ಹಲವು ಯುಗಗಳು ಕಳೆದು, ಮಹಾಯುಗಗಳೂ ಕಳೆದು, ಅನೇಕ ಮನ್ವಂತರಗಳು ಉರುಳಿದ ಮೇಲೆ ಕಲ್ಪದ ಅಂತ್ಯದಲ್ಲಿ ಸಂಭವಿಸುವ ಪ್ರಳಯದಲ್ಲಿ ಭಗವಂತ ಶ್ರೀಹರಿ ಯೋಗನಿದ್ರೆಯಲ್ಲಿರುತ್ತಾನಂತೆ. ಆಗ ಮಾಯೆ ಯೋಗನಿದ್ರೆಯಾಗಿ ಅವನನ್ನು ಆವರಿಸುತ್ತಾಳಂತೆ. ಮುಂದೆ ಅವನಿಗೆ ಎಚ್ಚರವಾದ ಮೇಲೆಯೇ ಸೃಷ್ಟಿ ಕ್ರಿಯೆ ಹೊಸದಾಗಿ ಶುರುವಾಗುವುದಂತೆ. ಶ್ರೀಹರಿ ಮಲಗಿದ್ದ ಕಾಲದಲ್ಲೂ ಅವಳು ಜಾಗೃತಾವಸ್ಥೆಯಲ್ಲಿಯೇ ಇರುತ್ತಾಳೆ. ಕ್ಷೀರಸಾಗರದ ಮಧ್ಯದಲ್ಲಿ ಶೇಷನ ಮೇಲೆ ನಾರಾಯಣ ಲಕ್ಷ್ಮೀಸಹಿತನಾಗಿ ರಂಜಿಸುವಾಗ ಅವನ ಪಕ್ಕದಲ್ಲೇ ಇರುತ್ತಾಳೆ ಲಕ್ಷ್ಮಿ ಸದಾ ಜಾಗೃತಳಾಗಿ. ಭಗವಂತನ ಸುಷುಪ್ತಿಯಲ್ಲಿಯೂ ಅವಳು ಜಾಗೃತಳೇ ಮಾಯೆಯ ರೂಪದಲ್ಲಿ. ಪ್ರಳಯದಲ್ಲಿ ಜಗತ್ತಿನಲ್ಲಿ ಏನೂ ಇಲ್ಲದ ಸಮಯದಲ್ಲಿ ಸ್ವತಃ ಭಗವಂತನೇ ನಿದ್ರೆಗೆ ಜಾರಿದಾಗಲೂ ಅವಳು ಅವನನ್ನು ಆವರಿಸಿ ತಾನೊಬ್ಬಳೇ ಎಚ್ಚರವಾಗಿರುತ್ತಾಳೆ.‌ ಅವಳು ಆದಿಮಾಯೆ. ಜಗನ್ಮಾತೆ. ಶಕ್ತಿ ಸ್ವರೂಪಿಣಿ.

