ಐದು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ.ಉಳಿದವರು ಅಪ್ಪು ಸಾವಿನ ಆಘಾತ ತಡೆಯಲಾಗದೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ಆತ್ಮಹತ್ಯೆ ಮಾಡಿಕೊಂಡವರಲ್ಲಿ ಚಿಕ್ಕಮಗಳೂರಿನ ಅಪ್ಪು ಅಭಿಮಾನಿಯೊಬ್ಬರಿಗೆ ಸಣ್ಣ ಮಗು ಇದೆ.ಪತ್ನಿ ಗರ್ಭಿಣಿಯಾಗಿದ್ದಾರೆ.ಹೀಗಿದ್ದೂ ತಾವು ಫಾಲೋ ಮಾಡ್ತಾ ಇರುವ ಸ್ಟಾರ್ ತೀರಿಕೊಂಡ್ರು ಅಂತ ಖಿನ್ನತೆಯಿಂದಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅವರು.ತಮ್ಮ ಮನೆಯವರ,ತಮ್ಮನ್ನು ನಂಬಿಕೊಂಡಿರುವವರ ಬಗ್ಗೆ ಆಲೋಚಿಸದೇ ಜೀವ ತ್ಯಜಿಸಿದ್ದು ಭಾರೀ ದುರಂತ.ತಮ್ಮನ್ನು ತಾವೇ ಮರೆತು,ಮಾಡಬಾರದ್ದನ್ನು ಮಾಡುವಂತೆ ಮಾಡುವ ಅಭಿಮಾನ ಯಾವತ್ತೂ ಒಳ್ಳೆಯದಲ್ಲ.ವ್ಯಕ್ತಿ ಸತ್ತರೂ ವ್ಯಕ್ತಿತ್ವ ಜೀವಂತವಾಗಿರುತ್ತದೆ,ಅವನ ಒಳ್ಳೆಯ ಕೆಲಸಗಳು,ವಿಚಾರಗಳು ಅಮರವಾಗಿರುತ್ತವೆ ಅಂತ ಅರ್ಥ ಮಾಡಿಕೊಂಡು move on ಆಗುವುದರಲ್ಲಿ ಎಡವುತ್ತಾರೇಕೆ ಈ ಅಭಿಮಾನಿಗಳೆಲ್ಲ? ಅವರಿಗೆ ತಾವು ಫಾಲೋ ಮಾಡುತ್ತಿರುವ ಸ್ಟಾರ್ ನಿಧನರಾದ ಕೂಡಲೇ ಈ ಪ್ರಪಂಚವನ್ನೇ ಬಿಟ್ಟು ಹೋಗಬೇಕು,ತಾವಿನ್ನು ಈ ಪ್ರಪಂಚದಲ್ಲಿ ಬದುಕಿ ಸಾಧಿಸುವುದೇನಿಲ್ಲ ಅಂತ ಅನ್ನಿಸಬಹುದು.ಆದರೆ ತಮ್ಮನ್ನು ನಂಬಿಕೊಂಡಿರುವವರಿಗೆ ತಾವೇ ಪ್ರಪಂಚ,ತಾವು ಈ ಪ್ರಪಂಚವನ್ನು ಬಿಟ್ಟು ಹೋದರೆ ಅವರೆಲ್ಲ ಅವರ ಜೀವನವಿಡೀ ಕತ್ತಲಿನಲ್ಲಿ ಬದುಕಬೇಕಾಗಬಹುದು ಎಂಬ ಆಲೋಚನೆ ಬಂದರೆ ಆತ್ಮಹತ್ಯೆಯಂಥ ಹುಚ್ಚು ನಿರ್ಧಾರಗಳಿಗೆ ಮನ ಮಾಡುವುದಿಲ್ಲವೇನೋ.ತಮ್ಮನ ಸಾವಿಗೆ ಕಣ್ಣೀರು ಸುರಿಸುತ್ತಲೇ, ಅಭಿಮಾನಿಗಳೆಲ್ಲರೂ ಶಾಂತವಾಗಿರಬೇಕು,ಯಾರೂ ಆತ್ಮಹತ್ಯೆಯಂತ ಕೆಟ್ಟ ಕೆಲಸ ಮಾಡಿಕೊಳ್ಳಬೇಡಿ ಅಂತ ಕರ್ನಾಟಕದ ಜನರಲ್ಲಿ ಕೈ ಮುಗಿದು ಬೇಡುವ ಸ್ಥಿತಿ ಬಂದದ್ದಕ್ಕೆ ರಾಘವೇಂದ್ರ ರಾಜಕುಮಾರ್,ಶಿವಣ್ಣ ಅವರಿಗೆಲ್ಲ ಎಷ್ಟು ನೋವಾಗಿರಬಹುದು? ಬದುಕಿಯೇ ಏನೂ ಸಾಧಿಸದಿದ್ದವರು ಸತ್ತು ಏನು ಸಾಧಿಸುತ್ತಾರೆ?

