ಬರಹ ಆರಂಭಿಸುವುದಕ್ಕೂ ಮುನ್ನ ಮೂರು ವಿಶೇಷ ಸೂಚನೆಗಳು.

1) ಹೇಳಬೇಕಾದ ವಿಷಯ ದೀರ್ಘವಾಗಿದೆ.ಒಂದೇ ಸಲಕ್ಕೆ ಓದಲು ತುಸು ಕಷ್ಟವಾಗಬಹುದು.ಹಾಗಾಗಿ ಎರಡು ಅಥವಾ ಮೂರು ಭಾಗಗಳಲ್ಲಿ ಬರೆಯುತ್ತೇನೆ.

2) ಇಲ್ಲಿ ವ್ಯಕ್ತಪಡಿಸಿರುವ ಅನಿಸಿಕೆಗಳೆಲ್ಲ ಶ್ರೀಮದ್ಭಾಗವತ ನನಗೆ ಕಂಡ,ನನಗೆ ದಕ್ಕಿದ ಅನುಭವಗಳ ಮೇಲೆ ಆಧಾರಿತವಾಗಿವೆ.ಅದನ್ನು ನೀವು ಒಪ್ಪಬೇಕಾಗಿಯೂ,Endorse ಮಾಡಬೇಕಾಗಿಯೂ ಇಲ್ಲ.

3) ಬರಹದ ಕುರಿತಾದ ಚರ್ಚೆಗೆ ಸ್ವಾಗತ,ಸಿದ್ಧವಿದ್ದೇನೆ ಅಂತ ಖಂಡಿತಾ ಹೇಳುವುದಿಲ್ಲ.ಇದರಲ್ಲಿ ಬರೆದ ಯಾವುದೇ ಅಂಶಗಳ ಕುರಿತು, ಅದು ಹಾಗೆ ಯಾಕೆ,ಹೀಗೆ ಯಾಕಲ್ಲ ಎಂದು ಕೇಳಿದರೆ ನನ್ನ ಉತ್ತರ ‘ಗೊತ್ತಿಲ್ಲ’ ಎಂಬುದಷ್ಟೇ ಆಗಿರುತ್ತದೆ.ಆದರೆ ನನಗೆ ಗೊತ್ತಿಲ್ಲ ಎಂದ ಮಾತ್ರಕ್ಕೆ ಉತ್ತರ ಇಲ್ಲ ಅಂತ ಅರ್ಥವಲ್ಲ.ಎಷ್ಟೋ ವರ್ಷಗಳ ಹಿಂದೆ ರಚಿತವಾದ ಬೃಹತ್ ಗ್ರಂಥದಲ್ಲಿ ಹೇಳಿರುವ ಎಲ್ಲ ಕಥೆಗಳನ್ನು,ವಿಷಯಗಳನ್ನು ಒಂದೇ ಓದಿಗೆ ಪೂರ್ತಿ ಅರ್ಥೈಸಿಕೊಳ್ಳಲು,ವಿಮರ್ಶಿಸಲು ನಾನು ಅಸಮರ್ಥನಾಗಿದ್ದೇನೆ.ಅದು ನನ್ನ ದೌರ್ಬಲ್ಯವೇ ಹೊರತು ಆ ಗ್ರಂಥದ ದೋಷವಲ್ಲ.ಪೂರ್ತಿ ಜೀರ್ಣಿಸಿಕೊಳ್ಳಲಾಗದ ವಿಷಯದ ಬಗ್ಗೆ ಏನೋ ಉತ್ತರ ಹೇಳಿ,ಚರ್ಚೆ ಮಾಡಲು ನನಗೆ ಸಾಧ್ಯವಿಲ್ಲ.

ಶ್ರೀಮದ್ಭಾಗವತ-ವೇದವ್ಯಾಸರಿಂದ ರಚಿತವಾದ ಹದಿನೆಂಟು ಪುರಾಣಗಳಲ್ಲಿ ಒಂದು.ಭಗವಂತನ ಅಂದರೆ ಶ್ರೀಮನ್ನಾರಾಯಣನ ಅವತಾರಗಳನ್ನು,ಆ ಅವತಾರಗಳಲ್ಲಿ ಸಂಭವಿಸಿದ ಬೇರೆ ಬೇರೆ ಘಟನೆಗಳನ್ನು ಅದರಲ್ಲೂ ವಿಶೇಷವಾಗಿ ಕೃಷ್ಣಾವತಾರದ ಕಥೆಯನ್ನು ಹೇಳುವ ಅನನ್ಯ ಗ್ರಂಥ ಭಾಗವತ.ಅಷ್ಟೇ ಅಲ್ಲದೇ ಭೂಮಿಯ ಉಗಮ,ಜೀವಿಗಳ ಸೃಷ್ಟಿ ,ಭೂಗೋಳ,ಕಾಲನಿರ್ಣಯ,ಯುಗಗಳ ಬಗ್ಗೆ ಸಾಧ್ಯಂತವಾಗಿ ತಿಳಿಸುವ ಅನನ್ಯ ಗ್ರಂಥವೂ ಹೌದು.

