ಮಕ್ಕಳ ಮನಸ್ಸು ಅಷ್ಟು ಸುಲಭವಾಗಿ ವಿಕಾರಕ್ಕೊಳಗಾಗುವುದಿಲ್ಲ.ತಾವು ಕಂಡದ್ದು,ಕೇಳಿದ್ದೆಲ್ಲವೂ ಬಹುತೇಕ ಸತ್ಯ ಎಂಬ ಮುಗ್ಧತೆಯೂ ಎಳೆಯರಲ್ಲಿರುತ್ತದೆ.ಭಾಗವತದ ನಾಲ್ಕನೇ ಸ್ಕಂದದಲ್ಲಿ ಬರುವ ಧ್ರುವನ ಕಥೆಯ ಬಗ್ಗೆ ಹೇಳಲೇಬೇಕು.ಅಪ್ಪನ ತೊಡೆಯನ್ನು ಏರಬೇಕಾದರೆ ಭಗವಂತನನ್ನು ತಪಸ್ಸಿನಿಂದ ಒಲಿಸಿಕೊಂಡು ನನ್ನ ಹೊಟ್ಟೆಯಲ್ಲಿ ಹುಟ್ಟಿ ಬಾ ಎಂದು ಚಿಕ್ಕಮ್ಮ ಸುರುಚಿ ಹೇಳಿದ್ದನ್ನೇ ನಂಬಿಕೊಂಡು ಏಕಾಏಕಿ ಕಾಡಿಗೆ ಹೋಗುತ್ತಾನೆ ಧ್ರುವ.ಯಾರ ಬಗ್ಗೆ ತಪಸ್ಸು ಮಾಡಬೇಕು,ಹೇಗೆ ಮಾಡಬೇಕು,ಎಷ್ಟು ದಿನ ಮಾಡಬೇಕು ಒಂದೂ ಗೊತ್ತಿಲ್ಲ.ಆದರೂ ತಪಸ್ಸು ಮಾಡಿ ಭಗವಂತನನ್ನು ಒಲಿಸಿಕೊಳ್ಳುವೆನೆಂಬ ಗಾಢ ಆತ್ಮವಿಶ್ವಾಸ.ನಾರದರಿಂದ ದ್ವಾದಶಾಕ್ಷರ ಮಂತ್ರದ ಉಪದೇಶ ಪಡೆದು ತಪಸ್ಸು ಶುರು ಮಾಡಿದ ಆರು ತಿಂಗಳಿಗೇ ಶ್ರೀಮನ್ನಾರಾಯಣ ಪ್ರತ್ಯಕ್ಷನಾಗುತ್ತಾನೆ.ಋಷಿ-ಮುನಿಗಳ ಸಾವಿರಾರು,ಲಕ್ಷಾಂತರ ವರ್ಷಗಳ ತಪಸ್ಸಿಗೂ ಒಲಿಯದ ಶ್ರೀಹರಿ ಐದು ವರ್ಷದ ಬಾಲಕ ಧ್ರುವನ ಆರು ತಿಂಗಳಿನ ತಪಸ್ಸಿಗೆ ವೈಕುಂಠದಿಂದಿಳಿದು ಬರುತ್ತಾನೆ.ಎಲ್ಲಿಯವರೆಗಿನ ಮುಗ್ಧತೆ ಅಂದರೆ ದೇವರು ಪ್ರತ್ಯಕ್ಷ ಆದಾಗ ಏನು ಕೇಳಬೇಕು ಅಂತಲೇ ಗೊತ್ತಾಗುವುದಿಲ್ಲ ಧ್ರುವನಿಗೆ.ಹರಿಹರ ಕವಿ ರಚಿಸಿದ ಕೋಳೂರು ಕೊಡಗೂಸಿನ ರಗಳೆಯಲ್ಲಿಯೂ ಇದೇ ತರಹದ ಮುಗ್ಧ ಭಕ್ತಿಯನ್ನು ನಾವು ಕಾಣಬಹುದು.ಹಾಲನ್ನು ಶಿವನಿಗೆ ಇಟ್ಟು ಬಾ ಎಂದು ಅಮ್ಮ ಹೇಳಿದ್ದಕ್ಕೆ ಶಿವನೇ ಪ್ರತ್ಯಕ್ಷವಾಗಿ ಬಂದು ಹಾಲನ್ನು ಕುಡಿಯುತ್ತಾನೆ ಅಂತಲೇ ನಂಬಿರುತ್ತದೆ ಆ ಎಳೆಯ ಹೆಣ್ಣು ಮಗು.ಗುಡಿಯಲ್ಲಿ ಎಷ್ಟು ಹೊತ್ತಾದರೂ ಲಿಂಗದಿಂದ ಶಿವ ಎದ್ದು ಬರದೇ ಇದ್ದಾಗ ಕಣ್ಣೀರು ಸುರಿಸಿ ಅಳುತ್ತಾಳೆ ಕೊಡಗೂಸು. ಕೊನೆಗೆ ಅವಳ ಕಣ್ಣೀರನ್ನು ಒರೆಸಲು,ಹಾಲು ಕುಡಿಯಲು ಕಾಣಿಸಿಕೊಳ್ಳುತ್ತಾನೆ ಹರ. ‘ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ’ ಎಂದು ಮಕ್ಕಳು ನಂಬಿದಷ್ಟು ಗಾಢವಾಗಿ,ಆಳವಾಗಿ ದೊಡ್ಡವರಿಗೆ ನಂಬಲು ಆಗುವುದಿಲ್ಲವೇನೋ.ಎಳೆಯ ವಯಸ್ಸಿನ ಮಕ್ಕಳ ಯಾವ ಕ್ರಿಯೆಯಲ್ಲಿಯೂ ಕಪಟತೆ,ಡಾಂಭಿಕತನ,ಆಡಂಬರ ಇರುವುದಿಲ್ಲ.ಅವರಷ್ಟು ಏಕಾಗ್ರತೆಯಿಂದ, ಮುಗ್ಧತೆಯಿಂದ, ನಂಬಿಕೆಯಿಂದ ಕೆಲಸ ಮಾಡಿದರೆ ನಾವೂ ಅಂದುಕೊಂಡದ್ದನ್ನು ಸಾಧಿಸುವತ್ತ ಹೆಜ್ಜೆ ಹಾಕಬಹುದು.ಅಲ್ಲದೇ ನಿರ್ಮಲ ಮನಸ್ಸಿನ ಭಕ್ತಿಯನ್ನು,ಭಕ್ತರ ಮನದಿಂಗಿತವನ್ನು ಭಗವಂತ ಬಹಳ ಬೇಗ ಒಪ್ಪಿಕೊಳ್ಳುತ್ತಾನೆ.ವಜ್ರದ ಕಂಬದಲ್ಲಿಯೂ ಇದ್ದಾನೆ ಶ್ರೀಹರಿ ಎಂಬ ಪುಟ್ಟ ಪ್ರಹ್ಲಾದನ ಮುಗ್ಧ ಮಾತನ್ನು ನಿಜವಾಗಿಸಲು ಕಂಬದಿಂದಲೇ ಹೊರ ಬಂದ ನರಸಿಂಹ.ಮುಗ್ಧ ಭಕ್ತಿಗೆ ಭಗವಂತ ಸೋಲದೇ ಇರುವ ಉದಾಹರಣೆಯೇ ಸಿಗುವುದಿಲ್ಲ.

