ಪಾಂಡವರು ಹನ್ನೆರಡು ವರ್ಷ ವನವಾಸ ಒಂದು ವರ್ಷ ಅಜ್ಞಾತವಾಸ ಮುಗಿಸಿರುತ್ತಾರೆ.ಸಂಜಯ ರಾಯಭಾರದಲ್ಲಿ ಮಹತ್ವದ ನಿರ್ಧಾರಕ್ಕೆ ಬರಲು ಸಾಧ್ಯವಾಗುವುದಿಲ್ಲ.ದ್ಯೂತದಲ್ಲಿ ಸೋತಿದ್ದಕ್ಕಾಗಿ ಕರಾರಿನಂತೆ ಪಾಂಡವರು ವನವಾಸ,ಅಜ್ಞಾತವಾಸಗಳನ್ನು ಮುಗಿಸಿದ್ದಾರೆ.ಹಾಗಾಗಿ ರಾಜ್ಯವಾಳುವುದಕ್ಕೆ ಅವರೀಗ ಅರ್ಹರಾಗಿರುವ ಕಾರಣ ಅವರ ಪಾಲಿನ ರಾಜ್ಯವನ್ನು ಕೌರವರು ಬಿಟ್ಟುಕೊಡಬೇಕು,ಯುದ್ಧ ಮಾಡಲು ಪಾಂಡವರಿಗೂ ಮನಸ್ಸಿಲ್ಲ ಎಂದು ಹೇಳಿ ಸಂಧಾನ ಮಾಡಲು ಪಾಂಡವರ ರಾಯಭಾರಿಯಾಗಿ ಶ್ರೀಕೃಷ್ಣ ಹಸ್ತಿನಾವತಿಗೆ ಬರುತ್ತಾನೆ.

ಅರ್ಧರಾಜ್ಯವನ್ನು ಪಾಂಡವರಿಗೆ ಬಿಟ್ಟುಕೊಡು.ಅದಾಗದಿದ್ದರೆ ಕುಶಸ್ಥಳ,ವೃಕಸ್ಥಳ,ವಾರಣಾವತ,ಶಕ್ರಪ್ರಸ್ಥ ಮತ್ತು ಆವಂತಿನಗರಗಳೆಂಬ ಐದು ಗ್ರಾಮಗಳನ್ನಾದರೂ ಬಿಟ್ಟುಕೊಡು ಪಾಂಡವರು ಅಲ್ಲಿ ನೆಮ್ಮದಿಯಿಂದ ಬದುಕುತ್ತಾರೆ ಎಂದು ಕೃಷ್ಣ ನಾನಾ ರೀತಿಯಲ್ಲಿ ಹಲವು ತಂತ್ರಗಳ ಮೂಲಕ,ತನ್ನಮಾತಿನ ಚಾಕಚಕ್ಯತೆಯ ಮೂಲಕ ಕೌರವನ ಮನವೊಲಿಸಲು ನೋಡುತ್ತಾನೆ.ಯಾವುದಕ್ಕೂ ದುರ್ಯೋಧನ ಬಗ್ಗುವುದಿಲ್ಲ.ಸಂಧಾನಕಾರನಾಗಿ ಬಂದ ಶ್ರೀಹರಿಯನ್ನೇ ಕಟ್ಟಲು ಯತ್ನಿಸಿ ತಾನೇ ಭ್ರಮೆಗೊಳಗಾಗಿ ಸಿಂಹಾಸನ ಸಹಿತವಾಗಿ ಕೆಳಗೆ ಉರುಳುತ್ತಾನೆ.ಹಸುವಿನ ಒಂದು ಹೆಜ್ಜೆ ಹಿಡಿಯಬಹುದಾದಷ್ಟು ತುಂಡು ಭೂಮಿಯೂ ಪಾಂಡವರಿಗೆ ಸಿಗುವುದಿಲ್ಲ.ಅವರಿಗೆ ಬೇಕಾದರೆ ಯುದ್ಧ ಮಾಡಿ ರಾಜ್ಯ ಗೆಲ್ಲಲಿ ಎಂದು ಖಡಾಖಂಡಿತವಾಗಿ ನುಡಿದು ರಣವೀಳ್ಯ ಕೊಡುತ್ತಾನೆ.

