ದೇವಿಮಹಾತ್ಮೆ ಯಕ್ಷಗಾನದ ಮೇದಿನಿ ನಿರ್ಮಾಣ ಪ್ರಸಂಗದಲ್ಲಿ ಬರುವ ತಮ್ಮಲ್ಲಿ ಯಾರು ಶ್ರೇಷ್ಟರೆಂಬ ತ್ರಿಮೂರ್ತಿಗಳ ಕಾದಾಟ,ಬಾಲ್ಯದಲ್ಲಿ,ಹದಿಹರೆಯದಲ್ಲಿ ತುಳುನಾಡಿನ ಆಟಗಾರರು ‘ಕವರಿಂಗ್ ಬಾಲ್’ ಎಂದು ಕರೆಯುವ ಟೆನ್ನಿಸ್ ಬಾಲಿನಲ್ಲಿ ಆಡುತ್ತಿದ್ದ ಅಂಡರ್ ಆರ್ಮ್ ಕ್ರಿಕೆಟ್,ಹರಕೆಯಿಂದ ವ್ಯಾಪಾರವಾಗಿ ಬದಲಾದ ಮಾರ್ನೆಮಿಯ ಹುಲಿಕುಣಿತದ ಹಿಂದಿನ ತಣ್ಣಗಿನ ಲಾಬಿಯ ಜ್ಞಾನ,ಎರೆಡು ಸೆಕೆಂಡ್ ಲೇಟಾಗಿ ಬಂದರೂ ಕಂಡಕ್ಟರಿಗೆ ಜೋರು ದನಿಯಲ್ಲಿ ದಬಾಯಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬಿಡದ ಕರಾವಳಿ ಜಿಲ್ಲೆಗಳ ಪ್ರೈವೇಟ್ ಬಸ್ಸುಗಳ ಟೈಮ್ ಕೀಪರ್’ಗಳು,ಮಕ್ಕಳಾಗಿರುವಾಗ ಐದೂ ಬೆರಳಿಗೆ ಒಂದೊಂದು ಸಿಕ್ಕಿಸಿಕೊಂಡು ತಿನ್ನುತ್ತಿದ್ದ ಕುರುಕಲು ತಿಂಡಿ ‘ಬೋಟಿ’,ಡಿಟಿಎಚ್’ಗಳಿಗೆ ಶರಣಾಗತಿ ಸೂಚಿಸುವ ಮೊದಲು ಎಲ್ಲೆಡೆ ವ್ಯಾಪಿಸಿದ್ದ ಕೇಬಲ್ ಟಿವಿ ಆಪರೇಟರ್’ಗಳ ಮಾಫಿಯ,ರಾತ್ರಿಯ ಊಟಕ್ಕೆಂದು ಅವತ್ತು ಸಿಕ್ಕಿದ ಕೂಲಿ ಹಣದಿಂದ ತಂದ ಮೀನನ್ನು ಅಮ್ಮ ಹೆಚ್ಚುವಾಗ ನೋಡುತ್ತ ಕುಳಿತುಕೊಳ್ಳುವ ಮಗ,ಕ್ರಿಕೆಟ್ ಆಡುವ ಕವರಿಂಗ್ ಬಾಲಿನಲ್ಲೇ ಶಾಲೆಯಲ್ಲಿ ಮಕ್ಕಳು ಆಡುವ ಲಗೋರಿ ಆಟ,ಸಿಗರೇಟು,ಚ್ಯೂಯಿಂಗ್ ಗಮ್ ಮಾರುವ ಗೂಡಂಗಡಿಗಳು,ಕೇವಲ ಸದ್ದಿನಿಂದಲೇ ಗಮನ ಸೆಳೆಯುವ ಯಮಹಾ RX100 ಮೋಟರ್ ಬೈಕಿನ ನಾಸ್ಟಾಲ್ಜಿಯಾ ಹೀಗೆ ಎಂಬತ್ತು ತೊಂಬತ್ತರ ದಶಕದಲ್ಲಿ ಕರಾವಳಿಯಲ್ಲಿ ಹುಟ್ಟಿ ಬೆಳೆದವರೆಲ್ಲರಿಗೂ ತಮ್ಮ ದಿನನಿತ್ಯದ ಬದುಕಿನಲ್ಲಿ ಕಾಣ ಸಿಗುವ ನ್ಯಾಚುರಲ್ ದೃಶ್ಯಗಳು,ಸಂಗತಿಗಳೆಲ್ಲ ರಾಜ್ ಬಿ. ಶೆಟ್ಟಿಯವರಿಗೆ ತಮ್ಮ ಮಹತ್ವಾಕಾಂಕ್ಷೆಯ ಗರುಡಗಮನ ವೃಷಭವಾಹನ ಚಿತ್ರಕ್ಕೆ ಕಥೆ ಬರೆಯಲು ಸ್ಫೂರ್ತಿ ಕೊಟ್ಟಿವೆ.