ಅದು 2020ನೇ ಇಸವಿಯ ಸೆಪ್ಟೆಂಬರ್ ತಿಂಗಳು.ಮೂಡಬಿದ್ರೆಯ ಅಲಂಗಾರಿನ ಈಶ್ವರ ಭಟ್ಟರ ಮನೆಯಲ್ಲಿ ಮಹಾಭಾರತ ಪ್ರವಚನ ಸಪ್ತಾಹ ಮಾಡಲು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯರಾದ ಡಾ.ಸತ್ಯನಾರಾಯಣ ಆಚಾರ್ಯರು ಬಂದಿದ್ದರು.ಅವರು ಕಳೆದ ಮೂರು ವರ್ಷಗಳಿಂದ ಅಲಂಗಾರಿನಲ್ಲಿ ವರ್ಷಂಪ್ರತಿ  ಮಹಾಭಾರತ ಪ್ರವಚನ ಸಪ್ತಾಹ ನಡೆಸುತ್ತಿದ್ದಾರೆ.ಅವರ ಕೆಲವು ಉಪನ್ಯಾಸಗಳನ್ನು ಹಿಂದೆಯೇ ಕೇಳಿದ್ದ ನನ್ನ ತಂದೆ ಪ್ರವಚನಕ್ಕೆ ಬರಲು ನನ್ನನ್ನೂ ಒತ್ತಾಯಿಸಿದ್ದರಿಂದ ನಾನೂ ಮೂಡಬಿದ್ರೆಗೆ ಹೋಗಿ ನೇರವಾಗಿ ಪ್ರವಚನ ಕೇಳಿದೆ.ಕಥೆಯನ್ನು ತುಂಬಾ ಸುಂದರವಾಗಿ ನಿರೂಪಣೆ ಮಾಡುವ ಆಚಾರ್ಯರ ಅಸ್ಖಲಿತ ಶೈಲಿಯ ಉಪನ್ಯಾಸ ಬಹಳ  ಇಷ್ಟವಾಯಿತು.ಆ ಸಪ್ತಾಹ ಯೂಟ್ಯೂಬಿನಲ್ಲಿ ಲೈವ್ ಇದ್ದದ್ದರಿಂದ ವಾರವಿಡೀ ಅವರ ಮಹಾಭಾರತ ಪ್ರವಚನ ಕೇಳಿದೆ.ನಂತರ ಅವರ ಇತರ ಪ್ರವಚನಗಳನ್ನು ಯೂಟ್ಯೂಬಿನಲ್ಲಿ ಹುಡುಕಿದಾಗ ಬೇರೆ ಬೇರೆ ವಿಷಯಗಳ ಬಗ್ಗೆ ಅವರು ಮಾಡಿದ ಉಪನ್ಯಾಸಗಳು ಕಂಡವು.ಸಮಯದ ಅಭಾವದಿಂದ ಯಾವುದನ್ನೂ ನೋಡಲಾಗಲಿಲ್ಲ.ನಂತರ 2020ರ ಡಿಸೆಂಬರ್ 27ರಿಂದ 2-1-2021ರ ತನಕ ಇದೇ ಸತ್ಯನಾರಾಯಣ ಆಚಾರ್ಯರು ದಿನಕ್ಕೆ ನಾಲ್ಕೂವರೆ ತಾಸಿನಂತೆ ಉಡುಪಿಯ ಕೃಷ್ಣಮಠದಲ್ಲಿ ಭಾಗವತ ಸಪ್ತಾಹದ ಉಪನ್ಯಾಸ ನಡೆಸಿಕೊಟ್ಟರು.ಅದು ಪರ್ಯಾಯ ಅದಮಾರು ಮಠದ ಯೂಟ್ಯೂಬ್ ಚಾನೆಲ್’ನಲ್ಲಿ ಲೈವ್ ಇತ್ತು.ಆಚಾರ್ಯರ ಶೈಲಿಗೆ ಮೊದಲೇ ಪ್ರಭಾವಿತನಾಗಿದ್ದ ನಾನು ಆ ಭಾಗವತ ಸಪ್ತಾಹವನ್ನು ಪೂರ್ತಿ ಕೇಳಿದೆ.ಅಲ್ಲಿಯವರೆಗೂ ಭಾಗವತದ ಹೆಸರನ್ನಷ್ಟೇ ಕೇಳಿ ಗೊತ್ತಿದ್ದ ನಾನು,ಯಾವತ್ತೂ ಅದರಲ್ಲಿ ಏನಿದೆ ಎಂದು ಯಾರಲ್ಲೂ ಕೇಳಲಿಕ್ಕಾಗಲೀ ಎಲ್ಲೂ ಹುಡುಕಲಿಕ್ಕಾಗಲೀ ಹೋಗಿರಲಿಲ್ಲ.