ಹಸ್ತಿನಪುರ,ಇಂದ್ರಪ್ರಸ್ಥದ ರಾಜಕಾರಣ ಕವಿಗಳನ್ನು ಜನಸಾಮಾನ್ಯರನ್ನು ಆಕರ್ಷಿಸಿದಷ್ಟು ತ್ರೇತೆಯ ಅಯೋಧ್ಯೆ ಆಕರ್ಷಿಸಲಿಲ್ಲ.ನಮ್ಮದು ರಾಮರಾಜ್ಯವಾಗಬೇಕು,ಆದರೆ ರಾಜಕಾರಣದ ಉಪಮೆಗೆ ಮಾತ್ರ ಮಹಾಭಾರತವೇ ಬೇಕು.ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯುವ ಕರ್ಣಾಟಕದ ಚುನಾವಣೆಯ ಸುದ್ದಿಗಳನ್ನು ಹೇಳುವಾಗಲೂ ‘ಮಹಾಭಾರತ’ ಅಂತ ಟೈಟಲ್ ಕೊಡುವ ನ್ಯೂಸ್ ಚಾನೆಲ್’ಗಳಿದ್ದಾವೆ.ದ್ವಾಪರದ ರಾಜಕೀಯದ ಕುರಿತು ಹಲವು ವಿಮರ್ಶಾಕೃತಿಗಳು ಬಂದಿವೆ.ಅಂದಿನ ಘಟನೆಗಳು ಇವತ್ತಿನ ಕಾಲಕ್ಕೆ ಪ್ರಸ್ತುತವೇ ಅಂತ ಮಹಾಭಾರತವನ್ನು ಕಲಿಯುಗಕ್ಕೆ ಸಮನ್ವಯ ಮಾಡುವ ಕಾರ್ಯ ಲಾಗಾಯ್ತಿನಿಂದಲೂ ನಡೆಯುತ್ತಿದೆ.ಪ್ರಜಾರಂಜಕನಾದ ರಾಮ ಸಮರ್ಥ ರಾಷ್ಟ್ರಪುರುಷನಾಗಿ,ರಾಜಧರ್ಮ ಪಾಲಿಸುವ ಅರಸನಾಗಿ ಉದಾಹರಣೆಗೆ ಸಿಗುತ್ತಾನೆಯೇ ಹೊರತು ತಂತ್ರ,ಕುಟಿಲೋಪಾಯಗಳ ರಾಜಕಾರಣಿಯಾಗಲ್ಲ.ಕಪಟಿ ದುರ್ಯೋಧನ ಮತ್ತು ಸರಳ-ಸಜ್ಜನ ರಾಜ ಯುಧಿಷ್ಠಿರನ ಮಧ್ಯೆ ತಂತ್ರಗಾರಿಕೆಗೆ,ಮುಳ್ಳನ್ನು ಮುಳ್ಳಿಂದಲೇ ತೆಗೆಯುವ ಜಾಣತನಕ್ಕೆ, ‘ಧರ್ಮ ಹಿಂಸಾ ತಥೈವಚ’ ಎಂಬ  ಸಾಲು ‘ಅಹಿಂಸಾ ಪರಮೋಧರ್ಮ’ ವಾಕ್ಯದಲ್ಲೇ ಇದೆ ಎಂದು ನೆನಪಿಸಿ ಧರ್ಮದ ಚೌಕಟ್ಟಿನೊಳಗೆ ನಡೆಯುವ ಹಿಂಸೆಯನ್ನು ಸಮರ್ಥಿಸುವ ಕುಟಿಲೋಪಾಯಗಳಿಗೆಲ್ಲ ನಮಗೆ ಪದೇ ಪದೇ ಉದಾಹರಣೆಗೆ ಸಿಗುವುದು ಭಗವಾನ್ ಶ್ರೀಕೃಷ್ಣ.ರಾಜಕಾರಣದಲ್ಲಿ ಆತನೊಬ್ಬ ಮುತ್ಸದ್ದಿ.ಹಾಗಾಗಿ ಕೃಷ್ಣ ಕವಿಗಳನ್ನು,ಕಾದಂಬರಿಗಾರರನ್ನು ಸೆಳೆಯುತ್ತಲೇ ಇರುತ್ತಾನೆ.ಇವತ್ತಿನ ಕಾಲಘಟ್ಟದೊಂದಿಗೆ ಹಿಂದಿನ ಯುಗಗಳ ರಾಜಕಾರಣದ ಹೋಲಿಕೆ ದ್ವಾಪರವಿಲ್ಲದೇ ಆಗುವುದಿಲ್ಲ.ದ್ವಾಪರ ಬಂದಾಗ ರಾಜಕಾರಣಿ ಕೃಷ್ಣನ ಕತೆ ಬರದೇ ಇರಲು ಸಾಧ್ಯವಿಲ್ಲ.