ದೇವೇಂದ್ರ ತ್ರಿಲೋಕಾಧಿಪತಿ. ಇಂದ್ರಿಯಾಭಿಮಾನಿ ದೇವತೆಯಾಗಿ ಜೀವಿಗಳ emotions, actions, thinking ಎಲ್ಲವುಗಳ ಮೇಲೆ ಪ್ರಭಾವ ಬೀರುವವನು.‌ ಅಂಥ ಇಂದ್ರ ದಿನವೂ ಭೂಲೋಕದ ಕಶ್ಯಪಾಶ್ರಮಕ್ಕೆ ದ್ವಾದಶಾದಿತ್ಯರೊಂದಿಗೆ ಬಂದು ತನ್ನಮ್ಮ‌ ಅದಿತಿ ದೇವಿಯ ಪಾದ ಹಿಡಿದು ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾನೆ.  ಲೋಕದ ನಿಯಂತ್ರಣಕ್ಕಾಗಿ ತ್ರಿಮೂರ್ತಿಗಳಿಂದ ನೇಮಿಸಲ್ಪಟ್ಟವನು ತಾನು ಎಂಬ ಹಮ್ಮು ಇಂದ್ರನಲ್ಲಿದ್ದರೂ ಅಮ್ಮನ ಮಮತೆಗಾಗಿ ಹಾತೊರೆದು ಅದಿತಿಯ ಮಡಿಲ ಕಂದಮ್ಮನಾಗುತ್ತಾನೆ. ಆಕೆ ಕೈತುತ್ತುಣ್ಣಿಸುವ ಕಾಲಕ್ಕೆ ಅದರ ರುಚಿಯ ಮುಂದೆ, ಅನ್ನದ ಹಿಂದಿರುವ ಮಾತೆಯ ಪ್ರೀತಿ,ಮಮತೆಯ ಹಿಂದೆ ದೇವಲೋಕದ ಅಮೃತ ಏನೂ ಅಲ್ಲ ಅನ್ನಿಸುತ್ತದೇನೋ ಅವನಿಗೆ. ಅಮ್ಮ ಅಂದರೆ ಹಾಗೆಯೇ. ಅವಳ ಮಡಿಲು ಜಗತ್ತಿನ ಅತ್ಯಂತ ಸುರಕ್ಷಿತ ಪ್ರದೇಶ ಅನ್ನಿಸುತ್ತದೆ ಮಗುವಿಗೆ. ಸ್ತನ್ಯದ ರುಚಿಯ ಮುಂದೆ ಬೇರೆ ಯಾವುದೂ ಜಿಹ್ವೆಗೆ ಆಪ್ತವಾಗುವುದೂ ಇಲ್ಲ. ಏಕೆಂದರೆ ಅವಳು ಮಾತೆ. ಜೀವಪ್ರದಾಯಿನಿ. ಭೂಮಿಯಲ್ಲಿ ಹೊಸ ಜೀವವನ್ನು ಸೃಷ್ಟಿಸುವ ಸಾಮರ್ಥ್ಯವುಳ್ಳವಳು ಅವಳು ಮಾತ್ರ. ಅವಳು ಹೆಣ್ಣು.

ಬಾಲಕೃಷ್ಣ ಬಾಯಿ ತೆರೆದಾಗ ಯಶೋಧೆಗಷ್ಟೇ ಏಕೆ ಬ್ರಹ್ಮಾಂಡ ಕಂಡಿತು. ನಂದಗೋಪನಿಗೋ ಬಲಭದ್ರನಿಗೋ ಅಥವಾ ಇನ್ಯಾರಿಗೋ ಯಾಕೆ ಕೃಷ್ಣ ಬ್ರಹ್ಮಾಂಡ ತೋರಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಸರಳ. ಪ್ರಬಲವಾದ ಮಾತೃತ್ವದ ಶಕ್ತಿಗಷ್ಟೇ, ಜಗತ್ತಿನ ಅತ್ಯಂತ ಶಕ್ತಿಶಾಲಿ ಜೀವವಾದ ಹೆಣ್ಣಿಗಷ್ಟೇ ಅವಳು ಕೇಳದೆಯೇ ತನ್ನ ವಿಶ್ವರೂಪ ದರ್ಶನವನ್ನು ಮಾಡಿಸಬೇಕು ಅನ್ನಿಸಿತೇನೋ ಭಗವಂತನಿಗೆ. ಬಾಯೊಳಗೆ ಜಗತ್ತು ಕಂಡಿತು. ಸೃಷ್ಟಿ, ಸ್ಥಿತಿ, ಲಯಗಳೆಲ್ಲ ಏಕಕಾಲಕ್ಕೆ ಗೋಚರಿಸಿದವು. ಪ್ರಳಯವೂ ಕಂಡಿತು. ಆಗ ಆದಿಮಾಯೆಯ ರೂಪದಲ್ಲಿ ಜಾಗೃತವಾಗಿರುವ ಜಗನ್ಮಾತೆಯೂ ಕಂಡಳೇನೋ ಯಶೋಧೆಗೆ. ಬಾಲಕೃಷ್ಣ ಮಾತೃತ್ವದ ಶಕ್ತಿಗೆ ತಲೆಬಾಗಿದ್ದ. ಗೋಕುಲದ ಗೋಪಿಕೆಯರನ್ನೆಲ್ಲ ಮಹಾಮಾತೆಯರನ್ನಾಗಿಸಿಬಿಟ್ಟ. ಎಲ್ಲರೂ ಕೃಷ್ಣನಿಗೆ ಹಾಲೂಡಿಸಲು ಬರುವವರೇ. ಅವರೆಲ್ಲರ ಮನೆಯ ಬೆಣ್ಣೆಯನ್ನು ತುಂಟತನದ ಮೂಲಕ ಕದ್ದು ತಿಂದಾಗಲೇ ಮಾತೃತ್ವದ ಸ್ಥಾಯೀಭಾವ ಸಾರ್ಥಕವಾಗುವುದು ಅಂತ ಅನ್ನಿಸಿತೋ ಏನೋ ಭಗವಂತನಿಗೆ.