ಸುಮಾರು ಹದಿನೈದು ವರ್ಷಗಳ ಹಿಂದೆ ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಚಂದನ ಚಾನೆಲ್’ನಲ್ಲಿ ಬೆಳಿಗ್ಗೆ ‘ಭಾಗವತ ಭಕ್ತರ ಕಥೆಗಳು’ ಎಂಬ ಶೀರ್ಷಿಕೆಯಲ್ಲಿ ಕಥೆಗಳನ್ನು ಹೇಳುತ್ತಿದ್ದರು.ಅದನ್ನು ಒಂದು ದಿನವೂ ನಾನು ಕೇಳಿರಲಿಲ್ಲ.ರಾಮಾಯಣ, ಮಹಾಭಾರತದ ಕಥೆಗಳನ್ನು ಆಗಾಗ ಅಪ್ಪನಿಂದ ಕೇಳುತ್ತಿದ್ದೆ,ಬೇರೆ ಬೇರೆ ಕಡೆಗಳಿಂದ ಓದುತ್ತಿದ್ದೆ.ಆದರೆ ಸತ್ಯನಾರಾಯಣಾಚಾರ್ಯರ ಉಪನ್ಯಾಸ ಕೇಳಿದ ಮೇಲೆ ಭಾಗವತ ಗ್ರಂಥದ ವೈಶಿಷ್ಟ್ಯ,ಅದರಲ್ಲಿನ ಕಥೆಗಳ ಬಗ್ಗೆ,ಹಲವು ವಿಷಯಗಳ ನಿಖರವಾದ ಮಾಹಿತಿಗಳ ಬಗ್ಗೆ  ಸ್ವಲ್ಪವೇ ಸ್ವಲ್ಪ ಅರಿವು ಸಿಕ್ಕಿ ಅಂತಹ ಅನನ್ಯವಾದ ಕಥೆಯನ್ನು ನನ್ನ ಇಲ್ಲಿಯವರೆಗಿನ ಬದುಕಿನಲ್ಲಿ ಓದದೇ ಇದ್ದದ್ದರ ಬಗ್ಗೆ,ಕೇಳದೇ ಇದ್ದದ್ದರ ಬಗ್ಗೆ ಬಹಳ ಖೇದವಾಯಿತು. ಕೆ.ಅನಂತರಾಮ ರಾವ್ ಅವರು ರಚಿಸಿದ ‘ಸಂಪೂರ್ಣ ಭಾಗವತ’ ಹೆಸರಿನ 1053 ಪುಟಗಳ ಪುಸ್ತಕವನ್ನು ಐದಾರು ತಿಂಗಳ ಹಿಂದೆಯೇ ಖರೀದಿಸಿದ್ದರೂ ಓದಲಾಗಿರಲಿಲ್ಲ.ಈಗ ಒಂದು ತಿಂಗಳ ಹಿಂದೆ ಒಂದು ದಿನ ಅದನ್ನು ಓದಲು ಪ್ರಾರಂಭಿಸಿದರೂ ಐದನೇ ಸ್ಕಂದ ಒದುವಷ್ಟರ ಹೊತ್ತಿಗೆ ಇದನ್ನು ನನ್ನಿಂದ ಓದಲಾಗದು ಎಂಬ ಭಾವನೆ ಬಂತು.ಹಾಗೆ ಭಾವಿಸಲು ಕಾರಣವೂ ಇತ್ತು.ಮೂರನೇ ಸ್ಕಂದದಲ್ಲಿ ಹೇಳಲಾದ ಬ್ರಹ್ಮಾಂಡದ ಉದಯ,ಜೀವಿಗಳ ಸೃಷ್ಟಿಯ ಬಗೆಗಿನ ವಿವರಣೆಗಳೆಲ್ಲ ಬಹಳ ಕ್ಲಿಷ್ಟಕರವಾಗಿವೆ ಎಂದೆನಿಸಿತು.ಅಲ್ಲದೇ ಅದೇ ವಿವರಗಳು ಮುಂದಿನ ಭಾಗಗಳಲ್ಲೂ ಬೇರೆ ಬೇರೆ ರೀತಿಯಲ್ಲಿ ಪುನರಾವರ್ತನೆಯಾದ್ದರಿಂದ ಅದನ್ನು ಓದದೇ ಹಾಗೇ ಮುಂದುವರೆದಿದ್ದೆ.ಐದನೇ ಸ್ಕಂದದಲ್ಲಿ ರಹೂಗಣ ರಾಜ ಮತ್ತು ಭರತನ ನಡುವಿನ ಸಂಭಾಷಣೆಯನ್ನು ಓದುವ ಹೊತ್ತಿಗೆ,ಈ ಭಾಗವತವನ್ನು ಪೂರ್ತಿಯಾಗಿ ಓದಲಾಗದು ಅನ್ನಿಸಿ ತತ್ವಜ್ಞಾನ,ಕರ್ಮ,ಕ್ರಿಯೆ,ಪ್ರಪಂಚದ ಸೃಷ್ಟಿಯ ಕುರಿತಾದ ವಿವರಣೆಗಳನ್ನೆಲ್ಲ ಬಿಟ್ಟು ಬರೀ ಕಥೆಗಳನ್ನಷ್ಟೇ ಓದಲು ನಿರ್ಧರಿಸಿದ್ದೆ.