ಅಜಾಮಿಳನ ಕಥೆ ಬಹಳಷ್ಟು ಜನರಿಗೆ ತಿಳಿದಿರಬಹುದು.ನಮ್ಮ ದಿನನಿತ್ಯದ ಬದುಕಿನಲ್ಲಿ ಎದುರಾಗುವ Distractionsಗಳನ್ನು ಮೀರಲಾಗದಿದ್ದರೆ ಏನಾಗಬಹುದು ಎಂಬುದಕ್ಕೆ ಅಜಾಮಿಳನಿಗಿಂತ ಒಳ್ಳೆಯ ಉದಾಹರಣೆ ಸಿಗಲಾರದು.ಅಪ್ಪ ಮಾಡುವ ಯಜ್ಞಕಾರ್ಯಗಳಿಗೆ ಬೇಕಾದ ಸಮಿಧೆ,ಸೌದೆಗಳನ್ನು ತರಲು ಕಾಡಿಗೆ ಹೋದವನು ವೇಶ್ಯೆಯೊಬ್ಬಳನ್ನು ನೋಡಿ ತಾನು ಯಾರು ಎಂಬ ಅರಿವನ್ನೇ ಕಳೆದುಕೊಂಡು ಆ ವೇಶ್ಯೆಯ ಹಿಂದೆಯೇ ಹೋಗಿ ಅವಳ ಜೊತೆಯೇ ಬದುಕುತ್ತಾನೆ.ಹಿಂಸಾವೃತ್ತಿಯಿಂದ ಧನಸಂಗ್ರಹ,ಮಾಂಸಾಹಾರ ಸೇವನೆಗಳಂಥ ತಾಮಸೀ ಗುಣಗಳಿಂದಲೇ ಬದುಕುತ್ತಾನೆ.ಸಾಯುವ ಕಾಲಕ್ಕೆ ನಾರಾಯಣ ಅಂತ ಕರೆದಿದ್ದರಿಂದ ವಿಷ್ಣುದೂತರು ಬಂದರು,ಅಜಾಮಿಳ ಮೋಕ್ಷ ಮಾರ್ಗಾವಲಂಬಿಯಾದ ಎನ್ನುವುದೆಲ್ಲ ಗೊತ್ತೇ ಇದೆ.ನಿಜವಾಗಿ ನೋಡಿದರೆ ಎಲ್ಲರೊಳಗೂ ಒಬ್ಬ ಅಜಾಮಿಳನಿದ್ದಾನೆ.ನಾವು ದಿನನಿತ್ಯ ಮಾಡುವ ಕೆಲಸಗಳಲ್ಲೂ ಒಂದಲ್ಲ ಒಂದು ಹಂತದಲ್ಲಿ Distractions ಬರುತ್ತಲೇ ಇರುತ್ತವೆ. ಉದಾಹರಣೆಯೇ ಬೇಕು ಅಂತಾದರೆ,ಕೋವಿಡ್ ಬಂದ ಮೇಲೆ ಕೆಲವರು ಅಂತರ್ಜಾಲದ ನೆರವಿನಿಂದ ಮನೆಯಿಂದಲೇ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಾರೆ.ಬೆಳಿಗ್ಗೆ ಕೆಲಸ ಶುರು ಮಾಡುವ ಹೊತ್ತಿಗೆ ಇಂಟರ್ನೆಟ್ ಆನ್ ಮಾಡಿದ ಕೂಡಲೇ ಉಪಯೋಗವಿಲ್ಲದ ಯಾವುದೋ ಯೂಟ್ಯೂಬ್ ವೀಡಿಯೋದ ಲಿಂಕ್,ಸೋಷಿಯಲ್ ಮೀಡಿಯಾದ ಒಂದಷ್ಟು ಪೋಸ್ಟ್’ಗಳು,ಆನ್ಲೈನ್ ಗೇಮಿಂಗ್ ವೆಬ್ಸೈಟ್’ಗಳು ಕಂಡರೆ ಕೆಲವರಿಗಾದರೂ ಅವುಗಳತ್ತ ಒಮ್ಮೆ ಕಣ್ಣು ಹಾಯಿಸಿ ಹಾಗೆ ಹೋಗಿ ಹೀಗೆ ವಾಪಸ್ ಬಂದು ಬಿಡೋಣ ಅನ್ನಿಸುತ್ತದೆ.ಆದರೆ ಕೆಲವೇ ಜನರಷ್ಟೇ ಅಂಥ ಎಲ್ಲ Distractionsಗಳನ್ನು ಬಹಳ ಬೇಗ ನಿವಾರಿಸಿಕೊಂಡು ತಾವು ಮಾಡಬೇಕಾದ ಕೆಲಸದ ಬಗ್ಗೆ ಗಮನ ಹರಿಸುತ್ತಾರೆ.ಇನ್ನು ಸುಮಾರು ಜನ ತಾವು ಯಾವ ಉದ್ದೇಶಕ್ಕೆ ಇಂಟರ್ನೆಟ್ ಆನ್ ಮಾಡಿದ್ದೇವೆಂಬುದನ್ನೇ ಮರೆತು ಫೇಸ್ಬುಕ್,ಯೂಟ್ಯೂಬ್,ಆನ್ಲೈನ್ ಗೇಮಿಂಗ್’ಗಳಲ್ಲೇ ಮುಳುಗಿ ತಮ್ಮ ಸಮಯ,ಹಣ ಎಲ್ಲವನ್ನೂ ನಷ್ಟ ಮಾಡಿಕೊಳ್ಳುತ್ತಾರೆ.ಕೊನೆಗೆ ಯಾವುದೋ ಒಂದು ಹಂತದಲ್ಲಿ ಜ್ಞಾನೋದಯವಾದಾಗ ಸರಿಪಡಿಸಲಾಗದಷ್ಟು ತಪ್ಪುಗಳು ಆಗಿ ಹೋಗಿರುತ್ತವೆ.ಆಗ ಚಿಂತಿಸಿ ಏನೂ ಫಲವಿಲ್ಲ.If you keep on throwing stones at each and every dog that barks at you, you cant reach your destination on time ಎಂಬ ಮಾತಿದೆ.ಹಾಗೆಯೇ ನಾವು ಯಾವ ಕೆಲಸಕ್ಕೆಂದು ಹೊರಟಿದ್ದೇವೆಯೋ ಅದರ ಕುರಿತು ಗಮನ ಹರಿಸಬೇಕೇ ಹೊರತು ಮನಸ್ಸನ್ನು ಬೇರೆಡೆಗೆ ಸೆಳೆಯುವ ಇತರ ಸಂಗತಿಗಳತ್ತ ಗಮನ ಹರಿಸಬಾರದು ಎಂಬುದನ್ನು ಅಜಾಮಿಳನ ಕಥೆಯ ಮೂಲಕ ಬಹಳ ಸೂಚ್ಯವಾಗಿ ಹೇಳುತ್ತದೆ ಶ್ರೀಮದ್ಭಾಗವತ.