ಭಗವಂತ ತನ್ನ ಅವತಾರ ಲೀಲೆಗಳನ್ನು ತೋರುವಾಗಲೂ ಅವಳು ಇರಲೇಬೇಕು‌. ಅವನು ರಾಮನಾದಾಗ ಅವಳು ಸೀತೆಯಾಗುತ್ತಾಳೆ, ಕೃಷ್ಣನಾದಾಗ ರುಕ್ಮಿಣಿಯಾಗುತ್ತಾಳೆ. ಅದಷ್ಟಕ್ಕೇ ಸೀಮಿತವಾಗದೇ ಅವನನ್ನೂ ಮೀರಿ ಬೆಳೆಯುತ್ತಾಳೆ. ಯೋಗಮಾಯೆಯ ರೂಪದಲ್ಲಿ ಅವತರಿಸಿ ಕಂಸನ ಅರಮನೆಯ ಕಾವಲುಗಾರರನ್ನೆಲ್ಲ ನಿದ್ದೆಗೆ ದೂಡುತ್ತಾಳೆ. ಭೋರ್ಗರೆಯುವ ಯಮುನೆಯ ಹರಿವನ್ನು ನಿಯಂತ್ರಿಸುತ್ತಾಳೆ. ಒಟ್ಟಿನಲ್ಲಿ ಅವಳಿಲ್ಲದೇ ಅವನು ಅಪೂರ್ಣ. ಹಾಗಾಗಿಯೇ ಅವನು ಯಾವತ್ತೂ ಪತ್ನಿಯನ್ನು ತನ್ನ ಹೃದಯದಲ್ಲೇ ಇರಿಸಿಕೊಂಡು ಲಕ್ಷ್ಮೀಸಹಿತನಾದ ಲಕ್ಷ್ಮೀನಾರಾಯಣ.

ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಮಕ್ಕಳಿಗೆ ಏನಾದರೂ ಕೆಟ್ಟದ್ದು ಸಂಭವಿಸುತ್ತದೆ ಅಂದಾಗ, ಅದು ಆಗುವುದಕ್ಕೂ ಮೊದಲೇ ಅಮ್ಮನಿಗೆ ಗೊತ್ತಾಗುತ್ತದೆ. ಹೊಟ್ಟೆಯಲ್ಲಿ ಎಂಥದೋ ಸಂಕಟ. ಹೃದಯ ಬಡಿತದಲ್ಲಿ ಏರಿಳಿತ. Something is wrong ಎನ್ನುವ ಆ ಮುನ್ಸೂಚನೆ ಅಮ್ಮನಿಗಷ್ಟೇ ಏಕೆ ಗೊತ್ತಾಗುತ್ತದೆ. ಆ ವೈಬ್ರೇಷನ್’ಗಳು ತಂದೆಗೆ ಏಕೆ ಗೋಚರಿಸುವುದಿಲ್ಲ. ಇದಕ್ಕೆಲ್ಲ ವಿಜ್ಞಾನದಲ್ಲಿ ಉತ್ತರವಿಲ್ಲವೇನೋ. ಕರುಳು ಬಳ್ಳಿ ತುಂಡರಿಸಲ್ಪಟ್ಟ ನಂತರವೂ ಅಮ್ಮ ಮತ್ತು ಮಕ್ಕಳ ಮಧ್ಯೆ ಯಾವುದೋ ಒಂದು ಅಗೋಚರ ಜೀವತಂತು ಉಳಿಯುತ್ತದಾ, ಅದು ಎಲ್ಲ ಕಾಲಕ್ಕೂ ಮಾತೃತ್ವದ ಹಿರಿಮೆಯನ್ನು ಎತ್ತಿ ಹಿಡಿದು ಮಕ್ಕಳ ಒಳಿತಿಗಾಗಿ ಅಮ್ಮ ಸದಾ ಕಾಲ ಹಂಬಲಿಸುವಂತೆ ಮಾಡುತ್ತದಾ ಗೊತ್ತಿಲ್ಲ.‌ ಆದರೆ ಮಾತೆಯೊಳಗೆ ಅಡಕವಾಗಿರುವ ಆ ಅನೂಹ್ಯ, ಅಗೋಚರ ಶಕ್ತಿ ಮಕ್ಕಳ ಒಳಿತಿಗಾಗಿ ಅಮ್ಮನನ್ನು ಏನು ಬೇಕಾದರೂ ಮಾಡಲು ಪ್ರೇರೇಪಿಸುತ್ತದೆ. ಅದಕ್ಕಾಗಿ ಯಾವ ರಿಸ್ಕ್ ತೆಗೆದುಕೊಳ್ಳಲೂ ಹಿಂದೆ ಮುಂದೆ ನೋಡುವುದಿಲ್ಲ ಅಮ್ಮ. ಗಂಡನಿಗೆ ಹೆಂಡತಿಯ ಮುಂದೆ, ಅಣ್ಣನಿಗೆ ತಂಗಿಯ ಮುಂದೆ, ತಮ್ಮನಿಗೆ ಅಕ್ಕನ ಮುಂದೆ, ಮುದ್ದಿನ ಅಳಿಯನಿಗೆ ಸೋದರತ್ತೆಯ ಮುಂದೆ ಎಲ್ಲ ಜೈವಿಕ ಸಂಬಂಧಗಳನ್ನು ಮೀರಿ ಒಮ್ಮೆ ಅವರ ಮಡಿಲಲ್ಲಿ ತಲೆಯಿಟ್ಟು ಮಲಗಿ ಅವರ ಮುದ್ದಿನ ಕಂದಮ್ಮನಾಗಿಬಿಡೋಣ, ಅವರ ಮಾತೃತ್ವದ ಶಕ್ತಿಯ ವಿರಾಟ್ ದರ್ಶನವನ್ನು ನೋಡಿ ಬಿಡೋಣ ಅಂತ ಅನ್ನಿಸದೇ ಇರಲಾರದು. ಹಾಗಾಗಿ ಮೈ ಮನಸ್ಸು ಎರಡೂ ಹಂಚಿಕೊಂಡ ಹೆಂಡತಿಯಲ್ಲಿಯೂ ಗಂಡನಿಗೆ ಜಗನ್ಮಾತೆ ಕಾಣುತ್ತಾಳೆ. ಅವಳ ಪಾದಮೂಲಕ್ಕೆರಗಿ ರಕ್ಷಿಸು ತಾಯೆ ಅಂತ ಮಡಿಲನ್ನು ಆಶ್ರಯಿಸೋಣ ಅಂತಲೂ ಅನ್ನಿಸಬಹುದು. ಎಲ್ಲ ಪಾಸಿಟಿವ್ ಎನರ್ಜಿಗಳ ಸಮ್ಮಿಲನ ಹೆಣ್ಣು. ಅವಳ ಆತ್ಮಶಕ್ತಿಯಲ್ಲಿ ಜಗತ್ತಿನ ತಾಯಿ ಜಗನ್ಮಾತೆಯ ಅಂಶವಿದೆ.