ಸಂಧಾನಕ್ಕೆ ಒಲ್ಲೆ,ಸಂಗ್ರಾಮವೇ ಸಿದ್ಧ ಎಂದ ದುರ್ಯೋಧನನಿಂದ ಯುದ್ಧಕ್ಕೆ ಆಹ್ವಾನ ಪಡೆದ ನಂತರ ಶ್ರೀಕೃಷ್ಣ ಹಸ್ತಿನಾವತಿಯ ರಾಜಸಭೆಯಲ್ಲಿ ನೆರೆದಿರುವವರನ್ನು ಉದ್ದೇಶಿಸಿ ಒಂದಷ್ಟು ಮಾತುಗಳನ್ನಾಡುತ್ತಾನೆ. “ತಪ್ಪು ಎಂದು ಗೊತ್ತಿದ್ದೂ ತಪ್ಪನ್ನೇ ಮಾಡಲು ಹೊರಟಿದ್ದಾನೆ ದುರ್ಯೋಧನ.ಇಲ್ಲಿ ನೆರದಿರುವ ಎಲ್ಲ ಹಿರಿಯರು,ಬುದ್ಧಿಜೀವಿಗಳ ಮುಂದೆಯೇ ಸಂಧಾನ ಪ್ರಕ್ರಿಯೆ ನಡೆಯಿತು.ಸಾಮದಿಂದಲೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಣ ಎಂದು ಎಷ್ಟು ಹೇಳಿದರೂ ಕೇಳದ ಸುಯೋಧನ ದಂಡವನ್ನೇ ಹಿಡಿಯಲು ಬಯಸಿದ್ದಾನೆ.ಅದರ ಘೋರ ಪರಿಣಾಮಗಳ ಅರಿವಿದ್ದೂ ಹಿಂದಡಿಯಿಡುತ್ತಿಲ್ಲ.ಯುದ್ಧದಲ್ಲಿ ರಕ್ತದೋಕುಳಿಯಾಗುವುದು ನಿಶ್ಚಿತ.ನೂರು ಕೌರವರು ಸೇರಿದಂತೆ ಅವರ ಪಕ್ಷದಲ್ಲಿ ಯುದ್ಧ ಮಾಡುವ ಎಲ್ಲರನ್ನೂ ಅವರು ಎಷ್ಟೇ ಒಳ್ಳೆಯವರಾಗಿದ್ದರೂ ಕೊಲ್ಲಿಸಬೇಕಾದ್ದು ನನಗೆ ಅನಿವಾರ್ಯ.ಧರ್ಮ ಪಾಂಡವರ ಕಡೆ ಇರುವುದರಿಂದ ಇದು ಧರ್ಮಯುದ್ಧವಾದ್ದರಿಂದ ಧರ್ಮವೇ ಗೆಲ್ಲಬೇಕು.ಹಾಗಾಗಿ ಗೆಲುವು ಪಾಂಡವರದ್ದೇ.ಕೌರವರ ಕಡೆಯವರು ಸಮೂಲ ನಾಶವಾಗುವುದರಲ್ಲಿ ಅನುಮಾನವಿಲ್ಲ.ಆಮೇಲೆ ಪಾಂಡವರನ್ನು ವಿಶೇಷವಾಗಿ ನನ್ನನ್ನು ದೂಷಿಸುವಂತಿಲ್ಲ.ದೇವರೇ ಮುಂದೆ ನಿಂತು ಯುದ್ಧ ಮಾಡಿಸಿದ,ಅಮಾಯಕ ಸೇನಾನಿಗಳು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಹತರಾಗುವಾಗಲೂ ನೋಡುತ್ತಾ ಸುಮ್ಮನಿದ್ದ ಎನ್ನುವಂತಿಲ್ಲ.ಏಕೆಂದರೆ ದುರ್ಯೋಧನನಿಗೆ,ಕೌರವರಿಗೆ ಬದಲಾಗಲು,ನ್ಯಾಯಮಾರ್ಗದಲ್ಲಿ ನಡೆದು ಧಾರ್ಮಿಕರಾಗಲು ಬೇಕಾದಷ್ಟು ಸಲ ಅವಕಾಶ ಕೊಟ್ಟಿದ್ದೇನೆ.