ಕತೆಗಾರ ಕತೆಗಳನ್ನು ಜನರ ಮಧ್ಯೆಯೇ ಹುಡುಕಬೇಕು,ಆದರೆ ಅವುಗಳನ್ನು ಬರೆಯುವಾಗ ಮಾತ್ರ ಏಕಾಂತದಲ್ಲಿ ಬರೆಯಬೇಕು ಎನ್ನುತ್ತಾರೆ ‘ಹಸ್ತಿನಾವತಿ’ ಕಾದಂಬರಿಯಲ್ಲಿನ ವ್ಯಾಸ.ಗಿರೀಶ್ ರಾವ್ ಹತ್ವಾರ್ ಅವರು “ಹೊಸಪೇಟೆಗೆ ಬಂದಿದ್ದೇನೆ, ಕಾದಂಬರಿ ಬರೆಯಲು” ಅಂತ ಹಾಕಿದ್ದ ಫೇಸ್ಬುಕ್‌ ಪೋಸ್ಟ್ ವ್ಯಾಸ ಪಾತ್ರಧಾರಿಯ ಮಾತು ಓದಿದಾಗ ನೆನಪಿಗೆ ಬರುತ್ತದೆ. ‘ಹಸ್ತಿನಾವತಿ- ಇದು ಭಾರತದ ಕತೆ’ ಕಾದಂಬರಿ ಭಾರತದ ಪ್ರಸಕ್ತ ರಾಜಕಾರಣದಿಂದ,ಈಗಿನ ಮಾಧ್ಯಮಗಳ ಕಾರ್ಯನಿರ್ವಹಣೆಯಿಂದ ಒಂದಷ್ಟು ಮಟ್ಟಿಗೆ ಪ್ರಭಾವಿತವಾಗಿದೆ ಅಂತ ಮೇಲ್ನೋಟಕ್ಕೇ ಅನ್ನಿಸುತ್ತದೆ.ಜೋಗಿ ಅವರ ಇತರೆಲ್ಲ ಕಾದಂಬರಿಗಳಿಗಿಂತ ಇದು ಗಾತ್ರದಲ್ಲಿ ಸ್ವಲ್ಪ ದೊಡ್ಡದು.

ಬೃಹತ್ ಕಾದಂಬರಿಯನ್ನು ಬರೆಯುವಾಗ ಲೇಖಕನ ಮುಂದೆ ಒಂದಷ್ಟು ಚಾಲೆಂಜ್’ಗಳು ಇರುತ್ತವೆ.ಪಾತ್ರಗಳು ಜಾಸ್ತಿಯಾಗಿ ಓದುಗ ಕನ್ಫ್ಯೂಸ್ ಆಗಬಾರದು,ಅಂತೆಯೇ ಕಡಿಮೆ ಪಾತ್ರಗಳಾಗಿ ಅವು ಅಗತ್ಯಕ್ಕಿಂತ ಜಾಸ್ತಿ ಮಾತಾಡುತ್ತಿವೆ ಅಂತಲೂ ಅನ್ನಿಸಬಾರದು.ಮೊದಲ ಪುಟದಲ್ಲಿ ಓದಿದ್ದು ನೂರೈವತ್ತನೇ ಪುಟಕ್ಕೆ ಬರುವಾಗ ನೆನಪಿನಲ್ಲುಳಿಯಬೇಕು.ಥ್ರಿಲ್ಲರ್ ಕತೆಗಳಾದರೆ ಊಹಿಸಲಾಗದ ಆದರೆ ಓದುಗನಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುವಂತೆ ಟ್ವಿಸ್ಟ್’ಗಳು ಇರಬೇಕು.ಹಸ್ತಿನಾವತಿಯನ್ನು 400+ ಪುಟಗಳ ಕಾದಂಬರಿಯಾಗಿಸುವಾಗ ಜೋಗಿ ಈ ಎಲ್ಲ ವಿಷಯಗಳನ್ನು ಸೂಕ್ಷ್ಮವಾಗಿ ಗಮನದಲ್ಲಿಟ್ಟುಕೊಂಡು ಕಥನಕೃಷಿ ನಡೆಸಿ ಡಿಸ್ಟಿಂಕ್ಷನ್’ನಲ್ಲಿ ಪಾಸಾಗಿದ್ದಾರೆ.