ಹಾಲಾಹಲವನ್ನು ಕುಡಿಯುತ್ತಿದ್ದ ಶಿವನ ಗಂಟಲಲ್ಲೇ ವಿಷ ಸ್ತಂಭನವಾದದ್ದು ಜಗನ್ಮಾತೆಯ ಕರಾವಲಂಬನದಿಂದ. ವಾದದಲ್ಲಿ ಮಂಡನಮಿಶ್ರರು ಸೋತ ಬಳಿಕವೂ ಶಂಕರರಲ್ಲಿ ವಾದ ಮುಂದುವರಿಸುತ್ತಾಳೆ ಉಭಯಭಾರತಿ. ಆತ ತನ್ನ ಗಂಡನಾದರೂ ತನ್ನ ಮಡಿಲ ಮಗನೂ ಹೌದು. ತಾನೊಬ್ಬಳೇ ದುಡಿದು ಏಕಾಕಿನಿಯಾಗಿ ಗಂಡನನ್ನು ಮಕ್ಕಳನ್ನೂ ಸಾಕುತ್ತಿರುವ ಅದೆಷ್ಟೋ ಹೆಣ್ಣುಮಕ್ಕಳನ್ನು ನಾವು ದಿನವೂ ನೋಡುತ್ತೇವೆ. ಎಲ್ಲ ಕಡೆಯೂ ಮಾತೃತ್ವದ ದಿಗ್ದರ್ಶನವೇ.

ಕಟೀಲು ಮೇಳದವರು ಆಡುವ ದೇವಿ ಮಹಾತ್ಮೆ ಯಕ್ಷಗಾನವ‌ನ್ನು ನಾನು ಬಾಲ್ಯದಿಂದಲೂ ನೋಡುತ್ತಾ ಬೆಳೆದಿದ್ದೇನೆ. ಅಲ್ಲಿ ಒಂಭತ್ತು ದಿನಗಳ ಕಾಲ ಮಹಿಷನ ಜೊತೆ ಕಾದಾಡಿ ಅವನನ್ನು ವಧಿಸುವ ಸಿಂಹವಾಹಿನಿಯನ್ನು ನೋಡಿದಾಗ, ಕದಂಬ‌ ಕೌಶಿಕೆಯಾಗಿ ಕಾಡಿನಲ್ಲಿ ಉಯ್ಯಾಲೆಯಾಡುವಾಗ, ಮೋಹಕ ನೃತ್ಯ ಮಾಡುವಾಗ ಜಗನ್ಮಾತೆ ಅಂದರೆ ಇವಳೇ ಇರಬೇಕು. ಅವಳ ಸೌಂದರ್ಯ, ಸೊಬಗಿನ ಮುಂದೆ ಬೇರೆ ಯಾವುದೂ ಇಲ್ಲ. ತಲೆಬಾಗಿ ನಮಸ್ಕರಿಸುವುದೇ ಅನ್ನುವ ಭಾವ ಪ್ರತಿ ಸಲವೂ ಉಂಟಾಗುತ್ತದೆ. ರಂಗದಲ್ಲಿರುವುದು ಒಬ್ಬ ವೇಷಧಾರಿಯಾದರೂ ಆ ಕ್ಷಣಕ್ಕೆ ಉಂಟಾಗುವ ದೈವಿಕ ವಾತಾವರಣದಿಂದಲೂ, ಜಗನ್ಮಾತೆಯ ಬಗ್ಗೆ ನಮ್ಮಲ್ಲಿರುವ ಸರ್ವಾರ್ಪಣ ಭಾವದಿಂದಲೂ ಎಲ್ಲೆಲ್ಲೂ ಅಮ್ಮನೇ ಕಾಣುತ್ತಾಳೆ ನಮಗೆ. ಅವಳ ಮಡಿಲಲ್ಲಿ ತಲೆಯಿಟ್ಟು ಮಲಗೋಣ.‌ ಲೋಕವನ್ನೇ ರಕ್ಷಿಸುವ ಅವಳು ನನಗಾಗಿ ಲಾಲಿ ಹಾಡಲಿ. ಅವಳು ನಿದ್ರಾದೇವಿಯಾಗಿ ಆವರಿಸಿ ನನ್ನನ್ನು ಆಶೀರ್ವದಿಸಲಿ ಎಂಬ ಭಾವವೂ ಬರುತ್ತದೆ ನಮಗೆ.