ಅಂಥ ಎಲ್ಲ ಪ್ರೇರಣೆಯನ್ನು ಇಟ್ಟುಕೊಂಡು ತುಳುನಾಡಿನವರು ಮಾತನಾಡುವ ಕರಾವಳಿ ಕನ್ನಡವನ್ನು ಆಲ್ಮೋಸ್ಟ್ ಎಲ್ಲರಿಂದಲೂ ಸರಿಯಾಗಿ ಮಾತನಾಡಿಸಿ ಅದ್ಭುತವಾದ ಸಿನಿಮಾ ಕೊಟ್ಟಿದ್ದಾರೆ ರಾಜ್.

ಹರಿ ಮತ್ತು ಶಿವ ಎಂಬ ಎರಡು ಪ್ರಮುಖ ಪಾತ್ರಗಳು.Mythologyಯ ಲಾಜಿಕ್ ಪ್ರಕಾರವೇ ನೋಡುವುದಾದರೂ ಅಲ್ಲಿರುವಂತೆ ಹರಿ ಇಲ್ಲಿಯೂ ಸ್ವಲ್ಪ ಶಾಂತ ಸ್ವಭಾವದವ.ತನ್ನೊಳಗಿನ ಸಿಟ್ಟನ್ನು ಅದುಮಿಟ್ಟುಕೊಳ್ಳುವ,ಆದರೆ ತೀರಾ ಅಗತ್ಯವಿರುವೆಡೆ ಉಗ್ರ ರೂಪ ತಾಳುವ ಸಾಮರ್ಥ್ಯವುಳ್ಳವ.ಅದೇ ಶಿವ ಶೀಘ್ರಕೋಪಿ.ಧ್ವಂಸ ಮಾಡಬೇಕೆಂದು ನಿರ್ಧರಿಸಿ ಮುನ್ನುಗ್ಗಿದರೆ ಕೈಗೆ ಸಿಕ್ಕ ಎಂಥ ಜಡವಸ್ತುವನ್ನಾದರೂ ಆಯುಧವಾಗಿ ಮಾಡಿಕೊಳ್ಳುವವನನ್ನು ತಡೆಯಲು ಸಾದ್ಯವೇ ಇಲ್ಲ.ಹರಿಹರರಲ್ಲಿ ಭೇದವಿಲ್ಲ ಎಂದು ಸಾರುವ ಮೇದಿನಿ ನಿರ್ಮಾಣ ಯಕ್ಷಗಾನ ಪ್ರಸಂಗದಲ್ಲಿನ ಕಥೆಯಂತೆ ಇಲ್ಲಿಯೂ ಮಂಗಳೂರಿನ ಮಂಗಳಾದೇವಿ ಪರಿಸರದಲ್ಲಿ ಹರಿ ಶಿವ ಇಬ್ಬರೂ ಬಾಲ್ಯದಿಂದಲೇ ಗೆಳೆಯರಾಗಿ ಸಮಾನಮನಸ್ಕರಾಗಿ ಬೆಳೆದು ಮುಂದೆ ಮಂಗಳಾದೇವಿಯ ಡಾನ್’ಗಳು ತುಳುನಾಡಿನ ಭಾಷೆಯಲ್ಲಿ ಹೇಳುವುದಾದರೆ ‘ಪೆಟ್ಟಿಷ್ಟ್’ಗಳಾಗುತ್ತಾರೆ.ಶಿವನಿಗೆ ಲಯ ಮಾಡುವುದೇ ಕಾಯಕವಾದರೆ, ಧ್ವಂಸಕ್ಕೆ ಕಾರಣಗಳನ್ನು ಹುಡುಕಿ ಅದರಲ್ಲಿ ತಾವು ಲಾಭ ಮಾಡಿಕೊಳ್ಳುವುದು ಹೇಗೆ ಎಂದು ಪ್ಲ್ಯಾನ್ ಮಾಡಿ ಐಡಿಯಾ ಕೊಡುವುದು ಹರಿ.ಕಾಲಚಕ್ರ ಉರುಳಿದಾಗ ಇಬ್ಬರ ಬದುಕಿನಲ್ಲಿ ಏನೇನೋ ಆಗುವ ಕಥೆಯನ್ನೆಲ್ಲ ನೀವು ಸಿನಿಮಾದಲ್ಲಿಯೇ ನೋಡಬೇಕು.