ಹಾಗೆ ಮಾಡುವುದರಿಂದ ಏನನ್ನು ಕಳೆದುಕೊಳ್ಳಲಿದ್ದೇನೆ ಎಂಬುದರ ಅರಿವು,ಅದರ ಗಂಭೀರತೆ ನನಗಿರಲಿಲ್ಲ.ಅಷ್ಟರಲ್ಲಿ ವೀಣಾ ಬನ್ನಂಜೆಯವರು ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ದಿನಕ್ಕೆ ಒಂದೂವರೆ ತಾಸಿನಂತೆ ಒಟ್ಟು ಹದಿನೈದು ದಿನಗಳ ಕಾಲ ನಡೆಸಿಕೊಟ್ಟ ಭಾಗವತ ಉಪನ್ಯಾಸ ಅಕಸ್ಮಾತಾಗಿ ಯೂಟ್ಯೂಬ್’ನಲ್ಲಿ ಸಿಕ್ಕಿತು.ಹಾಗೇ ಸುಮ್ಮನೆ ನೋಡುವ ಎಂದು ತೆರೆದದ್ದಷ್ಟೇ.ಮೊದಲ ದಿನದ ಉಪನ್ಯಾಸ ಕೇಳುವಷ್ಟರಲ್ಲಿಯೇ ಭಾಗವತದ ಬಗ್ಗೆ ಏನಂದರೆ ಏನೂ ಗೊತ್ತಿಲ್ಲದವರು ವೀಣಾ ಬನ್ನಂಜೆಯವರ ಮಾತುಗಳನ್ನು ಕೇಳಿದರೆ ಒಳ್ಳೆಯದು ಅನ್ನಿಸತೊಡಗಿತು. ಒಂದಕ್ಷರ ಸಂಸ್ಕೃತ ಗೊತ್ತಿಲ್ಲದವರಿಗೂ ಪುರಾಣ,ಭಾರತ ಅಂತೆಲ್ಲ ಏನೂ ಜ್ಞಾನ ಇಲ್ಲದವರಿಗೂ ತುಂಬಾ ಸರಳವಾಗಿ,ಚೆನ್ನಾಗಿ ಅರ್ಥವಾಗುವಂತೆ ಅವರು ಭಾಗವತದ ಬಗ್ಗೆ ಹೇಳುತ್ತ ಅದನ್ನು ಪ್ರಸ್ತುತ ಬದುಕಿಗೆ ಹೇಗೆ ಅನ್ವಯಿಸಬಹುದು ಎಂಬುದನ್ನು ಸಮಾಧಾನಕರವಾದ ವಿವರಣೆಯೊಂದಿಗೆ ಹೇಳುತ್ತಾ ಉಪನ್ಯಾಸ ನೀಡಿದರು.ಅದನ್ನು ಕೇಳಿದ ಮೇಲೆ ಭಾಗವತವನ್ನು ಮತ್ತೆ ಮೊದಲಿನಿಂದ ಒಂದೂ ಪುಟ ಬಿಡದೇ ಸರಿಯಾಗಿ ಓದಬೇಕು ಅಂತ ಅನ್ನಿಸಿದ್ದರಿಂದ ಅನಂತರಾಮ ರಾಯರ ಬೃಹತ್ ಗ್ರಂಥವನ್ನು ಮತ್ತೆ ಓದಲಾರಂಭಿಸಿದೆ.ವೀಣಾ ಬನ್ನಂಜೆಯವರ ಮಾತುಗಳನ್ನು ಕೇಳಿದ್ದಕ್ಕೋ ಏನೋ ಮೊದಲು ಆಕರ್ಷಕವಲ್ಲ ಅಂತ ಅನ್ನಿಸುತ್ತಿದ್ದ,ಕ್ಲಿಷ್ಟಕರವಾದ ವಿಷಯಗಳೆಲ್ಲ ಲಕ್ಷ್ಯವಿಟ್ಟು ಓದಿದರೆ ಅರ್ಥವಾಗಬಹುದು ಅನ್ನಿಸತೊಡಗಿತು.ಎರಡನೇ ಓದಿನ ಹೊತ್ತಿಗೆ ಪ್ರಪಂಚದ,ಜೀವಿಗಳ ಸೃಷ್ಟಿಯ ಕಥೆಗಳು,ದೇಹದಲ್ಲಿ ನೆಲೆಸಿರುವ ಬೇರೆ ಬೇರೆ ದೇವತೆಗಳ ಬಗೆಗಿನ ವಿವರಣೆ,ಕಪಿಲ-ದೇವಹೂತಿಯರ ಸಂವಾದ,ಪುರಂಜನೋಪಾಖ್ಯಾನ,ಜಡಭರತನ ಕಥೆಗಳೆಲ್ಲ ಪೂರ್ತಿ ಅರ್ಥಾವಾಗಿದೆ ಅಂತ ಹೇಳಲಾಗದಿದ್ದರೂ ವಿಷಯದ ಗ್ರಹಿಕೆ ಮೇಲ್ನೋಟಕ್ಕೆ ಸಿಕ್ಕಿ 1053 ಪುಟಗಳ ಗ್ರಂಥ ಸುಲಭವಾಗಿ ಓದಿಸಿಕೊಂಡು ಹೋಯಿತು.