ಸಂಸ,ಸಹದೇವ,ಚೀಫ್ ಚಿದಾನಂದ,ಸೋನು,ಪ್ರದ್ಯುಮ್ನ ಜೋಷಿ ಮುಖ್ಯ ಪಾತ್ರಗಳು.ಉಳಿದವರೆಲ್ಲ ಅಲ್ಲಲ್ಲಿ ಬಂದು ಹೋಗುವವರಷ್ಟೇ.ಉತ್ತರಾರ್ಧದಲ್ಲಿ ದೇಸಾಯಿ ಮತ್ತು ದೇವಯಾನಿಯರೂ ಪ್ರಮುಖರ ಸಾಲಿಗೆ ಸೇರಿಕೊಳ್ಳುತ್ತಾರೆ.ಯಾರೂ ಅಗತ್ಯಕ್ಕಿಂತ ಹೆಚ್ಚು ಮಾತಾಡಿ ವಾಚಾಳಿಯಾಗುತ್ತಿದ್ದಾರೆ ಅಂತ,ವಿವರಗಳು ರಿಪೀಟ್ ಆಗುತ್ತಿವೆ ಅಂತ ‘ಭಾರತದ ಕತೆ’ಯಲ್ಲಿ ಭಾಸವಾಗುವುದಿಲ್ಲ.

ಪ್ರಕಟಣೆಯ ಪೂರ್ವದಲ್ಲಿ ಕೆಲವರು ‘ಹಸ್ತಿನಾವತಿ’ಯಲ್ಲಿ ದ್ವಾಪರದ ರಾಜಕಾರಣವನ್ನು ಇಂದಿನ ರಾಜಕೀಯಕ್ಕೆ ಹೋಲಿಸಿ ಸಮನ್ವಯ ಮಾಡಿರಬಹುದು ಅಂತ ಊಹಿಸಿದ್ದರು.ಪುಸ್ತಕ ಬಿಡುಗಡೆಯಾದ ಮೇಲೆ ಅಭಿಪ್ರಾಯ ವ್ಯಕ್ತಪಡಿಸಿದ ಕೆಲವರು ಅಂದಿನ ಮಹಾಭಾರತ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಲೇ ಇರುತ್ತದೆ ಅಂದರು.ನನಗೆ ಹಾಗೇನೂ ಅನ್ನಿಸಲಿಲ್ಲ.ದ್ವಾಪರದ, ಆರ್ಯಾವರ್ತದ ಛಾಯೆಯ ಅಗತ್ಯವಿಲ್ಲದೇ ಸ್ವತಂತ್ರವಾಗಿ ಓದಿಸಿಕೊಂಡು ಹೋಗಿ ಗೆಲ್ಲುವ ಸಾಮರ್ಥ್ಯ  ‘ಹಸ್ತಿನಾವತಿ’ಗೆ ಇದೆ.ಟಿಪ್ಪಣಿ ಮಾಡಿಕೊಳ್ಳಲು ಪಕ್ಕದಲ್ಲಿ ಪೆನ್ನು-ಕಾಗದ ಇಟ್ಟುಕೊಂಡು ಓದಬೇಕಾದ ಗಂಭೀರ ಕಾದಂಬರಿಯಲ್ಲ,ಹಾಗಂತ ಸಮಯ ಕಳೆಯಲೆಂದೇ ಓದುವ ಟೈಂಪಾಸ್ ಪುಸ್ತಕದ ಸಾಲಿಗೂ ಸೇರುವುದಿಲ್ಲ.ಕಥನ ಕುತೂಹಲ‌ ಹುಟ್ಟಿಸಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.ಅದಕ್ಕಾಗಿ‌ ಜೋಗಿ ಅಭಿನಂದನಾರ್ಹರು.