ಹಿರಣ್ಯಕಶಿಪುವನ್ನು ವಧಿಸಿದ ನಂತರ ನರಸಿಂಹ ರೂಪದ ಭಗವಂತ ಪ್ರಹ್ಲಾದನಿಗೆ ಹೇಳುತ್ತಾನೆ, ನಿನ್ನ ನಂತರ ಇಪ್ಪತ್ತೊಂದು ತಲೆಮಾರುಗಳ ತನಕ ನೀವು ಅಸುರರಾಗಿದ್ದರೂ ಹರಿಭಕ್ತರಾಗಿಯೇ ಬದುಕಲಿದ್ದೀರಿ.ಹಾಗಾಗಿ ನಿಮ್ಮನ್ನು ಇಪ್ಪತ್ತೊಂದು ತಲೆಮಾರುಗಳ ತನಕ ನಾನು ಯಾವ ತೊಂದರೆಯೂ ಆಗದಂತೆ ರಕ್ಷಿಸಲಿದ್ದೇನೆ.ಅದರ ಪ್ರಕಾರವೇ ಪ್ರಹ್ಲಾದ ಹರಿಭಕ್ತಿಯನ್ನು ಮುಂದುವರೆಸಿಕೊಂಡು ಹೋಗಿ ಪರಮ ಭಾಗವತೋತ್ತಮನೆನಿಸಿಕೊಳ್ಳುತ್ತಾನೆ.ಅವನ ಮಗ ವೀರೋಚನನ ಪುತ್ರನಾದ ಇಂದ್ರಸೇನ ಬಲೀಂದ್ರನೆಂದೇ ಪ್ರಸಿದ್ಧನಾಗುತ್ತನೆ.ಸಮುದ್ರ ಮಥನದ ನಂತರ ನಡೆದ ದೇವ-ದಾನವರ ಕದನದಲ್ಲಿ ಇಂದ್ರನಿಂದ ಹತನಾದರೂ ಶುಕ್ರಾಚಾರ್ಯರ ಮೃತಸಂಜೀವಿನಿ ವಿದ್ಯೆಯಿಂದ ಮತ್ತೆ ಬದುಕುತ್ತಾನೆ ಬಲಿ. ಶ್ರೇಷ್ಠನಾದ ಒಬ್ಬ ಗುರು ಸಿಕ್ಕಿದರೆ ಎಂತಹ ಪಾಮರನೂ ಶ್ರೇಷ್ಠತ್ವಕ್ಕೆ ಏರಬಲ್ಲ ಎನ್ನುವುದಕ್ಕೆ ಬಲಿ ಚಕ್ರವರ್ತಿಗಿಂತ ಒಳ್ಳೆಯ ನಿದರ್ಶನ ಸಿಗಲಾರದೇನೋ.ರಾಕ್ಷಸ,ಅದರಲ್ಲೂ ಅಸುರ ಕುಲದ ಅಧಿಪತಿಯೊಬ್ಬ ಆ ರೀತಿಯಾಗಿಯೂ ಸಾತ್ವಿಕ ಜೀವನ ನಡೆಸಬಹುದೇ ಅಂತ ಅನೇಕ ಸಲ ಪ್ರಶ್ನೆ ಮೂಡುತ್ತದೆ.ಮಾಡುವ ಎಲ್ಲ ಕೆಲಸಗಳೂ ಭಗವದರ್ಪಿತ,ಗುರು-ಹಿರಿಯರಲ್ಲಿ,ಬ್ರಾಹ್ಮಣರಲ್ಲಿ ಅನನ್ಯವಾದ ಭಕ್ತಿ-ಗೌರವ,ಸ್ವಂತ ಸಾಮರ್ಥ್ಯದ ಮೂಲಕ ವಿಶ್ವಜಿತ್ ಯಾಗದಂತಹ ವಿಶಿಷ್ಟ ಯಜ್ಞವನ್ನು ಮಾಡಿ ಯಜ್ಞೇಶ್ವರನ ರೂಪದಲ್ಲಿ ಭಗವಂತನನ್ನು ಒಲಿಸಿಕೊಂಡು ಸ್ವರ್ಗದ ಅಧಿಪತ್ಯ ಸ್ಥಾಪಿಸುವುದು ಇವೆಲ್ಲ ಸತ್ಕುಲಪ್ರಸೂತರಾದ ರಾಜರಿಗೇ ಕಷ್ಟಸಾಧ್ಯವಾದ ವಿಷಯ.ಅದನ್ನು ಸ್ವಭಾವತಃ ಒಬ್ಬ ದಾನವನಾದ ಬಲಿಚಕ್ರವರ್ತಿ ಮಾಡಿ ತೋರಿಸಿದ.ಸಾಮರ್ಥ್ಯಗಳು ಬೆಳೆದಂತೆ,ಲೋಕಗಳು ತನ್ನ ಅಧೀನವಾದಂತೆ ಅಹಂಕಾರವೂ ಬೆಳೆಯಿತು ಅವನಲ್ಲಿ.