ಮೀನು ಕೊಚ್ಚುವ ಹರಿಯ ತಾಯಿ,ಗೂಡಂಗಡಿಯಲ್ಲಿ ಬೋಟಿ,ಮಿಕ್ಸರ್ ಎಲ್ಲ ಮಾರುವ ಹೆಂಗಸನ್ನು ಬಿಟ್ಟರೆ ಇಡೀ ಸಿನಿಮಾದಲ್ಲಿ ಮತ್ಯಾವ ಸ್ತ್ರೀಯರೂ ಮಾತಾಡುವುದಿಲ್ಲ.ಕಥೆಗೆ ಅಗತ್ಯವಿಲ್ಲದ್ದರಿಂದ ಸ್ತ್ರೀಪಾತ್ರಗಳನ್ನು ಮೂರು ನಾಲ್ಕು ಸೀನ್ ಬಿಟ್ಟರೆ ಮತ್ತೆಲ್ಲೂ ತೋರಿಸುವುದಿಲ್ಲ.ಕೆಲವು ಪಾತ್ರಗಳ ಹತ್ತಿರ ಮಂಗಳೂರು ಕನ್ನಡವನ್ನು ಅಪಭ್ರಂಶವಾಗಿ ಮಾತನಾಡಿಸಿ ಅದನ್ನೇ ಹಾಸ್ಯ ಎಂದು ತೋರಿಸುವ ನಿರ್ದೇಶಕರ ಮಧ್ಯೆ ಯಾವ ಹಾಸ್ಯಪಾತ್ರಗಳೂ ಇಲ್ಲದೇ ಪ್ರಧಾನ ಪಾತ್ರಗಳೆಲ್ಲ ಶುದ್ಧ ಕರಾವಳಿ ಕನ್ನಡ ಮಾತಾಡುವ ಸಿನಿಮಾ ಗರುಡಗಮನ ವೃಷಭವಾಹನ. “ನಾನ್ ಸಾ ವಿನ್ನ್ ಮಾಡಿಸಿಯೇ ಬರ್ತೇನಾ… ದೊಡ್ಡ ಇದಾಗುದು ಮಾರ್ರೆ..” ಅಂತೆಲ್ಲ ತುಂಬಾ ಪ್ಯೂರ್ ಕರಾವಳಿ ಕನ್ನಡದಲ್ಲಿ ವಾದ ಮಾಡಿದ ಮೇಲೂ ಬ್ಯಾಟಿಂಗ್ ಸಿಗದಿದ್ದಾಗ ಕಾಲಗಲಿಸಿಕೊಂಡು ಮುಂದೆ ಬ್ಯಾಟ್ ಹಿಡಿದು ಕೂತಾಗ ಕಣ್ಣಲ್ಲೇ ಕೊಡುವ ಲುಕ್,ಪಿಲಿಪ್ರಕಾಶನನ್ನು ಬಿಸತ್ತಿಯಿಂದ(ಚೂರಿ) ಇರಿದು ಕೊಂದ ಮೇಲೆ ಉನ್ಮಾದದಿಂದ ಸೋಜುಗದ ಸೂಜಿಮಲ್ಲಿಗೆ ಹಾಡಿಗೆ ಜೋರು ಮಳೆಯಲ್ಲಿ ನೆನೆಯುತ್ತ ಮಂಗಳಾದೇವಿ ದೇವಸ್ಥಾನದ ಮುಂದೆ ತಾಸೆ,ವಾದ್ಯಗಳ ಸದ್ದಿಗೆ ಮಾಡುವ ಹುಲಿ ಡ್ಯಾನ್ಸ್.ಈ ಎರಡೇ ದೃಶ್ಯಗಳಲ್ಲೇ ಶಿವ ಪಾತ್ರಧಾರಿ ರಾಜ್ ಬಿ.ಶೆಟ್ಟಿ ಪ್ರೇಕ್ಷಕರನ್ನು ಗೆದ್ದುಬಿಡುತ್ತಾರೆ.