ಪುಸ್ತಕದಲ್ಲಿ ನನಗೆ ತುಂಬ ಇಷ್ಟವಾದ ವ್ಯಕ್ತಿತ್ವ ದೇವಯಾನಿಯದ್ದು.ಆರಂಭದಲ್ಲಿ ಸಹದೇವನಿಗೆ ಸಿಕ್ಕ ವಿವರಗಳ ಆಧಾರದ ಮೇಲೆ ಓದುಗನ ಮನಸ್ಸಲ್ಲಿ ಮೂಡುವ ದೇವಯಾನಿಯ ಬಗೆಗಿನ ಕಲ್ಪನೆ ಉತ್ತರಾರ್ಧಕ್ಕೆ ಹೋಗುವ ಹೊತ್ತಿಗೆ ಗಣನೀಯವಾಗಿ ಬದಲಾಗಿರುತ್ತದೆ.ಈ ಪಾತ್ರದ ನಡೆ ಹೇಗಿರಬೇಕು ಅಂತ ಓದುಗ ಬಯಸುತ್ತಾನೋ ಹಾಗಿಲ್ಲದೇ ತನ್ನ ನಿರ್ಣಯಗಳ ಮೂಲಕ,ತೂಕದ ಮಾತುಗಳ ಮೂಲಕ ಗೌರವ ಹುಟ್ಟಿಸುತ್ತಾಳೆ ದೇವಯಾನಿ.ಪೊಲಿಟಿಕಲ್ ಸ್ಟ್ರ್ಯಾಟಜಿಸ್ಟ್ ಸಹದೇವ ಇದರ ನಾಯಕ ಅಂತ ಅಲ್ಲಲ್ಲಿ ಢಾಳಾಗಿ ಕಂಡರೂ ‘ಹಸ್ತಿನಾವತಿ’ಯಲ್ಲಿ ಎಲ್ಲರೂ ನಾಯಕರೇ.ರಾಜಕೀಯವೆಂಬ ಚದುರಂಗದಲ್ಲಿ ಎಲ್ಲರೂ ಲೆಕ್ಕಕ್ಕಿಲ್ಲದಿದ್ದರೂ ಆಟಕ್ಕಿರುವ ದಾಳಗಳು.ಎಲ್ಲ ಪ್ರಮುಖ ಪಾತ್ರಗಳಿಗೂ ಸಮರ್ಥವಾಗಿ ತಾರ್ಕಿಕ ಅಂತ್ಯ ಕೊಟ್ಟ ಜೋಗಿ ‘ಸೋನು’ ಎಂಬ ಪಾತ್ರಕ್ಕೆ ಸರಿಯಾದ ಅಂತ್ಯ ಕೊಡಲಿಲ್ಲ ಎಂಬುದು ನನ್ನ ಅಂಬೋಣ.ಆಲ್ಮೋಸ್ಟ್ ಎಲ್ಲ‌ ಕಡೆಯೂ ಪಾತ್ರಗಳು,ಘಟನೆಗಳು ರಿಯಲಿಸ್ಟಿಕ್ ಆಗಿ ಬಂದಿರುವಾಗ ಕಿವಿ ಕೇಳದ,ಆ ಕಾರಣಕ್ಕೆ ಮಾತು ಬಾರದ ಸೋನು ಸಾಮಾನ್ಯ ಕಾಲೇಜಲ್ಲಿ ಕಲಿತದ್ದು ಹೇಗೆ ಎಂಬ ಗೊಂದಲ ಉಂಟಾಗುತ್ತದೆ.ಚಾರುಲತಾ,ನಿರಂಜನ ಎಲ್ಲರ ವಿವರಗಳನ್ನು ಕೊಟ್ಟಾಗ ಸೋನುವಿನ ಹಿನ್ನಲೆಯ ಬಗ್ಗೆ ಇನ್ನೂ ಹೆಚ್ಚು ಬರೆದಿದ್ದರೆ ಒಳ್ಳೆಯದಿತ್ತು.