ಆದರೆ ಶ್ರೀಹರಿ ಮಾಡಿದ್ದೇನು? ನೀನು ಎಷ್ಟು ಎತ್ತರಕ್ಕೆ ಬೆಳೆಯುತ್ತೀಯೋ,ನಿನ್ನ ಅಹಂಕಾರ ಎಷ್ಟು ಮೇಲೆ ಹೋಗುತ್ತದೋ ನಾನು ಅಷ್ಟೇ ಕುಬ್ಜನಾಗಿ ಯಾರ ಸಹಾಯವೂ ಇಲ್ಲದಂತೆ ನಿನ್ನನ್ನು ದಮನಿಸುತ್ತೇನೆ ಎಂದು ನಿರ್ಧರಿಸಿಬಿಟ್ಟ.ಅಲ್ಲದೇ ಶ್ರೇಷ್ಠನಾದ ಒಬ್ಬ ಭಕ್ತನ ಭಕ್ತಿಯನ್ನು ಕಂಡು ಅವನನ್ನು ಉದ್ಧರಿಸಲು ತಾನು ಸಣ್ಣವನೂ ಆಗಬಲ್ಲೆ ಎಂದು ತೋರಿಸಲು ಪುಟ್ಟ ವಾಮನನ ಅವತಾರ ತಾಳಿದ ಭಗವಂತ.ಪಯೋಧರ ವ್ರತದ ಫಲವಾಗಿ ಅದಿತಿ-ಕಶ್ಯಪರ ದಾಂಪತ್ಯದಲ್ಲಿ ಉದಿಸಿದ.ಎಂಟನೇ ಸ್ಕಂದದಲ್ಲಿ ಬರುವ ವಾಮನನ ಉಪನಯನದ ವರ್ಣನೆಯನ್ನೊಮ್ಮೆ ಓದಬೇಕು.ಸಾಕ್ಷಾತ್ ಸೂರ್ಯನೇ ಬಂದು ಗಾಯತ್ರಿ ಮಂತ್ರವನ್ನು ಉಪದೇಶಿಸುತ್ತಾನೆ.ಕುಬೇರ ಬಂಗಾರದ ಒಂದು ಭಿಕ್ಷಾಪಾತ್ರೆಯನ್ನು ಕೊಡುತ್ತಾನೆ,ಅದಕ್ಕೆ ಅನ್ನಪೂರ್ಣೇಶ್ವರಿಯಾದ ಶಂಕರಿ ಮೊದಲ ಭಿಕ್ಷೆ ಹಾಕುತ್ತಾಳೆ.ವರುಣದೇವ ಒಂದು ಛತ್ರಿಯನ್ನು ಕೊಡುತ್ತಾನೆ.ಚಂದ್ರ ಪಾಲಾಶ ದಂಡವನ್ನು ಕೊಡುತ್ತಾನೆ.ಅವುಗಳೆಲ್ಲವುಗಳಿಂದ ಕಂಗೊಳಿಸುವ ಪುಟ್ಟ ವಾಮನ ನರ್ಮದಾ ನದಿ ತೀರದಲ್ಲಿರುವ ಬಲಿಚಕ್ರವರ್ತಿಯ ಯಾಗಶಾಲೆಗೆ ಬಂದು ಮೂರನೇ ಹೆಜ್ಜೆಯಲ್ಲಿ ಬಲಿಯನ್ನು ಸುತಲಕ್ಕೆ ತಳ್ಳುತ್ತಾನೆ.ಮೇಲ್ನೋಟಕ್ಕೆ ಅಸುರನ ಅಂತ್ಯವಾಯಿತೆಂದು ಅನ್ನಿಸಿದರೂ ಮುಂದಿನ ಸೂರ್ಯಸಾವರ್ಣಿ ಮನ್ವಂತರದಲ್ಲಿ ಇಂದ್ರಪದವಿಗೇರಲಿದ್ದಾನೆ ಬಲಿ,ಅಲ್ಲಿಯ ತನಕ ಅಧೋಲೋಕದಲ್ಲಿ ಸಕಲ ವೈಭೋಗದ ನಡುವೆ ಬದುಕಿ ಬಾಳಲಿ ಎಂದು ಆಶೀರ್ವದಿಸಿ ಅಲ್ಲಿ ಬಲಿಯ ಆಸ್ಥಾನದ ದ್ವಾರಪಾಲಕನಾಗಿ ಸ್ವತಃ ತಾನೇ ನಿಲ್ಲುತ್ತಾನೆ ಭಗವಂತ.ಭಕ್ತನೊಬ್ಬನ ಶ್ರೇಷ್ಠತೆಗೆ,ಅವನ ಭಕ್ತಿಗೆ ಮೆಚ್ಚಿ ಭಗವಂತನೂ ಸೇವೆಗೆ ನಿಲ್ಲಬಲ್ಲ ಎಂಬ ಸುಂದರ ಸಂದೇಶವನ್ನು ವಾಮನ ಚರಿತ್ರೆ ನೀಡುತ್ತದೆ.