ಆದರೂ ತಿದ್ದಿಕೊಳ್ಳದೇ ಪಾಂಡವದ್ವೇಷವನ್ನೇ ಉಸಿರಾಗಿಸಿಕೊಂಡು ಬದುಕಿದ್ದಾರೆ.ಧೃತರಾಷ್ಟ್ರನ ಹೊರಗಿನ ಕಣ್ಣಷ್ಟೇ ಕುರುಡಾಗಿದೆ,ದುರ್ಯೋಧನನ ಹೊರಗಿನ ಅಕ್ಷಿಗಳು ಮತ್ತು ಹೃದಯದ ಕಣ್ಣೂ ದ್ವೇಷದಲ್ಲಿ ಕುರುಡಾಗಿದೆ.ಯಾರ ಮಾತನ್ನೂ ಕೇಳದೇ ಆತ ಸಾಯಲಿಕ್ಕೆಂದೇ ಹೊರಟಿದ್ದಾನೆ.ಅವನಿಂದಾಗಿ ಅವನನ್ನೇ ನಂಬಿಕೊಂಡಿರುವವರೂ ನೋವುಣ್ಣಬೇಕಾಗುತ್ತದೆ.ಈ ಎಲ್ಲ ಪರಿಣಾಮಗಳಿಗೆ ಆಮೇಲೆ ನನ್ನನ್ನು ದೂಷಿಸಬೇಡಿ.” ಎನ್ನುತ್ತಾನೆ ಮಾಧವ. ಇದನ್ನು ಕವಿ ದೇವಿದಾಸ ವಿರಚಿತ ‘ಶ್ರೀಕೃಷ್ಣ ಸಂಧಾನ’ ಯಕ್ಷಗಾನ ಪ್ರಸಂಗದಲ್ಲಿ “ಮರಣವಂ ಬಯಸಿರ್ಪನೀ ಖಳಂ ಮಗುಳೆನ್ನ ದೂರದಿರಿ” ಎಂದು ಕೃಷ್ಣನಿಂದ ಹೇಳಿಸಿದ್ದಾನೆ ಕವಿ.

ಇದನ್ನೆಲ್ಲ ಏಕೆ ಹೇಳಬೇಕಾಯಿತೆಂದರೆ ಕೊರೋನ ಮೊದಲನೇ ಅಲೆ ಮುಗಿದು ಜನಜೀವನ ಸಾಮಾನ್ಯ ಹಂತಕ್ಕೆ ಬಂದು ಮುಟ್ಟಿದ ಕಾಲದಲ್ಲೇ ಅನೇಕ ಆರೋಗ್ಯ ತಜ್ಞರು,ಸಲಹೆಗಾರರು ಕೇಂದ್ರ ಸರ್ಕಾರಕ್ಕೆ,ರಾಜ್ಯ ಸರ್ಕಾರಗಳಿಗೆ ಹಲವು ಬಾರಿ ಎಚ್ಚರಿಕೆ ಕೊಟ್ಟು ಎರಡನೇ ಅಲೆಯಲ್ಲಿ ಕೋವಿಡ್ ಭೀಕರವಾಗಿ ಹರಡಲಿದೆ.ಅದಕ್ಕೆ ಬೇಕಾದ ಸೂಕ್ತ ತಯಾರಿಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಳ್ಳಬೇಕು.ಆಸ್ಪತ್ರೆಗಳಲ್ಲಿ ಬೆಡ್,ಆಕ್ಸಿಜನ್,ಜೀವರಕ್ಷಕ ಔಷಧಿಗಳು,ಆರೋಗ್ಯ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು.ವ್ಯಾಕ್ಸೀನ್ ಉತ್ಪಾದನೆ ಹೆಚ್ಚಿಸಿ ಅದು ಆದಷ್ಟು ಬೇಗ ಎಲ್ಲ ಜನರಿಗೆ ಸಿಗಬೇಕು.ಅವಶ್ಯಕತೆ ಬಿದ್ದರೆ ಸೂಕ್ತ ಸಮಯದಲ್ಲಿ ಸಂಪೂರ್ಣ ಲಾಕ್ಡೌನ್ ಮಾಡಲು ಹಿಂಜರಿಯಬಾರದು.