ಎಂಥದ್ದೇ ಕಷ್ಟ ಬಂದರೂ ನಗುವ ವ್ಯಕ್ತಿಗೂ ಅಮ್ಮನ‌ ಮುಂದೆ ಹೋದಾಗ ಮಾತ್ರ ದುಃಖ ಉಮ್ಮಳಿಸಿ ಬರುತ್ತದೆ. ಅಮ್ಮ ತನ್ನನ್ನು ಮುದ್ದಿಸಿ, ಕೈತುತ್ತುಣ್ಣಿಸಿ ತಲೆ ನೇವರಿಸಲಿ ಅನ್ನಿಸುತ್ತದೆ. ಮಕ್ಕಳ ನಗುವಿನ ಹಿಂದಿನ ನೋವು ಅಮ್ಮನಿಗೆ ಹೇಳದಿದ್ದರೂ ಗೊತ್ತಾಗುತ್ತದೆ. ಅಪರಾಧಿ ಎಂದು ಜಗತ್ತೇ ಹಣೆಪಟ್ಟಿ ಕಟ್ಟಿದ್ದರೂ ಬಾ ಮಗೂ ನಿನಗೆ ನಾನಿದ್ದೇನೆ ಅಂತ ಕರೆಯುವ ಏಕೈಕ ಜೀವ ಅಮ್ಮ. ಹಾಗೆ ಮಾಡಿಸುವುದು ಅವಳೊಳಗಿನ ಜಗನ್ಮಾತೆಯ ಕಾರುಣ್ಯದ ಭಾವ.

ಕಣ್ಣು ಮುಚ್ಚಿದರೂ ನಮಗೆ ಜಗನ್ಮಾತೆ ಕಾಣುತ್ತಾಳೆ. ಆದರೆ ಮೂರ್ತರೂಪದಲ್ಲಿ ನೋಡುವುದೇ ಹೆಚ್ಚು ಪ್ರಿಯ ನಮಗೆ. ರಾಮಲಲ್ಲಾನ ವಿಗ್ರಹವನ್ನು ಕೆತ್ತಿದ ಅರುಣ್ ಯೋಗಿರಾಜ್ ಅವರ ಕೆತ್ತನೆಯಲ್ಲಿ ಅರಳಿದ ಜಗನ್ಮಾತೆಯ ಸುಂದರ ವಿಗ್ರಹದಲ್ಲಿ ಮೋಹಕ ಸೌಂದರ್ಯ, ಮಾದಕ ಸೌಂದರ್ಯ, ಆರಾಧಕ ಸೌಂದರ್ಯ ಮೂರೂ ಏಕತ್ರವಾಗಿ ಮೇಳೈಸಿ ಅಡಕವಾಗಿದೆಯೆಂದು ಅನ್ನಿಸಿದರೂ ಪ್ರತಿ ಕ್ಷಣವೂ ಅವಳ ಆರಾಧಕ ಸೌಂದರ್ಯವೇ ಕಾಣುತ್ತದೆ. ಅವಳ ಮಡಿಲ ಮಗುವಾಗಿಬಿಡೋಣ ಅನ್ನಿಸುತ್ತದೆ. ಅವಳ ಪ್ರಭಾವಕ್ಕೆ ಒಳಗಾಗಿ ಯೋಗನಿದ್ರೆಗೆ ಜಾರುವ ಶ್ರೀಹರಿಯೂ ಧನ್ಯ. ಅವನ‌ ನಿದ್ದೆಯಾಗಿ, ಅವನ ಕನಸಾಗಿ, ಅವನ ಜಾಗೃತ್, ಸ್ವಪ್ನ ,ಸುಷುಪ್ತಿ ಮೂರೂ ಸ್ಥಿತಿಯಲ್ಲಿಯೂ ಅವಳು active ಆಗಿಯೇ ಇರುತ್ತಾಳೆ. ಏಕೆಂದರೆ ಅವಳು ಶಕ್ತಿಸ್ವರೂಪಿಣಿಯಾದ ಸರ್ವೇಶ್ವರಿ.‌ ಜಗನ್ಮಾತೆ.