ಹತ್ತು ಮತ್ತು ಹನ್ನೊಂದನೇ ಸ್ಕಂದಗಳು ಪೂರ್ತಿಯಾಗಿ ಭಗವಾನ್ ಶ್ರೀಕೃಷ್ಣನ ಕಥೆಯನ್ನು ಹೇಳಲು ಮೀಸಲಾಗಿವೆ.ಕೃಷ್ಣನ ಜನನ,ನಂದಗೋಕುಲ-ಬೃಂದಾವನಗಳಲ್ಲಿ ಅವನ ಬಾಲಲೀಲೆಗಳನ್ನು ಬಹಳ ವಿವರವಾಗಿ ವರ್ಣಿಸುತ್ತದೆ ಭಾಗವತ.ಬಾಲಕೃಷ್ಣನ ಲೀಲೆಗಳನ್ನು ಕೇಳದೇ ಬೆಳೆಯುತ್ತಿರುವ ದೌರ್ಭಾಗ್ಯ ಇವತ್ತಿನ ಅನೇಕ ಮಕ್ಕಳದ್ದು.ಕಥೆ ಹೇಳುವಷ್ಟು ವ್ಯವಧಾನ ಅಪ್ಪ-ಅಮ್ಮಂದಿರಿಗಿಲ್ಲ ಈಗ.ಹೇಳಲಿಕ್ಕೆ ಎಲ್ಲರಿಗೂ ಕೃಷ್ಣನ ಕಥೆ ಗೊತ್ತಿರುವುದಿಲ್ಲ.ವಾಸುದೇವನ ಬಾಲ್ಯದ ತುಂಟತನವನ್ನು, ಲೀಲೆಯ ಕಥೆಗಳನ್ನು ಓದುವಾಗ ಕೆಲವು ಕಡೆ ನಾನು ಹೊಟ್ಟೆ ನೋವು ಬರುವಷ್ಟು ನಕ್ಕಿದ್ದೇನೆ. ಲೀಲೆಯೋ ಮಾಯೆಯೋ ಎಂದು ಗೊತ್ತಾಗದೇ ವಿಸ್ಮಿತನಾಗಿದ್ದೇನೆ.ಆದರೆ ನನಗೆ ತುಂಬಾ ಆಪ್ತವಾದದ್ದು ಯಾವ ಬಂಧನಕ್ಕೂ ಅಂಟಿಕೊಳ್ಳದ ಕೃಷ್ಣನ ಜೀವನ.ಎಲ್ಲವೂ ಇದ್ದು,ಎಲ್ಲರ ನಡುವೆಯೇ ಜೀವಿಸಿ,ಯಾರಿಗೂ ಯಾವುದಕ್ಕೂ ಶಾಶ್ವತವಾಗಿ ದಕ್ಕದ ಆತನ Extreme Detachment.ಹುಟ್ಟಿದ ಕ್ಷಣದಿಂದಲೇ ತನಗೆ ಜನ್ಮ ಕೊಟ್ಟ ಅಪ್ಪ-ಅಮ್ಮನಿಂದ ದೂರಾದ.ನಂತರ ತನ್ನ ಬಹಳಷ್ಟು ಬಾಲಲೀಲೆಗಳಿಗೆ ವೇದಿಕೆಯಾದ ನಂದಗೋಕುಲವನ್ನು ಇದ್ದಕ್ಕಿದ್ದಂತೆಯೇ ತ್ಯಜಿಸಿದ.ಸ್ವಲ್ಪ ಸಮಯದ ನಂತರ ಅಕ್ರೂರ ಬಂದು ಕರೆದ ಎಂದು ತನ್ನ ಸಾಕು ತಂದೆ ತಾಯಿಯರು,ಗೆಳೆಯರು,ಗೋವಳರು,ಗೋವುಗಳು,ಗೋಪಿಕಾಸ್ತ್ರೀಯರು,ಬೃಂದಾವನ,ರಾಧೆ ಎಲ್ಲವನ್ನೂ ಏಕಾಏಕಿ ಬಿಟ್ಟು ನಿರ್ಮಮ ಭಾವದಿಂದ ಮಥುರೆಗೆ ಹೋಗಿ ಬಿಟ್ಟ.ಆಮೇಲೆ ಬೃಂದಾವನಕ್ಕೆ ಬರಲೇ ಇಲ್ಲ.ಕಂಸನನ್ನು ಕೊಂದು ಉಗ್ರಸೇನನಿಗೆ ಅಧಿಕಾರ ಕೊಟ್ಟ ಮೇಲೂ ಜರಾಸಂಧನಿಂದ ತಮ್ಮವರನ್ನು ರಕ್ಷಿಸಲು ಒಂದು ದಿನ ಇಡೀ ಮಥುರೆಯನ್ನೇ ಖಾಲಿ ಮಾಡಿಸಿ ದ್ವಾರಕೆಗೆ ಕಳಿಸಿದ.ತಾನು ಗೆದ್ದ ನೆಲ ಎಂಬ ಯಾವ ಮೋಹವನ್ನೂ ಇಟ್ಟುಕೊಳ್ಳದೇ ತಾನೂ ದ್ವಾರಕೆಗೆ ಬಂದ.ಮಹಾಭಾರತ ಯುದ್ಧ ಮುಗಿದು ಪಾಂಡವ ಪ್ರತಿಷ್ಠಾಪನಾಚಾರ್ಯನಾದ ಮೇಲೂ ಅವತಾರದ ಉದ್ದೇಶ ಮುಗಿಯುತ್ತ ಬಂದ ಕಾಲಕ್ಕೆ ತನ್ನವರೇ ಆದ ಯಾದವರು ಅಧರ್ಮಿಗಳಾಗುತ್ತಿದ್ದಾರೆ,ಅವರನ್ನು,ಅವರ ವಂಶವನ್ನು ಮುಂದುವರೆಯಲು ಬಿಟ್ಟರೆ ಭೂಮಿಗೆ ಭಾರವಾಗಿ ಬದುಕುತ್ತಾರೆ ಎಂದು ಪ್ರಭಾಸತೀರ್ಥದಲ್ಲಿ ಪಾನಮತ್ತರಾಗಿ ಯಾದವರು ಬಡಿದಾಡಿಕೊಂಡು ಸತ್ತಾಗಲೂ ಸುಮ್ಮನೇ ನೋಡುತ್ತ ಕುಳಿತ.ತನ್ನ ಬಾಂಧವರು ಎಂಬ ಮೋಹ ಕ್ಷಣ ಮಾತ್ರವೂ ಇರಲಿಲ್ಲ ಮಾಧವನಲ್ಲಿ.ಸಹೋದರಿ ಸಮಾನಳಾದ ದ್ರೌಪದಿಯ ಐದು ಮಕ್ಕಳು ಅಶ್ವತ್ಥಾಮನಿಂದ ಹತರಾದಾಗಲೂ ಎಲ್ಲರೂ ಕಣ್ಣೀರಿನ ಸಾಗರದಲ್ಲಿ ಮುಳುಗೇಳುತ್ತಿದ್ದರೂ ಕೃಷ್ಣನ ಕಣ್ಣಂಚಿನಲ್ಲೂ ಒಂದು ಹನಿ ನೀರಿರಲಿಲ್ಲ.ಯಾವುದು ಆಗಲಿಕ್ಕಿದೆಯೋ ಅದು ಆಗಿಯೇ ತೀರುತ್ತದೆ ಎಂಬ ಭಾವ.ಅದಲ್ಲದೇ ತನ್ನ ಇಡೀ ಅವತಾರದಲ್ಲಿ,ಮಹಾಭಾರತ ಯುದ್ಧದಲ್ಲಿ ವ್ಯಥೆಪಡಲು, ಕಣ್ಣೀರು ಸುರಿಸಲು ಸಾವಿರ ಸನ್ನಿವೇಶ,ಅವಕಾಶಗಳಿದ್ದರೂ ಒಮ್ಮೆಯೂ ದುಃಖಿಸಲಿಲ್ಲ.ಅಧರ್ಮಿಗಳು ಅಂತಾದರೆ ಅವರು ತನ್ನವರೇ ಆಗಿದ್ದರೂ ತಲೆ ತೆಗೆಯಲು ಹಿಂದೆ ಮುಂದೆ ನೋಡಲಿಲ್ಲ.ಹಾಗಾಗಿಯೇ ರಾಜಸೂಯಾಧ್ವರದಂತಹ ಶುಭಕಾರ್ಯದಲ್ಲೂ ಶಿಶುಪಾಲನನ್ನು ವಧಿಸಿದ್ದು.16108 ಜನ ಪತ್ನಿಯರ ಗಂಡನಾಗಿದ್ದರೂ ಯಾರೊಬ್ಬಳಲ್ಲಿಯೂ ಅನುರಕ್ತನಾಗದೇ ಮಾನಸಿಕವಾಗಿ ಬ್ರಹ್ಮಚಾರಿಯಾಗೇ ಉಳಿದ.ಎಲ್ಲದರ ನಡುವೆ ಬದುಕಿದ್ದೂ ಯಾವುದಕ್ಕೂ ಸ್ವಲ್ಪವೂ ಅಂಟಿಕೊಳ್ಳದ ಕೃಷ್ಣನ ಈ Detachment ಬಹಳ ಸೋಜಿಗವಾಗಿ ಕಾಣುತ್ತದೆ.