ಎಚ್ಚರಿಕೆಯನ್ನು ನಿರ್ಲಕ್ಷಿಸಿದರೆ ಪರಿಣಾಮ ಭೀಕರವಾಗಬಹುದು ಎಂಬ ಎಲ್ಲ ಮಾಹಿತಿಯನ್ನೂ ಕೊಟ್ಟಿದ್ದರು.ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಜ್ಞರ ಮಾತನ್ನು ಅವತ್ತು ಕಿವಿಗೆ ಹಾಕಿಕೊಳ್ಳಲಿಲ್ಲ.ಪರಿಣಾಮ ಇದ್ದಕ್ಕಿಂದ್ದಂತೆ 2021ರ ಫೆಬ್ರವರಿ ಮಾರ್ಚ್ ಹೊತ್ತಿಗೆ ದೇಶಕ್ಕೆ ಅಪ್ಪಳಿಸಿದ ಕೋವಿಡ್ ಎರಡನೇ ಅಲೆ ಸಾವಿರಾರು ಜೀವಗಳನ್ನು ಬಲಿ ಪಡೆಯಿತು.ಎಲ್ಲೆಡೆ ಆಸ್ಪತ್ರೆಗಳಲ್ಲಿ ಬೆಡ್,ಆಕ್ಸಿಜನ್ ಕೊರತೆ,ಜೀವರಕ್ಷಕ ಔಷಧಿಗಳ ಕೊರತೆ ಉಂಟಾಯಿತು.ದೇಶದ ಎಲ್ಲ ಆರೋಗ್ಯ ತಜ್ಞರು,ಸಲಹೆಗಾರರು ಸರ್ಕಾರಗಳ ಕಡೆ ಬೆರಳು ತೋರಿಸಿ ಆಡಳಿತಗಾರರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು.ನಾವೆಲ್ಲ ಅವತ್ತೇ ಎಲ್ಲ ರೀತಿಯ ಎಚ್ಚರಿಕೆಯನ್ನೂ ಕೊಟ್ಟಿದ್ದೇವೆ.ನೀವು ಕಿವಿಗೆ ಹಾಕಿಕೊಳ್ಳಲಿಲ್ಲ.ಈಗ ನಮ್ಮನ್ನು ದೂಷಿಸಬೇಡಿ ಎಂದರು.ಎರಡನೇ ಅಲೆ ಕಮ್ಮಿ ಆದ ಕೆಲವು ತಿಂಗಳುಗಳ ನಂತರ ಮೂರನೇ ಅಲೆಯಲ್ಲಿ ಕೋವಿಡ್ ಮಕ್ಕಳನ್ನು ಅಟ್ಯಾಕ್ ಮಾಡಬಹುದು.ಹಾಗಾಗಿ ಮಕ್ಕಳ ಚಿಕಿತ್ಸೆಗೆ ಬೇಕಾದ ವಿಶೇಷ ಸೌಲಭ್ಯಗಳೆಲ್ಲ ಲಭ್ಯವಾಗುವಂತೆ ಈಗಿನಿಂದಲೇ ಕಾರ್ಯಪ್ರವರ್ತರಾಗಿ, ಇಲ್ಲವಾದರೆ ಮೂರನೇ ಅಲೆಯಲ್ಲಿ ಮಕ್ಕಳ ಮಾರಣಹೋಮ ಸಂಭವಿಸಬಹುದು ಎಂದಿದ್ದಾರೆ ತಜ್ಞರು.ಇದನ್ನು ಕೇಳಿಸಿಕೊಳ್ಳದೆ ಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೆ ಪರಿಣಾಮ ಭೀಕರವಾದಾಗ ನಮ್ಮನ್ನು ದೂಷಿಸಬೇಡಿ ಎಂದು “ಮರಣವಂ ಬಯಸಿರ್ಪನೀ ಖಳಂ ಮಗುಳೆನ್ನ ದೂರದಿರಿ” ಎಂಬ ಭಾಷೆಯಲ್ಲಿ ಸರ್ಕಾರಕ್ಕೆ ಹೇಳಿದ್ದಾರೆ.