ಆರಾಧಕ ಸೌಂದರ್ಯವೇ ಕಂಡು ಅಮ್ಮನನ್ನು ಸ್ತುತಿಸಬೇಕು ಅಂದಾಗ ಮಾತೆ ನಾಲಿಗೆಯ ಮೇಲೆ ಬರೆಯುತ್ತಾಳೆ. ಕಾಳಿದಾಸನಂಥ ಮಹಾಕವಿ ಸಿಗುತ್ತಾನೆ ನಮಗೆ. ಮೋಹಕ ಸೌಂದರ್ಯವಷ್ಟೇ ಕಂಡು ಕಾಮಿಸಲು ಹೊರಟ ಶುಂಭನ ಸರ್ವಸ್ವವೂ ನಾಶವಾಗಿ ಶೋಣಿತಾಪುರದಲ್ಲಿ ರಕ್ತದೋಕುಳಿಯಾಗುತ್ತದೆ. ನೀನು ನನ್ನನ್ನು ಹೇಗಾದರೂ ನೋಡು, ಆದರೆ ಯಾವಾಗ ನನ್ನಲ್ಲಿನ ಮಾತೃತ್ವದ ಅಂಶವನ್ನು ಗುರುತಿಸಿ ಗೌರವಿಸಲು ವಿಫಲನಾಗುತ್ತೀಯೋ ಆಗ ನಿನ್ನ ಅಂತ್ಯಕಾಲ ಸಮೀಪಿಸುತ್ತದೆ ಅಂದುಕೋ ಎನ್ನುವ ಎಚ್ಚರಿಕೆಯ ಅಂಶವೂ ಇದೆಯೇನೋ ಅಲ್ಲಿ.

ಅರುಣ್ ಯೋಗಿರಾಜ್ ಕೆತ್ತನೆಯಲ್ಲಿ ಅರಳಿದ ಜಗನ್ಮಾತೆ

ಹೆಂಡತಿ, ತಂಗಿ, ಅಕ್ಕ, ನಾದಿನಿ, ಅತ್ತಿಗೆ, ಅತ್ತೆ, ಸ್ನೇಹಿತೆ ಎಲ್ಲ ಸಂಬಂಧಗಳಾಚೆಗೂ ಹೆಣ್ಣಿನಲ್ಲಿನ ಮಾತೃತ್ವವನ್ನು ಆ ಮೂಲಕ ಜಗನ್ಮಾತೆಯ ಅಸ್ತಿತ್ವವನ್ನು ನಾವು ಗುರುತಿಸಿ ಗೌರವಿಸಿದಾಗ ನಮ್ಮ‌ ಬಾಳಿಗೆ ಬೆಳಕಾಗಿ ನಮ್ಮನ್ನು ಕೈ ಹಿಡಿದು ಮುನ್ನಡೆಸುವ ಜೀವಪ್ರದಾಯಿನಿಯಾಗುತ್ತಾಳೆ ಆಕೆ. ಕರುಣಾಮಯಿ. ಅವಳು  ಜಗನ್ಮಾತೆ.

ಅರುಣ್ ಯೋಗಿರಾಜ್ ಕೆತ್ತಿದ ಮಾತೆಯ ಸುಂದರ ವಿಗ್ರಹವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದಾಗ ಏನೋ ಬರೆಯಲು ಪ್ರೇರೇಪಣೆ ಸಿಕ್ಕಿ ಜಗನ್ಮಾತೆಯ ಪಾದಗಳಿಗೆ ಅಕ್ಷರಾರ್ಪಣೆ ಮಾಡಬೇಕೆನಿಸಿತು.