ಶ್ರೀಕೃಷ್ಣನಂತಹ ಯುದ್ಧತಂತ್ರ ನಿಪುಣ ಈ ಜಗತ್ತಿನಲ್ಲಿ ಬೇರೊಬ್ಬ ಇರಲಿಕ್ಕಿಲ್ಲ.ಜರಾಸಂಧ ಒಟ್ಟು ಹದಿನೆಂಟು ಸಲ ಮಥುರೆಯ ಮೇಲೆ ದಾಳಿ ಮಾಡಿದ್ದ.ಪ್ರತಿಸಲ ಬರುವಾಗಲೂ ಇಪ್ಪತ್ತಮೂರು ಅಕ್ಷೋಹಿಣಿ ಸೈನ್ಯದೊಂದಿಗೆ ದಾಳಿಗೆ ಬರುತ್ತಿದ್ದ.ತನ್ನ ಅನೂಹ್ಯವಾದ ಯುದ್ಧ ತಂತ್ರಗಳ ಮೂಲಕ ಕೃಷ್ಣ, ಬಲರಾಮನ ಜೊತೆ ಮಥುರೆಯ ಇತರ ಸೈನ್ಯವನ್ನು ಕೂಡಿಕೊಂಡು ಜರಾಸಂಧನ ದಿಕ್ಕು ತಪ್ಪಿಸಿ ಅವನ ಅಷ್ಟೂ ಸೈನ್ಯವನ್ನು ನಾಶ ಮಾಡಿ ಕೊನೆಗೆ ಮಾಗಧ ಒಬ್ಬನೇ ಉಳಿಯುವಂತೆ ಮಾಡುತ್ತಿದ್ದ.ಆತ ಒಬ್ಬನೇ ಬೆನ್ನಟ್ಟಿ ಬರುವಾಗಲೂ ಅವನ ಕೈಗೆ ಸಿಗದಂತೆ ತಪ್ಪಿಸಿಕೊಂಡು ಅವನು ಆಯಾಸದಿಂದ ಬಸವಳಿದು ವಾಪಸ್ ಹೋಗುವಂತೆ ಮಾಡುತ್ತಿದ್ದ.ಮತ್ತೆ ಕೆಲವು ಕಾಲದ ನಂತರ ಮಾಗಧ ಇಪ್ಪತ್ತಮೂರು ಅಕ್ಷೋಹಿಣಿ ಸೈನ್ಯದೊಂದಿಗೆ ದಾಳಿ ಮಾಡಿದಾಗಲೂ ಅದೇ ಪುನರಾವರ್ತನೆಯಾಗುತ್ತಿತ್ತು.ಜರಾಸಂಧನ ಸೈನ್ಯ,ಆಯುಧ,ಸಂಪತ್ತು,ಶಕ್ತಿ ಕ್ಷಯವಾಗುತ್ತಿತ್ತು.ಕೃಷ್ಣ-ಬಲರಾಮರು ಮಾತ್ರ ಅವನ ಕೈಗೆ ಸಿಗುತ್ತಿರಲಿಲ್ಲ.ಮಹಾಭಾರತ ಯುದ್ಧದಲ್ಲಿ ಕೌರವರು,ಪಾಂಡವರು ಇಬ್ಬರದ್ದೂ ಸೇರಿಸಿದರೆ ಹದಿನೆಂಟು ಅಕ್ಷೋಹಿಣಿ ಸೈನ್ಯವಾಗುತ್ತದೆ.ಒಂದು ಅಕ್ಷೋಹಿಣಿ ಸೈನ್ಯದಲ್ಲಿ 109350 ಸೈನಿಕರು,65610 ಅಶ್ವದಳ,21870 ರಥಗಳು,21870 ಆನೆಗಳು ಇರುತ್ತಿದ್ದವು.ಅಂತಹ ಇಪ್ಪತ್ತಮೂರು ಅಕ್ಷೋಹಿಣಿ ಸೈನ್ಯವನ್ನು ಪ್ರತಿ ಬಾರಿಯೂ ಕಟ್ಟಿಕೊಂಡು ದಾಳಿ ಮಾಡುತ್ತಿದ್ದ ಜರಾಸಂಧ.ಅಲ್ಲದೇ ಒಮ್ಮೆ ಕಾಲಯವನ ತನ್ನ ಒಂದು ಕೋಟಿಗೂ ಅಧಿಕ ಸೈನಿಕರೊಂದಿಗೆ ದಾಳಿ ಮಾಡುತ್ತಾನೆ.ಅಂತಹ ಬಲಾಢ್ಯರನ್ನು ಹೆಚ್ಚಿನ ಶಸ್ತ್ರಬಲ,ಜನಬಲವಿಲ್ಲದ ತನ್ನ ಸೀಮಿತ ಸಂಖ್ಯೆಯ ಮಥುರೆಯ ಸೇನೆಯೊಂದಿಗೆ ಎದುರಿಸಿ ಸೋಲಿಸಲಿಕ್ಕೆ ಬಹಳ ವಿಶಿಷ್ಟವಾದ ತಂತ್ರ,ಕುಶಲತೆಗಳು ಬೇಕು.ಯಾವ ಸಂದರ್ಭದಲ್ಲಿಯೂ ಸೋಲೊಪ್ಪಿಕೊಳ್ಳದ ದೃಢವಾದ ಮನಸ್ಥಿತಿ ಇರಬೇಕು.ಹಾಗೆ ಯುದ್ಧ ಮಾಡಿ ಮಾಡಿ ಜರಾಸಂಧನ ಕಡೆಯ ಎಲ್ಲ ರಾಕ್ಷಸರನ್ನು ಕೊಂದು ಭೂಭಾರ ಹರಣ ಮಾಡಿ ಮುಂದೆ ವೃದ್ಧಾಪ್ಯದಲ್ಲಿ ಮಾಗಧ ತನ್ನ ಶಕ್ತಿ ಕಳೆದುಕೊಂಡ ಕಾಲಕ್ಕೆ ಮಧ್ಯರಾತ್ರಿಯಲ್ಲಿ ಅವನ ಆಸ್ಥಾನಕ್ಕೇ ಹೋಗಿ ಭೀಮನಿಂದ ಕೊಲ್ಲಿಸುತ್ತಾನೆ ಮಾಧವ.ಒಬ್ಬ ವ್ಯಕ್ತಿಯಾಗಿ ಕೃಷ್ಣ ಇಷ್ಟವಾಗುವುದು ಈ ವಿಭಿನ್ನ ಯುದ್ಧ,ರಾಜಕೀಯ ತಂತ್ರಗಳಿಂದ.