ವೇದವ್ಯಾಸರಿಂದ ರಚಿತವಾದ ಮೂಲ ಭಾಗವತದಲ್ಲಿ ಹದಿನೆಂಟು ಸಾವಿರ ಸಂಸ್ಕೃತ ಶ್ಲೋಕಗಳು ಹನ್ನೆರಡು ಸ್ಕಂದಗಳಲ್ಲಿ ನಿರೂಪಿಸಲ್ಪಟ್ಟಿವೆ.ಸಂಸ್ಕೃತ ಓದಲು ಸಾಧ್ಯವಿಲ್ಲದ ನನ್ನಂಥವರೆಲ್ಲ ಅದರ ಬಗ್ಗೆ ಬೇರೆ ಬೇರೆ ಲೇಖಕರು ನಮಗೆ ಅರ್ಥವಾಗುವ ಭಾಷೆಯಲ್ಲಿ ಬರೆದ ಪುಸ್ತಕಗಳನ್ನು ಓದಬೇಕಷ್ಟೇ.

ವೀಣಾ ಬನ್ನಂಜೆಯವರು ಸುಮಾರು ಸಲ ಹೇಳುತ್ತಾರೆ ‘ಇಲ್ಲಿ ಸೂಕ್ಷ್ಮರೂಪದಲ್ಲಿ ಇರುವುದು  ಇನ್ನೆಲ್ಲೋ  ಸ್ಥೂಲ ರೂಪದಲ್ಲಿದೆ,ಹಾಗೆಯೇ ಇನ್ನೆಲ್ಲೋ ಸಣ್ಣ ರೂಪದಲ್ಲಿದ್ದದ್ದು ಇಲ್ಲಿ ಬೃಹತ್ ರೂಪದಲ್ಲಿದೆ. What we see here in MICRO form, is there in MACRO form somewhere else, and vice versa.’ ಇಷ್ಟೇ ವಾಕ್ಯಗಳಲ್ಲಿ ಭಾಗವತದ ಪೂರ್ತಿ ಸಾರ ಅಡಗಿದೆ.ಅದನ್ನು ತುಂಬಾ ಸಮಾಧಾನಕರವಾದ ವಿವರಣೆಗಳೊಂದಿಗೆ ಬನ್ನಂಜೆಯವರು ತಮ್ಮ ಉಪನ್ಯಾಸದಲ್ಲಿ ಸಮರ್ಥಿಸಿಕೊಳ್ಳುತ್ತಾರೆ.ಪುಸ್ತಕ ಓದುವಾಗ ನನಗೂ ಹಾಗೇ ಅನ್ನಿಸಿತು.

ಭಗವಂತನ ಲೀಲಾವತಾರದ ಕಥೆಯಾದ ‘ಭಾಗವತ’ವನ್ನು ಮೊಟ್ಟ ಮೊದಲಿಗೆ ಸ್ವಯಂ ಶ್ರೀಮನ್ನಾರಾಯಣ ಬ್ರಹ್ಮದೇವನಿಗೆ ಹೇಳುತ್ತಾನೆ.ನಂತರ ಬ್ರಹ್ಮ ಅದನ್ನು ತನ್ನ ಮಾನಸಪುತ್ರ ನಾರದರಿಗೆ ಹೇಳಿ,ನಾರದರು ವೇದವ್ಯಾಸರಿಗೆ ಹೇಳಿ ಅವರು ಅದನ್ನು ತಮ್ಮ ಮಗನಾದ ಶುಕಮುನಿಗಳಿಗೆ ಹೇಳುತ್ತಾರೆ.ಅಲ್ಲದೇ ಅದನ್ನು ಹದಿನೆಂಟು ಸಾವಿರ ಶ್ಲೋಕಗಳಲ್ಲಿ ಗ್ರಂಥರೂಪದಲ್ಲಿಯೂ ಪ್ರಸ್ತುತಪಡಿಸುತ್ತಾರೆ.ತಂದೆಯಿಂದ ಕೇಳಿದ ಭಾಗವತವನ್ನು ಮುಂದೆ ಶುಕರು ರೋಮಹರ್ಷಣ ಮಹರ್ಷಿಗಳ ಪುತ್ರರಾದ ಸೂತಪುರಾಣಿಕರಿಗೂ ತಿಳಿಸುತ್ತಾರೆ.ಅದು ಬಿಟ್ಟರೆ ಪರೀಕ್ಷಿತ ರಾಜ ಯಾರು,ಅವನಿಗೆ ಯಾಕಾಗಿ ಶುಕ ಮುನಿಗಳಿಂದ ಭಾಗವತ ಸಪ್ತಾಹ ಕೇಳುವ ಪ್ರಸಂಗ ಬಂತು ಅಂತ ಸುಮಾರು ಜನರಿಗೆ ಗೊತ್ತಿರುವುದರಿಂದ ನಾನು ಹೇಳಲು ಹೋಗುವುದಿಲ್ಲ.