‘ಮಾನವ ಜನ್ಮ‌ ದೊಡ್ಡದು,ಇದು ಹಾನಿ‌ ಮಾಡಲುಬೇಡಿ ಹುಚ್ಚಪ್ಪಗಳಿರಾ’ ಎಂಬ ಪುರಂದರದಾಸರ ಸಾಲುಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು.ವೇದಾಂತದ ಭಾಷೆಯಲ್ಲಿ‌ ಮಾತನಾಡುವುದಾದರೆ ಎಷ್ಟೋ ಜನ್ಮಗಳ ಪಾಪದ ಫಲದಿಂದಾಗಿ ಭೂಮಿಯಲ್ಲಿ ನಾವು ಮಾನವರಾಗಿ ಜನಿಸುತ್ತೇವೆ ಅಂತ ಕೆಲವರು ಹೇಳಿದರೆ,ಎಷ್ಟೋ ಜನ್ಮಗಳಲ್ಲಿ ಮಾಡಿದ ಪುಣ್ಯದಿಂದಾಗಿ ಮನುಷ್ಯ ಜನ್ಮ ಪ್ರಾಪ್ತವಾಗುತ್ತದೆ ಎಂಬ ಥಿಯರಿಯೂ ಇದೆ.ಹೇಗೆ,ಎಲ್ಲಿ ಹುಟ್ಟಬೇಕು ಅನ್ನುವ ಆಯ್ಕೆ ನಮಗೆ ಇಲ್ಲದಿರುವಾಗ, ನಮಗೆ ಬೇಡ ಅಂದ ಕೂಡಲೇ ಪ್ರಾಣಹರಣ ಮಾಡಿಕೊಳ್ಳಲು ಆತ್ಮಹತ್ಯೆಗೆ ಮುಂದಾಗುವ ಸ್ವಾತಂತ್ರ್ಯ ಇದೆಯೇ ನಮಗೆ? ಬೇರೆ ಎಲ್ಲ ಜೀವ ಪ್ರಬೇಧಗಳಿಗಿಂತ ಅತ್ಯಂತ ಉಚ್ಚ ಸ್ಥಾನದಲ್ಲಿ ನಿಲ್ಲುವ ಮಾನವ ತನಗೆ ಬದುಕಲು ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ತಾನೂ ಬೆಳೆದು,ಭೂಮಿಯನ್ನೂ ಬೆಳೆಸಿದರಷ್ಟೇ ಅವನ ಬದುಕಿಗೆ ಅರ್ಥ ಬರುವುದು.ಸಾವಿರ ಮಾನವ ಜನ್ಮಗಳನ್ನು ಎತ್ತಿ ಬಂದರೂ ನೋಡಿ ಮುಗಿಸಲಾಗದಷ್ಟು ಸುಂದರ ಸ್ಥಳಗಳು,ಓದಿ ಮುಗಿಸಲಾಗದಷ್ಟು ಒಳ್ಳೊಳ್ಳೆ ಪುಸ್ತಕಗಳು,ಕಲಿತು ಮುಗಿಯದಷ್ಟು ಜ್ಞಾನ ಸಂಪತ್ತು,ತಿಂದು ಅನುಭವಿಸಲಾರದಷ್ಟು ರುಚಿಕರವಾದ ಖಾದ್ಯಗಳು,ಕೇಳಿ ಮುಗಿಸಲಾಗದಷ್ಟು ಸಂಗೀತ,ಜನ್ಮ ಜನ್ಮಾಂತರಗಳಲ್ಲೂ ಬೇಕು ಬೇಕೆನಿಸುವ ಸುಂದರ ಅನುಭೂತಿಯನ್ನು ಕೊಡುವ ಮಾನವ ಸಂಬಂಧಗಳೆಲ್ಲ ಈ ಸುಂದರ ಪೃಥ್ವಿಯಲ್ಲಿರುವಾಗ ಒಂದು ಕ್ಷಣದ ದುಃಖಕ್ಕೆ,ಆಘಾತಕ್ಕೆ ಸ್ಥಿಮಿತ ಕಳೆದುಕೊಂಡು ನಾವು ಆತ್ಮಹತ್ಯೆ ಮಾ‌ಡಿಕೊಂಡರೆ ಹೇಗೆ?