ನಮ್ಮ ಮನೆಯವರೋ ಯಾರೋ ಮಾತನಾಡುತ್ತಿದ್ದಾರೇನೋ ಎಂದು ಸಿನಿಮಾ ನೋಡುವ ಪ್ರತಿ ಕರಾವಳಿಯವರಿಗೆ,ಮಂಗಳೂರಿನವರಿಗೆ ಅನ್ನಿಸುವಷ್ಟು ಚೆಂದವಾಗಿ ಅಪ್ಪಟ ತುಳುವನಾಗಿ ಕಾಣಿಸಿಕೊಳ್ಳುತ್ತಾರೆ ರಾಜ್.ಬಹಳಷ್ಟು ದೃಶ್ಯಗಳಲ್ಲಿ ಪ್ರಧಾನ ಪಾತ್ರವಾಗಿ ನಟಿಸಿ ತಾವೇ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದರೂ ಗೆಳೆಯ ರಿಷಬ್ ಶೆಟ್ಟರಿಂದ ಅವರ ಸಂಪೂರ್ಣ ನಟನಾ ಸಾಮರ್ಥ್ಯವನ್ನು ಹೊರಗೆ ತರುವಲ್ಲಿ ರಾಜ್ ಅಷ್ಟೇನೂ ಯಶಸ್ವಿಯಾಗಿಲ್ಲ.ಶಿವನಿಗೆ ಸರಿಸಮನಾದ ಪಾತ್ರವಾದರೂ ಹರಿ ಎಲ್ಲ ದೃಶ್ಯಗಳಲ್ಲೂ ಅಪ್ಪಟ ತುಳುವನಾಗಿ ಕಾಣುವುದಿಲ್ಲ.ತೀರ ಗ್ರಾಮ್ಯ ಕರಾವಳಿ ಶೈಲಿಯಲ್ಲಿ ‘ಬ್ಯಾವರ್ಸಿ’ ಎಂಬ ಬೈಗುಳವನ್ನು ಶಿವ ಬೈದಷ್ಟು ಆಪ್ತವಾಗಿ ಹರಿಯಾದ ರಿಷಬ್ ಶೆಟ್ಟಿ ಬೈಯ್ಯುವುದಿಲ್ಲ.ರಾಜ್ ಅವರ ಭಾವತೀವೃತೆ,ಓಘದ ಮುಂದೆ ಹರಿಯ ನಟನೆ ನನಗೇಕೋ ಸ್ವಲ್ಪ ಮಂಕಾಗಿ ಕಂಡಿತು.ಕಥೆಯಲ್ಲಿ ತುಂಬ ಪ್ರಮುಖ ಪಾತ್ರವಾದರೂ ತಮ್ಮ ನಟನಾ ಕೌಶಲವನ್ನು ಹೊರಗೆಳೆಯುವಷ್ಟು ಅವಕಾಶಗಳಿಲ್ಲ ಗೋಪಾಲಕೃಷ್ಣ ದೇಶಪಾಂಡೆಯವರಿಗೆ. ಕ್ರೈಮ್ ಡ್ರಾಮಕ್ಕೆ ಬೇಕಾದಂತೆ ಅಚ್ಚುಕಟ್ಟಾಗಿ ಸಂಗೀತ,ಹಿನ್ನಲೆಯ ಸದ್ದುಗಳನ್ನೆಲ್ಲ ಕೇಳಿಸಿದ್ದಾರೆ ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್.