ಚಿತ್ರಕೃಪೆ: ಅಂತರ್ಜಾಲ

ಒಂದು ಬೃಹತ್ ಗ್ರಂಥವನ್ನು ರಚಿಸುವಾಗ ಕಥನ ತಂತ್ರ ಬಹಳ ಮುಖ್ಯವಾಗುತ್ತದೆ.ಇಡೀ ಭಾಗವತದಲ್ಲಿ ಎದ್ದು ಕಾಣುವುದೇ ವೇದವ್ಯಾಸರ ಕಥನ ತಂತ್ರ.ಸಿನಿಮಾದಲ್ಲಿ ಒಬ್ಬರು ಕಥೆಯನ್ನು ಇನ್ನೊಬ್ಬರಿಗೆ ಹೇಳುವಾಗ Flashback ರೂಪದಲ್ಲಿ ದೃಶ್ಯವನ್ನು ತೋರಿಸುವುದು,ಅದರಲ್ಲಿ ಮತ್ತೇನೋ ಕಥೆ ಬಂದರೆ ಅದನ್ನೂ ಮತ್ತೆ ದೃಶ್ಯರೂಪದಲ್ಲಿ ತೋರಿಸುವುದನ್ನೆಲ್ಲ ನಾವು ನೋಡುತ್ತೇವೆ.ಅದೇ ರೀತಿ ಒಂದು ಕಥೆಯನ್ನು ಒಬ್ಬರಿಗೇ ಹೇಳುವ ಪ್ರಸಂಗ ಭಾಗವತದಲ್ಲಿ ಬರುವುದು ಬಹಳ ಕಡಿಮೆ.ಉದಾಹರಣೆಗೆ ಶೌನಕಾದಿ ಮುನಿಗಳು ಭಾಗವತ ಹೇಳಬೇಕೆಂದು ಸೂತಪುರಾಣಿಕರ ಹತ್ತಿರ ಕೇಳಿದಾಗ ಅವರು, ಶುಕಮುನಿಗಳು ಪರೀಕ್ಷಿತ ರಾಜನಿಗೆ ಹೇಳಿದ ಕಥೆ ಹೇಳುತ್ತ ಅದರೊಳಗೆ ಬರುವ ಬ್ರಹ್ಮ ನಾರದರಿಗೆ ಕಥೆ ಹೇಳಿದ ಸನ್ನಿವೇಶವನ್ನೋ,ಮೈತ್ರೇಯರು ವಿದುರನಿಗೆ ಹೇಳಿದ ವಿಷಯವನ್ನೋ ನೇರವಾಗಿ ಅವರದ್ದೇ ಮಾತುಗಳಲ್ಲಿ ಹೇಳುತ್ತಾರೆ.ಓದುಗರಿಗೆ ನೇರವಾಗಿ ಅದು ವಿದುರ ಮೈತ್ರೇಯರ ಸಂಭಾಷಣೆ ಅಂತ ಓದುವಾಗ ಅನ್ನಿಸಿದರೂ ಆ ಸಂಭಾಷಣೆ ನಡೆಯಿತು ಅಂತ ಶುಕಮುನಿಗಳು ಹೇಳಿದ್ದನ್ನು ಸೂತಪುರಾಣಿಕರು ಶೌನಕಾದಿಗಳಿಗೆ ಹೇಳುತ್ತಾರೆ.ಪ್ರಾಚೀನಬರ್ಹಿ ಮಹಾರಾಜನಿಗೆ ಪುರಂಜನನ ಕಥೆಯನ್ನು ನಾರದರು ಹೇಳಿದರು ಎಂದು ಶುಕಮುನಿಗಳು ಪರೀಕ್ಷಿತನಿಗೆ ಹೇಳಿದ್ದನ್ನು ಸೂತಪುರಾಣಿಕರು ಹೇಳುವುದು. ಕಥೆಯೊಳಗೆ ಕಥೆ.ಆ ಕಥೆಯೊಳಗೆ ಮತ್ತೊಂದು ಕಥೆ.ಒಂದೇ ಸಲಕ್ಕೆ ನೇರವಾಗಿ ಕಥೆಯನ್ನು ಹೇಳಿದರೆ ಅಥವಾ ಕ್ಲಿಷ್ಟಕರವಾದ ವಿಷಯಗಳನ್ನು ಪೂರ್ತಿಯಾಗಿ ಹೇಳಿಬಿಟ್ಟರೆ ಓದುಗನಿಗೆ,ಕೇಳುಗನಿಗೆ ಕಷ್ಟವಾಗಬಹುದು, ಆಕರ್ಷಕವಾಗಿ ಅನ್ನಿಸದೇ ಇರಬಹುದೆಂದು ನೇರವಾಗಿ ಕಥೆ ಶುರುವಾಗುವುದಿಲ್ಲ ಭಾಗವತದಲ್ಲಿ.