ಚಿತ್ರಕೃಪೆ: ಕರಣ್ ಆಚಾರ್ಯ

ಇಷ್ಟು ಸಣ್ಣ ವಯಸ್ಸಿನ ಪುನೀತ್ ಅವರ ಸಾವು ಯಾವ ರೀತಿಯಲ್ಲೂ ಯಾರಿಗೂ ಸ್ವೀಕಾರಾರ್ಹವಲ್ಲ.ಅಪ್ಪು ನಮ್ಮೊಡನೆ ಇಲ್ಲ ಎನ್ನುವುದನ್ನು ಈ ಕ್ಷಣಕ್ಕೂ ಒಪ್ಪಿಕೊಳ್ಳಲು ಆಗುತ್ತಿಲ್ಲ ನಮಗೆ.ಆದರೆ ವಾಸ್ತವವನ್ನು ಎಂದಾದರೂ ಅರಿತು ಒಪ್ಪಿಕೊಂಡು ಬದುಕಿನಲ್ಲಿ ಮುಂದುವರೆಯಬೇಕಾದ ಅನಿವಾರ್ಯತೆಯೂ ಅಷ್ಟೇ ಮುಖ್ಯ.ಪುನೀತ್ ಭೌತಿಕವಾಗಿ ನಮ್ಮನ್ನು ಬಿಟ್ಟು ಹೋಗಿದ್ದಾರೆ,ಇನ್ನು ಮುಂದೆ ತೆರೆಯ ಮೇಲೆ ಕಾಣಿಸಿಕೊಳ್ಳುವುದಿಲ್ಲ ಎಂಬುದು ಎಷ್ಟು ನಿಜವೋ,ತಮ್ಮ ಒಳ್ಳೊಳ್ಳೆ ಸಿನಿಮಾಗಳ ಮೂಲಕ,ಪ್ರಚಾರವಿಲ್ಲದೇ ಮಾಡಿದ ಸಮಾಜಮುಖಿ ಕೆಲಸಗಳ‌‌ ಮೂಲಕ ಅವರ ವ್ಯಕ್ತಿತ್ವ,ವಿಚಾರಗಳು ಸದಾ ಜೀವಂತವಾಗಿರುತ್ತವೆ ಎಂಬುದೂ ಅಷ್ಟೇ ನಿಜ.ಅಂಥ ದೊಡ್ಮನೆ ಹುಡುಗ ನಮ್ಮನ್ನು ಬಿಟ್ಟು ಹೋದ ಅಂತ ತಮ್ಮ ಬದುಕೇ ಮುಗಿದು ಹೋಯಿತೆಂದು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡರೆ ಅವರು ಅಪ್ಪುಗೆ ಅವಮಾನ ಮಾಡಿದಂತೆ.

ಯಾರು ಬೇಕಾದರೂ ಸಾಯಬಹುದು.ಆದರೆ ಜೀವನದ ಶ್ರೇಷ್ಟತೆಯಿರುವುದು ಬದುಕಿ ಸಾಧಿಸುವಲ್ಲಿ,ಸಾಧಿಸಿ ತೋರಿಸುವಲ್ಲಿ.ಹರಿಯುವ ನೀರಿಗೆ ಬಿದ್ದು ಮುಳುಗಿ ಸಾಯುವುದಲ್ಲ ಬದುಕು,ಪ್ರವಾಹಕ್ಕೆ ಎದುರಾಗಿ ಈಜಿ ಸಾಧನೆಯೆಂಬ ದಡ ಸೇರುವುದೇ ಬದುಕು.ದೇಶಕ್ಕಾಗಿ ಪ್ರಾಣ ಕೊಡುತ್ತೇನೆ ಅಂತ ಹೇಳುವವರನ್ನೂ ನಾನು ವಿರೋಧಿಸುತ್ತೇನೆ.ಬದುಕಿ ಗೆಲುವಿನ ಆಪ್ಯಾಯಮಾನತೆಯನ್ನು ಅನುಭವಿಸುವುದರಲ್ಲೇ ಹೆಚ್ಚು ಖುಷಿಯನ್ನು ಕಾಣಬಾರದೇಕೆ? ಪ್ರತಿ ಕ್ಷಣವೂ ದೇಶಕ್ಕಾಗಿ ಬದುಕಲು,ಬದುಕಿ ಭಾರತವನ್ನು ಔನ್ನತ್ಯಕ್ಕೇರಿಸಲು ಅಳಿಲ ಸೇವೆ ಮಾಡಲು ನಾನು ಬಯಸುತ್ತೇನೆಯೇ ಹೊರತು ದೇಶಕ್ಕಾಗಿ ಸಾಯಲು ಇಷ್ಟವಿಲ್ಲ.

ಪುನೀತ್ ಅವರನ್ನು ಜೀವಂತವಾಗಿಡಲು ಅವರ ಸಿದ್ಧಾಂತಗಳನ್ನು ಪಾಲಿಸುತ್ತ,ಅವರ ಸಮಾಜಸೇವೆಯನ್ನು ಮಾದರಿಯಾಗಿಸಿಕೊಂಡು ಬದುಕಿದರೆ ನಾವೆಲ್ಲ ನಿಜವಾದ ಅಪ್ಪು ಅಭಿಮಾನಿಗಳಾದಂತೆ ಅಂತ ಆತ್ಮಹತ್ಯೆಗೆ ಮನಮಾಡುತ್ತಿರುವ ಅಭಿಮಾನಿಗಳು ಈ ಹೊತ್ತಿನಲ್ಲಿ ಅರ್ಥ ಮಾಡಿಕೊಂಡರೆ ಒಳ್ಳೆಯದು.