ಕಥೆ ಬೆಂಗಳೂರಿನಲ್ಲೇ ನಡೆಯಬೇಕೆಂದೇನೂ ಇಲ್ಲ.ನಾಯಕಿಯೇ ಇಲ್ಲದೇ ಸಿನಿಮಾ ಮಾಡಬಲ್ಲೆವು.ಕ್ರೌರ್ಯದ ಪರಾಕಾಷ್ಟತೆಯನ್ನು ದೊಡ್ಡ ದೊಡ್ಡ ಮಚ್ಚು,ಲಾಂಗ್ ಹಿಡಿದು ಆರ್ಭಟಿಸುತ್ತಲೇ ತೋರಿಸಬೇಕಿಲ್ಲ.ಕಣ್ಣಿನಲ್ಲೇ ಕೊಲ್ಲುವಂತೆ ಭಯ ಹುಟ್ಟಿಸಲೂ ಬರುತ್ತದೆ,ಕಥೆಗೆ ಅಗತ್ಯವಿರದಿದ್ದರೆ ಹಾಸ್ಯ ತುರುಕಬೇಕಾದ ಅನಿವಾರ್ಯತೆಯಿಲ್ಲ,ಮಾಸ್ ಲುಕ್ ಹೊಂದಿರುವ ಸಿನಿಮಾವಾದರೂ ಕಥಾ ನಾಯಕನಿಗೆ ಬಿಲ್ಡಪ್ ಕೊಡದೇ ಮಾಡಬಹುದು,ಆಯ್ದ ಪರಿಸರದಲ್ಲಿ ಕಥೆ ನಡೆಯುವಾಗ ಆ ಪ್ರದೇಶವನ್ನು,ಅಲ್ಲಿನ ಜನರನ್ನು,ಅವರ ಜನಜೀವನವನ್ನು,ಅಲ್ಲಿನ ವಿದ್ಯಮಾನಗಳನ್ನು ವೈಭವೀಕರಿಸದೇ ಆದಷ್ಟು ಸಹಜವಾಗಿ ತೋರಿಸಿಯೂ ಸಿನಿಮಾ ಮಾಡಬಹುದು ಎಂಬುದನ್ನು ಕನ್ನಡದ ಪ್ರೇಕ್ಷಕರಿಗೆ,ಪ್ರೇಕ್ಷಕರಿಗಾಗಿಗೇ ಸ್ಟಾರ್ ನಟರನ್ನು ಹಾಕಿಕೊಂಡು ನಟರು ಹೇಳಿದಂತೆ ಕೇಳುತ್ತ ಸ್ಟಾರ್ ನಟರ ಮುಂದೆ ತಾವೇ ನಟರಾಗಿ,ನಟರಿಗೆ ಬೇಕಾದಂತೆ ನಿರ್ದೇಶನ ಮಾಡುವ ಕನ್ನಡದ ಕೆಲ ನಿರ್ದೇಶಕರಿಗೆ ತುಂಬಾ effective ಆಗಿ ತೋರಿಸಿಕೊಟ್ಟಿದ್ದಕ್ಕೆ ರಾಜ್ ಶೆಟ್ಟಿ ಅವರಿಗೆ ಒಂದು ದೊಡ್ಡ ಥ್ಯಾಂಕ್ಸ್.ಕರಾವಳಿಯ ಇಬ್ಬರು ಪಾತಕಿಗಳ ಫಿಕ್ಷನ್ ಕಥೆಯನ್ನು ತುಂಬ ನ್ಯಾಚುರಲ್ ಆಗಿ ಅತ್ತ ಕ್ಲಾಸೂ ಹೌದು ಇತ್ತ ಮಾಸೂ ಹೌದು ಎಂದು ಕಾಣುವಂತೆ ತೆರೆಯ ಮೇಲೆ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ ಅವರು.