ಸ್ವತಃ ತಾನು ಮಾಡಲಾಗದ್ದನ್ನು ಕೃಷ್ಣ ಎಲ್ಲಿಯೂ ಬೋಧನೆ ಮಾಡಲಿಲ್ಲ.ಯುದ್ಧಭೂಮಿಯಲ್ಲಿ ಭಗವದ್ಗೀತೆಯ ಮೂಲಕ ಭಕ್ತಿಯೋಗ,ಜ್ಞಾನಯೋಗ,ಕರ್ಮಯೋಗ,ಕ್ರಿಯಾಯೋಗ ಇತ್ಯಾದಿ ವಿಷಯಗಳ ಬಗ್ಗೆ ಅರ್ಜುನನಿಗೆ ಹೇಳಿದ್ದನ್ನು ತನ್ನ ಜೀವನದಲ್ಲೇ ಅಳವಡಿಸಿಕೊಂಡು ಪಾಲಿಸಿಕೊಂಡು ಬಂದಿದ್ದ.ಹನ್ನೊಂದನೆ ಸ್ಕಂದದಲ್ಲಿ ಬರುವ ಉದ್ಧವನ ಜೊತೆಗಿನ ಸಂವಾದದಲ್ಲಿ ಸುಮಾರು ವಿಷಯಗಳ ಬಗ್ಗೆ ಉದ್ಧವನಿಗೆ ಬೋಧನೆ ಮಾಡುತ್ತಾನೆ ಕೃಷ್ಣ.ಭೂಮಿಯಲ್ಲಿ ಮಾನವರಾಗಿ ಹುಟ್ಟುವುದು ಏಕೆ,ನಮ್ಮ ಕರ್ತವ್ಯಗಳೇನು,ಯಾವ ರೀತಿ ಸದಾ ಶ್ರಮಜೀವನವನ್ನು ನಡೆಸಬೇಕು,ಭಕ್ತಿಯ ವಿಧಗಳು ಯಾವುವು,ಮೂರ್ತಿ ಪೂಜೆ ಬೇಕೇ ಬೇಡವೇ,ಶುದ್ಧತೆ-ಅಶೌಚಗಳ ಮಹತ್ವವೇನು,ಯೋಗ ಮಾರ್ಗವಲಂಬಿಗಳಾಗಿ ಸಕಲ ಜೀವರಾಶಿಗಳನ್ನೂ ಗೌರವಿಸುತ್ತ ಬದುಕುವುದು ಹೇಗೆ,ಬ್ರಹ್ಮಚಾರಿ ಹೇಗಿರಬೇಕು,ಗೃಹಸ್ಥ,ವಾನಪ್ರಸ್ಥ,ಸನ್ಯಾಸಾಶ್ರಮಗಳನ್ನು ಪಾಲಿಸುವುದು ಹೇಗೆ ಇತ್ಯಾದಿ ವಿಷಯಗಳ ಬಗ್ಗೆ ಸುದೀರ್ಘ ವಿವರಣೆ ನೀಡುತ್ತಾನೆ.ಎಲ್ಲಿಯೂ ತಾನು ತನ್ನ ಹಿಂದಿನ ಅವತಾರಗಳಲ್ಲಿ ಅಥವಾ ಈಗಿನ ಜೀವನದಲ್ಲಿ ಮಾಡದೇ ಇದ್ದದ್ದನ್ನು ಹೇಳುವುದೇ ಇಲ್ಲ.ಭೂಮಿಯಲ್ಲಿ ಬದುಕಿದರೆ ಹೀಗೆ ಬದುಕಬೇಕು ಎಂದು ಸ್ವತಃ ಭಗವಂತ ಮಾನವನಾಗಿ ಬದುಕಿ,ಬಾಳಿದ ಪೂರ್ಣಾವತಾರ ದ್ವಾಪರದ ಶ್ರೀಕೃಷ್ಣ.ಶತಾವಧಾನಿ ಗಣೇಶರು ಆಗಾಗ ಹೇಳುತ್ತಿರುತ್ತಾರೆ, ರಾಮ ಒಂದು ದೊಡ್ಡ ಪರ್ವತ ಇದ್ದ ಹಾಗೆ.ದೂರದಿಂದ ನೋಡಿದರೇ ಎತ್ತರ ಎಷ್ಟು ಅಂತ ಗೊತ್ತಾಗುತ್ತದೆ.ಆದರೆ ಕೃಷ್ಣ ಒಂದು ಶಾಂತವಾದ ಸಮುದ್ರ ಇದ್ದಂತೆ.ಒಳಗೆ ಇಳಿದು ನೋಡಿದರಷ್ಟೇ ಅವನ ಆಳ ಎಂಥದ್ದು ಅಂತ ಗೊತ್ತಾಗುವುದು.