ಕೃಷ್ಣನ ಅಂದಿನ ಮಾತುಗಳನ್ನು ಈಗಿನ ಕಾಲಕ್ಕೂ ಅನ್ವಯಿಸಬಹುದು.ಎಷ್ಟೋ ಸಲ ನಮ್ಮ ಸಂಬಂಧಿಕರು,ಆತ್ಮೀಯರು,ಸ್ನೇಹಿತರು ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪು ಕೆಲಸಗಳನ್ನು ಮಾಡುತ್ತಾರೆ,ತಪ್ಪು ಹಾದಿಯಲ್ಲಿ ತುಳಿಯುತ್ತಾರೆ.ಅದನ್ನು ನೋಡಿ ಕೆಲವು ಹಿರಿಯರು ಅಥವಾ ಅವರ ಆತ್ಮೀಯರು,ಪ್ರಾಣಸ್ನೇಹಿತರು ಅವರನ್ನು ಎಚ್ಚರಿಸುವ ಕೆಲಸ ಮಾಡುತ್ತಾರೆ.ಹೀಗೇ ಮುಂದುವರಿದರೆ ಮುಂದೆ ಕಷ್ಟವಾದೀತು,ಮಾಡಿದ ಕೃತ್ಯಗಳಿಗೆ ಪಶ್ಚಾತ್ತಾಪ ಪಡಬೇಕಾಗಬಹುದು ಹಾಗಾಗಿ ನಮ್ಮ ಮಾತನ್ನು ಕೇಳಿ ಎಂದು ಪದೇ ಪದೇ ಎಚ್ಚರಿಕೆ ಕೊಡುತ್ತಾರೆ.ಆದರೂ ಕೆಲವರು ಕೇಳಿಸಿಕೊಳ್ಳದೆ ಕೆಟ್ಟದ್ದನ್ನೇ ಮಾಡಿ,ಅಧರ್ಮಿಗಳಾಗೇ ಬದುಕಿ,ಕೆಟ್ಟ ಹಾದಿಯಲ್ಲೇ ನಡೆದು ತಮ್ಮ ಕರ್ಮಕ್ಕನುಗುಣವಾಗಿ ಫಲವನ್ನು ಅನುಭವಿಸುವ ಕಾಲಕ್ಕೆ ಅವರಿಗೆ ಜ್ಞಾನೋದಯವಾಗುತ್ತದೆ.ಆಗ ತಮ್ಮ ಆತ್ಮೀಯರ ಹತ್ತಿರ ಬಂದು “ನೀವಾದರೂ ಅವತ್ತು ನಮ್ಮನ್ನು ನಿಲ್ಲಿಸಿ ಎಚ್ಚರಿಸಿದ್ದರೆ ಇವತ್ತು ನನಗೆ ಹೀಗಾಗುತ್ತಿರಲಿಲ್ಲ” ಎಂದು ಹೇಳುವವರಿದ್ದಾರೆ. “ಮನೆಯ ಹಿರಿಯರು ನೀವು,ನಿಮ್ಮ ಮಕ್ಕಳು ತಪ್ಪು ಹಾದಿ ಹಿಡಿದಾಗ ಅವತ್ತೇ ಎಚ್ಚರಿಸಬೇಕಿತ್ತು,ಇವತ್ತು ಅವರು ಹೀಗಾಗುವುದಕ್ಕೆ ನೀವೂ ಒಂದು ರೀತಿಯಲ್ಲಿ ಕಾರಣರೇ” ಎಂದು ಕಮೆಂಟ್ ಮಾಡುವ ಮೂರನೇ ವ್ಯಕ್ತಿಗಳೂ ಇದ್ದಾರೆ. ಅವರೆಲ್ಲರಿಗೂ ಕೊಡಬೇಕಾದ ಉತ್ತರವೊಂದೇ.. “ಮರಣವಂ ಬಯಸಿರ್ಪನೀ ಖಳಂ ಮಗುಳೆನ್ನ ದೂರದಿರಿ..”

ಜಾರುವ ಹಾದಿಯಲ್ಲಿ,ತಪ್ಪು ಹಾದಿಯಲ್ಲಿ ಹೆಜ್ಜೆ ಇಟ್ಟವರನ್ನು ಒಮ್ಮೆ ಎಚ್ಚರಿಸಬಹುದು.ಕೆಟ್ಟ ಹಾದಿ ತುಳಿದು ಜಾರಿ ಬಿದ್ದರೆ ಒಮ್ಮೆ ಕೈ ಹಿಡಿದು ಅವರನ್ನು ಮೇಲೆತ್ತುವ ಪ್ರಯತ್ನ ಮಾಡಬಹುದು.ಆದರೆ ಕೈ ಹಿಡಿದು ಮೇಲೆತ್ತಲು ಬಂದವರನ್ನೇ ಅವರು ಎಳೆದು ಜಾರಿಸಿ ಬೀಳಿಸಲು ಯತ್ನಿಸಿದರೆ ಅಂಥವರನ್ನು ಅನಿವಾರ್ಯವಾಗಿ ಕೈಬಿಡಬೇಕಾಗುತ್ತದೆ.ಅವರು ನಮಗೆ ತೀರಾ ಬೇಕಾದ ಆತ್ಮೀಯರಾದರೆ ಅವರ ಪರಿಸ್ಥಿತಿಗೆ ಮರುಗುವ ದುರವಸ್ಥೆ ನಮ್ಮದಾಗುತ್ತದೆ ಅಷ್ಟೇ..

ಚಿತ್ರಕೃಪೆ: ಅಂತರ್ಜಾಲ