ಉದಾಹರಣೆಗೆ ಆರಂಭದ ಎರಡನೇ ಸ್ಕಂದದಲ್ಲಿ ಭಗವಂತನ 22 ಅವತಾರಗಳ ಹೆಸರನ್ನಷ್ಟೇ ಹೇಳುತ್ತಾರೆ.ಸ್ವಲ್ಪ ಹೊತ್ತಿನ ನಂತರ ಆ ಅವತಾರಗಳ ವಿವರಣೆಯನ್ನು ಒಂದೇ ವಾಕ್ಯದಲ್ಲಿ ಕೊಡುತ್ತಾರೆ.ಸೃಷ್ಟಿಯ ಕಥೆಯನ್ನು ಹೇಳುವಾಗಲೂ ಮೊದಲು ಅದನ್ನು ಕೆಲವೇ ವಾಕ್ಯಗಳಲ್ಲಿ ಹೇಳಿ ಮುಂದೆ ನಾರದರು ಬ್ರಹ್ಮನಿಂದ ಕೇಳಿ ತಿಳಿದ ಭೂಮಿಯ,ಜೀವಿಗಳ ಉಗಮದ,ಕಾಲನಿರ್ಣಯದ ವಿವರಣೆಗಳೆಲ್ಲ ದೀರ್ಘವಾಗಿ ಮುಂದಿನ ಸ್ಕಂದಗಳಲ್ಲಿ ಬರುತ್ತವೆ.ಹಾಗೆ ಹೇಳುವಾಗಲೂ ವಿಷ್ಣುವಿನಿಂದ ತಿಳಿದ ವಿಷಯವನ್ನು ಬ್ರಹ್ಮ ನಾರದರಿಗೆ ಹೇಳುವುದನ್ನು ಮೈತ್ರೇಯರು ವಿದುರನಿಗೆ ವಿವರಿಸಿದರು ಎನ್ನುವ ಕಥೆಯನ್ನು ಹಾಗೆ ಹಾಗೆಯೇ ನೇರಪ್ರಸಾರದಂತೆ  ಶುಕಮುನಿಗಳು ಪರೀಕ್ಷಿತನಿಗೆ ಹೇಳಿದರು ಅಂತ ನೈಮಿಷಾರಣ್ಯದಲ್ಲಿ ಶೌನಕಾದಿಗಳಿಗೆ ಸೂತಪುರಾಣಿಕರು ಹೇಳುತ್ತಾರೆ.ಮುಂದಿನ ಸ್ಕಂದಗಳಲ್ಲಿ ಅಷ್ಟೂ ಅವತಾರಗಳ ಎಲ್ಲ ಕಥೆಯೂ ದೀರ್ಘವಾಗಿ ಬರುತ್ತದೆ.ಅಲ್ಲದೇ ಬ್ರಹ್ಮಾಂಡ,ಭೂಗೋಳ,ಸೃಷ್ಟಿ,ಕಾಲಸ್ವರೂಪದ ವಿವರಗಳೆಲ್ಲ ಮತ್ತೆ ಮತ್ತೆ ಮುಂದಿನ ಸ್ಕಂದಗಳಲ್ಲಿ ಸಾಧ್ಯಂತವಾಗಿ ಪುನರಾವರ್ತನೆಯಾಗುತ್ತಲೇ ಇರುತ್ತವೆ.ಅಂದರೆ ಸ್ವಲ್ಪ ಕಠಿಣ ಅಂತ ಅನ್ನಿಸಬಹುದಾದ ವಿಷಯವನ್ನು ಬೇರೆ ಬೇರೆ ರೀತಿಯಲ್ಲಿ ಪದೇ ಪದೇ ಹೇಳಿದಾಗ ಒಂದು ಹಂತದಲ್ಲಾದರೂ ಓದುಗನಿಗೆ ಅರ್ಥವಾದೀತು ಎಂಬ ವಿಶಿಷ್ಟವಾದ ಕಥನತಂತ್ರವನ್ನು ಬಳಸಿದ್ದಾರೆ ವ್ಯಾಸರು.ಇವತ್ತಿನ ಕಥೆ,ಕಾದಂಬರಿಗಳಲ್ಲಿ,ಸಿನಿಮಾಗಳಲ್ಲಿ ನೋಡುವ ಕಥೆ ಹೇಳುವ ಶೈಲಿಯನ್ನು ಅವತ್ತೇ ಬಳಸಿಕೊಂಡಿದ್ದರು ವೇದವ್ಯಾಸರು.ಭಾಗವತ ನನಗೆ ಇಷ್ಟವಾಗಲು ಇದೂ ಒಂದು ಮುಖ್ಯ ಕಾರಣ.