ಕನ್ನಡದ ಹೊಸ ಅಲೆಯ ಸೃಜನಶೀಲ ಸಿನಿಮಾಗಳೆಂಬ ಪುಟ್ಟ ಸರೋವರಕ್ಕೆ ಬಿದ್ದ ಒಂದು ಸಣ್ಣ ಮಳೆ ಹನಿ ಗರುಡಗಮನ ವೃಷಭವಾಹನ.ಕನ್ನಡದಲ್ಲಿ ಇಂಥ ಮಳೆ ಮತ್ತಷ್ಟು ಸುರಿದು ಸ್ಯಾಂಡಲ್ವುಡ್ ನವನವೋನ್ಮೇಶಶಾಲಿಯಾಗಬೇಕು.ಮಲಯಾಳಂ ಸಿನಿಮಾಗಳನ್ನು ನೋಡುವ ಚಟವಿರುವ ನನ್ನಂಥ ಕನ್ನಡದ ಪ್ರೇಕ್ಷಕರಿಗೆ ಶಿವ-ಹರಿಯರ ಕಥೆಯನ್ನು ಮಂಗಳೂರಿನ ಪರಿಸರದಲ್ಲಿ ‘ಬ್ಯಾವರ್ಸಿ’ ಎಂದು ಕ್ಯೂಟ್ ಆಗಿ ಬೈಯ್ಯುವ ಸಂಭಾಷಣೆಗಳನ್ನು ಕೇಳಿಸಿಕೊಳ್ಳುತ್ತ ನೋಡುವಾಗ, ಒಂದೇ ಪ್ರದೇಶದಲ್ಲಿ ನಡೆಯುವ ‘ಕುಂಬಳಾಂಗಿ ನೈಟ್ಸ್’ ಅಥವಾ ರಮ್ದಾಪಲ್ಲಿಯ ಡಾನ್’ನ ಕಥೆ ಹೇಳುವ ‘ಮಾಲಿಕ್’ನಂಥ ಸಿನಿಮಾಗಳು ಬೇಡ ಬೇಡ ಅಂದರೂ ನೆನಪಾಗುತ್ತವೆ.ಕನ್ನಡಚಿತ್ರರಂಗವನ್ನು ಇಷ್ಟಪಡುವವರು,ಕನ್ನಡ ಸಿನಿಮಾಗಳನ್ನು ಪ್ರೀತಿಸುವ ಎಲ್ಲರೂ ಒಮ್ಮೆ ಆಪ್ತತೆಯಿಂದ ನೋಡಬೇಕಾದ ಸಿನಿಮಾ ಗರುಡಗಮನ ವೃಷಭವಾಹನ.ಈ ಕಥೆಯನ್ನು ನಾನು ತುಳು ಸಿನಿಮಾವಾಗಿ ಮಾಡಿದ್ದರೂ ಗೆಲ್ಲುತ್ತಿತ್ತು ಅಂತ ರಾಜ್ ಬಿ.ಶೆಟ್ಟಿ ಒಂದು ಸಂದರ್ಶನದಲ್ಲಿ ಹೇಳಿದ್ದರು.ಒಂದು ವೇಳೆ ಅವರದನ್ನು ತುಳುಭಾಷೆಯಲ್ಲೇ ನಿರ್ಮಿಸಿದ್ದರೆ ಬಹುಸಂಖ್ಯೆಯ ಕನ್ನಡ ಪ್ರೇಕ್ಷಕರಿಗೆ ಮೋಸವಾಗುತ್ತಿತ್ತು.ತಮ್ಮದೇ ಪರಿಸರದ ಕಥೆಯನ್ನು ಕಣ್ತುಂಬಿಕೊಳ್ಳಲು ತುಳುವರು,ಮಂಗಳೂರಿಗರು,ಕರಾವಳಿಯವರೂ ಈ ಸಿನಿಮಾ ನೋಡಬೇಕು.