ದ್ವಾಪರದ ಹಿನ್ನಲೆಯ ಅಗತ್ಯವಿಲ್ಲದೇ ದೇಶದ ಪ್ರಸ್ತುತ ರಾಜಕಾರಣದ ಆಧಾರದಲ್ಲಿ ಬರೆದ ಪೊಲಿಟಿಕಲ್ ಥ್ರಿಲ್ಲರ್ ಪುಸ್ತಕ ಅಂತ ನನಗೆ ಪದೇ ಪದೇ ಅನ್ನಿಸಿದ್ದರಿಂದಲೂ,ಮಹಾಭಾರತದ ಕತೆ ಗೊತ್ತಿಲ್ಲದಿದ್ದವನಿಗೂ ಸುಲಭವಾಗಿ ಅರ್ಥವಾಗುವ ಕತೆಯಾದ್ದರಿಂದಲೂ ದ್ವಾಪರದ ಕೃಷ್ಣದ್ವೈಪಾಯನ ದಾಂಡೇಲಿಯ ದೇಸಾಯಿಯವರ ಮನೆಯಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದು ಏಕೆ ಅಂತ ಅರ್ಥವಾಗಲಿಲ್ಲ.ದ್ವಾಪರದ ವ್ಯಾಸರು ಕಲಿಯುಗದ ‘ಭಾರತದ ಕತೆ’ಯಲ್ಲಿ ಮಾತಾಡುವಾಗ ಅಷ್ಟು ಕ್ಲಾರಿಟಿ ಇದ್ದವರಂತೆ ಅನ್ನಿಸಲಿಲ್ಲ.ಜಿಪ್ಸಿ ಕೆಫೆ,ಸಂಯುಕ್ತಾ ಪರಾಂಜಪೆ,ನ್ಯೂಸ್ ಚಾನೆಲ್’ಗಳ ಒಳನೋಟ,ಸಂಜಯ್ ಸರ್ಕಾರ್ ಸರಳತೆ,ನಿರಂಜನ,ಸಹದೇವನ ಅಮ್ಮ ಯಶೋಧೆಯ ಮುಗ್ಧತೆ ಇನ್ನೂ ಅನೇಕ ಸಂಗತಿಗಳು ಆಪ್ತವಾಗುತ್ತವೆ.ಸರಿಯಾಗಿ ಚಿತ್ರಕಥೆ ಬರೆದರೆ ಒಂದೊಳ್ಳೆ ವೆಬ್ ಸಿರೀಸ್ ಆಗುವ ಮೆಟಿರೀಯಲ್ ‘ಹಸ್ತಿನಾವತಿ’. ಕನ್ನಡದ ಸೃಜನಶೀಲ ನಿರ್ದೇಶಕರು ಈ ಕುರಿತು ಯೋಚಿಸಿಬಹುದು.ಕಾದಂಬರಿಯ ಪುಟ ವಿನ್ಯಾಸ,ಇಲ್ಲಸ್ಟ್ರೇಷನ್ ಇಮೇಜ್’ಗಳು ಗಮನ ಸೆಳೆಯುವಂತೆ ಪ್ರಕಟಿಸಿದವರು ಅಂಕಿತ ಪುಸ್ತಕ ಬಳಗ.

“ರಾಜಕಾರಣ ಯಶಸ್ವಿಯಾಗಬೇಕಾದರೆ ಒಬ್ಬ ಮಹಾತ್ಮನಿರಬೇಕು,ಇಲ್ಲ ಒಬ್ಬ ಹುತಾತ್ಮನಿರಬೇಕು” ಎಂಬ ವಾಕ್ಯ ತುಂಬ  ಗಾಢವಾದ ಅರ್ಥ ಕೊಡುತ್ತದೆ.ಕನ್ನಡದ ಓದುಗರು,ಅಕ್ಷರ ಪ್ರೀತಿಯುಳ್ಳವರು ಒಮ್ಮೆ ಎತ್ತಿಕೊಂಡು ಓದಬಹುದಾದ ಪುಸ್ತಕ ‘ಹಸ್ತಿನಾವತಿ- ಇದು ಭಾರತದ ಕಥೆ’.