ಇನ್ನೊಂದು ಮುಖ್ಯವಾದ ಅಂಶ ಅಂದರೆ ಕೃಷ್ಣನ ನಿರ್ಯಾಣದ ಕಥೆ ಸೂಕ್ಷ್ಮವಾಗಿ ಆರಂಭದ ಸ್ಕಂದದಲ್ಲೇ ವಿವರಿಸಲ್ಪಟ್ಟು ನಂತರದ ಭಾಗಗಳಲ್ಲಿ ಭಗವಂತನ ಅವತಾರಗಳ ಕಥೆ ಪೂರ್ತಿಯಾಗಿ ಬಂದು ಹತ್ತು ಮತ್ತು ಹನ್ನೊಂದನೇ ಸ್ಕಂದದಲ್ಲಿ ಮತ್ತೆ ಕೃಷ್ಣಾವತಾರದ ಪೂರ್ತಿ ಕಥೆ ಬರುತ್ತದೆ. ಕೃಷ್ಣನ ವಿಷಯ ಏಕೆ ಪ್ರಮುಖವಾಗುತ್ತದೆ ಅಂದರೆ ಭಾಗವತ ವ್ಯಾಸರಿಂದ ರಚನೆಯಾಗಲು ಕಾರಣವಾದ ಮೂಲವೇ ಕೃಷ್ಣಾವತಾರ.ಎಲ್ಲ ಪುರಾಣಗಳನ್ನು ರಚಿಸಿದ ಮೇಲೂ ಅವರಿಗೆ ಒಂದು ತರಹದ ಅತೃಪ್ತಿ ಕಾಡುತ್ತಿರುವಾಗ ಕೃಷ್ಣಾವತಾರದ ಅಂತ್ಯದಲ್ಲಿ ನಾರದರ ಸಲಹೆಯ ಮೇರೆಗೆ ಭಗವಂತನ ಕಥೆಯನ್ನು ಅನನ್ಯವಾಗಿ ಹೇಳುವ ಅದರಲ್ಲೂ ಕೃಷ್ಣನ ಪೂರ್ತಿ ಕಥೆಯನ್ನು ಯತೇಚ್ಚವಾಗಿ ವರ್ಣಿಸುವ ಭಾಗವತವನ್ನು ವ್ಯಾಸರು ರಚಿಸುತ್ತಾರೆ.ನಾನು ಓದಿದ ಅನಂತರಾಮ ರಾಯರ 1053 ಪುಟಗಳ ಪುಸ್ತಕದಲ್ಲಿ 316 ಪುಟಗಳಲ್ಲಿ ಬರೀ ಕೃಷ್ಣನ ಕಥೆಯೇ Exclusive ಆಗಿ ಇದೆ.ಅಂಥ ಕಥಾನಾಯಕನ ಅಂತ್ಯವಾಯಿತು ಅಂತ ಆರಂಭದಲ್ಲೇ ಹೇಳಿ ಮುಂದೆ ಶ್ರೀಹರಿಯ ಎಲ್ಲ ಅವತಾರಗಳ ಕಥೆಯೂ ಬರುತ್ತದೆ.ಅಂತಹ ಒಳ್ಳೆಯ ಪುಸ್ತಕದ ಬಗ್ಗೆ ಪೂರ್ತಿ ಬರೆಯುವುದು ಯಾರಿಂದಲೂ ಸಾಧ್ಯವಿಲ್ಲ.ಹಾಗಿದ್ದಾಗ್ಯೂ ಭಾಗವತದ ಎಲ್ಲ ಹನ್ನೆರಡು ಸ್ಕಂದಗಳಲ್ಲಿ ನನಗೆ ತುಂಬಾ ಇಷ್ಟವಾದ ಒಂದಷ್ಟು ಕಥೆಗಳನ್ನು,ಅಂಶಗಳನ್ನು ಅವುಗಳನ್ನು ಪ್ರಸ್ತುತದ ನಮ್ಮ ಬದುಕಿಗೆ ನಾವು ಅನ್ವಯಿಸಬಹುದೇ ಎಂದು ಓದುವಾಗ ಹುಟ್ಟಿದ ಜಿಜ್ಞಾಸೆಯನ್ನು ಹಂಚಿಕೊಳ್ಳುವುದಷ್ಟೇ ನನ್ನ ಉದ್ದೇಶ.

ಉಳಿದ ಸಂಗತಿಗಳನ್ನು ಮುಂದಿನ ಭಾಗದಲ್ಲಿ ಬರೆಯುತ್ತೇನೆ.