ಕೊನೆಯ ಸ್ಕಂದದಲ್ಲಿ ಕಲಿಯುಗದಲ್ಲಿ ಜನರ ಜೀವನ ಹೇಗಿರಲಿದೆ,ಏನೇನು ಘಟನೆಗಳು ಸಂಭವಿಸಲಿವೆ ಎಂಬ ಪರೀಕ್ಷಿತನ ಪ್ರಶ್ನೆಗೆ ಶುಕಮುನಿಗಳು ಉತ್ತರಿಸುತ್ತಾರೆ.ಅದನ್ನು ಓದಿ ಒಂದು ಕಡೆ ಆಶ್ಚರ್ಯವಾಯಿತು,ಇನ್ನೊಂದು ಕಡೆ ಬೇಜಾರಾಯಿತು.ಚಾಣಕ್ಯ,ಚಂದ್ರಗುಪ್ತ ಮೌರ್ಯರ ವಿವರಣೆಯನ್ನೂ ಭಾಗವತದಲ್ಲಿ ಓದಿ ಆಶ್ಚರ್ಯವಾದರೆ,ಶುಕಮುನಿಗಳು ವಿವರಿಸಿರುವುದಕ್ಕಿಂತಲೂ ಕೆಟ್ಟದಾಗಿ ನಾವು ಕಲಿಯುಗದಲ್ಲಿ ಬದುಕುತ್ತಿರುವುದರ ಬಗ್ಗೆ ಬೇಜಾರಾಯಿತು.ಪರೀಕ್ಷಿತ ಹುಟ್ಟುವುದಕ್ಕಿಂತ ಮೊದಲಿನ ಘಟನೆಗಳು,ಭಗವಂತನ ಬೇರೆ ಬೇರೆ ಅವತಾರಗಳು,ಪರೀಕ್ಷಿತನ ಕಾಲದಲ್ಲಿ ಆದ ಘಟನೆಗಳನ್ನು ಮತ್ತು ಮುಂದೆ ಅವನ ದೇಹಾಂತ್ಯದ ಎಷ್ಟೋ ವರ್ಷಗಳ ನಂತರ ಕಲಿಯುಗದಲ್ಲಿ ನಡೆಯಲಿಕ್ಕಿರುವ ಸಂಗತಿಗಳನ್ನು ಹೀಗೆ ಭೂತ,ವರ್ತಮಾನ,ಭವಿಷ್ಯ ಮೂರೂ ಕಾಲವನ್ನೂ,ಆ ಕಾಲಗಳಲ್ಲಿ ನಡೆದ ನಡೆಯಲಿರುವ ಘಟನೆಗಳನ್ನೂ ಕಥೆಯ ರೂಪದಲ್ಲಿ ಹೇಳುವ ಒಂದು ವಿಶಿಷ್ಟವಾದ ಗ್ರಂಥ ಭಾಗವತ.ಹೇಳುತ್ತಾ ಹೋದರೆ ಬರೆಯುತ್ತಾ ಹೋದರೆ ಇನ್ನೂ ಬಹಳಷ್ಟಿದೆ.ಭಾಗವತವನ್ನು ಓದಿ,ಕೇಳಿ,ಬರೆದು ಮುಗಿಯುವುದಿಲ್ಲ.ಅದನ್ನು ನಾವು ಮುಗಿಸುವುದು ಅಷ್ಟೇ.ಹಾಗಾಗಿ ಬರಹವನ್ನು ಇನ್ನೂ ವಿಸ್ತರಿಸಲು ನಾನು ಅಸಮರ್ಥನಾಗಿದ್ದೇನೆ.

ಕೆಲವರು ಕಥೆಗಾಗಿ ಓದಿದರೆ,ಇನ್ನು ಕೆಲವರು ಕಥೆಗಳ ಹಿಂದಿರುವ ತತ್ವಗಳಿಗಾಗಿ ಭಾಗವತವನ್ನು ಓದುತ್ತಾರೆ.ಮತ್ತೂ ಒಂದಷ್ಟು ಜನ ಭಗವಂತನ ಮೇಲಿನ ಅಪ್ರತಿಮ ಪ್ರೀತಿ,ಭಕ್ತಿಯಿಂದಾಗಿ ಓದುತ್ತಾರೆ.ಯಾವ ಭಾವದಿಂದ ಓದಿದರೂ ನಮ್ಮ ನೆಲದಲ್ಲಿ ರಚಿತವಾದ ಒಂದು ಶ್ರೇಷ್ಠವಾದ ಕಥನವನ್ನು ತಿಳಿಯುವ ಸೌಭಾಗ್ಯ ಪ್ರಾಪ್ತಿಯಾಗುವುದಂತೂ ಖಂಡಿತ.ಇಲ್ಲಿ ನಾನು ಹೇಳಿದ ಅಷ್ಟೂ ಸಂಗತಿಗಳು ಭಾಗವತವನ್ನು ಓದುವಾಗ ನನ್ನ ಗ್ರಹಿಕೆಗೆ ದೊರಕಿದ ಅನುಭವಗಳ ಮೇಲೆ ಆಧಾರಿತವಾಗಿವೆ.ಗ್ರಹಿಕೆಗೆ ದೊರಕಿದ್ದು ಹಿಡಿಯಷ್ಟು,ಇನ್ನೂ ಗ್ರಹಿಸಬೇಕಾಗಿರುವುದು ಬೆಟ್ಟದಷ್ಟು ಎಂಬ ಅರಿವು ಇದೆ.ಹಾಗಾಗಿ ಯಾವುದೇ ಕಥೆ,ಘಟನೆಗಳನ್ನು ಉಲ್ಲೇಖಿಸುವಾಗ ತಿಳಿದೋ ತಿಳಿಯದೆಯೋ ತಪ್ಪು ಮಾಹಿತಿಗಳು ಬಂದಿದ್ದರೂ ಅದನ್ನು ಅಕ್ಷರಬ್ರಹ್ಮನಾದ ಭಗವಂತ ನನ್ನ ಮೇಲೆ ಪ್ರೀತಿಯಿಟ್ಟು ಮನ್ನಿಸುತ್ತಾನೆ ಎಂಬ ನಂಬಿಕೆಯೊಂದಿಗೆ ಶ್ರೀಹರಿಯ ಪ್ರೀತಿ,ದಯೆ ನಮ್ಮೆಲ್ಲರನ್ನೂ ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇನೆ.